2027ರ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶವನ್ನು ನಾಲ್ಕು ಪ್ರತ್ಯೇಕ ರಾಜ್ಯಗಳಾಗಿ ವಿಭಜಿಸುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಓಂ ಪ್ರಕಾಶ್ ರಾಜಭರ್ ಈ ಬಗ್ಗೆ ಪ್ರಸ್ತಾಪಿಸಿದ್ದು, ಆಡಳಿತದ ಹಿತದೃಷ್ಟಿಯಿಂದ ಇದು ಅಗತ್ಯ ಎಂದಿದ್ದಾರೆ. ಈ ಹಿಂದೆ ಅಂಬೇಡ್ಕರ್ ಹಾಗೂ ಮಾಯಾವತಿ ಕೂಡ ಇಂತಹದ್ದೇ ಚಿಂತನೆ ನಡೆಸಿದ್ದರು ಎಂಬುದು ಗಮನಾರ್ಹ.
ಲಕ್ನೋ: ದೇಶದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ದೇಶ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈಗ ಈ ರಾಜ್ಯವನ್ನು ನಾಲ್ಕು ರಾಜ್ಯಗಳಾಗಿ ಮಾಡಲು ಒತ್ತಾಯ ಕೇಳಿ ಬಂದಿದೆ. 2027ರ ವಿಧಾನಸಭಾ ಚುನಾವಣೆಗೂ ಮುನ್ನ ಸಿಎಂ ಯೋಗಿ ಆದತ್ಯನಾಥ್ ಸರ್ಕಾರದ ಸಚಿವರಾಗಿದ್ದ ಸುಭಾಸ್ಪ ಪಕ್ಷದ ನಾಯಕ ಓಂ ಪ್ರಕಾಶ್ ರಾಜ್‌ಭರ್ ಉತ್ತರ ಪ್ರದೇಶ ವಿಭಜನೆಯ ಬಗ್ಗೆ ಮಾತನಾಡಿದ್ದಾರೆ. ಮುಂಬರುವ ದಿನಗಳಲ್ಲಿ ಉತ್ತರ ಪ್ರದೇಶ ನಾಲ್ಕು ಭಾಗಗಳು ಆಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶ ಭಾರೀ ದೊಡ್ಡ ರಾಜ್ಯ, ಆದ್ದರಿಂದ ಅದು ವಿಭಜನೆ ಆಗುತ್ತದೆ ಎಂದು ಹೇಳಿದ್ದಾರೆ. ಒಂದೊಮ್ಮೆ ರಾಜ್‌ಭರ್ ಸಮುದಾಯದ ಆಧಾರದ ಮೇರೆಗೆ ಪೂರ್ವಂಚಲ್ ಪ್ರತ್ಯೇಕ ರಾಜ್ಯವಾದರೆ, ಈ ಸಮುದಾಯಕ್ಕೆ ಸೇರಿದ ವ್ಯಕ್ತಿಯೇ ಮುಖ್ಯಮಂತ್ರಿಯಾಗಬೇಕ ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ವಿಭಜನೆ ಚಿಂತನೆ ಮುನ್ನೆಲೆಗೆ ಬರುತ್ತರುವುದು ಇದೇ ಮೊದಲೇನು ಅಲ್ಲ. ಅವಿಭಕ್ತ ಉತ್ತರ ಪ್ರದೇಶವನ್ನು ನಾಲ್ಕು ಬೇರೆ ರಾಜ್ಯಗಳಾಗಿ ಮಾಡಬೇಕು ಎಂಬ ಡಿಮ್ಯಾಂಡ್ ಹಲವು ದಶಕಗಳ ಹಿಂದಿದೆ. ಆಡಳಿತ, ಅಭಿವೃದ್ಧಿ, ಚಿಕ್ಕ ರಾಜ್ಯಗಳ ಭಾವನೆ ಕಾರಣಗಳಿಂದ ಉತ್ತರ ಪ್ರದೇಶ ವಿಭಜನೆ ಮಾಡಬೇಕು ಎಂಬ ಮಾತು ಕೇಳಿ ಬರುತ್ತಲೇ ಇದೆ. ಈ ಯೋಚನೆಯನ್ನು ಮೊದಲು ನಮ್ಮ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಬಿಆರ್ ಅಂಬೇಡ್ಕರ್ ಅವರು ಮುಂದಿಟ್ಟಿದ್ದರು. ಬಿಎಸ್ಪಿ ನಾಯಕಿ ಮಾಯಾವತಿ ಕೂಡ ಬಗ್ಗೆ ಕೆಲ ನಿರ್ಧಾರಗಳನ್ನು ಮಾಡಿದ್ದರು. ಆದರೆ ಆಗ ಅದು ಸಾಧ್ಯವಾಗಿರಲಿಲ್ಲ.

