ಸೋಷಿಯಲ್ ಮೀಡಿಯಾದಲ್ಲಿ ತಾರೇಶ್ ಹಾಗೂ ಸ್ವಾತಿ ಎಂದಾಕ್ಷಣ ಹಲವರಿಗೆ ನೆನಪಾಗುವುದು ಅವರ ಫನ್ನಿ ವೀಡಿಯೋಗಳು, ರೀಲ್ಸ್ ಹಾಗೂ ದಂಪತಿಯ ನಡುವಿನ ಮುದ್ದಾದ ಬಾಂಧವ್ಯ. ಇದೀಗ ಈ ಜನಪ್ರಿಯ ಕನ್ನಡ ಯೂಟ್ಯೂಬರ್ ಜೋಡಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಸಿಹಿ ಸುದ್ದಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ತಾರೇಶ್ ಹಾಗೂ ಸ್ವಾತಿ ಎಂದಾಕ್ಷಣ ಹಲವರಿಗೆ ನೆನಪಾಗುವುದು ಅವರ ಫನ್ನಿ ವೀಡಿಯೋಗಳು, ರೀಲ್ಸ್ ಹಾಗೂ ದಂಪತಿಯ ನಡುವಿನ ಮುದ್ದಾದ ಬಾಂಧವ್ಯ. ಇದೀಗ ಈ ಜನಪ್ರಿಯ ಕನ್ನಡ ಯೂಟ್ಯೂಬರ್ ಜೋಡಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಸಿಹಿ ಸುದ್ದಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ವರ್ಷಗಳ ಕಾಲ ಮಗುವಿಗಾಗಿ ಕಾದಿದ್ದ ತಾರೇಶ್ ಹಾಗೂ ಸ್ವಾತಿ ಇದೀಗ ಪೋಷಕರಾಗುವ ಸಂಭ್ರಮದಲ್ಲಿದ್ದಾರೆ.

ಪಿಯುಸಿ ಓದುತ್ತಿದ್ದ ಸಮಯದಲ್ಲೇ ತಾರೇಶ್ ಹಾಗೂ ಸ್ವಾತಿಗೆ ಪರಿಚಯವಾಗಿತ್ತು. ಈ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿತ್ತು. ಆದರೆ ಇವರ ಪ್ರೀತಿಗೆ ಸ್ವಾತಿ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಕುಟುಂಬದ ವಿರೋಧದ ನಡುವೆಯೂ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ ಇಬ್ಬರೂ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕವೂ ಸಾಕಷ್ಟು ಸವಾಲುಗಳನ್ನು ಎದುರಿಸಿದ ಈ ಜೋಡಿ, ಇಂದು ತಮ್ಮದೇ ಆದ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾ ಜಗತ್ತನ್ನು ಕಟ್ಟಿಕೊಂಡಿದ್ದಾರೆ. ಬರೋಬ್ಬರಿ 13-14 ವರ್ಷಗಳ ಪ್ರೀತಿ ಹಾಗೂ ದಾಂಪತ್ಯ ಜೀವನದ ಪಯಣ ಇವರದ್ದು.

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯ ಜೋಡಿ

ಇನ್‌ಸ್ಟಾಗ್ರಾಮ್ ಅಥವಾ ಫೇಸ್‌ಬುಕ್‌ನಲ್ಲಿ ರೀಲ್ಸ್‌ಗಳನ್ನು ಸ್ಕ್ರಾಲ್ ಮಾಡುವಾಗ ತಾರೇಶ್-ಸ್ವಾತಿ ಅವರ ವಿಡಿಯೋಗಳು ಕಣ್ಣಿಗೆ ಬೀಳುವುದು ಸಾಮಾನ್ಯ. ತಮ್ಮ ಹಾಸ್ಯಮಯ ಕಂಟೆಂಟ್, ದೈನಂದಿನ ಜೀವನದ ಕ್ಷಣಗಳು ಹಾಗೂ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಈ ಜೋಡಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕ್ಯಾಮೆರಾ ಮುಂದೆ ಸದಾ ನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಈ ದಂಪತಿಯ ಬದುಕಿನ ಹಿಂದೆ ಹಲವು ಭಾವನಾತ್ಮಕ ಸವಾಲುಗಳೂ ಇದ್ದವು. ಇದೀಗ ಅದೇ ವಿಚಾರವನ್ನು ಅವರು ತಮ್ಮ ಹೊಸ ವಿಡಿಯೋದಲ್ಲಿ ಮನಬಿಚ್ಚಿ ಹಂಚಿಕೊಂಡಿದ್ದಾರೆ.

