Inspiring student stories: ಸ್ವಂತ ಕಾಲೇಜು ಶುಲ್ಕ ಮತ್ತು ಕುಟುಂಬದ ಜವಾಬ್ದಾರಿ ಹೊರಲು ರಾತ್ರಿಯಿಡೀ ಕಡಲೆಕಾಯಿ ಮಾರಾಟ ಮಾಡುತ್ತಿರುವ ಮೆರೈನ್ ಇಂಜಿನಿಯರಿಂಗ್ ವಿದ್ಯಾರ್ಥಿ ಅರಿಸ್ಟನ್ ಎರಾ ಅವರ ಜೀವನಗಾಥೆ, ಕಷ್ಟಗಳ ನಡುವೆಯೂ ಗುರಿ ಮುಟ್ಟಲು ಬಯಸುವ ಪ್ರತಿಯೊಬ್ಬರಿಗೂ ನೈಜ ಪ್ರೇರಣೆಯಾಗಿದೆ.
ಕಾಲೇಜು ಮುಗಿದ ತಕ್ಷಣ ಮನೆಗೆ ತೆರಳಿ ಸ್ನೇಹಿತರೊಂದಿಗೆ ಕಾಲ ಕಳೆಯುವ ಅಥವಾ ವಿಶ್ರಾಂತಿ ಪಡೆಯುವ ಬಹುತೇಕ ಯುವಕರ ನಡುವೆ, ಫಿಲಿಪೈನ್ಸ್ನ ಈ ವಿದ್ಯಾರ್ಥಿಯ ಜೀವನ ಸಂಪೂರ್ಣ ಭಿನ್ನ ಹಾಗೂ ರೋಚಕವಾಗಿದೆ. ಹಗಲಿನಲ್ಲಿ ಮೆರೈನ್ ಇಂಜಿನಿಯರಿಂಗ್ ಕಲಿಯುವ ಈತ, ರಾತ್ರಿಯಾದರೆ ಸಾಕು ಬೀದಿಗಿಳಿದು ಕಡಲೆಕಾಯಿ ಮಾರಾಟ ಮಾಡುತ್ತಾನೆ. ಅದು ಕೂಡ ನಡುರಾತ್ರಿ 3 ಗಂಟೆಯವರೆಗೂ! ತನ್ನ ಕಾಲೇಜು ಶುಲ್ಕಕ್ಕಾಗಿ ರಸ್ತೆಯಲ್ಲಿ ಬೆವರು ಸುರಿಸುತ್ತಿರುವ ಈ ಯುವಕನ ಹೆಸರು ಅರಿಸ್ಟನ್ ಎರಾ III (Ariston Era III).
ಫಿಲಿಪೈನ್ಸ್ನ 'ಯೂನಿವರ್ಸಿಟಿ ಆಫ್ ದಿ ವಿಸಯಾಸ್'ನಲ್ಲಿ ಮೂರನೇ ವರ್ಷದ ಮೆರೈನ್ ಇಂಜಿನಿಯರಿಂಗ್ ಓದುತ್ತಿರುವ ಅರಿಸ್ಟನ್, ಸ್ವಾವಲಂಬಿ ಬದುಕಿಗೆ ಸಾಕ್ಷಿಯಾಗಿದ್ದಾರೆ. ಅವರ ಈ ವ್ಯಾಪಾರದ ಹಾದಿ ಆರಂಭವಾಗಿದ್ದು 11ನೇ ವಯಸ್ಸಿನಲ್ಲಿ. ಕಾಲೇಜು ದಿನಗಳಲ್ಲಿ ತಾವೇ ಸ್ವತಃ ತಿಂಡಿ-ತಿನಿಸು ಮಾರಿ ಓದಿದ್ದ ಅವರ ತಾಯಿಯೇ ಅರಿಸ್ಟನ್ಗೆ ಮೊದಲ ಪ್ರೇರಣೆ. ಆರಂಭದಲ್ಲಿ ತಾಯಿಯ ಜೊತೆ ಮನೆಯಲ್ಲೇ ಮಾಡಿದ ತಿಂಡಿ ಮಾರುತ್ತಿದ್ದ ಅರಿಸ್ಟನ್, ನಂತರ ಕ್ವೇಲ್ ಪಕ್ಷಿಯ ಮೊಟ್ಟೆ, ಮಾವಿನ ಹಣ್ಣು ಮಾರಾಟ ಮಾಡಿದರು. ಆದರೆ ಹಣ್ಣುಗಳನ್ನು ಹೊತ್ತು ತಿರುಗಾಡುವುದು ಕಷ್ಟವೆನಿಸಿದಾಗ, ಸಾಗಿಸಲು ಹಗುರವಾದ ಹಾಗೂ ಬೇಗ ಹಾಳಾಗದ ಕಡಲೆಕಾಯಿ ಮಾರಾಟವನ್ನು ಆಯ್ಕೆ ಮಾಡಿಕೊಂಡರು.
