ಪ್ರೀತಿಸಿದ ಜೋಡಿಯೊಂದು ಜಸ್ಟ್ 8 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಮುದ್ದಾಗಿದ್ದ ಈ ಜೋಡಿ ಮೇಲೆ ಬಿಎಂಟಿಸಿ ಬಸ್ಸಿನ ವಕ್ರದಷ್ಟಿ ಬಿದ್ದು, ಇಬ್ಬರನ್ನೂ ಬೇರ್ಪಡಿಸಿದೆ. ಭೀಕರ ಅಪಘಾತದಲ್ಲಿ ಪತಿ ಪ್ರಾಣ ಕಳೆದುಕೊಂಡಿದ್ದು, ಪತ್ನಿ ಕಂಗಾಲಾಗಿದ್ದಾಳೆ.
ನೆಲಮಂಗಲ: ಇಲ್ಲಿನ ವೀವರ್ಸ್ ಕಾಲೋನಿ ಬಳಿ ಇಂದು ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿಯಾಗಿದೆ. ನವವಿವಾಹಿತ ದಂಪತಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಹೆಂಡತಿಯ ಕಣ್ಣೆದುರೇ ಗಂಡ ಬಲಿಯಾಗಿದ್ದಾನೆ. ಎಂಟು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಯ ಸಂಸಾರ ಕಣ್ಣೀರಲ್ಲಿ ಮುಳುಗಿಸಿದೆ. ನವವಧುವಿನ ಆಕ್ರಂದನ ಮುಗಿಲು ಮುಟ್ಟಿದೆ.
ಅಪಘಾತ ಸಂಭವಿಸಿದ್ದು ಹೇಗೆ?
ಮೂಲತಃ ಸಿರಾ ಮೂಲದವರಾದ ಮನು (25) ಮತ್ತು ಮಮತಾ ದಂಪತಿ ನೆಲಮಂಗಲದ ಹುಲೆಗೌಡನಹಳ್ಳಿಯಲ್ಲಿ ವಾಸವಿದ್ದರು. ಮನು ಸ್ಥಳೀಯ ರೆಸಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಇಬ್ಬರೂ ಬೈಕ್‌ನಲ್ಲಿ ನೆಲಮಂಗಲ ನಗರದ ಕಡೆಗೆ ಬರುತ್ತಿದ್ದಾಗ ವೀವರ್ಸ್ ಕಾಲೋನಿ ಬಳಿ ದುರ್ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ವೇಗವಾಗಿ ಡಿಕ್ಕಿ ಹೊಡೆದಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ದಂಪತಿ ರಸ್ತೆಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಪತ್ನಿ ಮಮತಾ ರಸ್ತೆಯ ಬದಿಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬೈಕ್ ಚಲಾಯಿಸುತ್ತಿದ್ದ ಮನು ಮೇಲೆ ಬಿಎಂಟಿಸಿ ಬಸ್‌ನ ಚಕ್ರ ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಮನು ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ
ಮನು ಮತ್ತು ಮಮತಾ ಎಂಟು ತಿಂಗಳ ಹಿಂದಷ್ಟೇ ಪರಸ್ಪರ ಪ್ರೀತಿಸಿ ಹಿರಿಯರ ಸಮ್ಮತಿಯೊಂದಿಗೆ ಮದುವೆಯಾಗಿದ್ದರು. ಜೀವನದಲ್ಲಿ ನೂರಾರು ಕನಸು ಕಂಡಿದ್ದ ಈ ಜೋಡಿಯನ್ನು ವಿಧಿ ಬೇರ್ಪಡಿಸಿದೆ. ತನ್ನ ಕಣ್ಣೆದುರೇ ಪ್ರೀತಿಯ ಪತಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದನ್ನು ಕಂಡ ಪತ್ನಿ ಮಮತಾ ದಿಕ್ಕುತೋಚದಂತಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಅವರ ರೋದನ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


