ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟರಾಜ್ ಕುರಿತು 'ಬಡವರ ಮಕ್ಕಳು ಬೆಳಿಬೇಕು' ಎಂದು ಹಾಕಿದ್ದ ಪೋಸ್ಟ್, ಸ್ಪರ್ಧಿ ಅಶ್ವಿನಿಗೆ ನೀಡಿದ ಟಾಂಗ್ ಎಂಬ ಚರ್ಚೆಗೆ ನಟಿ ಕಾವ್ಯಾ ಶೈವ ಸ್ಪಷ್ಟನೆ ನೀಡಿದ್ದಾರೆ. ಆ ಪೋಸ್ಟ್ ಯಾರನ್ನೂ ಉದ್ದೇಶಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರು (ಜ.20): ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಅಭಿನಂದಿಸಿ ಸ್ನೇಹಿತೆ ಕಾವ್ಯಾ ಶೈವ ಹಾಕಿದ ಪೋಸ್ಟ್ ಸಖತ್ ವೈರಲ್ ಆಗಿತ್ತು. ಆರಂಭದಲ್ಲಿ ಗಿಲ್ಲಿ ನಟನ ಗೆಲುವಿನ ಬಗ್ಗೆ ಸಂಭ್ರಮಿಸಿದ್ದ ಸ್ಪರ್ಧಿ ಅಶ್ವಿನಿ ಗೌಡ, ಕೊನೆಗೆ ಒಂದು ಸಂದರ್ಶನದಲ್ಲಿ ಗಿಲ್ಲಿ ಬಡವನ ರೀತಿ ನಟನೆ ಮಾಡಿ ಗೆದ್ದಿದ್ದಾನೆ. ಆದರೆ ಆತ ಬಡವ ಅಲ್ಲ ಎಂದಿದ್ದರು. ಇದರ ಬೆನ್ನಲ್ಲಿಯೇ ಗಿಲ್ಲಿಯ ಜೊತೆ ಬಿಗ್‌ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹ ಹೊಂದಿದ್ದ ಕಾವ್ಯಾ, ಗಿಲ್ಲಿಗೆ ಅಭಿನಂದಿಸುವ ಪೋಸ್ಟ್‌ನಲ್ಲಿ 'ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ..' ಎನ್ನುವ ಸಾಲು ಬರೆದಿದ್ದರು. ಇದನ್ನು ನೋಡಿದ ಹೆಚ್ಚಿನವರು ಇದು ಅಶ್ವಿನಿ ಗೌಡಗೆ ಕಾವ್ಯಾ ಶೈವ ನೀಡಿದ ಟಾಂಗ್ ಎಂದೇ ಹೇಳಿದ್ದರು. ಈ ಬಗ್ಗೆ ಸ್ವತಃ ಕಾವ್ಯಾ ಅವರೇ ಈಗ ಸ್ಪಷ್ಟನೆ ನೀಡಿದ್ದು, ಇದು ಯಾರನ್ನೇ ಉದ್ದೇಶಿಸಿ ಬರೆದ ಪೋಸ್ಟ್ ಅಲ್ಲ ಎಂದಿದ್ದಾರೆ.
ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟರಾಜ್ ಅವರ ಬಡತನ ಮತ್ತು ಶ್ರೀಮಂತಿಕೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಈ ನಡುವೆ ಗಿಲ್ಲಿ ಕುರಿತು ಹಾಕಲಾಗಿದ್ದ ಕಾವ್ಯಾ ಅವರ ಪೋಸ್ಟ್, ಬೇರೆ ಸ್ಪರ್ಧಿಗಳಿಗೆ ನೀಡಿದ 'ಟಾಂಗ್' ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಈ ಎಲ್ಲಾ ಗೊಂದಲಗಳಿಗೆ ಸ್ವತಃ ಅವರಿಂದಲೇ ಸ್ಪಷ್ಟನೆ ಸಿಕ್ಕಿದೆ.
