ಒಂದು ದಿನದ ಹಿಂದಷ್ಟೇ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು. ಹೀಗಾಗಿ ಅಷ್ಟು ಕಡಿಮೆ ಸಮಯದಲ್ಲೇ ದೊಡ್ಡ ಮೊತ್ತದ ಹಣದೊಂದಿಗೆ ಹೊರಬರುವ ಅವಕಾಶ ಸಿಕ್ಕಿದ್ದರೂ, ಇಬ್ಬರೂ ಮೊದಲಿಗೆ ಆಫರ್‌ ಅನ್ನು ತಿರಸ್ಕರಿಸಿದರು. ಆದರೆ, ಕೊನೆಗೆ ಏನು ಮಾಡಿ ಹಣ ಪಡೆದರು? ನೋಡಿ..

'ಬಿಗ್ ಬಾಸ್ ತೆಲುಗು 10’ರ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಮಿಥಿಲೇಶ್, ಬಂದಷ್ಟೇ ವೇಗದಲ್ಲಿ ಹೊರಗೆ ಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ವೀಕೆಂಡ್ ಎಪಿಸೋಡ್‌ನಲ್ಲಿ ನಡೆದ ಒಂದು ಅನಿರೀಕ್ಷಿತ ಬೆಳವಣಿಗೆ ಇಡೀ ಮನೆಯ ವಾತಾವರಣವನ್ನೇ ಬದಲಿಸಿತು. ಬರೋಬ್ಬರಿ 15 ಲಕ್ಷ ರೂಪಾಯಿ ನಗದು ಇರುವ ಸೂಟ್‌ಕೇಸ್ ಕೈಗೆತ್ತಿಕೊಂಡ ಮಿಥಿಲೇಶ್, ಬಿಗ್ ಬಾಸ್ ಮನೆಯಿಂದ ಹೊರಬರುವ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಘಟನೆ ಸ್ಪರ್ಧಿಗಳಿಗೆ ಮಾತ್ರವಲ್ಲದೆ ಪ್ರೇಕ್ಷಕರಿಗೂ ಭಾರೀ ಅಚ್ಚರಿ ಮೂಡಿಸಿದೆ.

ವೀಕೆಂಡ್ ಎಪಿಸೋಡ್‌ನಲ್ಲಿ ಎಂದಿನಂತೆ ನಿರೂಪಕ ನಾಗಾರ್ಜುನ ಅವರು ಮನೆಯ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಇದೇ ವೇಳೆ ಸ್ಪರ್ಧಿಗಳ ಮುಂದೆ ಹಣ ತುಂಬಿರುವ ಸೂಟ್‌ಕೇಸ್ ಇಡಲಾಯಿತು. ಆರಂಭದಲ್ಲಿ ಅದರಲ್ಲಿ 5 ಲಕ್ಷ ರೂಪಾಯಿ ಇರುವುದಾಗಿ ತಿಳಿಸಲಾಯಿತು. ಈ ಹಣವನ್ನು ತೆಗೆದುಕೊಂಡು ಯಾರಾದರೂ ಸ್ಪರ್ಧೆಯಿಂದ ಹೊರಬರಬಹುದು ಎಂದು ಆಫರ್ ನೀಡಲಾಯಿತು.

ವಿಶೇಷವೆಂದರೆ ಮಿಥಿಲೇಶ್ ಹಾಗೂ ಅಪೂರ್ವ ಒಂದು ದಿನದ ಹಿಂದಷ್ಟೇ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು. ಹೀಗಾಗಿ ಅಷ್ಟು ಕಡಿಮೆ ಸಮಯದಲ್ಲೇ ದೊಡ್ಡ ಮೊತ್ತದ ಹಣದೊಂದಿಗೆ ಹೊರಬರುವ ಅವಕಾಶ ಸಿಕ್ಕಿದ್ದರೂ, ಇಬ್ಬರೂ ಮೊದಲಿಗೆ ಆಫರ್‌ ಅನ್ನು ತಿರಸ್ಕರಿಸಿದರು. ಅದರಲ್ಲೂ ಮಿಥಿಲೇಶ್, ಬಿಗ್ ಬಾಸ್ ಮನೆಯಲ್ಲಿ ಉಳಿದು ಪ್ರೇಕ್ಷಕರ ಪ್ರೀತಿ ಗಳಿಸುವುದೇ ತಮ್ಮ ಮೊದಲ ಆದ್ಯತೆ ಎಂದು ಹೇಳಿದ್ದರು.

ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ. ನಾಗಾರ್ಜುನ ಅವರು ಹಣದ ಮೊತ್ತವನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಿದರು. ಆದರೂ ಮಿಥಿಲೇಶ್ ತಕ್ಷಣ ಒಪ್ಪಲಿಲ್ಲ. ಬಳಿಕ ಆಫರ್ ಮತ್ತಷ್ಟು ಏರಿಕೆಯಾಗಿ ಬರೋಬ್ಬರಿ 15 ಲಕ್ಷ ರೂಪಾಯಿಗೆ ತಲುಪಿತು. ಇಷ್ಟೊಂದು ದೊಡ್ಡ ಮೊತ್ತದ ಆಫರ್ ಎದುರಾದಾಗ ಮಿಥಿಲೇಶ್ ತಮ್ಮ ನಿರ್ಧಾರವನ್ನು ಬದಲಾಯಿಸಿದರು. 15 ಲಕ್ಷ ರೂಪಾಯಿ ಪಡೆದುಕೊಂಡು ಬಿಗ್ ಬಾಸ್ ಮನೆಯಿಂದ ಹೊರಬರಲು ಅವರು ಸಮ್ಮತಿ ಸೂಚಿಸಿದರು.