ಉತ್ತರ ಪ್ರದೇಶ ವಿಭಜನೆಗೆ ಅಂಭೇಡ್ಕರ್ ಅವರು ರೂಪಿಸಿದ್ದ ಪ್ರಣಾಳಿಕೆ ಹೇಗಿತ್ತು?
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಕೆಲವೇ ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ವಿಭಜನೆ ಮಾಡಬೇಕು ಎಂಬ ಸೈದ್ಧಾಂತಿಕ ಚಿಂತನೆ ಉದ್ಭವ ಆಗಿತ್ತು. 1955ರಲ್ಲಿಯೇ ಮುನ್ನೆಲೆಗೆ ಬಂದಿದ್ದ ಭಾಷಾವಾರು ರಾಜ್ಯಗಳ ಮೇಲೆ ಚಿಂತನೆಗಳು ಎಂಬ ಪುಸ್ತಕದಲ್ಲಿ ದೊಡ್ಡ ರಾಜ್ಯವನ್ನು ಒಂದೇ ಪ್ರದೇಶದಿಂದ ಆಡಳಿತ ನಡೆಸುವುದು ಕಷ್ಟಸಾಧ್ಯ ಎಂದು ಹೇಳಿದ್ದರು. ಅಭಿವೃದ್ಧಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಉತ್ತರ ಪ್ರದೇಶವನ್ನು ಮೂರು ಚಿಕ್ಕ ರಾಜ್ಯಗಳಾಗಿ ವಿಭಜನೆ ಮಾಡಬೇಕು ಎಂದು ಸೂಚನೆ ನೀಡಿದ್ದರು. ಈ ಮೂರು ರಾಜ್ಯಗಳಲ್ಲಿ ಸುಮಾರು ಎರಡು ಕೋಟಿ ಜನಸಂಖ್ಯೆ ಇರ್ಬೇಕು. ಸಮರ್ಥ ಆಡಳಿತ ನೀಡಲು ಈ ಪರಿಣಾಮಕಾರಿಯಾಗಲಿದೆ. ಉತ್ತರ ಪ್ರದೇಶವನ್ನು ಪೂರ್ವ, ಪಶ್ಚಿಮ ಮತ್ತು ಮಧ್ಯ ಭಾಗವಾಗಿ ಮೂರು ರಾಜ್ಯಗಳಾಗಿ ವಿಭಜನೆ ಮಾಡಬೇಕು ಎಂದು ಸೂಚನೆ ನೀಡಿದ್ದರು. ಪಶ್ಚಿಮ ಭಾಗಕ್ಕೆ ಮೀರತ್, ಮಧ್ಯ ಪ್ರದೇಶಕ್ಕೆ ಕಾನ್ಪೂರ್, ಪೂರ್ವ ಪ್ರದೇಶದಕ್ಕೆ ಅಲಹಾಬಾದ್ ರಾಜಧಾನಿಯನ್ನಾಗಿ ಮಾಡಬೇಕು ಎಂದು ತಮ್ಮ ಪುಸ್ತಕದಲ್ಲಿ ತಿಳಿಸಿದ್ದರು.
ಇನ್ನು, 2000 ದಶಕದಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ, ಉತ್ತರಾಖಂಡ, ಜಾರ್ಖಂಡ್, ಛತ್ತೀಸ್‌ಗಢ ಹೊಸ ರಾಜ್ಯಗಳನ್ನು ರಚನೆ ಮಾಡಿದ ಸಂದರ್ಭದಲ್ಲಿ, ಉತ್ತರ ಪ್ರದೇಶದಲ್ಲೂ ರಾಜ್ಯ ವಿಭನೆಯ ಬೇಡಿಕೆ ಹೇಳಿ ಬಂದಿತ್ತು. ರಾಷ್ಟ್ರೀಯ ಲೋಕದಳ ಪಕ್ಷದ ನಾಯಕ, ಮಾಜಿ ಕೇಂದ್ರ ಸಚಿವ ಚೌದರಿ ಅಜಿತ್ ಸಿಂಗ್ ಪಶ್ಚಿಮ ಉತ್ತರ ಪ್ರದೇಶದ ಜಿಲ್ಲೆಗಳನ್ನು ವಿಲೀನ್ ಮಾಡಿ 'ಹರಿತ' ರಾಜ್ಯವನ್ನು ರಚನೆ ಮಾಡಲು ಬೇಡಿಕೆ ಇಟ್ಟಿದ್ದರು. ಆದರೆ ಅವರ ಪ್ರಯತ್ನ ಸಫಲ ಆಗಿರಲಿಲ್ಲ.
