ಬಿಗ್‌ಬಾಸ್ ಕನ್ನಡ ವೇದಿಕೆಯಲ್ಲಿ ತಂದೆ ಸಂಜೀವ್ ಅವರ ಪತ್ರ ಕೇಳಿ ಕಿಚ್ಚ ಸುದೀಪ್ ಭಾವುಕರಾದರು. ತಂದೆಯ ನಟನಾ ಪ್ರತಿಭೆ, ಮೈಮ್ ಕಲೆ ಮತ್ತು ‘ಮೈ ಆಟೋಗ್ರಾಫ್’ ಸಿನಿಮಾದ ನೆನಪುಗಳನ್ನು ಸುದೀಪ್ ಹಂಚಿಕೊಂಡರು.
ಕಿಚ್ಚ ಸುದೀಪ್ ಅವರಿಗೆ ಸಿನಿಮಾ ಎಷ್ಟು ಆಪ್ತವೋ, ಬಿಗ್‌ಬಾಸ್ ಕೂಡ ಅಷ್ಟೇ ವಿಶೇಷ. ಕಳೆದ 13 ವರ್ಷಗಳಿಂದ ಕನ್ನಡ ಬಿಗ್‌ಬಾಸ್ ಕಾರ್ಯಕ್ರಮವನ್ನು ನಿರೂಪಿಸುತ್ತಿರುವ ಸುದೀಪ್, ಈ ವೇದಿಕೆಯಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡುವುದು ತೀರಾ ಅಪರೂಪ. ಆದರೆ ಈ ಬಾರಿ ಬಿಗ್‌ಬಾಸ್ ವೇದಿಕೆಯಲ್ಲಿ ತಮ್ಮ ತಂದೆ ಸಂಜೀವ್ ಅವರ ಕುರಿತು ಮಾತನಾಡುತ್ತಾ, ತಮ್ಮ ಮನಸ್ಸಿನಲ್ಲಿದ್ದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸುದೀಪ್ ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಲವು ಸ್ಟಾರ್ ನಟರು ಹಾಗೂ ಸೆಲೆಬ್ರಿಟಿಗಳು ಅವರಿಗೆ ಶುಭಾಶಯ ಕೋರಿದ್ದರು. ಇದೇ ಸಂದರ್ಭದಲ್ಲಿ ಸುದೀಪ್ ಅವರ ತಂದೆ ಸಂಜೀವ್ ಅವರು ಮಗನಿಗಾಗಿ ಬರೆದಿದ್ದ ವಿಶೇಷ ಪತ್ರವೊಂದನ್ನು ಅವರದೇ ಧ್ವನಿಯಲ್ಲಿ ರೆಕಾರ್ಡ್ ಮಾಡಿ ಪ್ರಸಾರ ಮಾಡಲಾಯಿತು. ತಂದೆಯ ಮಾತುಗಳನ್ನು ಕೇಳಿದ ಸುದೀಪ್ ಭಾವುಕರಾದರು.
ಪತ್ರಕ್ಕೆ ಧನ್ಯವಾದ ತಿಳಿಸಿದ ಸುದೀಪ್, ತಮ್ಮ ತಂದೆಯ ಕಲಾ ಪ್ರತಿಭೆಯ ಬಗ್ಗೆ ಹಲವು ಅಪರೂಪದ ಸಂಗತಿಗಳನ್ನು ಬಹಿರಂಗಪಡಿಸಿದರು.
ನಾಯಕಿಯಾಗಿ ಶ್ರೀನಾಥ್
'ನನ್ನ ತಂದೆಯವರು ಅದ್ಭುತ ಕಲಾವಿದರು. ಅವರು ತುಂಬಾ ಒಳ್ಳೆಯ ನಟರು. ಕಾಲೇಜಿನಲ್ಲಿದ್ದಾಗಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅವರು ನಾಯಕನಾಗಿ ನಟಿಸಿದರೆ, ಅವರ ಪತ್ನಿಯ ಪಾತ್ರದಲ್ಲಿ ಕನ್ನಡದ ಖ್ಯಾತ ನಟ ಶ್ರೀನಾಥ್ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದರು. ಅಷ್ಟು ಅದ್ಭುತವಾದ ಕಲಾವಿದರಾಗಿದ್ದರು ನನ್ನ ತಂದೆ. ಅವರಿಗೆ ನಟನಾಗಬೇಕು ಎಂಬ ಬಹಳ ಆಸೆಯಿತ್ತು. ಆದರೆ ಕುಟುಂಬದ ಜವಾಬ್ದಾರಿಗಳಿಂದಾಗಿ ಅದು ಸಾಧ್ಯವಾಗಲಿಲ್ಲ' ಎಂದು ಸುದೀಪ್ ನೆನಪಿಸಿಕೊಂಡರು.