ವರ್ಷಗಳ ಕಾಯುವಿಕೆಗೆ ಸಿಕ್ಕ ಸಿಹಿ ಫಲ

ಮದುವೆಯಾಗಿ ಹಲವು ವರ್ಷಗಳಾದರೂ ಮಗುವಾಗದಿರುವ ಕೊರಗು ದಂಪತಿಯನ್ನು ಕಾಡುತ್ತಿತ್ತು. ಪ್ರತಿ ತಿಂಗಳು ಪ್ರೆಗ್ನೆನ್ಸಿ ಟೆಸ್ಟ್ ನೆಗಟಿವ್ ಬಂದಾಗ ಅನುಭವಿಸುತ್ತಿದ್ದ ನೋವು ತುಂಬಾ ಕಷ್ಟಕರವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ. ಸಮಾಜ ಹಾಗೂ ಸೋಷಿಯಲ್ ಮೀಡಿಯಾದಲ್ಲಿ "ಮಗುವಾಗಿಲ್ವಾ?" ಎಂಬಂತಹ ಪ್ರಶ್ನೆಗಳು ಎದುರಾಗುತ್ತಿದ್ದವು. ಆದರೆ ತಮ್ಮ ವೈಯಕ್ತಿಕ ನೋವನ್ನು ಯಾರಿಗೂ ತೋರಿಸದೆ ಕ್ಯಾಮೆರಾ ಮುಂದೆ ನಗುತ್ತಾ ಕಂಟೆಂಟ್ ಮಾಡುತ್ತಿದ್ದೆವು ಎಂದು ದಂಪತಿ ಭಾವುಕರಾಗಿ ಹೇಳಿದ್ದಾರೆ.

ಆರಂಭದಲ್ಲೇ ಎದುರಾಗಿತ್ತು ವೈದ್ಯಕೀಯ ಸವಾಲು

ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಕೆಲವು ವೈದ್ಯಕೀಯ ತೊಡಕುಗಳನ್ನು ಎದುರಿಸಬೇಕಾಗಿತ್ತು. ಆಂಗ್ಯುಲರ್ ಪ್ರೆಗ್ನೆನ್ಸಿ ಸೇರಿದಂತೆ ಕೆಲವು ಸಮಸ್ಯೆಗಳ ಹಿನ್ನೆಲೆಯಲ್ಲಿ ಸ್ವಾತಿ ಅವರು ನಿರಂತರವಾಗಿ ವೈದ್ಯಕೀಯ ತಪಾಸಣೆ ಹಾಗೂ ಸ್ಕ್ಯಾನಿಂಗ್‌ಗೆ ಒಳಗಾಗಬೇಕಾಯಿತು ಎಂದು ದಂಪತಿ ತಿಳಿಸಿದ್ದಾರೆ. ಈ ಕಾರಣದಿಂದಾಗಿ ಗರ್ಭಧಾರಣೆಯ ವಿಷಯವನ್ನು ಆರಂಭದಲ್ಲೇ ಯಾರೊಂದಿಗೂ ಹಂಚಿಕೊಳ್ಳದೆ ಗೌಪ್ಯವಾಗಿಟ್ಟುಕೊಂಡಿದ್ದರು. ಇದೀಗ ಐದು ತಿಂಗಳ ಹಂತ ತಲುಪಿದ ಬಳಿಕ ಅಭಿಮಾನಿಗಳೊಂದಿಗೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಸಂಭ್ರಮವೋ ಸಂಭ್ರಮ

ತಾರೇಶ್ ಹಾಗೂ ಸ್ವಾತಿ ತಂದೆ-ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಕುಟುಂಬಸ್ಥರಲ್ಲೂ ಸಂತಸ ಮೂಡಿಸಿದೆ. ಅಜ್ಜ-ಅಜ್ಜಿಯಾಗುವ ಖುಷಿಯಲ್ಲಿರುವ ಕುಟುಂಬದ ಸದಸ್ಯರು ತಾಯಿ ಮತ್ತು ಮಗು ಆರೋಗ್ಯವಾಗಿರಲಿ ಎಂದು ಹಾರೈಸಿದ್ದಾರೆ. ವರ್ಷಗಳ ಕಾಯುವಿಕೆಯ ಬಳಿಕ ತಮ್ಮ ಮನೆಗೆ ಹೊಸ ಅತಿಥಿ ಬರಲಿರುವುದರಿಂದ ದಂಪತಿಯ ಸಂತಸವೂ ಮುಗಿಲು ಮುಟ್ಟಿದೆ.

