ಮುಂಬೈನಲ್ಲಿ ವಿದೇಶಿ ಪ್ರಜೆಯೊಬ್ಬರು ವಿಕಲಚೇತನ ವ್ಯಕ್ತಿಗೆ ₹100 ಕೊಟ್ಟಿದ್ದಕ್ಕೆ ಮಹಿಳೆಯೊಬ್ಬರು ಜಗಳಕ್ಕಿಳಿದಿದ್ದಾರೆ. "ನಾನೂ ಹ್ಯಾಂಡಿಕ್ಯಾಪ್, ನನಗೂ ಸಹಾಯ ಬೇಕು" ಎಂದು ಪಟ್ಟು ಹಿಡಿದಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕವಾಗಿ ದಾನ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ.
ಮುಂಬೈನಲ್ಲಿ ಈ ವಾರ ವಿಚಿತ್ರ ಘಟನೆಯೊಂದು ನಡೆದಿದೆ. ವಿದೇಶಿ ವ್ಲಾಗರ್ ಒಬ್ಬರು ದಿವ್ಯಾಂಗ ವ್ಯಕ್ತಿಯೊಬ್ಬರಿಗೆ ₹100 ಸಹಾಯ ಮಾಡಿದ್ದರು. ಇದನ್ನು ನೋಡಿದ ಮಹಿಳೆಯೊಬ್ಬರು ತಕ್ಷಣವೇ ಮಧ್ಯಪ್ರವೇಶಿಸಿ, 'ನಾನೂ ಹ್ಯಾಂಡಿಕ್ಯಾಪ್, ನನಗೂ ಹಣಕಾಸಿನ ಸಹಾಯ ಮಾಡು' ಎಂದು ವಿದೇಶಿಗನೊಂದಿಗೆ ರಂಪಾಟ ಮಾಡಿದ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ದಾನ ಮಾಡುವುದು ಮತ್ತು ಕರುಣೆ ತೋರುವ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ಮುಂಬೈನ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ತನ್ನ ಪ್ರಯಾಣದ ಅನುಭವಗಳನ್ನು ದಾಖಲಿಸುವ ಈ ವಿದೇಶಿ ವ್ಲಾಗರ್, ದೈಹಿಕವಾಗಿ ಅಸಹಾಯಕರಾಗಿದ್ದ ವ್ಯಕ್ತಿಯೊಬ್ಬರಿಗೆ ₹100 ನೀಡಿದ್ದಾರೆ. ಹಣ ಕೈ ಸೇರುವ ಮುನ್ನವೇ ಆ ಮಹಿಳೆ ಮುಂದೆ ಬಂದು 'ನನಗೂ ಊಟ, ಔಷಧಿಗೆ ತಕ್ಷಣ ಹಣ ಬೇಕು, ನನಗೂ ಸಹಾಯ ಮಾಡಿ' ಎಂದು ಏರುದನಿಯಲ್ಲಿ ವಾದಿಸಿದ್ದಾರೆ. ದಿವ್ಯಾಂಗನಿಗೆ ಒಂದು ಸಣ್ಣ ಸಹಾಯ ಮಾಡಲು ಹೋಗಿ ದೊಡ್ಡ ರಂಪಾಟವೆ ನಡೆದುಹೋಗಿದೆ.
ಈ ವಿಡಿಯೋ ಹಂಚಿಕೊಂಡ ವ್ಲಾಗರ್, ಮುಂಬೈನಲ್ಲಿ ಈ ವ್ಯಕ್ತಿಯನ್ನು ನೋಡಿದಾಗ, ಅವರಿಗೆ ನಿಜವಾಗಿಯೂ ಸಹಾಯದ ಅಗತ್ಯವಿದೆ ಎಂದು ನನಗೆ ಅನಿಸಿತು. ಹಾಗಾಗಿ ₹100 ಕೊಟ್ಟೆ. ಆಗ ಇನ್ನೊಬ್ಬ ಮಹಿಳೆ ನನ್ನೊಂದಿಗೆ ವಾದ ಮಾಡಲು ಶುರುಮಾಡಿದರು... ಪರಿಸ್ಥಿತಿ ಬೇಗನೆ ಕೈಮೀರಿ ಹೋಯಿತು. ಕೊನೆಗೆ ನಾನು ಆ ವ್ಯಕ್ತಿಗೆ ಮತ್ತೆ ₹100 ಕೊಟ್ಟೆ. ನೀವಾಗಿದ್ದರೆ ಏನು ಮಾಡುತ್ತಿದ್ದಿರಿ?' ಎಂದು ಬರೆದುಕೊಂಡಿದ್ದಾರೆ.
