ಟ್ರಾಫಿಕ್ ಪೊಲೀಸ್ ಸಾರ್ಜೆಂಟ್ ಪ್ರಕಾಶ್ ಘೋಷ್ ಅವರು ಕರ್ತವ್ಯದ ನಡುವೆಯೂ ಫುಟ್‌ಪಾತ್‌ನಲ್ಲಿ ವಾಸಿಸುವ ಆಕಾಶ್ ಎಂಬ ಬಡ ಮಗುವಿಗೆ ವಿದ್ಯಾದಾನ ಮಾಡುತ್ತಿದ್ದಾರೆ. ಕೊರೊನಾದಿಂದ ಶಾಲೆ ಬಿಟ್ಟಿದ್ದ ಈ ಮಗುವಿಗೆ ರಸ್ತೆಬದಿಯಲ್ಲೇ ನಿಂತು ಪಾಠ ಹೇಳಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರ ಈ ನಿಸ್ವಾರ್ಥ ಸೇವೆಯ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಕೋಟ್ಯಂತರ ಜನರ ಹೃದಯ ಗೆದ್ದಿದೆ.
ಕೋಲ್ಕತ್ತಾದ ಅತ್ಯಂತ ಜನನಿಬಿಡ ಹಾಗೂ ಸದಾ ವಾಹನಗಳ ಗದ್ದಲದಿಂದ ಕೂಡಿರುವ ರಸ್ತೆಗಳಲ್ಲಿ ಖಾಕಿ ಸಮವಸ್ತ್ರ ಧರಿಸಿದ ಪೊಲೀಸ್ ಅಧಿಕಾರಿಯೊಬ್ಬರು ಟ್ರಾಫಿಕ್ ನಿಯಂತ್ರಿಸುತ್ತಿರುತ್ತಾರೆ. ಆದರೆ, ಅಲ್ಲಿಗೆ ಬಂದು ಹೋಗುವ ಸಾರ್ವಜನಿಕರು ಹಾಗೂ ಸವಾರರು ಕ್ಷಣಕಾಲ ಬೆರಗಾಗಿ ನೋಡುವಂತೆ ಮಾಡಿದ್ದು ಆ ಅಧಿಕಾರಿಯ ಮತ್ತೊಂದು ಸೈಲೆಂಟ್ ಕಾರ್ಯಾಚರಣೆ! ಅವರು ಕೇವಲ ವಾಹನ ಸಂಚಾರವನ್ನು ನಿರ್ವಹಿಸುತ್ತಿಲ್ಲ; ಬದಲಿಗೆ, ಪಾದಚಾರಿ ಮಾರ್ಗದಲ್ಲಿ ಕುಳಿತು ಅಸಹಾಯಕ ಮಗುವಿನ ಭವಿಷ್ಯಕ್ಕೆ ಅಕ್ಷರದ ಬೆಳಕು ಚೆಲ್ಲುತ್ತಿದ್ದಾರೆ. ಕೋಲ್ಕತ್ತಾ ಪೊಲೀಸ್ ಸಾರ್ಜೆಂಟ್ ಪ್ರಕಾಶ್ ಘೋಷ್ ಅವರ ಈ ಸ್ಪೂರ್ತಿದಾಯಕ ಹಾಗೂ ಹೃದಯಸ್ಪರ್ಶಿ ಕಥೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸೌಂಡ್ ಮಾಡುತ್ತಿದ್ದು, ಕೋಟಿ ಕೋಟಿ ಜನರ ಹೃದಯ ಗೆಲ್ಲುತ್ತಿದೆ.
ಫುಟ್‌ಪಾತ್‌ನಲ್ಲಿ ಕರಗಿದ 'ಖಾಕಿ'ಯ ಹೃದಯ!
