'ಟಾಕ್ಸಿಕ್' ಚಿತ್ರಕ್ಕೆ ಕಿಚ್ಚ ಸುದೀಪ್ ನೀಡಿದ ಶುಭಾಶಯಕ್ಕೆ ರಾಕಿಂಗ್ ಸ್ಟಾರ್ ಯಶ್ 'ಸರ್' ಎಂದು ಗೌರವಪೂರ್ವಕವಾಗಿ ಉತ್ತರಿಸಿದ್ದಾರೆ. ಏಳು ವರ್ಷಗಳ ಹಿಂದೆ ಏಕವಚನ ಬಳಕೆಯಿಂದ ಶುರುವಾಗಿದ್ದ ಅಭಿಮಾನಿಗಳ ನಡುವಿನ ಸ್ಟಾರ್ ವಾರ್‌ಗೆ ಯಶ್ ಅವರ ಈ ಉತ್ತರವು ಅಂತ್ಯ ಹಾಡಿದೆ.

ಇತ್ತೀಚಿಗೆ ಟಾಕ್ಸಿಕ್ ಸಿನಿಮಾದ ಟೀಸರ್ ನೋಡಿ ಕಿಚ್ಚ ಸುದೀಪ್ , ರಾಕಿಂಗ್ ಸ್ಟಾರ್ ಯಶ್‌ಗೆ ವಿಶ್ ಮಾಡಿದ್ರು. ಅದಕ್ಕೆ ಯಶ್ ಕೂಡ ರಿಪ್ಲೈ ಮಾಡಿದ್ದಾರೆ. ಯಶ್ ಕೊಟ್ಟ ಉತ್ತರ ಇಬ್ಬರ ಅಭಿಮಾನಿಗಳ ನಡುವಿನ ಹಳೆಯ ಕಾಳಗವೊಂದಕ್ಕೆ ಫುಲ್ ಸ್ಟಾಪ್ ಕೂಡ ಇಟ್ಟಿದೆ.

ಯಶ್ ಬಗ್ಗೆ ಖುಷ್ ಆದ್ರು ಕಿಚ್ಚ ಸುದೀಪ್ ಫ್ಯಾನ್ಸ್..!

ಯೆಸ್ ಇತ್ತೀಚಿಗೆ ಯಶ್ ಬರ್ತ್​ಡೇ ದಿನ ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಆ ದಿನ ಯಶ್‌ಗೆ ವಿಶ್ ಮಾಡಿದ್ದ ಕಿಚ್ಚ ಸುದೀಪ್ , ಯಶ್​ ಮತ್ತು ಟಾಕ್ಸಿಕ್ ಟೀಂಗೆ ಅಭಿನಂದಿಸಿ ಟ್ವೀಟ್ ಮಾಡಿದ್ರು.

ಕಿಚ್ಚ ಸುದೀಪ್ ಪೋಸ್ಟ್ :

‘ಯಶ್‌ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ.ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’. ಸುದೀಪ್ ಮಾಡಿದ್ದ ಈ ಪೋಸ್ಟ್ ಖುದ್ದು ಸುದೀಪ್ ಅಭಿಮಾನಿಗಳಿಗೆ ಅಷ್ಟು ಇಷ್ಟ ಆಗಿರಲಿಲ್ಲ. ಸುದೀಪ್ ಯಾಕೆ ಯಶ್ ಗೆ ವಿಶ್ ಮಾಡಬೇಕು. ಯಶ್ ಏನೂ ಮಾರ್ಕ್ ಟೀಸರ್‌ಗೆ ವಿಶ್ ಮಾಡಿದ್ರಾ ಅಂತ ವಾದಕ್ಕೆ ನಿಂತಿದ್ರು. ಇಬ್ಬರ ಅಭಿಮಾನಿಗಳ ನಡುವೆ ಒಂದು ಸಣ್ಣ ವಾರ್ ಶುರುವಾಗಿತ್ತು.

ಅಷ್ಟಕ್ಕೂ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಅಭಿಮಾನಿಗಳ ನಡುವೆ ಯಾವತ್ತೂ ವಾರ್ ನಡೆದಿಲ್ಲ. ಸುದೀಪ್-ಯಶ್ ಸಮಕಾಲೀನರಲ್ಲ. ಯಶ್ ಇಂಡಸ್ಟ್ರಿಗೆ ಬಂದಾಗ ಸೀನಿಯರ್ ಸುದೀಪ್ ಸಾಕಷ್ಟು ಸಹಾಯ ಮಾಡಿದ್ರು. ಆದ್ರೆ ಈಗ ಏಳು ವರ್ಷಗಳ ಹಿಂದೆ ನಡೆದ ಒಂದು ಘಟನೆ ಸುದೀಪ್-ಯಶ್ ಫ್ಯಾನ್ಸ್ ನಡುವೆ ಕಂದಕ ಮೂಡಿಸಿತ್ತು.

ಕಿಚ್ಚ ಸುದೀಪ್‌ಗೆ ಏಕವಚನ ಬಳಸಿದ್ದ ಯಶ್..!

