ಕೋಲ್ಡ್ ವಾರ್ ಸಮಯದಲ್ಲಿ ಸಿಐಎ ತಮ್ಮ ಮಿಷನ್ ಒಂದಕ್ಕೆ ಮನುಷ್ಯರನ್ನಲ್ಲ ಬೆಕ್ಕನ್ನು ಗೂಢಾಚಾರಿಯನ್ನಾಗಿ ಮಾಡಿತ್ತು. ಇದಕ್ಕಾಗಿ ಅವರು ಖರ್ಚು ಮಾಡಿದ್ದು, ಬರೋಬ್ಬರಿ 20 ಮಿಲಿಯನ್ ಡಾಲರ್. ಆದರೆ ಕೊನೆಗೆ ಆ ಮಿಷನ್ ಏನಾಯ್ತು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ.

ಬೆಕ್ಕನ್ನೇ ಜೇಮ್ಸ್ ಬಾಂಡ್ ಮಾಡಲು ಹೊರಟ CIA

ಗೂಢಚಾರಿಕೆ ಜಗತ್ತಿನಲ್ಲಿ ನೀವು ಹಲವು ರೀತಿಯ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಕೇಳಿರಬಹುದು. ಆದರೆ ಬೆಕ್ಕನ್ನೇ ಗೂಢಚಾರಿಯನ್ನಾಗಿ ಮಾಡಲು ಪ್ರಯತ್ನಿಸಿದ ವಿಚಿತ್ರ ಪ್ರಯೋಗದ ಬಗ್ಗೆ ಎಂದಾದರೂ ಕೇಳಿದ್ದೀರಾ? ಅಮೆರಿಕದ ಗುಪ್ತಚರ ಸಂಸ್ಥೆಯಾದ CIA, ಶೀತಲ ಸಮರದ ಸಮಯದಲ್ಲಿ ಇಂತಹದ್ದೊಂದು ವಿಭಿನ್ನ ಪ್ರಯೋಗಕ್ಕೆ ಕೈಹಾಕಿತ್ತು. ಈ ಯೋಜನೆಗೆ 'ಆಪರೇಷನ್ ಅಕೌಸ್ಟಿಕ್ ಕಿಟ್ಟಿ' (Operation Acoustic Kitty) ಎಂದು ಹೆಸರಿಡಲಾಗಿತ್ತು. ಈ ಪ್ರಾಜೆಕ್ಟ್‌ಗಾಗಿ ಸುಮಾರು 20 ಮಿಲಿಯನ್ ಡಾಲರ್, ಅಂದರೆ 2 ಕೋಟಿ ಡಾಲರ್‌ಗೂ ಹೆಚ್ಚು ಹಣ ಖರ್ಚು ಮಾಡಲಾಗಿತ್ತು. ಆದರೆ ಕೊನೆಗೆ ಈ ಮಿಷನ್ ಯಶಸ್ವಿಯಾಗಲೇ ಇಲ್ಲ.

ಯಾವಾಗ ಆರಂಭವಾಯಿತು 'ಆಪರೇಷನ್ ಅಕೌಸ್ಟಿಕ್ ಕಿಟ್ಟಿ'?

