ನಟಿ ಹಾಗೂ ನಿರ್ಮಾಪಕಿ ಶ್ರುತಿ ನಾಯ್ಡು, 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ದಿನಗಳಲ್ಲಿ ಯಶ್ ಮತ್ತು ಅಚ್ಯುತ್ ಕುಮಾರ್ ಜೊತೆ ಕಂಡ ಕನಸುಗಳ ಬಗ್ಗೆ ಮಾತನಾಡಿದ್ದಾರೆ. ತಾವು ಐಷಾರಾಮಿ ಕಾರು, ಅಚ್ಯುತ್ ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಯಶ್ ಪ್ಯಾನ್-ಇಂಡಿಯಾ ಸ್ಟಾರ್ ಆಗುವ ಕನಸು ಕಂಡಿದ್ದು ನನಸಾಗಿವೆ.
Manifestation ಅನ್ನುತ್ತೀರೋ, ಅಥವಾ ಹಗಲು ಗನಸು ಅನ್ನುತ್ತೀರೋ ಗೊತ್ತಿಲ್ಲ. ಒಟ್ಟಿನಲ್ಲಿ ದೊಡ್ಡ ದೊಡ್ಡ ಕನಸು ಕಂಡು, ಅದನ್ನು ಈಡೇರಿಸಿಕೊಳ್ಳಲು ಒಂದಷ್ಟು ಶ್ರಮ ಹಾಕಿದರೆ ಅಂದು ಕೊಂಡಿದ್ದು ಸಾಧಿಸಬಹುದು ಅನ್ನುತ್ತಾರೆ ನಟಿ ಶ್ರುತಿ ನಾಯ್ಡು.
ಪ್ರೀತಿ ಇಲ್ಲದ ಮೇಲೆ. ಕನ್ನಡ ಸೀರಿಯಲ್ ಜಗತ್ತಿನ ಅಚ್ಚು ಮೆಚ್ಚಿನ ಸೀರಿಯಲ್. ಸ್ಯಾಂಡಲ್‌ವುಡ್ ಹಿರಿಯ ನಟ ಅನಂತ್ ನಾಗ್, ಪ್ಯಾನ್ ಇಂಡಿಯಾ ಸ್ಟಾರ್ ಯಶ್, ಕನ್ನಡ ಸೀರಿಯಲ್ ಜಗತ್ತಿನ ಏಕ್ತಾ ಕಪೂರ್ ಶ್ರುತಿ ನಾಯ್ಡು, ನಟ ಅಚ್ಯುತ್ ಸೇರಿ ಹಲವು ಮಹಾನ್ ಕಲಾವಿದರು ನಟಿಸಿದ ಸೀರಿಯಲ್ ಪ್ರೀತಿ ಇಲ್ಲದ ಮೇಲೆ. ಕನ್ನಡ ಧಾರಾವಾಹಿಗಳ ಇತಿಹಾಸದಲ್ಲಿಯೇ ಮೈಲುಗಲ್ಲು ಸೃಷ್ಟಿಸಿದ ಕಥೆ. ಇವತ್ತಿಗೂ ಆ ಸೀರಿಯಲ್ ನೋಡಿದವರು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಆಗಿನ್ನೂ ಕನ್ನಡ ಕಿರುತೆರೆಗೆ ಜಗತ್ತಿಗೆ ಕಾಲಿಟ್ಟಿದ್ದರು. ಆದರೆ, ಸ್ಯಾಂಡಲ್‌ವುಡ್ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿಯೇ ಒಂದು ಹೊಸ ಮೈಲ್‌ಸ್ಟೋನ್ ಸೃಷ್ಟಿಸಬೇಕೆಂದು ಕನಸು ಕಂಡಿದ್ದ ಕುಡಿ ಮೇಸೆಯ ಯುವಕ. ಜೀ ಕನ್ನಡದಲ್ಲಿ ಈಗ ಪ್ರಸಾರವಾಗುತ್ತಿದ್ದು, ಸಾಮಾನ್ಯವಾಗಿ ಟಿಆರ್‌ಪಿಯಲ್ಲಿ ನಂಬರ್ 1 ಸ್ಥಾನದಲ್ಲಿಯೇ ಇರುವ ಕರ್ಣ ಸೇರಿ ಕನ್ನಡದ ಹಲವು ಮನೆ ಮಾತಾಗಿರುವ ಸೀರಿಯಲ್ಸ್ ನಿರ್ದೇಶಿಸಿ, ನಿರ್ಮಿಸಿರುವ ಶ್ರುತಿ ನಾಯ್ಡು, ಹಾಗೂ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ನಟಿಸಿರುವ, ಕನ್ನಡದ ಅತ್ಯುತ್ತಮ ನಟ ಅಚ್ಯುತ್ ಸೇರಿ ಹಲವು ನಟ ದಿಗ್ಗಜರು ಈ ಪ್ರೊಜೆಕ್ಟ್‌ನಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.
