ಶಾಲೆಯ ಹೊರಗೆ ಹಾದುಹೋದ ಭಾರಿ ಶಬ್ದದ ಡಿಜೆ ಮೆರವಣಿಗೆಯಿಂದಾಗಿ 7 ವರ್ಷದ ವಿದ್ಯಾರ್ಥಿನಿ ತರಗತಿಯಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾಳೆ. ಡಿಜೆ ಶಬ್ದವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ಮನಸ್ಸನ್ನು ಹಿಂಡುವಂತಹ ದಾರುಣ ಘಟನೆಯೊಂದು ವರದಿಯಾಗಿದೆ. ಶಾಲೆಯಲ್ಲಿ ತರಗತಿ ನಡೆಯುತ್ತಿದ್ದ ವೇಳೆ ಹೊರಗೆ ಹಾದುಹೋದ ಭಾರಿ ಶಬ್ದದ ಡಿಜೆ ಮೆರವಣಿಗೆಯಿಂದಾಗಿ, ತರಗತಿಯಲ್ಲಿದ್ದ 7 ವರ್ಷದ ಶಾಲಾ ಬಾಲಕಿಯೊಬ್ಬಳು ಹಠಾತ್ತನೆ ಅಸ್ವಸ್ಥಗೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಸೋಮವಾರ ಬೆಳಿಗ್ಗೆ ಸಂಭವಿಸಿದ ಈ ಘಟನೆ ಇಡೀ ಪ್ರದೇಶದಲ್ಲಿ ತೀವ್ರ ಶೋಕ ಹಾಗೂ ಆತಂಕವನ್ನು ಹುಟ್ಟುಹಾಕಿದೆ.

ತರಗತಿಯಲ್ಲಿ ಕುಳಿತಿದ್ದಾಗಲೇ ಎದುರಾಯ್ತು ಘೋರ ದುರಂತ!

ಮೃತ ಬಾಲಕಿಯನ್ನು ವೈಷ್ಣವಿ ತಿವಾರಿ (7) ಎಂದು ಗುರುತಿಸಲಾಗಿದೆ. ಈಕೆ ಬಲರಾಂಪುರದ ಡಿವೈನ್ ಪಬ್ಲಿಕ್ ಶಾಲೆಯಲ್ಲಿ 2 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಬೆಳಿಗ್ಗೆ ವಾಡಿಕೆಯಂತೆ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದವು. ಬಾಲಕಿ ವೈಷ್ಣವಿ ಕೂಡ ಸಹಪಾಠಿಗಳೊಂದಿಗೆ ತರಗತಿ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದಳು. ಅದೇ ಸಮಯದಲ್ಲಿ ಶಾಲೆಯ ಆವರಣದ ಪಕ್ಕದ ರಸ್ತೆಯಲ್ಲಿ ವಿಗ್ರಹ ವಿಸರ್ಜನೆಯ ಮೆರವಣಿಗೆಯೊಂದು ಹಾದುಹೋಯಿತು. ಈ ಮೆರವಣಿಗೆಯಲ್ಲಿ ಅತ್ಯಂತ ಭಾರಿ ಶಬ್ದ ಹೊರಹಾಕುವ ದೊಡ್ಡ ಡಿಜೆ ಸೌಂಡ್ ಸಿಸ್ಟಮ್ ಇಡಲಾಗಿತ್ತು. ಡಿಜೆಯಿಂದ ಬರುತ್ತಿದ್ದ ಶಬ್ದ ಎಷ್ಟು ಭೀಕರವಾಗಿತ್ತೆಂದರೆ, ಇಡೀ ಶಾಲೆಯ ಕಟ್ಟಡವೇ ಕಂಪಿಸುವಂತಾಗಿತ್ತು.

ಸಿಸಿಟಿವಿ ದೃಶ್ಯಾವಳಿ ಮತ್ತು ಕುಟುಂಬಸ್ಥರ ಆರೋಪ!

