ಬಿಗ್‌ಬಾಸ್ ಗೆದ್ದ ಬಳಿಕ ಸಂದರ್ಶನವೊಂದರಲ್ಲಿ ಬ್ಯುಸಿಯಾಗಿದ್ದ 'ಗಿಲ್ಲಿ' ನಟ, ಆಂಕರ್ ಅನುಶ್ರೀ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರೆ. ತಮ್ಮನ್ನು ಮದುವೆಗೆ ಆಹ್ವಾನಿಸದಿದ್ದಕ್ಕೆ ತಮಾಷೆಯಾಗಿ ಕಾಲೆಳೆದ ಅವರು, ಮುಂದೆ 'ಸೀಮಂತ'ಕ್ಕೆ ಕರೆಯುತ್ತೀರಾ ಎಂದು ಕೇಳಿ ನಗಿಸಿದ್ದಾರೆ.
ಬಿಗ್‌ಬಾಸ್ ಗೆದ್ದ ಬಳಿಕ ಗಿಲ್ಲಿ ನಟನಿಗೆ ಪುರುಸೊತ್ತೇ ಇಲ್ಲ. ದಿನವೂ ಸಾಲು ಸಾಲು ಸಂದರ್ಶನಗಳನ್ನು ನೀಡೋದ್ರಲ್ಲೆ ಬ್ಯೂಸಿಯಾಗಿದ್ದಾರೆ. ಎಷ್ಟೇ ಬ್ಯುಸಿ ಸಂದರ್ಶನ ನೀಡುವ ಸಮಯದಲ್ಲೂ ತಮ್ಮ ಮಾತಿನ ಮೇಲೆ ಬಹಳ ಎಚ್ಚರಿಕೆ ವಹಿಸಿದ್ದರೆ. ಸಿಕ್ಕ ಜನರ ಅಭಿಮಾನವನ್ನು ಕಾಪಾಡಿಕೊಂಡು ಹೋಗುವುದೇ ಮುಂದೆ ತಮಗಿರುವ ಸವಾಲು ಎಂದು ಗಿಲ್ಲಿ ಪ್ರತಿಬಾರಿಯೂ ಹೇಳಿಕೊಂಡಿದ್ದಾರೆ. ಇನ್ನೊಂದು ಕಡೆ ಗಿಲ್ಲಿ ನಟನನ್ನು ಮೆಚ್ಚಿಕೊಳ್ಳುವ ಭರದಲ್ಲಿ ಕೆಲವೊಬ್ಬರು ಆತನ್ನು ಹಿರಿಯ ನಟರಿಗೆ ಹೋಲಿಕೆ ಮಾಡಿ ಮಾತನಾಡುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿ ದಾಖಲಾಗಿದ್ದು, ಅದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಆದರೆ, ಗಿಲ್ಲಿ ಎಲ್ಲಿಯೂ ಕೂಡ ತಮ್ಮನ್ನು ಯಾವುದೇ ನಟನಿಗೆ ಹೋಲಿಸಿಕೊಳ್ಳುವ ಗೋಜಿಗೆ ಹೋಗಿಲ್ಲ. ಬಿಗ್‌ಬಾಸ್ ಗೆದ್ದ ಮರುದಿನ ಹುಟ್ಟೂರು ಮಳವಳ್ಳಿಗೆ ಹೋಗಿದ್ದ ಆತ ನಂತರ ಹಿರಿಯ ನಟ ಹಾಗೂ ರಾಜಕಾರಣಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಸಾಗುವ ಹಾದಿಯ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ.
ಇಷ್ಟೆಲ್ಲದರ ನಡುವೆ ಗಿಲ್ಲಿಯ ತಮಾಷೆಯ ಮಾತುಗಳು ಮರೆಯಾದಂತೆ ಕಂಡಿದ್ದವು. ಆದರೆ, ಖಾಸಗಿ ಟಿವಿ ನಡೆಸಿದ ಸಂದರ್ಶನದಲ್ಲಿ ತಮ್ಮ ಫನ್ನಿ ಫೇಸ್‌ಅನ್ನು ಅವರು ಆಂಕರ್ ಅನುಶ್ರೀಗೆ ಬಹಿರಂಗ ಮಾಡಿದ್ದಾರೆ. ಆಂಕರ್ ಅನುಶ್ರೀ ಹಾಗೂ ಗಿಲ್ಲಿ ನಟ ಜೀ ಕನ್ನಡದ ಕಾರ್ಯಕ್ರಮಗಳಿಂದ ಪರಿಚಿತರು. 'ಅಕ್ಕ..' ಎಂದೇ ಅನುಶ್ರೀಯನ್ನು ಕರೆಯುವ ಗಿಲ್ಲಿ ನಟ, ತಮ್ಮನ್ನು ಮದುವೆಗೆ ಆಹ್ವಾನಿಸದೇ ಇರೋದರ ಬಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ಗಂಡನ ಜೊತೆ ಫಾರಿನ್ ಟ್ರಿಪ್‌ನಲ್ಲಿರುವ ಅನುಶ್ರೀಯೊಂದಿಗೆ ಗಿಲ್ಲಿ ಫೋನ್‌ನಲ್ಲಿಯೇ ಕಾಲೆಳೆದಿರುವ ವಿಡಿಯೋ ವೈರಲ್ ಆಗಿದೆ.