ಆ ಬಳಿಕ ಮಾಯಾವತಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರ ಪ್ರದೇಶವನ್ನು ನಾಲ್ಕು ರಾಜ್ಯಗಳಾಗಿ ವಿಭಜನೆ ಮಾಡುವ ಕಡೆ ಹೆಜ್ಜೆ ಹಾಕಿದ್ದರು. 2008ರಲ್ಲಿ ಈ ಸಂಬಂಧ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರಿಗೆ ಪತ್ರ ಕೂಡ ಬರೆದಿದ್ದರು. 2011ರ ನವೆಂಬರ್ 15ರಂದು ಉತ್ತರ ಪ್ರದೇಶ ವಿಭಜನೆ ಮಾಡುವ ಪ್ರತಿಪಾದನೆಗೆ ಮಾಯಾವತಿ ಕ್ಯಾಬಿನೇಟ್ ಒಪ್ಪಿಗೆಯನ್ನು ನೀಡಿತ್ತು. ಆದರೆ ಇದು ಕಾರ್ಯರೂಪಕ್ಕೆ ಬರಲಿಲ್ಲ.
ಮಾಯಾವತಿ ಪ್ರಣಾಳಿಕೆ ಏಕೆ ಕಾರ್ಯರೂಪಕ್ಕೆ ಬರಲಿಲ್ಲ!
ಭಾರತ ಸಂವಿಧಾನದ ಆರ್ಟಿಕಲ್ 03ರ ಅನ್ವಯ, ಯಾವುದೇ ರಾಜ್ಯದ ಗಡಿಗಳನ್ನು ಬದಲಾವಣೆ ಮಾಡಬೇಕು ಎಂದರೆ ಅಥವಾ ಹೊಸ ರಾಜ್ಯ ರಚನೆ ಮಾಡಬೇಕು ಎಂದರೆ ಅಂತಿಮ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುತ್ತದೆ. ರಾಜ್ಯ ವಿಧಾನಸಭೆ ಕೇವಲ ಪ್ರತಿಪಾದನೆಯನ್ನು ಮಾತ್ರವೇ ಮಾಡಲು ಸಾಧ್ಯ. 2011ರಲ್ಲೂ ಉತ್ತರ ಪ್ರದೇಶ ವಿಭಜನೆಗೆ ಪ್ರತಿಪಾದನೆ ಕಳುಹಿಸಿದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಈ ಪ್ರತಿಪಾದನೆಗೆ ಅನುಮೋದನೆ ನೀಡದೆ ಹಲವು ತಾಂತ್ರೀಕ, ಆರ್ಥಿಕ ಪ್ರಶ್ನೆಗಳನ್ನು ರಾಜ್ಯದ ಮುಂದಿಟ್ಟಿತ್ತು.
2012ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಧಿಕಾರ ಕಳೆದುಕೊಂಡು ಎಸ್‌ಪಿ ಸರ್ಕಾರ ರಚನೆ ಮಾಡಿತ್ತು. ಅಖಿಲೇಶ್ ಯಾದವ್ ಆರಂಭದಿಂದಲೂ ರಾಜ್ಯ ವಿಭಜನೆಯ ವಿರುದ್ಧ ನಿಂತಿದ್ದಾರೆ. ಇನ್ನು ಪಶ್ಚಿಮ ಉತ್ತರ ಪ್ರದೇಶದಲ್ಲಿರುವ ರಾಜಕೀಯ ಪರಿಸ್ಥಿತಿಗಳು ಉತ್ತರ ಪ್ರದೇಶ ವಿಭಜನೆಯಲ್ಲಿ ಪ್ರಮುಖ ಪಾತ್ರವಹಿಸಿದೆ.
