ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಬಂಗಾರಮ್ಮ ಪಾತ್ರಧಾರಿ ಮಂಜು ಭಾಷಿಣಿ, ಬಿಗ್ ಬಾಸ್ ಪ್ರವೇಶಕ್ಕಾಗಿ ಧಾರಾವಾಹಿಯಿಂದ ಹೊರನಡೆದಿದ್ದಾರೆ. ಅವರ ಪಾತ್ರವನ್ನು ಅಂತ್ಯಗೊಳಿಸಲಾಗಿದ್ದು, ಕೊನೆಯ ದಿನದ ಶೂಟಿಂಗ್‌ನಲ್ಲಿ ಸಹನಟಿ ಉಮಾಶ್ರೀ ಸೇರಿದಂತೆ ಇಡೀ ತಂಡ ಭಾವುಕರಾಗಿದ್ದರು.
ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ನಲ್ಲಿ ಸದ್ಯ ಬಂಗಾರಮ್ಮನ ಪಾತ್ರ ಮಾಡುತ್ತಿದ್ದವರು ನಟಿ ಮಂಜು ಭಾಷಿಣಿ. ಆ ಪಾತ್ರಕ್ಕೆ ಇರುವ ಗತ್ತನ್ನು ಅಷ್ಟೋ ಸೊಗಸಾಗಿ ನಡೆಸಿಕೊಟ್ಟವರು ಅವರು. ಆದರೆ ಅವರಿಗೆ ಬಿಗ್ಬಾಸ್ನಿಂದ ಕರೆ ಬಂದ ಕಾರಣ, ಪುಟ್ಟಕ್ಕನ ಮಕ್ಕಳು ಸೀರಿಯಲ್ಗೆ ವಿದಾಯ ಹೇಳಿದರು. ಆದರೆ ಬಂಗಾರಮ್ಮನ ಜಾಗದಲ್ಲಿ ಬೇರೆ ನಟಿಯನ್ನು ತರಲು ಸೀರಿಯಲ್ ತಂಡ ಒಪ್ಪದ ಕಾರಣ ಆ ಪಾತ್ರವನ್ನೂ ಸಾಯಿಸಿಬಿಟ್ಟರು. ಹಿಂದೊಮ್ಮೆ ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಅವರು ಉನ್ನತ ಶಿಕ್ಷಣದ ಕಾರಣ ನೀಡಿ ಸೀರಿಯಲ್ ಬಿಟ್ಟಾಗಲೂ ಇದೇ ರೀತಿ ಆ ಪಾತ್ರವನ್ನು ಸಾಯಿಸಲಾಗಿತ್ತು. ಇದೀಗ ಬಂಗಾರಮ್ಮನ ಪಾತ್ರವನ್ನೂ ಸಾಯಿಸಲಾಗಿದೆ.
ತಂಡ ಭಾವುಕ
ಸೀರಿಯಲ್ ಎಂದರೆ ಅಲ್ಲಿ ಹಲವು ವರ್ಷಗಳು ಇಡೀ ತಂಡ ಒಟ್ಟಿಗೇ ಕೆಲಸ ಮಾಡುವ ಕಾರಣ, ಮನೆಮಂದಿಗಿಂತಲೂ ಹೆಚ್ಚಾಗಿ ಅವರೇ ಆತ್ಮೀಯರಾಗಿರುತ್ತಾರೆ. ಆದ್ದರಿಂದ ಆ ಸೀರಿಯಲ್ ಮುಗಿಯುವ ವೇಳೆ ಅಥವಾ ಸೀರಿಯಲ್ ಅನ್ನು ಯಾರಾದರೂ ಬಿಟ್ಟು ಹೋದರೆ ಅಲ್ಲೊಂದು ಭಾವನಾತ್ಮಕ ನೋವು ಇದ್ದೇ ಇರುತ್ತದೆ. ಅದರಲ್ಲಿಯೂ ಲೀಡ್ ರೋಲ್ನಲ್ಲಿ ಇರುವವರು ಸೀರಿಯಲ್ ಬಿಟ್ಟು ಹೋಗುವಾಗ ಉಳಿದವರಿಗೆ ಮನಸ್ಸಿಗೆ ನೋವಾಗುವುದು ಸಹಜ. ಅದೇ ರೀತಿ ಬಂಗಾರಮ್ಮನ ಪಾತ್ರಧಾರಿಯಾಗಿರುವ ಮಂಜು ಭಾಷಿಣಿ (Bigg Boss Manju Bhashini) ಅವರು, ಸೀರಿಯಲ್ ಬಿಟ್ಟು ಹೋಗುವಾಗಲೂ ಸೀರಿಯಲ್ ತಂಡ ಭಾವುಕವಾಗಿತ್ತು.