ಒಂಬತ್ತು ವರ್ಷಗಳ ಹಿಂದೆ ಪೊಲೀಸ್ ಪಡೆಗೆ ಸೇರ್ಪಡೆಗೊಂಡ ಪ್ರಕಾಶ್ ಘೋಷ್, ಕಳೆದ ಐದು ವರ್ಷಗಳಿಂದ ಸೌತ್ ಪಾಯಿಂಟ್ ಶಾಲೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗರಿಯಾಹತ್ ಮತ್ತು ಬ್ಯಾಲಿಗಂಜ್ ಐಟಿಐ ಬಳಿ ಸಂಚಾರ ನಿಯಂತ್ರಿಸುತ್ತಿದ್ದಾಗ, ಎಂಟು ವರ್ಷದ ಮಗುವೊಂದು ದಿನವಿಡೀ ಬೀದಿಯಲ್ಲಿ ಗತಿ ಕಾಣದೆ ಅಲೆದಾಡುತ್ತಿರುವುದು ಅವರ ಕಣ್ಣಿಗೆ ಬಿತ್ತು. ವಿಚಾರಿಸಿದಾಗ, ಆ ಮಗುವಿನ ಹೆಸರು ಆಕಾಶ್ ರಾವತ್ ಎಂದು ತಿಳಿಯಿತು. ಮಗುವಿನ ತಾಯಿ ಸುನೀತಾ ರಸ್ತೆಬದಿಯ ಸಣ್ಣ ಆಹಾರದ ಬಂಡಿ ನಡೆಸುತ್ತಾ ದಿನಕ್ಕೆ ಕೇವಲ 150 ರಿಂದ 200 ರೂಪಾಯಿ ದುಡಿಯುತ್ತಿದ್ದರು. ಇಬ್ಬರೂ ನಿರಾಶ್ರಿತರಾಗಿದ್ದು, ಫುಟ್‌ಪಾತ್ ಮೇಲೆಯೇ ವಾಸಿಸುತ್ತಿದ್ದರು.
ಪಾಠ ಹೇಳಲು ಮುಂದಾದ ಪೊಲೀಸಪ್ಪ!
ಸುಮಾರು ಒಂದೂವರೆ ವರ್ಷದ ಹಿಂದೆ ಐಟಿಐನಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್‌ನ ತಂದೆ ತೀರಿಕೊಂಡ ನಂತರ ಕುಟುಂಬ ಬೀದಿಗೆ ಬಿದ್ದಿತ್ತು. ಕೊರೊನಾ ಲಾಕ್‌ಡೌನ್‌ನಿಂದಾಗಿ ಆಕಾಶ್‌ನ ಶಾಲೆಯೂ ಬಿಟ್ಟುಹೋಗಿ, ಕನಿಷ್ಠ ಅಕ್ಷರಮಾಲೆಯನ್ನೂ ಮರೆತುಹೋಗಿದ್ದ. ಬಡತನದಲ್ಲಿದ್ದ ತಾಯಿಗೆ ಮಗನನ್ನು ಖಾಸಗಿ ಟ್ಯೂಷನ್‌ಗೆ ಕಳುಹಿಸಲು ಕಾಸಿರಲಿಲ್ಲ. ಈ ದೃಶ್ಯ ಕಂಡ ಪೊಲೀಸ್ ಅಧಿಕಾರಿ ಪ್ರಕಾಶ್ ಘೋಷ್ ಅವರ ಹೃದಯ ಕರಗಿತು. ಈ ಮುಗ್ಧ ಮಗು ರಸ್ತೆಯ ಸವಾಲುಗಳಿಗೆ ಸಿಲುಕಿ ಭವಿಷ್ಯ ಹಾಳುಮಾಡಿಕೊಳ್ಳಬಾರದು ಎಂದು ನಿರ್ಧರಿಸಿ, ತಾವೇ ಅವನಿಗೆ ಪಾಠ ಹೇಳಿಕೊಡಲು ಮುಂದಾದರು.
ಸಮವಸ್ತ್ರದಲ್ಲೂ ಜೀವಂತವಾಗಿತ್ತು 'ಗುರೂಜಿ'ಯ ಮನಸ್ಸು!