ಈ ಯೋಜನೆ 1964ರಲ್ಲಿ ಆರಂಭವಾಯಿತು. ಆ ಸಮಯದಲ್ಲಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವೆ ಶೀತಲ ಸಮರ (Cold War) ನಡೆಯುತ್ತಿತ್ತು. ಎರಡೂ ದೇಶಗಳು ಪರಸ್ಪರರ ರಹಸ್ಯ ಮಾಹಿತಿಗಳನ್ನು ಸಂಗ್ರಹಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದವು. ಇದೇ ಸಂದರ್ಭದಲ್ಲಿ CIA ಅಧಿಕಾರಿಗಳಿಗೆ ಬೆಕ್ಕಿನ ಮೂಲಕ ವಿದೇಶಿ ಏಜೆಂಟ್‌ಗಳ ಮಾತುಕತೆಯನ್ನು ರಹಸ್ಯವಾಗಿ ರೆಕಾರ್ಡ್ ಮಾಡುವ ಆಲೋಚನೆ ಬಂದಿತ್ತು. ಸಾಮಾನ್ಯವಾಗಿ ಬೆಕ್ಕುಗಳು ಜನರ ಸುತ್ತಮುತ್ತ ಯಾವುದೇ ಅನುಮಾನ ಮೂಡಿಸದೆ ಓಡಾಡಬಲ್ಲವು. ಹೀಗಾಗಿ ಅವುಗಳನ್ನು ಯಾರೂ ಸುಲಭವಾಗಿ ಅನುಮಾನಿಸುವುದಿಲ್ಲ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿತ್ತು. ಈ ತಂತ್ರದ ಮೂಲಕ ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು ಮತ್ತು ಬೆಂಚ್‌ಗಳ ಬಳಿ ನಡೆಯುವ ಸೂಕ್ಷ್ಮ ಮಾತುಕತೆಗಳನ್ನು ರಹಸ್ಯವಾಗಿ ಆಲಿಸಬಹುದು ಎಂದು CIA ಭಾವಿಸಿತ್ತು.

ಬೆಕ್ಕಿನ ದೇಹದಲ್ಲಿ ಅಳವಡಿಸಲಾಗಿತ್ತು ಸೀಕ್ರೆಟ್ ಉಪಕರಣಗಳು!

ಈ ವಿಚಿತ್ರ ಮಿಷನ್‌ಗಾಗಿ ಬೆಕ್ಕಿನ ದೇಹದಲ್ಲಿ ವಿಶೇಷ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಳವಡಿಸಲಾಗಿತ್ತು. ಅದರ ಕಿವಿಯ ಬಳಿ ಸಣ್ಣ ಮೈಕ್ರೋಫೋನ್ ಇರಿಸಲಾಗಿತ್ತು. ಚರ್ಮದ ಕೆಳಭಾಗದಲ್ಲಿ ರೇಡಿಯೋ ಟ್ರಾನ್ಸ್‌ಮಿಟರ್ ಅಳವಡಿಸಲಾಗಿತ್ತು. ಇದರ ಜೊತೆಗೆ ಬೆಕ್ಕಿನ ತುಪ್ಪಳದೊಳಗೆ ತೆಳುವಾದ ಆಂಟೆನಾವನ್ನೂ ಮರೆಮಾಡಲಾಗಿತ್ತು. ಈ ಎಲ್ಲಾ ಉಪಕರಣಗಳ ಮುಖ್ಯ ಉದ್ದೇಶವೆಂದರೆ ಬೆಕ್ಕಿನ ಸುತ್ತಮುತ್ತ ನಡೆಯುವ ಮಾತುಕತೆಗಳನ್ನು ಸೆರೆಹಿಡಿದು, ದೂರದಲ್ಲಿರುವ CIA ಅಧಿಕಾರಿಗಳಿಗೆ ತಲುಪಿಸುವುದಾಗಿತ್ತು.

ತಾಂತ್ರಿಕವಾಗಿ ಈ ಉಪಕರಣಗಳು ಕೆಲಸ ಮಾಡುತ್ತಿದ್ದವು. ಆದರೆ ನಿಜವಾದ ಸಮಸ್ಯೆ ಎದುರಾಗಿದ್ದು ಬೆಕ್ಕಿನ ನಡವಳಿಕೆಯನ್ನು ನಿಯಂತ್ರಿಸುವ ವಿಚಾರದಲ್ಲಿ. ತಂತ್ರಜ್ಞಾನವನ್ನು ಅಳವಡಿಸುವುದು ಸುಲಭವಾಗಿದ್ದರೂ, ಬೆಕ್ಕನ್ನು ತಮಗೆ ಬೇಕಾದಂತೆ ನಿರ್ದಿಷ್ಟ ಸ್ಥಳಕ್ಕೆ ಕಳುಹಿಸುವುದು ಅಷ್ಟು ಸುಲಭವಾಗಿರಲಿಲ್ಲ.