ಕಂಡ ಕನಸಿನ ಬಗ್ಗೆ ಹೇಳಿದ ಶ್ರುತಿ ನಾಯ್ಡು:
ಇತ್ತೀಚೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಶ್ರುತಿ ನಾಯ್ಡು ಜೊತೆ ಬೆಂಗಳೂರು ಪಾಡ್‌ಕಾಸ್ಟ್ ರೆಕಾರ್ಡ್ ಮಾಡಿದ್ದು, ಈ ಸೀರಿಯಲ್ ಬಗ್ಗೆ ಹಲವು ವಿಷಯಗಳನ್ನು ಶೇರ್ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಯಶ್ ಹಾಗೂ ಅಚ್ಯುತ ಹಾಗೂ ಶ್ರುತಿ ಶೂಟಿಂಗ್ ಸೆಟ್ ಸಮೀಪ ಇದ್ದ ಕಟ್ಟೆ ಮೇಲೆ ಕೂತು ಕಾಣುತ್ತಿದ್ದ ಕನಸಿನ ಬಗ್ಗೆಯೂ ವಾಹಿನಿಯೊಂದಿಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಶ್ರುತಿ ಐಷಾರಾಮಿ ಕಾರು ಕೊಳ್ಳುವ ಕನಸು ಕಂಡರೆ, ಅಚ್ಯುತ ಅವರು ಮನೆಯ ಅಟ್ಟದ ಮೇಲೆ ಮೂಟೆ ಕಟ್ಟಿ ಇಡುವಷ್ಟು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆಲ್ಲಬೇಕು ಅನ್ನುತ್ತಿದ್ದರಂತೆ. ಯಶ್ ಸಹ ನನ್ನ ಕಟೌಟ್ ಭಾರತದಲ್ಲಿ ಎಲ್ಲೆಡೆ ನಿಲ್ಲಿಸುವಂತೆ ದೊಡ್ಡ ನಟನಾಗಬೇಕು ಅಂತ ಹೇಳುತ್ತಿದ್ದರಂತೆ. ಅಷ್ಟೇ ಅಲ್ಲ ಆ ಮಟ್ಟಿಗೆ ಬೆಳೆಯಲು ಬೇಕಾಗುವ ಎಲ್ಲ ಕೌಶಲ್ಯವನ್ನೂ ಯಶ್ ಟೈಮ್ ಇದ್ದಾಗಲೆಲ್ಲ ರೂಢಿಸಿಕೊಳ್ಳುತ್ತಿದ್ದರಂತೆ. ಡ್ಯಾನ್ಸ್, ಹಾರ್ಸ್ ರೈಡಿಂಗ್ ಸೇರಿ ಅಷ್ಟು ದೊಡ್ಡ ನಟನಾಗಲು ಏನೇನು ಬೇಕೋ ಅವೆಲ್ಲ ಸ್ಕಿಲ್ಸ್ ಅನ್ನು ಸ್ವಲ್ಪವೂ ಟೈಮ್ ವೇಸ್ಟ್ ಮಾಡಿದೇ ಕಲಿಯುತ್ತಿದ್ದರಂತೆ.