ಹೌದು 7 ವರ್ಷಗಳ ಹಿಂದೆ ಸಿನಿ ದುನಿಯಾದಲ್ಲಿ ಫಿಟ್​ನೆಸ್ ಚಾಲೆಂಜ್ ಟ್ರೆಂಡ್ ನಡೀತಾ ಇತ್ತು. ಆಗ ಸುದೀಪ್ ತಾವು ವರ್ಕೌಟ್ ಮಾಡಿ ಯಶ್‌ಗೆ ಚಾಲೆಂಜ್ ಪಾಸ್ ಮಾಡಿದ್ರು. ಅದನ್ನ ಸ್ವೀಕರಿಸಿ ವಿಡಿಯೋ ಮಾಡಿದ್ದ ಯಶ್ , ಹಾಯ್ ಸುದೀಪ್ ಅಂತ ಏಕವಚನದಲ್ಲೇ ಮಾತನಾಡಿದ್ರು.

ಹಿಂದೆ ಸುದೀಪ್‌ಗೆ ಸರ್ ಅಂತಿದ್ದ ಯಶ್ ಏಕಾಏಕಿ ಏಕವಚನದಲ್ಲಿ ಕರೆದಿದ್ದು ಕಿಚ್ಚನ ಫ್ಯಾನ್ಸ್​ಗೆ ಕೋಪ ತರಿಸಿತ್ತು. ಈ ನಡುವೆ ಯಶ್ ನಟನೆಯ ಸಂತು ಸ್ಟ್ರೈಟ್ ಫಾರ್ವರ್ಡ್ ಮತ್ತು ಕಿಚ್ಚನ ಮುಕುಂದ ಮುರಾರಿ ಚಿತ್ರಗಳು ಬೇರೆ ಒಂದೇ ದಿನ ರಿಲೀಸ್ ಆಗಿ ಸ್ಟಾರ್ ವಾರ್ ನಡೆದಿತ್ತು.

ತಗ್ಗಿ , ಬಗ್ಗಿ ನಡಿ ಗುರು.. ರಾಕಿಗೆ ಕಿಚ್ಚನ ಫ್ಯಾನ್ಸ್ ಪಾಠ..!

ಹೌದು ಈ ಸಮಯದಲ್ಲಿ ‘ಹೇಳೋರ ಮಾತು ಕೇಳು ಗುರು . ಸ್ವಲ್ಪ ತಗ್ಗಿ ಬಗ್ಗಿ ನಡೆಯುತಿರು ’ ಅಂತ ಕಿಚ್ಚನ ಫ್ಯಾನ್ಸ್ ಪಾಠ ಹೇಳಿದ್ರು. ಆಗ ‘ಅದು ಆಗಲ್ಲ..ಹೋಗಲ್ಲ ಅಂದಿದ್ದ ಯಶ್ ಈಗ ಬದಲಾಗಿದ್ದಾರೆ. ಸುದೀಪ್​ ಪೋಸ್ಟ್‌ಗೆ ಧನ್ಯವಾದ ತಿಳಿಸಿದ್ದು ಸರ್ ಅಂತ ಗೌರವ ಬೇರೆ ಕೊಟ್ಟಿದ್ದಾರೆ.

ಯಶ್ ಉತ್ತರ :

‘ಧನ್ಯವಾದಗಳು ಸರ್. ಏಕಾಗ್ರತೆ ಅಥವಾ ಸಮಗ್ರತೆಯನ್ನು ಕಳೆದುಕೊಳ್ಳದೆ, ಪ್ರಾಮಾಣಿಕವಾಗಿ ಮತ್ತು ಧೈರ್ಯದಿಂದ ಉತ್ತಮವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ನನ್ನ ಹಿರಿಯರಿಂದ ಕಲಿತಿದ್ದೇನೆ. ಆ ಹಿರಿಯರಲ್ಲಿ ನೀವು ಒಬ್ಬರು’

ಹೌದು ಯಶ್ ಸುದೀಪ್ ಟ್ವೀಟ್‌ಗೆ ಕೊಟ್ಟಿರೋ ಈ ರಿಪ್ಲೈ ಕಿಚ್ಚನ ಫ್ಯಾನ್ಸ್ ಮನಸು ಗೆದ್ದಿದೆ. ಅಷ್ಟಕ್ಕೂ ಸರ್ ಅಂತ ಕರೆಯೋದು, ಏಕವಚನ ಬಹುವಚನ ಬಳಸೋದು ಅವರವರ ಸಲುಗೆ ಸ್ನೇಹಕ್ಕೆ ಬಿಟ್ಟಿದ್ದು, ಆದ್ರೆ ಅಭಿಮಾನಿಗಳು ಮಾತ್ರ ಕಿರಿಯರು ಹಿರಿಯ ನಟರಿಗೆ ಗೌರವ ಕೊಡಬೇಕು ಅಂತ ಬಯಸ್ತಾರೆ. ಎನಿವೇ ಯಶ್ ಬಳಸಿದ ‘ಸರ್’ ಅನ್ನೋ ಒಂದೇ ಒಂದು ಪದದಿಂದ ಒಂದು ದೊಡ್ಡ ಸ್ಟಾರ್ ವಾರ್ ಮುಕ್ತಾಯಗೊಂಡಿದೆ.

- ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್.