ಕೊನೆಗೂ CIAಯ ಮಿಷನ್ ವಿಫಲವಾಗಿದ್ದೇಕೆ?

ಈ ಯೋಜನೆಗೆ ಸಂಬಂಧಿಸಿದಂತೆ ಒಂದು ಪ್ರಸಿದ್ಧ ಕಥೆಯಿದೆ. ಫೀಲ್ಡ್ ಟೆಸ್ಟ್ ಸಮಯದಲ್ಲಿ ಬೆಕ್ಕು ರಸ್ತೆಗೆ ಓಡಿಹೋಗಿ ಟ್ಯಾಕ್ಸಿಗೆ ಸಿಲುಕಿಕೊಂಡಿತು ಎನ್ನಲಾಗುತ್ತದೆ. ಆದರೆ ಈ ಕಥೆಯ ಬಗ್ಗೆ CIA ಅನುಮಾನ ವ್ಯಕ್ತಪಡಿಸಿತ್ತು. CIA ಪ್ರಕಾರ, ಬೆಕ್ಕು ಸಾವನ್ನಪ್ಪಿದ ಘಟನೆ ಎಂಬ ಈ ಕಥೆ ಓರ್ವ ಮಾಜಿ ಅಧಿಕಾರಿಯ ತಮಾಷೆಯ ಮಾತಿನಿಂದ ಹುಟ್ಟಿಕೊಂಡಿತ್ತು. ನಂತರ ಅದನ್ನೇ ನಿಜವಾದ ಘಟನೆಯಂತೆ ಪ್ರಚಾರ ಮಾಡಲಾಯಿತು ಎನ್ನಲಾಗಿದೆ. ಆದರೆ ಈ ಯೋಜನೆಯ ನಿಜವಾದ ದೌರ್ಬಲ್ಯ ಬೆಕ್ಕಿನ ಅನಿರೀಕ್ಷಿತ ನಡವಳಿಕೆಯಾಗಿತ್ತು.

ಅಧಿಕಾರಿಗಳು ನೀಡುವ ಸೂಚನೆಯಂತೆ ನಿರ್ದಿಷ್ಟ ಸ್ಥಳದಲ್ಲಿ ನಿಲ್ಲುವುದು ಅಥವಾ ಗುರಿಯ ಸಮೀಪ ಹೋಗುವುದು ಸೇರಿದಂತೆ ಯಾವುದೇ ಕೆಲಸವನ್ನು ಬೆಕ್ಕಿನಿಂದ ವಿಶ್ವಾಸಾರ್ಹವಾಗಿ ಮಾಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಗೂಢಚರ್ಯೆ ಕಾರ್ಯಾಚರಣೆಗೆ ಬೆಕ್ಕನ್ನು ಬಳಸಿಕೊಳ್ಳುವುದು ಕಷ್ಟಕರವಾಯಿತು. ಕೊನೆಗೆ 1967ರಲ್ಲಿ CIA ಈ ಯೋಜನೆಯನ್ನು ಸ್ಥಗಿತಗೊಳಿಸಿತು. ಈ ಬೆಕ್ಕನ್ನು ಯಾವುದೇ ನೈಜ ಗುಪ್ತಚರ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಲಿಲ್ಲ. ಒಟ್ಟಿನಲ್ಲಿ, ಕೋಟ್ಯಂತರ ಡಾಲರ್ ಖರ್ಚು ಮಾಡಿ ಬೆಕ್ಕನ್ನೇ ಗೂಢಚಾರಿಯನ್ನಾಗಿ ಮಾಡಲು ಹೊರಟಿದ್ದ CIAಯ ಪ್ರಯೋಗ ತಂತ್ರಜ್ಞಾನಕ್ಕಿಂತ ಪ್ರಾಣಿಗಳ ಸ್ವಭಾವವನ್ನು ನಿಯಂತ್ರಿಸುವುದು ಎಷ್ಟು ಕಷ್ಟ ಎಂಬುದನ್ನು ತೋರಿಸಿಕೊಟ್ಟಿತು.