ಶಾಲೆಯ ತರಗತಿ ಕೊಠಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈ ಆಘಾತಕಾರಿ ಕ್ಷಣಗಳು ಸೆರೆಯಾಗಿವೆ. ಮೆರವಣಿಗೆಯ ಕರ್ಕಶ ಶಬ್ದ ಶಾಲೆಯ ಬಳಿ ತಲುಪುತ್ತಿದ್ದಂತೆ ತರಗತಿಯಲ್ಲಿದ್ದ ಮಕ್ಕಳು ಅಸಮಾಧಾನದಿಂದ ಕಿವಿಯ ಮೇಲೆ ಕೈಗಳನ್ನಿಟ್ಟುಕೊಳ್ಳುವುದು ಹಾಗೂ ಚಡಪಡಿಸುವುದು ಕಂಡುಬಂದಿದೆ. ಭಾರಿ ಧ್ವನಿಯ ಸಂಗೀತ ಪ್ಲೇ ಆಗುತ್ತಿದ್ದಂತೆಯೇ ಬಾಲಕಿ ವೈಷ್ಣವಿ ತಿವಾರಿಯ ಆರೋಗ್ಯ ಹಠಾತ್ತನೆ ಹದಗೆಟ್ಟಿತು. ಆಕೆ ತೀವ್ರ ಅಸ್ವಸ್ಥಗೊಂಡು ಕುಸಿದುಬಿದ್ದಳು. ಇದನ್ನು ಗಮನಿಸಿದ ಶಾಲಾ ಶಿಕ್ಷಕರು ತಕ್ಷಣವೇ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದರು. ಆದರೆ, ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಆಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು. ಡಿಜೆಯ ಅತಿಯಾದ ಶಬ್ದವೇ ಮಗಳ ಪ್ರಾಣವನ್ನು ಕಸಿದುಕೊಂಡಿದೆ ಎಂದು ಬಾಲಕಿಯ ಕುಟುಂಬಸ್ಥರು ಕಣ್ಣೀರಿಡುತ್ತಾ ಆರೋಪಿಸಿದ್ದಾರೆ. ಡಿಜೆ ಶಬ್ದದ ಕಂಪನ ತರಗತಿಯ ಒಳಗೂ ತೀವ್ರವಾಗಿ ಅನುಭವಕ್ಕೆ ಬಂದಿತ್ತು ಎಂದು ಶಾಲಾ ಶಿಕ್ಷಕರೂ ಕೂಡ ಒಪ್ಪಿಕೊಂಡಿದ್ದಾರೆ.

ಪೊಲೀಸ್ ತನಿಖೆ ಆರಂಭ: ಸ್ಪಷ್ಟನೆ ನೀಡಿದ ಅಧಿಕಾರಿಗಳು!

ಘಟನೆ ವರದಿಯಾಗುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆದಾಗ್ಯೂ, ಬಾಲಕಿಯ ಸಾವು ನೇರವಾಗಿ ಡಿಜೆ ಶಬ್ದದಿಂದಲೇ ಸಂಭವಿಸಿದೆಯೇ ಎಂಬುದನ್ನು ತಕ್ಷಣವೇ ತೀರ್ಮಾನಿಸಲು ಸಾಧ್ಯವಿಲ್ಲ ಮತ್ತು ಅದು ಅಕಾಲಿಕವಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಿಸಿಟಿವಿ ಪರಿಶೀಲನೆ; ಶಾಲೆಯ ತರಗತಿ ಹಾಗೂ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ.

ಮಾರ್ಗ ಮತ್ತು ಸೌಂಡ್ ಪರಿಶೀಲನೆ; ಮೆರವಣಿಗೆ ಸಾಗಿದ ಮಾರ್ಗ, ಬಳಸಲಾದ ಡಿಜೆ ಸೌಂಡ್ ಮಟ್ಟ ಮತ್ತು ಶಾಲೆಯ ವಾತಾವರಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ದೂರು ಮತ್ತು ಮುಂದಿನ ಕ್ರಮ; ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಇನ್ನೂ ಯಾವುದೇ ಲಿಖಿತ ದೂರು ದಾಖಲಿಸಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಮತ್ತು ತನಿಖೆಯಿಂದ ಹೊರಬರುವ ಸತ್ಯಾಸತ್ಯತೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.