ಬಿಗ್ ಬಾಸ್ ಕನ್ನಡ 13 ವೇದಿಕೆಯಲ್ಲಿ ಸುದೀಪ್‌ಗೆ ರಿಷಬ್ ಶೆಟ್ಟಿ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಕಿಚ್ಚನ 30 ವರ್ಷಗಳ ಪಯಣವನ್ನು ಕೊಂಡಾಡಿದ ರಿಷಬ್, ಸುದೀಪ್ ನೀಡಿದ ಪ್ರೋತ್ಸಾಹವನ್ನು ನೆನಪಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಬಾದ್‌ಷಾ ಕಿಚ್ಚ ಸುದೀಪ್‌ ಅವರ ಮೂರು ದಶಕಗಳ ಕಲಾ ಪಯಣಕ್ಕೆ ಈಗಾಗಲೇ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ವಿಶೇಷ ಸಂಭ್ರಮಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ತಮ್ಮದೇ ರೀತಿಯಲ್ಲಿ ಪ್ರೀತಿಯ ಶುಭಾಶಯ ಕೋರಿದ್ದಾರೆ. ಕೇವಲ ವಿಶ್ ಮಾಡುವುದಷ್ಟೇ ಅಲ್ಲ, ತಾವು ಸುದೀಪ್ ಅವರ ದೊಡ್ಡ ಅಭಿಮಾನಿ ಎಂಬುದನ್ನೂ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಟನಾಗಿ ಸುದೀಪ್‌ 30 ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರು ಕಿಚ್ಚನಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಚಿತ್ರರಂಗದ ಪಯಣದಲ್ಲಿ ಸುದೀಪ್ ನೀಡಿದ ಪ್ರೋತ್ಸಾಹ ಮತ್ತು ಬೆಂಬಲವನ್ನು ನೆನಪಿಸಿಕೊಂಡಿರುವ ರಿಷಬ್‌, ಕಿಚ್ಚನಿಗೆ ಭಾವಪೂರ್ಣವಾಗಿ ಶುಭ ಹಾರೈಸಿದ್ದಾರೆ.

‘ನಾನು ನಿಮ್ಮ ದೊಡ್ಡ ಅಭಿಮಾನಿ’ ಎಂದ ರಿಷಬ್ ಶೆಟ್ಟಿ!

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ‘ಸೂಪರ್ ಸಂಡೇ ವಿತ್ ಬಾದ್‌ಷಾ ಕಿಚ್ಚ ಸುದೀಪ’ ವೇದಿಕೆಯಲ್ಲಿ ಈ ವಿಶೇಷ ಕ್ಷಣವನ್ನು ಹಂಚಿಕೊಳ್ಳಲಾಯಿತು. ಸುದೀಪ್ ಅವರೊಂದಿಗೆ ಮಾತನಾಡಿದ ರಿಷಬ್ ಶೆಟ್ಟಿ, ತಾವು ಒಬ್ಬ ದೊಡ್ಡ ಅಭಿಮಾನಿಯಾಗಿ ಈ ವಿಶೇಷ ಸಂದರ್ಭದಲ್ಲಿ ಕರೆ ಮಾಡಿ ಶುಭಾಶಯ ತಿಳಿಸುತ್ತಿರುವುದಾಗಿ ಹೇಳಿದ್ದಾರೆ. ಸುದೀಪ್‌ ಅವರ ಮೂರು ದಶಕಗಳ ಪಯಣವನ್ನು ಸ್ಮರಿಸಿದ ಅವರು, ನಟನಾಗಿ ಮಾತ್ರವಲ್ಲದೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಕನ್ನಡ ಮತ್ತು ಭಾರತೀಯ ಚಿತ್ರರಂಗಕ್ಕೆ ಕಿಚ್ಚ ನೀಡಿರುವ ಕೊಡುಗೆಯನ್ನು ಕೊಂಡಾಡಿದ್ದಾರೆ. ರಿಷಬ್ ಅವರ ಮಾತುಗಳಿಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ ಸುದೀಪ್‌, 'ಥ್ಯಾಂಕ್ ಯು ಸೋ ಮಚ್ ರಿಷಬ್, ನಿಮಗೂ ಕೂಡ ಒಳ್ಳೆಯದಾಗಲಿ' ಎಂದು ಹಾರೈಸಿದ್ದಾರೆ.