ಕೊನೆಯ ದಿನದ ಶೂಟಿಂಗ್
ಮಂಜು ಭಾಷಿಣಿ ಅವರ ಕೊನೆಯ ದಿನದ ಶೂಟಿಂಗ್ ಹೇಗಿತ್ತು ಎನ್ನುವುದನ್ನು ಡಿವಿಡ್ರೀಮ್ಸ್ ಚಾನೆಲ್ನಲ್ಲಿ ಶೇರ್ ಮಾಡಲಾಗಿದೆ. ಬಂಗಾರಮ್ಮನಿಗೆ ಅಪಘಾತ ಮಾಡಲಾಗಿದೆ. ಆಕೆ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಳು. ಅಲ್ಲಿಯವರೆಗೆ ಮಂಜು ಭಾಷಿಣಿ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ತಲೆಗೆ ಕಟ್ಟಿರೋ ಬ್ಯಾಂಡೇಜ್ ತೆಗೆದು ಅವರು ಸೀರಿಯಲ್ ತಂಡದಿಂದ ಹೊರಕ್ಕೆ ಹೋಗುತ್ತಿರುವುದಾಗಿ ನುಡಿದಿದ್ದಾರೆ. ಇದು ಪುಟ್ಟಕ್ಕನ ಮಕ್ಕಳುವಿನಲ್ಲಿ ನನ್ನ ಕೊನೆಯ ದಿನ. ಎಲ್ಲರಿಗೂ ಥ್ಯಾಂಕ್ಸ್ ಎಂದಿದ್ದಾರೆ. ಅವರಿಗೆ ಬಿಗ್ಬಾಸ್ನಂಥ ವೇದಿಕೆ ಸಿಕ್ಕಿರುವುದಕ್ಕೆ ಆಗ ತುಂಬಾ ಖುಷಿಯಲ್ಲಿ ಇದ್ದರೂ, ಸೀರಿಯಲ್ ಬಿಟ್ಟು ಹೋಗುವ ಬಗ್ಗೆ ತುಸು ನೋವು ಇರುವುದನ್ನೂ ಇಲ್ಲಿ ನೋಡಬಹುದು.
ಉಮಾಶ್ರೀ ಕಣ್ಣೀರು
ಆದರೆ, ಅದೇ ಇನ್ನೊಂದೆಡೆ ಪುಟ್ಟಕ್ಕ ಅರ್ಥಾತ್ ನಟಿ ಉಮಾಶ್ರೀ ಮಾತ್ರ ಭಾವುಕರಾಗಿದ್ದರು. ಮಂಜು ಭಾಷಿಣಿ ಅವರು ಸೀರಿಯಲ್ ಬಿಟ್ಟು ಹೋಗುತ್ತಿರುವುದು ಅವರಿಗೆ ತುಂಬಾ ನೋವು ಉಂಟು ಮಾಡಿತ್ತು ಎನ್ನುವುದನ್ನು ನೋಡಬಹುದು. ಅವರು ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು. ಮಂಜು ಭಾಷಿಣಿ ಅವರು ಉಮಾಶ್ರೀ ಅವರಿಗೆ ಸಮಾಧಾನ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.