'ಮೊದ್ಲಿಗೆ ಕಂಗ್ರಾಟ್ಸ್ ಅಕ್ಕ. ಮದುವೆ ಆಗಿರೋದಕ್ಕೆ. ಆದ್ರೂ ನೀವು ಮದುವೆಗೆ ನನ್ನ ಕರೆಯಲೇ ಇಲ್ಲ. ನೆಕ್ಸ್ಟ್ ಯಾರಾದ್ರೂ ಫೋನ್ ಮಾಡಿ ಕೇಳ್ತಾರೆ ಅಂತಾನೇ, ಮೊದಲಿಗೆ ಪ್ರೆಸ್ ಮೀಟ್‌ನಲ್ಲೇ ನಾವು ಮದುವೆಯನ್ನ ಬಹಳ ಸಿಂಪಲ್ ಆಗಿ ಮಾಡಿಕೊಂಡ್ವಿ ಅಂತಾ ಹೇಳಿದ್ರಿ. 50-100 ಜನ ಸೇರಿಸ್ಕೊಂಡು ಮದುವೆ ಮಾಡಿಕೊಂಡೆವು ಅಂದ್ರಿ. ನಾನ್ ಆ ವಿಡಿಯೋ ನೋಡಿ ನಿಮಗೆ ಫೋನ್ ಮಾಡೋಕೆ ಹೋಗ್ಲಿಲ್ಲ. ಓಹ್..ಪಾಪ ಸಿಂಪಲ್ ಆಗಿ ಮದುವೆ ಮಾಡ್ಕೊಂಡಿದ್ದಾರೆ. ಸರಳ ವಿವಾಹ ಅನ್ಸುತ್ತೆ ಅದಕ್ಕೆ ನನ್ನ ಕರೀಲಿಲ್ಲ ಅಂದ್ಕೊಂಡೆ. ನಮಗೆ ಪಾಪ ಅನಿಸಿಬಿಡ್ತು' ಎಂದು ಕಾಲೆಳೆದಿದ್ದಾರೆ.
ಅದಕ್ಕೆ ಅನುಶ್ರೀ, 'ಲೇಯ್ ಸುಮ್ನೆ ಇರೋ.. ಮದುವೆಗೆ ಕರೀಲಿಲ್ಲ ಅಂದ್ರೆ ಏನೋ, ನೆಕ್ಸ್ಟ್ ಎಲ್ಲಾದಕ್ಕೂ ಕರೀತಿನಿ' ಎಂದಾಗ, 'ಹಂಗಾದ್ರೆ ಸೀಮಂತಕ್ಕೆ ಕರೀತೀರಾ ಅಕ್ಕಾ..' ಎಂದು ಕೇಳಿದ್ದಾರೆ. 'ಸುಮ್ನೆ ಇರೋ..ಅನುಶ್ರೀ ಮದ್ವೆ ಯಾವಾಗ ಅಂತಾ ಐದು ವರ್ಷ ಅದೇ ಹೇಳತಿದ್ರಿ. ಈಗ ಅನುಶ್ರೀಗೆ ಮಗು ಯಾವಾಗ ಅಂತಾ ಕೇಳೋಕೆ ಶುರು ಮಾಡ್ತಾರೆ..' ಎಂದು ಅನುಶ್ರೀ ಹೇಳಿದಾಗ, ಆದಷ್ಟು ಬೇಗ ಆಗ್ಲಿ ಅಂತಾ ಗಿಲ್ಲಿ ಉತ್ತರ ನೀಡಿದ್ದಾರೆ.
ಕತಾರ್‌ನಲ್ಲಿರುವ ಆಂಕರ್ ಅನುಶ್ರೀ
ಕೊನೆಗೆ ಅನುಶ್ರೀ ಅವರ ಗಂಡನ ಬಗ್ಗೆ ಕೇಳುವ ಗಿಲ್ಲಿ, 'ನಾವು ತುಳು ಕೂಟದ ಕಾರ್ಯಕ್ರಮಕ್ಕಾಗಿ ಕತಾರ್‌ಗೆ ಬಂದಿದ್ದೇವೆ. ಅಲ್ಲಿಗೆ ಹೋಗಲು ರೆಡಿಯಾಗ್ತಿದ್ದೇವೆ ಎಂದಿದ್ದು, ಶೀಘ್ರದಲ್ಲೇ ಭೇಟಿಯಾಗುತ್ತೇನೆ..' ಎಂದು ಅನುಶ್ರೀ ಹೇಳಿದ್ದಾರೆ.