ಸ್ವಂತ ಮಗುವಿನ ಜೊತೆಗೆ ಮತ್ತೊಂದು ಮಗುವನ್ನು ದತ್ತು ಪಡೆಯುವ ನಿರ್ಧಾರ

ಇದೇ ವೇಳೆ ತಾರೇಶ್ ಹಾಗೂ ಸ್ವಾತಿ ಮತ್ತೊಂದು ಮಹತ್ವದ ವಿಚಾರವನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಸ್ವಂತ ಮಗುವಿನ ಜೊತೆಗೆ ಮತ್ತೊಂದು ಮಗುವನ್ನು ದತ್ತು ಪಡೆದು ಬೆಳೆಸುವ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ. ಮಗುವಿಗಾಗಿ ಪ್ರಾರ್ಥಿಸುತ್ತಿದ್ದ ಸಂದರ್ಭದಲ್ಲಿ ಮಾಡಿಕೊಂಡಿದ್ದ ಹರಿಕೆಯಂತೆ, ತಮ್ಮ ಮಗುವಿನ ಬಳಿಕ ಮತ್ತೊಂದು ಮಗುವನ್ನು ದತ್ತು ಪಡೆದು ಉತ್ತಮ ರೀತಿಯಲ್ಲಿ ಸಾಕಿ ಬೆಳೆಸಲು ಬಯಸಿರುವುದಾಗಿ ದಂಪತಿ ಹೇಳಿದ್ದಾರೆ. ಅನಾಥಾಶ್ರಮಗಳಲ್ಲಿ ಪೋಷಕರ ಪ್ರೀತಿಗಾಗಿ ಕಾಯುತ್ತಿರುವ ಮಕ್ಕಳನ್ನು ನೋಡಿದಾಗ ಮನಸ್ಸಿಗೆ ಬೇಸರವಾಗುತ್ತದೆ. ಹೀಗಾಗಿ ಸಾಧ್ಯವಾದರೆ ಮತ್ತೊಂದು ಮಗುವಿಗೆ ತಮ್ಮ ಕುಟುಂಬದಲ್ಲಿ ಜಾಗ ನೀಡಬೇಕು ಎಂಬುದು ತಮ್ಮ ಆಸೆ ಎಂದು ತಿಳಿಸಿದ್ದಾರೆ.

ಮಕ್ಕಳಿಲ್ಲದ ದಂಪತಿಗಳಿಗೆ ತಾರೇಶ್-ಸ್ವಾತಿ ಸಂದೇಶ

ತಮ್ಮದೇ ಅನುಭವದಿಂದ ಗರ್ಭಧಾರಣೆಗಾಗಿ ಕಾಯುತ್ತಿರುವ ದಂಪತಿಗಳಿಗೆ ತಾರೇಶ್ ಹಾಗೂ ಸ್ವಾತಿ ಕೆಲವು ಸಂದೇಶಗಳನ್ನು ನೀಡಿದ್ದಾರೆ. ಒತ್ತಡ ಕಡಿಮೆ ಮಾಡಿಕೊಳ್ಳಿ: ಸಾಧ್ಯವಾದಷ್ಟು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ನೆಮ್ಮದಿಯಿಂದ ಇರಲು ಪ್ರಯತ್ನಿಸಬೇಕು. ಆರೋಗ್ಯದ ಬಗ್ಗೆ ಗಮನ ಕೊಡಿ: ಉತ್ತಮ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಮುಖ್ಯ. ಇಬ್ಬರೂ ವೈದ್ಯರನ್ನು ಸಂಪರ್ಕಿಸಿ: ಮಗುವಾಗದಿದ್ದಾಗ ಮಹಿಳೆಯನ್ನೇ ಹೊಣೆ ಮಾಡುವುದು ಸರಿಯಲ್ಲ. ಅಗತ್ಯವಿದ್ದರೆ ಪತಿ-ಪತ್ನಿ ಇಬ್ಬರೂ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಅನಗತ್ಯ ಪ್ರಶ್ನೆ ಬೇಡ: ಮಕ್ಕಳಿಲ್ಲದ ದಂಪತಿಗಳನ್ನು ಪದೇಪದೇ ಪ್ರಶ್ನಿಸುವುದರಿಂದ ಅವರ ಮನಸ್ಸಿಗೆ ನೋವಾಗಬಹುದು. ಅವರ ವೈಯಕ್ತಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಂವೇದನಾಶೀಲವಾಗಿ ನಡೆದುಕೊಳ್ಳಬೇಕು ಎಂಬ ಸಂದೇಶ ನೀಡಿದ್ದಾರೆ.