2027ರ ಚುನಾವಣೆಗೂ ಮುನ್ನವೇ ಉತ್ತರ ಪ್ರದೇಶ ವಿಭಜನೆಗೆ ಹೆಚ್ಚಾಯ್ತು ಡಿಮ್ಯಾಂಡ್
ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿದೆ. ಇದೇ ಸಂದರ್ಭದಲ್ಲಿ ನಾಲ್ಕು ರಾಜ್ಯಗಳ ರಚನೆ ಚರ್ಚೆ ಮುನ್ನೆಲೆಗೆ ಬಂದಿದೆ. ಉತ್ತರ ಪ್ರದೇಶ ಮತದಾರರು ಅಥವಾ ರಾಜಕೀಯ ನಾಯಕರು ಇದನ್ನು ಪ್ರಸ್ತಾಪಿಸಲಿಲ್ಲ. ಆದರೆ ಓಂ ಪ್ರಕಾಶ್ ರಾಜ್‌ಭರ್ ಮಾಡಿದ ಭಾಷಣ ಮತ್ತೆ ರಾಜ್ಯ ವಿಭಜನೆಯ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಆಡಳಿತ ಸುಧಾರಣೆಯಾಗಲು ಈ ರಾಜ್ಯವನ್ನು ಪೂರ್ವಾಂಚಲ, ಹರಿತ್ ಪ್ರದೇಶ (ಪಶ್ಚಿಮ ಯುಪಿ), ಮಧ್ಯಾಂಚಲ್ (ಅವಧ್) ಬುಂದೆಲ್‌ಖಂಡ್ ಎಂಬ ನಾಲ್ಕು ರಾಜ್ಯಗಳಾಗಿ ವಿಭಜನೆ ಮಾಡಲು ರಾಜ್‌ಭರ್ ಹೇಳಿದ್ದಾರೆ.
ಐತಿಹಾಸಿಕವಾಗಿ ನೋಡುವುದಾದರೆ, ಈ ರಾಜ್ಯ ಹಲವು ರಾಜಪ್ರಭುತ್ವಗಳನ್ನು ಒಳಗೊಂಡಿತ್ತು. ಇವುಗಳನ್ನು ಒಟ್ಟಾಗಿ ಆಗ್ರಾ, ಅವಧ್ ಯುನೈಟೆಡ್ ಪ್ರಾವಿನ್ಸ್ ಎಂದು ಕರೆಯುತ್ತಿದ್ದರು. 1935ರ ಭಾರತ ಸರ್ಕಾರ ಕಾಯ್ದೆಯ ಅನ್ವಯ ಇದನ್ನು ಯುನೈಟೆಡ್ ಪ್ರಾವಿನ್ಸ್ ಎಂದು ನಿಗದಿಪಡಿಸಿದ್ದರು. ಆ ಬಳಿಕ ಉತ್ತರ ಪ್ರದೇಶ ಎಂದು ಹೆಸರನ್ನು ಬದಲಾವಣೆ ಮಾಡಿದ್ದರು. 2000ರಲ್ಲಿ ಮೊದಲ ವಿಭಜನೆ ಮಾಡಿದ್ದ ಕೇಂದ್ರ ಸರ್ಕಾರ, ಉತ್ತಾರಂಚಲ್ ಆ ಬಳಿಕ ಜಾರ್ಖಂಡ್ ಎಂಬ ಹೊಸ ರಾಜ್ಯವನ್ನು ಮಾಡಿತ್ತು. ಉತ್ತರ ಪ್ರದೇಶದಂತಹ ವಿಶಾಲ ರಾಜ್ಯದಲ್ಲಿ ಆಡಳಿತ ನಡೆಸುವುದು ಎಂದರೆ, ಮಾತುಗಳಲ್ಲಿ ಹೇಳಲು ಅಸಾಧ್ಯ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಐ ವ್ಯಕ್ತಪಡಿಸುತ್ತಾರೆ. 18 ಆಡಳಿತಾತ್ಮಕ ವಿಭಾಗಗಳು, 75 ಜಿಲ್ಲೆಗಳು, ಲಕ್ಷಕ್ಕೂ ಹೆಚ್ಚು ಗ್ರಾಮಗಳೊಂದಿಗೆ ಭಾರತದಲ್ಲಿಯೇ ಅತೋ ದೊಡ್ಡ ವಿಸ್ತೀರ್ಣ ಹೊಂದಿರುವ ನಾಲ್ಕನೇ ಅತೀ ದೊಡ್ಡ ರಾಜ್ಯವಾಗಿದೆ. ಜನಸಂಖ್ಯೆ ಆಧಾರದ ಮೇಲೆ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.