ಅದ್ಭುತವಾದ ಮೈಮ್ ಕಲಾವಿದರು
ತಂದೆಯ ಮೈಮ್ ಪ್ರತಿಭೆಯನ್ನೂ ಸುದೀಪ್ ವಿಶೇಷವಾಗಿ ಉಲ್ಲೇಖಿಸಿದರು. ನನ್ನ ತಂದೆಯವರು ಅದ್ಭುತವಾದ ಮೈಮ್ ಕಲಾವಿದರು. ಮನೆಯಲ್ಲಿ ಕುಳಿತ ಜಾಗದಲ್ಲೇ ಏನನ್ನಾದರೂ ಅದ್ಭುತವಾಗಿ ಅಭಿನಯಿಸಿ ತೋರಿಸುತ್ತಾರೆ. ಅವರೊಂದಿಗೆ ಹೋಲಿಸಿದರೆ ನನ್ನ ನಟನೆ ಏನೂ ಅಲ್ಲ. ಅವರಿಂದ ಬಂದ ಅಲ್ಪಸ್ವಲ್ಪ ಗುಣದಿಂದಲೇ ನಾನು ಇಷ್ಟು ದೂರ ಬಂದಿದ್ದೇನೆ ಎಂದು ಕಿಚ್ಚ ಸುದೀಪ್ ಹೇಳಿದರು. ತಮ್ಮ ತಂದೆಯ ಮೇಲಿನ ಗೌರವ ಮತ್ತು ಅವರಲ್ಲಿದ್ದ ನಟನೆಯ ಮೇಲಿನ ಪ್ರೀತಿಯನ್ನು ಹೇಳುವಾಗ ಸುದೀಪ್, ತಮ್ಮ ನಿರ್ದೇಶನದ ‘ಮೈ ಆಟೋಗ್ರಾಫ್’ ಸಿನಿಮಾದ ನೆನಪನ್ನೂ ಹಂಚಿಕೊಂಡರು.
ನನಗೆ ಹಲವು ಪ್ರಶಸ್ತಿಗಳು ಬಂದಿವೆ. ಆದರೆ ನಟನೆಗಾಗಿ ಅವರಿಗೆ ಸಿಕ್ಕಷ್ಟು ಪ್ರಶಸ್ತಿಗಳು ನನಗೆ ಬಂದಿಲ್ಲ. ಅವರಿಗೆ ನಟನೆಯ ಮೇಲೆ ಅಷ್ಟು ಪ್ರೀತಿ ಇತ್ತು. ಅದಕ್ಕಾಗಿಯೇ ನಾನು ನಿರ್ದೇಶಿಸಿದ ‘ಮೈ ಆಟೋಗ್ರಾಫ್’ ಸಿನಿಮಾದಲ್ಲಿ ಅವರಿಗೆ ಅವಕಾಶ ನೀಡಿದ್ದೆ ಎಂದರು. ಇದೇ ವೇಳೆ ತಂದೆ ಬರೆದ ಪತ್ರವನ್ನು ಕೇಳಿ ಸಂತೋಷಪಟ್ಟ ಸುದೀಪ್, ಅವರ ಇಂದಿನ ಸ್ಥಿತಿಯ ಬಗ್ಗೆ ಸಣ್ಣ ಬೇಸರವನ್ನೂ ವ್ಯಕ್ತಪಡಿಸಿದರು. ನನ್ನ ತಂದೆಯವರ ಸಹಿ ಎಂದರೆ ಅದಕ್ಕೊಂದು ಖದರ್ ಇತ್ತು. ಆದರೆ ಈಗ ಅವರು ಸಹಿ ಹಾಕಲು ಕಷ್ಟಪಡುತ್ತಿರುವುದನ್ನು ನೋಡಿದಾಗ ತುಂಬಾ ದುಃಖವಾಗುತ್ತದೆ' ಎಂದು ಸುದೀಪ್ ಭಾವುಕರಾದರು.
ಇನ್ನು ಬಿಗ್‌ಬಾಸ್ ವೇದಿಕೆಯಲ್ಲಿ ಸಾಮಾನ್ಯವಾಗಿ ಸ್ಪರ್ಧಿಗಳ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವ ಸುದೀಪ್, ಈ ಬಾರಿ ತಮ್ಮದೇ ಜೀವನದ ಒಂದು ಭಾವುಕ ಅಧ್ಯಾಯವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟರು. ಮಗನ 30 ವರ್ಷದ ಸಿನಿ ಪಯಣದ ಬಗ್ಗೆ ತಂದೆ ಹೆಮ್ಮೆ ವ್ಯಕ್ತಪಡಿಸಿದರೆ, ತಂದೆಯ ಕಲಾ ಪ್ರತಿಭೆ ಮತ್ತು ತ್ಯಾಗವನ್ನು ನೆನೆಯುತ್ತಾ ಸುದೀಪ್ ಕೂಡ ಭಾವನೆಗಳನ್ನು ಹಂಚಿಕೊಂಡಿದ್ದು, ಈ ಕ್ಷಣ ಬಿಗ್‌ಬಾಸ್ ವೇದಿಕೆಯ ವಿಶೇಷ ಕ್ಷಣಗಳಲ್ಲಿ ಒಂದಾಯಿತು.