ಇವರ ದಿನಚರಿ ನಿಜಕ್ಕೂ ಬೆರಗು ಹುಟ್ಟಿಸುವಂತಿದೆ. ರಾತ್ರಿ 3 ಗಂಟೆಯವರೆಗೂ ರಸ್ತೆಗಳಲ್ಲಿ ಕಡಲೆಕಾಯಿ ಮಾರಿ ಬರುವ ಅರಿಸ್ಟನ್, ಮಲಗಿ ಮತ್ತೆ ಬೆಳಗ್ಗೆ 5 ಗಂಟೆಗೇ ಏಳುತ್ತಾರೆ. ಯುನಿಫಾರ್ಮ್ ಇಸ್ತ್ರಿ ಮಾಡಿಕೊಂಡು, ಕಾಲೇಜಿಗೆ ಬೇಕಾದ ಪುಸ್ತಕಗಳನ್ನು ಸಿದ್ಧಪಡಿಸಿಕೊಂಡು ಸರಿಯಾಗಿ 7:30ಕ್ಕೆ ತರಗತಿಯಲ್ಲಿ ಹಾಜರಿರುತ್ತಾರೆ. ಅಚ್ಚರಿಯೆಂದರೆ, ಅವರ ಕಾಲೇಜಿನ ಸಹಪಾಠಿಗಳೇ ಅವರ ಕಾಯಂ ಗ್ರಾಹಕರು! ಐದು ಜನ ಮಕ್ಕಳಿರುವ ಕುಟುಂಬದಲ್ಲಿ ಹಿರಿಯ ಮಗನಾಗಿರುವ ಅರಿಸ್ಟನ್, ಎರಡನೇ ವರ್ಷದ ಇಂಜಿನಿಯರಿಂಗ್ನಿಂದಲೇ ಸ್ವಂತ ಕಾಲೇಜು ಶುಲ್ಕ ಮತ್ತು ದಿನನಿತ್ಯದ ಖರ್ಚನ್ನು ತಾವೇ ನಿಭಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಿರಿಯ ನಾಲ್ವರು ಒಡಹುಟ್ಟಿದವರ ವಿದ್ಯಾಭ್ಯಾಸಕ್ಕೂ ಹಣಕಾಸಿನ ನೆರವು ನೀಡುತ್ತಿದ್ದಾರೆ.
"ಪ್ರಾಮಾಣಿಕ ದುಡಿಮೆಯಲ್ಲಿ ಯಾವುದೇ ನಾಚಿಕೆ ಇಲ್ಲ" ಎಂದು ಹೆಮ್ಮೆಯಿಂದ ಹೇಳುವ ಅರಿಸ್ಟನ್, ಕೇವಲ ಬೀದಿಬದಿ ವ್ಯಾಪಾರಿಯಾಗಿ ಉಳಿಯಲು ಇಷ್ಟಪಟ್ಟಿಲ್ಲ. ಈಗಾಗಲೇ ತಮ್ಮ ಊರಿನಲ್ಲಿ 'ಸ್ಪೀಡಿ ಡೆಲಿವರಿ' (Speedy Delivery) ಎಂಬ ಸ್ಥಳೀಯ ಹೋಮ್ ಡೆಲಿವರಿ ಸೇವೆಯನ್ನು ಆರಂಭಿಸಿದ್ದು, ನಿರುದ್ಯೋಗಿ ಸ್ನೇಹಿತರಿಗೆ ಉದ್ಯೋಗವನ್ನೂ ನೀಡಿದ್ದಾರೆ. ಮುಂದೆ ಮೆರೈನ್ ಇಂಜಿನಿಯರಿಂಗ್ ಮೂಲಕ ಬಂಡವಾಳ ಗಳಿಸಿ, ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸುವ ಮತ್ತು ಬೀದಿ ಪ್ರಾಣಿಗಳಿಗಾಗಿ ಆಶ್ರಯ ತಾಣ ನಿರ್ಮಿಸುವ ದೊಡ್ಡ ಕನಸು ಅವರ ಕಣ್ಣಲ್ಲಿದೆ.
"ನಮ್ಮ ಪ್ರಗತಿಯನ್ನು ಇನ್ನೊಬ್ಬರ ಜೀವನದೊಂದಿಗೆ ಹೋಲಿಸಬಾರದು. ಹಣ ಕಡಿಮೆ ಇದೆ ಎಂದ ಮಾತ್ರಕ್ಕೆ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳು ಚಿಕ್ಕದಾಗಿರಬೇಕಿಲ್ಲ" ಎನ್ನುವ ಅರಿಸ್ಟನ್ ಅವರ ಜೀವನ, ಕಷ್ಟಗಳಿಗೆ ಹೆದರಿ ಕೂರುವ ಇಂದಿನ ಯುವಪೀಳಿಗೆಗೆ ಅತ್ಯಂತ ಸ್ಫೂರ್ತಿದಾಯಕ ಪಾಠವಾಗಿದೆ.
'ಹಾವುಗಳಿಗೂ' ಆಶ್ರಯ ನೀಡುವ ವಿಶಿಷ್ಟ ಕನಸು! (Unique Dream)
ಸಾಮಾನ್ಯವಾಗಿ ಪ್ರಾಣಿ ಪ್ರಿಯರು ನಾಯಿ-ಬೆಕ್ಕುಗಳಿಗೆ ಆಶ್ರಯ ತಾಣ (Shelter) ಕಟ್ಟಲು ಬಯಸುತ್ತಾರೆ. ಆದರೆ ಅರಿಸ್ಟನ್ ಬೀದಿ ನಾಯಿ, ಬೆಕ್ಕುಗಳ ಜೊತೆಗೆ 'ಹಾವು'ಗಳಿಗೂ ಆಶ್ರಯ ನೀಡುವ ಕನಸು ಹೊಂದಿದ್ದಾರೆ!
"ಹಾವುಗಳನ್ನು ಸಮಾಜದಲ್ಲಿ ಯಾವಾಗಲೂ ಕೆಟ್ಟದಾಗಿ, ಭಯಾನಕವಾಗಿ ಬಿಂಬಿಸಲಾಗಿದೆ. ಅವು ಅತ್ಯಂತ ತಪ್ಪಾಗಿ ಗ್ರಹಿಸಲ್ಪಟ್ಟ ಜೀವಿಗಳು" ಎಂಬುದು ಅವರ ವಾದ. ಈ ಸೂಕ್ಷ್ಮ ಆಲೋಚನೆ ಅವರ ವಿಶಾಲ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ.




