Bigg Boss Kiccha Sudeep News: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಸ್ಪರ್ಧಿ ಕಿಚ್ಚ ಸುದೀಪ್‌ ವಿರುದ್ಧ ರಣಹದ್ದು ಸಂರಕ್ಷಣಾ ಟ್ರಸ್ಟ್‌ ದೂರು ದಾಖಲು ಮಾಡಿದೆ. ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ರಣಹದ್ದು ಪದಬಳಕೆ ಮಾಡಿದ್ದು, ಆ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಇದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ನಿರೂಪಕ ಕಿಚ್ಚ ಸುದೀಪ್‌ ಅವರು ( Kiccha Sudeep ) ವೀಕೆಂಡ್‌ ಎಪಿಸೋಡ್‌ನಲ್ಲಿ ರಣಹದ್ದುಗಳ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಸುದೀಪ್‌ ಅವರು ಜ್ಞಾನ ಇಲ್ಲದೆ ಮಾತನಾಡಿದ್ದಾರೆ ಎಂದು ಡಿಎಫ್‌ಒ ರಾಮಕೃಷ್ಣ ಎನ್ನುವವರಿಗೆ ರಣಹದ್ದು ಸಂರಕ್ಷಣಾ ಟ್ರಸ್ಟ್‌ ದೂರು ನೀಡಿದೆ.

ಡಿಎಫ್‌ಒ ರಾಮಕೃಷ್ಣ ಏನಂದ್ರು?

“ಜೀವ ಇರುವ ಜೀವಿಗಳ ಮೇಲೆ ರಣಹದ್ದು ಬೇಟೆ ಆಡುವುದಿಲ್ಲ, ಸತ್ತ ಪ್ರಾಣಿಗಳನ್ನು ಹದ್ದು ತಿಂದು, ಪರಿಸರವನ್ನು ಕ್ಲೀನ್‌ ಮಾಡುತ್ತದೆ. ಉತ್ತಮ ಪರಿಸರ ಸ್ನೇಹಿಯಾಗಿರುವ ಪಕ್ಷಿ ಅದು. ದೊಡ್ಡ ವಾಹಿನಿ ಮೂಲಕ ಈ ವಿಷಯ ಬಿತ್ತರವಾಗಿದೆ. ಹೀಗಾಗಿ ಕಿಚ್ಚ ಸುದೀಪ್‌ ಅವರು ಈ ಬಗ್ಗೆ ಸ್ಪಷ್ಟನೆ ಕೊಡಬೇಕು, ಮುಂದಿನ ದಿನಗಳಲ್ಲಿ ಹೀಗೆ ಆಗದಂತೆ ನೋಡಿಕೊಳ್ಳಬೇಕು” ಎಂದು ಡಿಎಫ್‌ಒ ರಾಮಕೃಷ್ಣ ಅವರು ಮಾಧ್ಯಮದ ಜೊತೆ ಹೇಳಿದ್ದಾರೆ.

ದೂರುದಾರರು ಏನು ಹೇಳಿದ್ರು?

ವೀಕೆಂಡ್‌ ಎಪಿಸೋಡ್‌ನಲ್ಲಿ ಹೊಂಚು ಹಾಕಿ, ಸಂಚು ಹೂಡಿ ಲಬಕ್‌ ಅಂತ ಅಂತ ರಣಹದ್ದುಗಳು ಬೇಟೆ ಆಡುತ್ತವೆ ಎಂದು ಕಿಚ್ಚ ಸುದೀಪ್‌ ಅವರು ಹೇಳಿದ್ದರು. ರಣಹದ್ದುಗಳು ಜೀವ ಇರುವೆಯನ್ನು ಕೂಡ ಮುಟ್ಟೋದಿಲ್ಲ, ಸತ್ತು ಹೋಗಿರುವ ಪ್ರಾಣಿಗಳ ಶವ ತಿನ್ನುತ್ತೇವೆ. ರಣಹದ್ದುಗಳ ಸಂತತಿಯ ಉಳಿವಿಗೋಸ್ಕರ ಹತ್ತು ವರ್ಷಗಳಿಂದ ನಾವು ಹೋರಾಟ ಮಾಡಿದ್ದೇವೆ. ಆದರೆ ಜ್ಞಾನದ ಕೊರತೆಯಿಂದ ಸುದೀಪ್‌ ಈ ರೀತಿ ಮಾತನಾಡಬಾರದು ಎಂದು ರಣಹದ್ದು ಸಂರಕ್ಷಣಾ ಟ್ರಸ್ಟ್‌ ವತಿಯಿಂದ ದೂರು ನೀಡಲಾಗಿದೆ.

ಈ ಹಿಂದೆಯೂ ದೂರು ದಾಖಲಾಗಿತ್ತು

ರಕ್ಷಿತಾ ಶೆಟ್ಟಿ ಅವರನ್ನು ನೋಡಿ ಪಿತ್ತ ನೆತ್ತಿಗೇರಿತು ಎಂದು ಹೇಳಿದ್ದಕ್ಕೆ ಕಿಚ್ಚ ಸುದೀಪ್‌ ವಿರುದ್ಧ ಈ ಹಿಂದೆ ದೂರು ಕೊಡಲಾಗಿತ್ತು. ಅಷ್ಟೇ ಅಲ್ಲದೆ ರಿಷಾ ಗೌಡ ಅವರ ಬಟ್ಟೆ ಮುಟ್ಟಿದರು ಎಂದು ಗಿಲ್ಲಿ ನಟನ ವಿರುದ್ಧ ಕೂಡ ದೂರು ದಾಖಲಾಗಿದೆ. ಒಟ್ಟಿನಲ್ಲಿ ಒಂದಾದ ಮೇಲೆ ಒಂದರಂತೆ ದೂರು ದಾಖಲಾಗುತ್ತಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗ್ರ್ಯಾಂಡ್‌ ಫಿನಾಲೆಗೆ ಇನ್ನು ಒಂದು ವಾರ ಇದೆ. ಕಾವ್ಯ ಶೈವ, ಗಿಲ್ಲಿ ನಟ, ಧನುಷ್‌ ಗೌಡ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ರಘು, ಧ್ರುವಂತ್‌ ಅವರು ಬಿಗ್‌ ಬಾಸ್‌ ಮನೆಯಲ್ಲಿದ್ದಾರೆ. ಇವರಲ್ಲಿ ಯಾರು ಟಾಪ್‌ ಫೈವ್‌ ಆಗ್ತಾರೆ, ವಿನ್‌ ಆಗ್ತಾರೆ ಎಂದು ಕಾದು ನೋಡಬೇಕಿದೆ.