ಪೊಲೀಸ್ ಇಲಾಖೆಗೆ ಸೇರುವ ಮುನ್ನ ಪ್ರಕಾಶ್ ಘೋಷ್ ಅವರು ಮುರ್ಷಿದಾಬಾದ್‌ನ ಜಂಗಿಪುರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ (M.Ed.) ಪಡೆದವರಾಗಿದ್ದರು. ಖಾಕಿ ಧರಿಸಿದರೂ ಅವರೊಳಗಿನ ಶಿಕ್ಷಕ ಜೀವಂತವಾಗಿದ್ದನು. ಬ್ಯಾಲಿಗಂಜ್ ಐಟಿಐ ಬಳಿ ಡ್ಯೂಟಿಗೆ ನಿಂತಾಗಲೆಲ್ಲಾ, ಅವರು ಆಕಾಶ್‌ಗೆ ಪುಸ್ತಕ ನೀಡಿ ರಸ್ತೆಬದಿಯಲ್ಲಿ ಕೂರಿಸುತ್ತಿದ್ದರು. ಒಂದು ಕಣ್ಣಿನಲ್ಲಿ ಟ್ರಾಫಿಕ್ ನೋಡುತ್ತಲೇ, ಮತ್ತೊಂದು ಕಣ್ಣಿನಲ್ಲಿ ಮಗುವಿನ ಓದನ್ನು ಗಮನಿಸುತ್ತಿದ್ದರು. ಅಧಿಕಾರಿಯ ಕೆಲಸದ ವೇಳಾಪಟ್ಟಿ ಎಷ್ಟೇ ಕಠಿಣವಾಗಿದ್ದರೂ, ಅವರು ಎಂದಿಗೂ ನೆಪ ಹೇಳಲಿಲ್ಲ. ಡ್ಯೂಟಿ ಮುಗಿದ ಮೇಲೆಯೂ ಮನೆಗೆ ಹೋಗದೆ ಫುಟ್‌ಪಾತ್ ಮೇಲೆಯೇ ನಿಂತು ಮಗುವಿಗೆ ಸಮಯ ನೀಡುತ್ತಿದ್ದರು. ಸಮವಸ್ತ್ರದಲ್ಲಿ ಫುಟ್‌ಪಾತ್ ಮೇಲೆ ಕುಳಿತುಕೊಳ್ಳುವುದು ಕಷ್ಟವಾದ್ದರಿಂದ, ಧಗಧಗಿಸುವ ಬಿಸಿಲಿನಲ್ಲಿ ನಿಂತುಕೊಂಡೇ ಮಗುವಿಗೆ ಅಕ್ಷರ ತಿದ್ದುತಿದ್ದರು. ಹತ್ತಿರದ ಮರದ ಕೊಂಬೆಯನ್ನೇ ಕೋಲಿನಂತೆ ಬಳಸಿ, ಪ್ರತಿದಿನ ಹೋಮ್‌ವರ್ಕ್ ನೀಡುತ್ತಿದ್ದರು.
ಬದಲಾಯಿತು ಮಗುವಿನ ಭವಿಷ್ಯ, ಸಾಕಾರಗೊಂಡ ತಾಯಿಯ ಕನಸು!
ಆರಂಭದಲ್ಲಿ ಆಕಾಶ್‌ಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ, ಅರ್ಧ ಗಂಟೆಯೂ ಸುಮ್ಮನೆ ಕುಳಿತುಕೊಳ್ಳುತ್ತಿರಲಿಲ್ಲ. ಆದರೆ ಪ್ರಕಾಶ್ ಘೋಷ್ ಅವರು ಪ್ರೀತಿ ಮತ್ತು ತಾಳ್ಮೆಯಿಂದ ಅವನಲ್ಲಿ ಕಲಿಯುವ ಆಸಕ್ತಿಯನ್ನು ಚಿಗುರಿಸಿದರು. ಈಗ ಆಕಾಶ್ ಪ್ರತಿದಿನ ಶ್ರದ್ಧೆಯಿಂದ ಪುಸ್ತಕ ಹಿಡಿದು ಕುಳಿತುಕೊಳ್ಳುತ್ತಿದ್ದಾನೆ. "ನನ್ನ ಮಗ ಚೆನ್ನಾಗಿ ಓದಿ ದೊಡ್ಡ ಮನುಷ್ಯನಾಗಬೇಕು, ನಮ್ಮ ಬಡತನ ನೀಗಬೇಕು ಎಂಬುದೇ ನನ್ನ ಆಸೆ. ಈ ಪೊಲೀಸ್ ಸರ್ ಬಂದಮೇಲೆ ಮಗ ಸಂಪೂರ್ಣ ಬದಲಾಗಿದ್ದಾನೆ" ಎಂದು ತಾಯಿ ಸುನೀತಾ ಕಣ್ಣೀರಾದರು. ಖಾಕಿ ಸಮವಸ್ತ್ರದ ಹಿನ್ನೆಲೆಯಲ್ಲಿ ಅಡಗಿರುವ ಈ ಮಾನವೀಯ ಮುಖವು ಸಮಾಜವನ್ನು ಬದಲಾಯಿಸಲು ಮನಸ್ಸಿದ್ದರೆ, ಕಾಲ ಮತ್ತು ಸಂಪನ್ಮೂಲಗಳು ಎಂದಿಗೂ ತಡೆಗೋಡೆಯಾಗುವುದಿಲ್ಲ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದೆ.


