15 ವರ್ಷಗಳಿಂದ ಅಮೆರಿಕದಲ್ಲಿ ವಾಸವಿರುವ ಎನ್‌ಆರ್‌ಐ ನಿತಿನ್ ಮಲ್ಹೋತ್ರಾ, ಅಲ್ಲಿನ ಕೋಟಿ ರೂಪಾಯಿ ಸಂಬಳಕ್ಕಿಂತ ಭಾರತದಲ್ಲಿದ್ದ 25 ಲಕ್ಷ ರೂಪಾಯಿ ಸಂಬಳದಲ್ಲಿ ಹೆಚ್ಚು ಹಣ ಉಳಿತಾಯ ಮಾಡುತ್ತಿದ್ದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಅಮೆರಿಕದ ದುಬಾರಿ ಜೀವನ ವೆಚ್ಚವನ್ನು ವಿವರಿಸಿದ ಅವರು, ತಮ್ಮ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಅಮೆರಿಕದಲ್ಲಿ ಸಿಗುವ ದೊಡ್ಡ ಸಂಬಳಕ್ಕಿಂತ, ಭಾರತದಲ್ಲಿ ಸಿಗುತ್ತಿದ್ದ ಕಡಿಮೆ ಸಂಬಳದಲ್ಲೇ ಹೆಚ್ಚು ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿತ್ತು ಎಂದು ಎನ್‌ಆರ್‌ಐ ಒಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. 15 ವರ್ಷಗಳಿಂದ ಅಮೆರಿಕದಲ್ಲಿ ವಾಸವಿರುವ ನಿತಿನ್ ಮಲ್ಹೋತ್ರಾ, ಇನ್‌ಸ್ಟಾಗ್ರಾಂ ವಿಡಿಯೋ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ. ಅಮೆರಿಕದಲ್ಲಿ ತಿಂಗಳಿಗೆ 8,000 ಡಾಲರ್ (ವರ್ಷಕ್ಕೆ ಸುಮಾರು 1 ಕೋಟಿ ರೂಪಾಯಿ) ಸಂಪಾದನೆ ಮಾಡುವಾಗ ಉಳಿಯುವುದಕ್ಕಿಂತ, ಭಾರತದಲ್ಲಿ ವರ್ಷಕ್ಕೆ 25 ಲಕ್ಷ ರೂಪಾಯಿ ಸಂಬಳ ಇದ್ದಾಗ ಹೆಚ್ಚು ಹಣ ಉಳಿಸುತ್ತಿದ್ದೆ ಎಂದು ನಿತಿನ್ ಹೇಳಿದ್ದಾರೆ.

ಕೆಲಸಕ್ಕೆ ಸೇರಿದರೆ ಖರ್ಚು ಹೆಚ್ಚಳ

ಅಮೆರಿಕದಲ್ಲಿನ ಖರ್ಚುಗಳ ಬಗ್ಗೆ ವಿವರಿಸಿದ ಅವರು, ‘ಮನೆ ಸಾಲಕ್ಕೆ 2,500 ಡಾಲರ್, ತೆರಿಗೆಗೆ 1,500 ಡಾಲರ್, ಊಟ-ತಿಂಡಿಗೆ 1,000-1,200 ಡಾಲರ್, ಕಾರ್ ಇನ್ಶೂರೆನ್ಸ್‌ಗೆ 500 ಡಾಲರ್, ಹೆಲ್ತ್ ಇನ್ಶೂರೆನ್ಸ್‌ಗೆ (ಪತ್ನಿ ಮತ್ತು ಮಗು ಸೇರಿ) 500 ಡಾಲರ್, ಇತರೆ ಖರ್ಚು ಮತ್ತು ಔಷಧಿಗಳಿಗೆ 500-800 ಡಾಲರ್ ಆಗುತ್ತದೆ. ಇದರ ಜೊತೆಗೆ ಫೋನ್, ಇಂಟರ್‌ನೆಟ್ ಬಿಲ್‌ಗಳೂ ಇವೆ. ಇದೆಲ್ಲಾ ಕಳೆದು ತಿಂಗಳಿಗೆ ಉಳಿಯುವುದು ಕೇವಲ 1,000 ದಿಂದ 1,200 ಡಾಲರ್ ಮಾತ್ರ’ ಎಂದಿದ್ದಾರೆ. ಸದ್ಯಕ್ಕೆ ಪತ್ನಿ ಕೆಲಸಕ್ಕೆ ಹೋಗದ ಕಾರಣ ಡೇ-ಕೇರ್ ಖರ್ಚು ಇಲ್ಲ. ಮುಂದೆ ಅವರು ಕೆಲಸಕ್ಕೆ ಸೇರಿದರೆ ಖರ್ಚು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿದ್ದಾಗ ತಮ್ಮ ತಿಂಗಳ ಆದಾಯ 2 ರಿಂದ 2.5 ಲಕ್ಷ ರೂಪಾಯಿ ಇತ್ತು ಎಂದು ನಿತಿನ್ ನೆನಪಿಸಿಕೊಂಡಿದ್ದಾರೆ. "ಆಗ 30,000 ರೂಪಾಯಿ ಮನೆ ಬಾಡಿಗೆ ಕಟ್ಟಿ, ಎಲ್ಲಾ ಖರ್ಚುಗಳ ನಂತರವೂ ತಿಂಗಳಿಗೆ 1 ಲಕ್ಷದಿಂದ 1.25 ಲಕ್ಷದವರೆಗೆ ಆರಾಮಾಗಿ ಉಳಿಸುತ್ತಿದ್ದೆ," ಎಂದು ನಿತಿನ್ ವಿವರಿಸಿದ್ದಾರೆ.

ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ನೋಡಿ

View post on Instagram

ಈ ವಿಡಿಯೋ ವೈರಲ್ ಆದ ಬಳಿಕ, ಸೋಶಿಯಲ್ ಮೀಡಿಯಾದಲ್ಲಿ ಎರಡು ದೇಶಗಳ ಜೀವನ ವೆಚ್ಚ ಮತ್ತು ಉಳಿತಾಯದ ಬಗ್ಗೆ ದೊಡ್ಡ ಚರ್ಚೆಯೇ ಶುರುವಾಗಿದೆ. ಕೆಲವರು ಅಮೆರಿಕದ ಉತ್ತಮ ಜೀವನಶೈಲಿ ಮತ್ತು ಮೂಲಸೌಕರ್ಯಗಳನ್ನು ಹೊಗಳಿದರೆ, ಇನ್ನು ಕೆಲವರು ಅಲ್ಲಿನ ದುಬಾರಿ ಖರ್ಚು ಮತ್ತು ಕೆಲಸ ಕಳೆದುಕೊಳ್ಳುವ ಭಯದ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಹಣಕ್ಕಿಂತ ನೆಮ್ಮದಿಯ ಜೀವನ ಮುಖ್ಯ ಎಂದು ಕೂಡ ಹಲವರು ಅಭಿಪ್ರಾಯಪಟ್ಟಿದ್ದಾರೆ.