ಈಗ ಮೂವರೂ ತಾವು ಕಂಡ ಕನಸನ್ನು ಈಡೇರಿಸಿಕೊಂಡಿದ್ದಾರಾ ಎಂಬ ಪ್ರಶ್ನೆಗೆ ಉತ್ತಿರಿಸಿದ ಶ್ರುತಿ, ಯಶ್ ಬಗ್ಗೆ ಹೇಳುವುದೇ ಬೇಡ. ನಟ ಏರಿದ ಮೆಟ್ಟಿಲಿನ ಬಗ್ಗೆ ಹೆಮ್ಮೆ ಅನ್ಸುತ್ತೆ. ಅಷ್ಟೇ ಅಲ್ಲ ಅಚ್ಯುತ್ ಮನೆಯಲ್ಲಿ ಅಟ್ಟದ ಮೇಲೆ ಮೂಟೆ ಕಟ್ಟಿಡುವಷ್ಟು ಫಿಲ್ಮ್‌ಫೇರ್ ಪ್ರಶಸ್ತಿಗಳಿವೆ, ಜೊತೆಗೆ ನನ್ನಿಷ್ಟದ ಐಷಾರಾಮಿ ಕಾರುಗಳನ್ನು ಕೊಂಡಿದ್ದೇನೆ ಅಂತಾನೂ ಹೇಳಿದ್ದಾರೆ.
ಮೊದ ಮೊದಲು ಯಶ್ ರೊಮ್ಯಾನ್ಸ್ ಸೀನ್ಸ್ ಮಾಡಲು ಸಿಕ್ಕಾಪಟ್ಟೆ ಹೆದರುತ್ತಿದ್ದರು ಎಂಬ ಗುಟ್ಟನ್ನೂ ಶ್ರುತಿ ಈ ಪಾಡ್‌ಕಾಸ್ಟ್‌ಲ್ಲಿ ರಟ್ಟು ಮಾಡಿದ್ದು, ಕನ್ನಡ ಸೀರಿಯಲ್ ಜಗತ್ತಿನ ಅನೇಕ ಸತ್ಯಗಳನ್ನು ರಿವೀಲ್ ಮಾಡಿದ್ದಾರೆ. ಸೀರಿಯಲ್ಸ್‌ನಿಂದ ಸಮಾಜ ಹಾಳಾಗುತ್ತಿದೆಯೋ, ಸಮಾಜದಿಂದ ಸೀರಿಯಲ್ಸ್‌ನಲ್ಲಿ ಕೆಟ್ಟ ಕೆಟ್ಟ ಪಾತ್ರಗಳನ್ನು ತೋರಿಸುತ್ತಾರೋ ಎಂಬ ಬಗ್ಗೆಯೂ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಕನ್ನಡ ಸೀರಿಯಲ್‌ನಲ್ಲಿ ಪೇಮೆಂಟ್ ಸಮಸ್ಯೆ ಇರೋದು ಹೌದಾ? ಏನಿವೆ ಚಾಲೆಂಜಸ್, ಉತ್ತರ ಭಾರತೀಯ ಅಧಿಕಾರಿಗಳು ನಮ್ಮ ಸೀರಿಯಲ್ಸ್ ಕಥೆ ಬದಲಾಯಿಸಲು ಒತ್ತಡ ಹೇರುತ್ತಾರಾ, ಯಾಕೆ ಉತ್ತರ ಭಾರತೀಯ ಸಂಸ್ಕೃತಿಯನ್ನು ಕನ್ನಡ ಸೀರಿಯಲ್ಸ್‌ನಲ್ಲಿ ಹೇರಲಾಗುತ್ತದೆ ಎಂಬ ಪ್ರಶ್ನೆಗೂ ಶ್ರುತಿ ಉತ್ತರಿಸಿದ್ದು, ಬೆಂಗಳೂರು ಬಜ್ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಯೂ ಟ್ಯೂಬ್ ಪೇಜಿನಲ್ಲಿ ಒಟ್ಟಿಗೆ ಸಂಜೆ 7.30ಕ್ಕೆ ಈ ಜನವರಿ 23, 2026ರಂದು ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ.