ಹೊಸಬರಿಗೆ ಸುದೀಪ್ ನೀಡಿದ ಬೆಂಬಲ ನೆನಪಿಸಿಕೊಂಡ ರಿಷಬ್

ರಿಷಬ್ ಶೆಟ್ಟಿ ಅವರ ಮಾತುಗಳಲ್ಲಿ ಮತ್ತೊಂದು ವಿಚಾರ ವಿಶೇಷವಾಗಿ ಗಮನ ಸೆಳೆಯಿತು. ಚಿತ್ರರಂಗಕ್ಕೆ ಹೊಸಬರಾಗಿ ಬಂದ ಸಂದರ್ಭದಲ್ಲಿ ಸುದೀಪ್ ತಮ್ಮೊಂದಿಗೆ ಹಾಗೂ ಇತರ ಕಲಾವಿದರೊಂದಿಗೆ ನಡೆದುಕೊಂಡ ರೀತಿಯನ್ನು ಅವರು ನೆನಪಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸುದೀಪ್ ಅವರ ಗುಣವನ್ನು ರಿಷಬ್ ಶೆಟ್ಟಿ ಮುಕ್ತವಾಗಿ ಕೊಂಡಾಡಿದ್ದಾರೆ. ತಾವು ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಸಿಕ್ಕ ಬೆಂಬಲ ಮತ್ತು ಪ್ರೋತ್ಸಾಹವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆ ಪ್ರೋತ್ಸಾಹ ಇಂದಿಗೂ ಮುಂದುವರಿಯುತ್ತಿದೆ ಎಂದು ಹೇಳಿದ್ದಾರೆ.

‘ನೂರು ವರ್ಷ ಬಾಳಿ’ ಎಂದು ಹಾರೈಸಿದ ರಿಷಬ್!

ಸುದೀಪ್ ಅವರ 30 ವರ್ಷಗಳ ಕಲಾ ಪಯಣಕ್ಕೆ ಶುಭ ಹಾರೈಸಿದ ರಿಷಬ್ ಶೆಟ್ಟಿ, ಕಿಚ್ಚ ನೂರು ವರ್ಷಗಳ ಕಾಲ ಆಯುರಾರೋಗ್ಯ, ಸುಖ-ಸಂಪತ್ತುಗಳೊಂದಿಗೆ ಬಾಳಿ, ಕನ್ನಡ ಕಲಾ ಸೇವೆಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸಿದ್ದಾರೆ. ಈ ಮಾತುಗಳು ಸುದೀಪ್ ಮೇಲಿನ ರಿಷಬ್ ಅವರ ಅಭಿಮಾನ ಮತ್ತು ಗೌರವವನ್ನು ಮತ್ತೊಮ್ಮೆ ತೋರಿಸಿವೆ.

ಬಿಗ್ ಬಾಸ್ ವೇದಿಕೆಯಲ್ಲೇ ಮತ್ತೊಂದು ವಿಶೇಷ ನೆನಪು

ಸುದೀಪ್ ಮತ್ತು ರಿಷಬ್ ಶೆಟ್ಟಿ ಅವರ ನಡುವಿನ ಈ ಆತ್ಮೀಯತೆಗೆ ಬಿಗ್ ಬಾಸ್ ವೇದಿಕೆಯೂ ಸಾಕ್ಷಿಯಾಗಿದೆ. ಈ ಹಿಂದೆ ರಿಷಬ್ ಅವರ ಸಿನಿಮಾಗಳನ್ನು ಇದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ದರು. ಮೊದಲಿನಿಂದಲೂ ಸುದೀಪ್ ಅವರನ್ನು ಅಪಾರವಾಗಿ ಗೌರವಿಸುತ್ತಾ ಬಂದಿರುವ ರಿಷಬ್ ಶೆಟ್ಟಿ, ಅವರನ್ನು ಕೇವಲ ಹಿರಿಯ ನಟನಾಗಿ ಮಾತ್ರವಲ್ಲದೆ ಮಾರ್ಗದರ್ಶಕರ ಸ್ಥಾನದಲ್ಲಿಯೂ ನೋಡುತ್ತಾರೆ. ಇದೀಗ ಸುದೀಪ್ ಅವರ 30 ವರ್ಷಗಳ ಪಯಣದ ಸಂಭ್ರಮದಲ್ಲಿ ರಿಷಬ್ ಸ್ವತಃ ಕರೆ ಮಾಡಿ ಶುಭ ಕೋರಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇನ್ನು ಕನ್ನಡ ಚಿತ್ರರಂಗದ ಎರಡು ತಲೆಮಾರುಗಳ ಪ್ರತಿಭೆಗಳು ಹಂಚಿಕೊಂಡ ಈ ಆತ್ಮೀಯ ಕ್ಷಣ ಇದೀಗ ‘ಬಿಗ್ ಬಾಸ್’ ವೇದಿಕೆಯ ಮತ್ತೊಂದು ವಿಶೇಷ ಕ್ಷಣವಾಗಿ ಗಮನ ಸೆಳೆಯುತ್ತಿದೆ.