ಮಿಥಿಲೇಶ್ ಅವರ ಈ ನಿರ್ಧಾರ ಮನೆಯಲ್ಲಿದ್ದ ಇತರ ಸ್ಪರ್ಧಿಗಳಿಗೆ ಶಾಕ್ ನೀಡಿತು. ಏಕೆಂದರೆ ಕೆಲವೇ ಗಂಟೆಗಳ ಹಿಂದೆ ಪ್ರೇಕ್ಷಕರ ಪ್ರೀತಿ ಗಳಿಸುವುದೇ ಮುಖ್ಯ ಎಂದು ಹೇಳಿದ್ದ ಮಿಥಿಲೇಶ್, ಇದೀಗ ದೊಡ್ಡ ಮೊತ್ತದ ಹಣದೊಂದಿಗೆ ಹೊರನಡೆಯಲು ಸಿದ್ಧರಾಗಿದ್ದರು.

ಇನ್ನು ಈ ಹಣವನ್ನು ಸುಮ್ಮನೆ ನೀಡಲಾಗುವುದಿಲ್ಲ ಎಂಬ ಷರತ್ತನ್ನೂ ನಾಗಾರ್ಜುನ ಸ್ಪಷ್ಟಪಡಿಸಿದರು. ಮಿಥಿಲೇಶ್ ತೆಗೆದುಕೊಳ್ಳುವ 15 ಲಕ್ಷ ರೂಪಾಯಿಗಳನ್ನು ಬಿಗ್ ಬಾಸ್ ವಿನ್ನರ್‌ಗೆ ಸಿಗುವ ಬಹುಮಾನ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಲಾಯಿತು. ಹೀಗಾಗಿ ಮನೆಯಲ್ಲಿದ್ದ ಇತರ ಸದಸ್ಯರಿಗೆ ಮಿಥಿಲೇಶ್ ಅವರನ್ನು ತಡೆಯುವ ಅವಕಾಶ ನೀಡಲಾಯಿತು.

ಆದರೆ ಮಿಥಿಲೇಶ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ತಮ್ಮ ಆಯ್ಕೆಯ ಬಗ್ಗೆ ಸ್ಪಷ್ಟವಾಗಿದ್ದ ಅವರು, ಅಂತಿಮವಾಗಿ ಮನೆಯ ಬಹುತೇಕ ಸ್ಪರ್ಧಿಗಳ ಒಪ್ಪಿಗೆಯನ್ನೂ ಪಡೆದುಕೊಂಡರು. ಬಳಿಕ 15 ಲಕ್ಷ ರೂಪಾಯಿ ಇರುವ ಸೂಟ್‌ಕೇಸ್ ಕೈಗೆತ್ತಿಕೊಂಡು ಬಿಗ್ ಬಾಸ್ ಮನೆಯಿಂದ ಹೊರನಡೆದರು.

ಈ ಮೂಲಕ ಮಿಥಿಲೇಶ್ ಅವರ ಬಿಗ್ ಬಾಸ್ ಪಯಣ ಆರಂಭವಾದ ಕೆಲವೇ ದಿನಗಳಲ್ಲಿ ಅಂತ್ಯಗೊಂಡಿದೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು, ದೊಡ್ಡ ಮೊತ್ತದ ಹಣದ ಆಫರ್ ಸ್ವೀಕರಿಸಿ ಶೋನಿಂದ ಹೊರಬಂದಿರುವುದು ಕಾರ್ಯಕ್ರಮದ ಪ್ರಮುಖ ಟ್ವಿಸ್ಟ್‌ಗಳಲ್ಲಿ ಒಂದಾಗಿದೆ. ಈ ಘಟನೆ ತೆಲುಗು ಬಿಗ್ ಬಾಸ್ ಇತಿಹಾಸದಲ್ಲೇ ಅಪರೂಪದ ಬೆಳವಣಿಗೆ ಎಂಬ ಚರ್ಚೆಯೂ ಆರಂಭವಾಗಿದೆ.

ಪ್ರೇಕ್ಷಕರ ಪ್ರೀತಿ ಅಥವಾ 15 ಲಕ್ಷ ರೂಪಾಯಿ—ಮಿಥಿಲೇಶ್ ಆಯ್ಕೆ ಮಾಡಿಕೊಂಡಿದ್ದು ಹಣದ ದಾರಿ. ಅವರ ಈ ನಿರ್ಧಾರ ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಮನೆಯ ಹೊರಗೂ ಎಷ್ಟು ಚರ್ಚೆಗೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.