"ಗಿಲ್ಲಿ ಬಡವನೋ ಅಥವಾ ಶ್ರೀಮಂತನೋ ಎಂಬ ಚರ್ಚೆಗಿಂತ ಹೆಚ್ಚಾಗಿ, ಅವನ ಜರ್ನಿಯನ್ನು ನೋಡಬೇಕು. ಆತ ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ತನ್ನ ಕಷ್ಟದ ದಿನಗಳ ಬಗ್ಗೆ ಹಂಚಿಕೊಂಡಿದ್ದ. ಅವನು ಖಂಡಿತವಾಗಿಯೂ 'ಗೋಲ್ಡನ್ ಸ್ಪೂನ್' ಅಥವಾ 'ಸಿಲ್ವರ್ ಸ್ಪೂನ್' ಹಿಡಿದು ಹುಟ್ಟಿದವನಲ್ಲ. ಅವನು ಒಂದು ಪಕ್ಕಾ ಮಧ್ಯಮ ವರ್ಗದ ಕುಟುಂಬದಿಂದ ಬಂದ ಹುಡುಗ" ಎಂದು ಕಾವ್ಯಾ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ನಟಿ ಕಾವ್ಯಾ ಶೈವ ಅವರ ಪೋಸ್ಟ್
ಗಿಲ್ಲಿ ನಿರ್ದೇಶಕನಾಗಬೇಕು ಎನ್ನುವುದು ನನ್ನ ಆಸೆ: ಕಾವ್ಯಾ
ಸೋಷಿಯಲ್ ಮೀಡಿಯಾದಲ್ಲಿ ಹಾಕಲಾದ ಪೋಸ್ಟ್ ಬಗ್ಗೆ ಮಾತನಾಡಿದ ಅವರು, "ನಾನು ಆ ಪೋಸ್ಟ್ ಹಾಕಿದಾಗ ಅದು ಯಾರಿಗೋ ಕೊಟ್ಟ ಟಾಂಗ್ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಸತ್ಯ ಏನೆಂದರೆ, ನಾನು ಯಾರ ಇಂಟರ್ವ್ಯೂ ಅನ್ನೂ ನೋಡಿರಲಿಲ್ಲ. ಅವನ ಜೀವನದ ಜರ್ನಿ ಕೇಳಿದಾಗ ನನಗೆ ಮೊದಲು ಬಂದ ಆಲೋಚನೆಯೇ ಆ ಸಾಲುಗಳಾಗಿದ್ದವು. ನನಗೆ ಇಷ್ಟವಾದ ಸಾಲುಗಳನ್ನು ಬರೆದೆನೇ ಹೊರತು, ಅದು ಯಾರಿಗೂ ನೀಡಿದ ತಿರುಗೇಟಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಗಿಲ್ಲಿ ಕೇವಲ ನಟನಾಗಿ ಉಳಿಯಲು ಇಷ್ಟಪಟ್ಟಿಲ್ಲ. ಅವರಿಗೆ ನಿರ್ದೇಶನ ಮಾಡಬೇಕೆಂಬ ದೊಡ್ಡ ಆಸೆಯಿದೆ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲೂ ಆತ ಹಂಚಿಕೊಂಡಿದ್ದ. "ಗಿಲ್ಲಿಗೆ ಅದ್ಭುತವಾದ ಕಲ್ಪನೆಗಳಿವೆ. ಅವನು ಆದಷ್ಟು ಬೇಗ 'ಆಕ್ಷನ್ ಕಟ್' ಹೇಳುವಂತಾಗಲಿ ಎಂಬುದು ನನ್ನ ಆಸೆ.ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನಟನೆಯ ಜೊತೆಗೆ ನಿರ್ದೇಶನದ ಕಡೆಗೂ ಗಮನ ಹರಿಸು ಎಂದು ನಾನು ಅವನಿಗೆ ಹಲವು ಬಾರಿ ಹೇಳಿದ್ದೆ. ಈಗ ಅದೇ ದಾರಿಯಲ್ಲಿ ಅವನು ಸಾಗಲಿ ಎನ್ನುವುದೇ ನನ್ನ ಹಾರೈಕೆ" ಎಂದು ಅವರು ಹೇಳಿದ್ದಾರೆ.


