ಇನ್ನು ಕೇವಲ 2 ತಿಂಗಳಲ್ಲಿ ಜಗತ್ತು ಅಂತ್ಯವಾಗುತ್ತಾ? ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. 60 ವರ್ಷಗಳ ಹಿಂದೆ ವಿಜ್ಞಾನಿಯೊಬ್ಬ ಬರೆದಿರುವ ಶಾಕಿಂಗ್ ವಿಚಾರದ ಸತ್ಯಾಸತ್ಯತೆ ಇಲ್ಲಿದೆ..
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಸಂಚಲನ ಮೂಡಿಸುತ್ತಿದೆ. ಅದೇನಪ್ಪಾ ಅಂದ್ರೆ ಬರುವ ನವೆಂಬರ್ 13 ರಂದು ಜಗತ್ತು ಅಂತ್ಯವಾಗಲಿದೆ ಎಂಬ ಭೀತಿ! 60 ವರ್ಷಗಳ ಹಿಂದೆ ವಿಜ್ಞಾನಿಯೊಬ್ಬರು ನೀಡಿದ್ದ ಗಣಿತದ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ಈ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಈ ಸುದ್ದಿಯಲ್ಲಿ ಎಷ್ಟು ನಿಜವಿದೆ? ವಿಜ್ಞಾನಿಗಳು ಈಗ ಏನು ಹೇಳುತ್ತಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಏನಿದು ಫೋರ್ಸ್ಟರ್ ಭವಿಷ್ಯ?
1960ರಲ್ಲಿ ವಿಜ್ಞಾನಿ 'ಫೋರ್ಸ್ಟರ್' ಎಂಬುವವರು ಜಾಗತಿಕ ಜನಸಂಖ್ಯೆಯ ಬಗ್ಗೆ ಒಂದು ಅಧ್ಯಯನ ನಡೆಸಿದ್ದರು. ಅವರ ಗಣಿತದ ಮಾದರಿಯ ಪ್ರಕಾರ 2026ರ ನವೆಂಬರ್ 13ರ ವೇಳೆಗೆ ವಿಶ್ವದ ಜನಸಂಖ್ಯೆಯು ಮಿತಿಮೀರಿ (ಅನಂತವಾಗಿ) ಸಂಪನ್ಮೂಲಗಳ ಕೊರತೆಯಿಂದಾಗಿ ಜಗತ್ತು ಅಂತ್ಯವಾಗಲಿದೆ ಎಂದು ಅಂದಾಜಿಸಲಾಗಿತ್ತು. ಇದನ್ನೇ ಈಗ 'ಪ್ರಳಯದ ದಿನ' ಎಂದು ಬಿಂಬಿಸಲಾಗುತ್ತಿದೆ.
ಪ್ರಕೃತಿ ಮತ್ತು ಮಾನವ ಸಮಾಜವು ಫೋರ್ಸ್ಟರ್ ಊಹಿಸಿದ ದಿಕ್ಕಿನಲ್ಲಿ ಸಾಗಿಲ್ಲ. ಅವರು ಅಧ್ಯಯನ ಮಾಡಿದಾಗ (1960ರಲ್ಲಿ) ವಿಶ್ವದ ಜನಸಂಖ್ಯೆ ಸುಮಾರು 300 ಕೋಟಿಯಷ್ಟಿತ್ತು. 1963ರ ವೇಳೆಗೆ ಜನಸಂಖ್ಯಾ ವೃದ್ಧಿ ದರವು ಶೇ. 2.2 ರಷ್ಟು ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೆ ಅಲ್ಲಿಂದೀಚೆಗೆ ಈ ದರವು ಕ್ರಮೇಣ ಕಡಿಮೆಯಾಗುತ್ತಾ ಬಂದಿದೆ. ವಿಶ್ವಸಂಸ್ಥೆಯ (UN) ಅಂಕಿಅಂಶಗಳ ಪ್ರಕಾರ, 2026ರ ವೇಳೆಗೆ ವಿಶ್ವದ ಜನಸಂಖ್ಯಾ ವೃದ್ಧಿ ದರವು ಶೇ. 0.84 ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ.
- ಜನರು ಹೆಚ್ಚು ಸುಶಿಕ್ಷಿತರಾಗುತ್ತಿದ್ದಾರೆ.
- ಮಹಿಳೆಯರು ವೃತ್ತಿಜೀವನ ಮತ್ತು ಕುಟುಂಬ ಯೋಜನೆಯಲ್ಲಿ ಸಕ್ರಿಯರಾಗಿದ್ದಾರೆ
- ನಗರ ಜೀವನದ ಶೈಲಿಯಿಂದಾಗಿ ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚಿದೆ
- ಹೆಚ್ಚುತ್ತಿರುವ ಜೀವನ ವೆಚ್ಚವು ಮಕ್ಕಳ ಸಂಖ್ಯೆಯನ್ನು ಮಿತಿಗೊಳಿಸಲು ಪ್ರೇರೇಪಿಸಿದೆ
- ಗರ್ಭನಿರೋಧಕ ಸಾಧನಗಳ ಸುಲಭ ಲಭ್ಯತೆ ಮತ್ತು ಬಳಕೆ
ಭಯಪಡುವ ಅಗತ್ಯವಿಲ್ಲ!
ಇಂದು ವಿಶ್ವದ ಜನಸಂಖ್ಯೆ 8.2 ಬಿಲಿಯನ್‌ಗೆ (820 ಕೋಟಿ) ತಲುಪಿದ್ದರೂ ಸಹ, ಫೋರ್ಸ್ಟರ್ ಲೆಕ್ಕಾಚಾರದಂತೆ ಅದು ನಿಯಂತ್ರಣ ಮೀರಿ ಬೆಳೆದಿಲ್ಲ. ಆದ್ದರಿಂದ, ನವೆಂಬರ್ 13 ರಂದು ಜಗತ್ತಿಗೆ ಯಾವುದೇ ಅಪಾಯವಿಲ್ಲ. ಇದು ಕೇವಲ 60 ವರ್ಷಗಳ ಹಳೆಯ ಗಣಿತದ ಮಾದರಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಸೃಷ್ಟಿಸಿದ ಪುಕಾರು ಮಾತ್ರ. ಸೋಶಿಯಲ್ ಮೀಡಿಯಾದಲ್ಲಿ ಬರುವ ಇಂತಹ ಆಧಾರರಹಿತ ಸುದ್ದಿಗಳನ್ನು ನಂಬಿ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಂಶೋಧಕರು ಮತ್ತು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.


