Amazing talent : ಎಣ್ಣೆಯಲ್ಲಿ ಟೀ ಮಾಡೋದನ್ನು ನೋಡಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ವ್ಯಾಪಾರಿ ಎಣ್ಣೆಯಲ್ಲಿ ಹೇಗೆ ಟೀ ಮಾಡ್ತಿದ್ದಾನೆ ಗೊತ್ತಾ?
ಸೋಷಿಯಲ್ ಮೀಡಿಯಾ ಜಗತ್ತು ನಿಜಕ್ಕೂ ವಿಚಿತ್ರ. ಇಲ್ಲಿ ಯಾವ ವಿಡಿಯೋ ಯಾವಾಗ ವೈರಲ್ ಆಗುತ್ತದೆ ಎಂದು ಹೇಳುವುದು ಕಷ್ಟ. ಇದೀಗ ರಸ್ತೆ ಬದಿಯ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ಮಾಡಿರುವ ವಿಭಿನ್ನ ಜುಗಾಡ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ.
ಕಾದ ಎಣ್ಣೆಯಲ್ಲಿ ಡಬಲ್ ಕೆಲ್ಸ
ರಸ್ತೆ ಬದಿಯಲ್ಲಿ ಪಕೋಡಾ ಜೊತೆ ಟೀ ಮಾರಾಟ ಮಾಡೋದನ್ನು ನಾವು ನೀವೆಲ್ಲ ನೋಡಿರ್ತೇವೆ. ಒಂದ್ಕಡೆ ಪಕೋಡಾ ಬೇಯ್ತಿದ್ದರೆ ಇನ್ನೊಂದು ಕಡೆ ಟೀ ರೆಡಿಯಾಗ್ತಿರುತ್ತೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಒಂದೇ ಕಡೆ ವ್ಯಾಪಾರಿ ಎರಡೂ ಕೆಲ್ಸ ಮಾಡ್ತಿದ್ದಾನೆ. ಅಂದ್ರೆ ಬೇಯುತ್ತಿರುವ ಪಕೋಡಾ ಮಧ್ಯೆಯೇ ಟೀ ತಯಾರಿಸ್ತಿದ್ದಾನೆ.
ಕುದಿಯುವ ಎಣ್ಣೆಯೇ ಆತನ ಟೀ ಮಾಡುವ ಗ್ಯಾಸ್ ಒಲೆ. ಹೌದು, ಎಣ್ಣೆಯಲ್ಲಿ ಟೀ ಮಾಡುತ್ತಿರುವ ವ್ಯಾಪಾರಿ ನೋಡಿ ಬಳಕೆದಾರರು ದಂಗಾಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆ ಬದಿಯ ವ್ಯಾಪಾರಿಯೊಬ್ಬರು ಕಾದ ಎಣ್ಣೆಯಲ್ಲಿ ಪಕೋಡಾಗಳನ್ನು ಕರಿಯುತ್ತಿರುವುದು ಕಾಣಿಸುತ್ತದೆ. ವಿಶೇಷವೆಂದರೆ, ಅದೇ ಬಾಣಲೆಯ ಮೇಲ್ಭಾಗದಲ್ಲಿ ಮತ್ತೊಂದು ಪಾತ್ರೆಯನ್ನು ಇಟ್ಟು ಚಹಾವನ್ನೂ ಕುದಿಸುತ್ತಿದ್ದಾರೆ. ಒಂದೇ ಸಮಯದಲ್ಲಿ, ಒಂದೇ ಜಾಗದಲ್ಲಿ, ಒಂದೇ ಉರಿಯಲ್ಲಿ ಪಕೋಡಾ ಹಾಗೂ ಚಹಾ ಎರಡೂ ಸಿದ್ಧವಾಗ್ತಿದೆ.
ಈ ವಿಡಿಯೋ ಪಾಕಿಸ್ತಾನದಿಂದ ವೈರಲ್ ಆಗಿದೆ. ವ್ಯಾಪಾರಿ, ಕಾದ ಎಣ್ಣೆಯಲ್ಲಿವ ಟೀ ಪಾತ್ರೆಯನ್ನು ಹಾಗೆ ಬಿಡ್ತಿಲ್ಲ. ಅದನ್ನು ಇಕ್ಕಳದಿಂದ ಹಿಡಿದಿದ್ದಾನೆ. ಹಾಗಾಗಿ ಎಣ್ಣೆಗೆ ಟೀ ಸೇರ್ತಿಲ್ಲ. ಬಿಸಿ ಎಣ್ಣೆಯಲ್ಲಿ ಟೀ ಕುದಿಯುತ್ತಿದೆ.
ಈ ದೃಶ್ಯವನ್ನು ನೋಡಿದ ನೆಟ್ಟಿಗರು ವ್ಯಾಪಾರಿಯ ಸಮಯ ಉಳಿತಾಯದ ತಂತ್ರವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ನಿಜವಾದ ಮಲ್ಟಿಟಾಸ್ಕಿಂಗ್ ಎಂದು ಕರೆದರೆ, ಇನ್ನು ಕೆಲವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಎನ್ನುವ ರೀತಿಯ ಜುಗಾಡ್ ಎಂದು ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿದ ಕೆಲವರು ವ್ಯಾಪಾರಿಯ ಬುದ್ಧಿವಂತಿಕೆ ಮತ್ತು ಕೆಲಸ ಮಾಡುವ ವೇಗವನ್ನು ಮೆಚ್ಚಿಕೊಂಡಿದ್ದಾರೆ. ಮತ್ತೊಂದೆಡೆ, ಕೆಲವರು ಆಹಾರವನ್ನು ಹೀಗೆ ತಯಾರಿಸುವುದು ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದ ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.