ಆ ಮಹಿಳೆ ಕೇವಲ ತನಗಾಗಿ ವಾದ ಮಾಡಿದ್ದಲ್ಲ, ವ್ಲಾಗರ್‌ನಿಂದ ಸಹಾಯ ಪಡೆದ ವಿಕಲಚೇತನ ವ್ಯಕ್ತಿಯ ಮೇಲೆ ಗಂಭೀರ ಆರೋಪವನ್ನೂ ಮಾಡಿದ್ದಾರೆ. 'ಅವನು ಭಿಕ್ಷೆ ಬೇಡಿ ದಿನಕ್ಕೆ ₹2000 ಸಂಪಾದಿಸುತ್ತಾನೆ' ಎಂದು ಆ ಮಹಿಳೆ ಆರೋಪಿಸಿದ್ದಾರೆ. ಆತ ನಿಜವಾದ ಸಂತ್ರಸ್ತನಲ್ಲ, ಜನರ ಅನುಕಂಪವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ
ಈ ವೈರಲ್ ವಿಡಿಯೋ ನೋಡಿ ನೆಟಿಜನ್ ಸುಮ್ಮನಿರಬೇಕು. ಸೋಷಿಯಲ್ ಮೀಡಿಯಾದ್ಲಲೂ ಪರ ವಿರೋಧ ಚರ್ಚೆಗಳು ನಡೆದಿವೆ.
ವ್ಲಾಗರ್ ಆ ವ್ಯಕ್ತಿಗೆ ಮತ್ತೆ 100 ರೂಪಾಯಿ ನೀಡಿದ್ದಾರೆ. ಇದಕ್ಕೆ ಒಬ್ಬ ಬಳಕೆದಾರ, 'ಚಲಿಸಲಾಗದ ಮನುಷ್ಯ vs ಚಲಿಸಬಲ್ಲ ಮಹಿಳೆ' ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು, ತನ್ನ ಈ ಪರಿಸ್ಥಿತಿಗೆ ಆತನೇ ಕಾರಣ ಎಂಬಂತೆ ಆಕೆ ವರ್ತಿಸುತ್ತಿದ್ದಾಳೆ. ಹಣ ಕೇಳಲು ಇಷ್ಟೊಂದು ಜೋರಾಗಿ ಧ್ವನಿ ಎತ್ತುವ ಧೈರ್ಯ ನೋಡಿ' ಎಂದು ಬರೆದಿದ್ದಾರೆ.
ಮತ್ತೊಬ್ಬರು, 'ಇಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡಿಯೂ ಆ ಮಹಿಳೆ ಭಿಕ್ಷೆ ಬೇಡುತ್ತಾ, ತಾನು ಹ್ಯಾಂಡಿಕ್ಯಾಪ್ ಎನ್ನುತ್ತಾರೆ. ಭಾರತೀಯರಿಗೂ ಭಾರತ ಸರಿ ಇಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
ತನ್ನ ಕಾಲುಗಳನ್ನು ಕಿವಿಯ ಪಕ್ಕ ಇಟ್ಟುಕೊಂಡಿರುವ ವ್ಯಕ್ತಿಗಿಂತ ತಾನೇ ಹೆಚ್ಚು ಅಂಗವಿಕಲೆ ಎಂದು ಆಕೆ ವಾದಿಸುತ್ತಿರುವುದನ್ನು ನಂಬಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.


