ತೆಲಂಗಾಣದ ಫೋಕ್ ಡಾನ್ಸರ್ ಮಾಧುರಿ ರಾಥೋಡ್, ನಟ ಈಶ್ವರ್ ಸಾಯಿ ಜೊತೆಗಿನ ಅಕ್ರಮ ಸಂಬಂಧದ ವಿವಾದದಿಂದ ಸುದ್ದಿಯಲ್ಲಿದ್ದಾರೆ. ಟಿವಿ ನೋಡಿ ಡ್ಯಾನ್ಸ್ ಕಲಿತು ಸೋಶಿಯಲ್ ಮೀಡಿಯಾ ಸ್ಟಾರ್ ಆದ ಅವರ ಪಯಣ, ಯಶಸ್ಸು ಮತ್ತು ವಿವಾದದ ಕುರಿತು ಈ ಲೇಖನ ಬೆಳಕು ಚೆಲ್ಲುತ್ತದೆ.
ಬೆಂಗಳೂರು (ಆ.21): ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ತೆಲಂಗಾಣದ ಫೋಕ್ ಡಾನ್ಸರ್ ಮಾಧುರಿ ರಾಥೋಡ್ ಹಾಗೂ ನಟ ಈಶ್ವರ್ ಸಾಯಿ ಅಕ್ರಮ ಸಂಬಂಧವನ್ನು ಈಶ್ವರ್ ಸಾಯಿ ಪತ್ನಿ ರೆಡ್‌ಹ್ಯಾಂಡ್ ಆಗಿ ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಈಶ್ವರ್ ಸಾಯಿ ಹಾಗೂ ಮಾಧುರಿ ರಾಥೋಡ್ ನಡುವಿನ ಕೆಮಿಸ್ಟ್ರಿ ಹೇಗಿತ್ತು ಅನ್ನೋದನ್ನು ತೋರಿಸುವ ಸಾಕಷ್ಟು ಹಾಡುಗಳು ವೈರಲ್ ಆಗುತ್ತಿವೆ. ಇಂತಹ ಹಿಟ್ ಫೋಕ್ ಸಾಂಗ್ಸ್‌ಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದವರಲ್ಲಿ ಡ್ಯಾನ್ಸರ್ ಮಾಧುರಿ ರಾಥೋಡ್ (Madhuri Rathod) ಪ್ರಮುಖರು. ತಮ್ಮ ವೈಯಕ್ತಿಕ ಜೀವನದ ವಿವಾದಗಳಿಂದ ಸುದ್ದಿಯಲ್ಲಿರುವ ಮಾಧುರಿ, ತಮ್ಮ ನೃತ್ಯದ ಪಯಣ, ಬಾಲ್ಯದ ಹಾದಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸಿಕ್ಕ ಯಶಸ್ಸಿನ ಬಗ್ಗೆ ಈ ಹಿಂದೆ ಹಂಚಿಕೊಂಡಿದ್ದ ವಿಡಿಯೋಗಳು ವೈರಲ್ ಆಗಿವೆ.
ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್‌ಗಟ್ಟಲೆ ವೀಕ್ಷಣೆ (Views) ಪಡೆಯುವ ಮಾಧುರಿ, ತಮ್ಮ ಅದ್ಭುತ ಡ್ಯಾನ್ಸ್ ಮತ್ತು ಎಕ್ಸ್‌ಪ್ರೆಶನ್‌ಗಳ ಮೂಲಕ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಸಂಪಾದಿಸಿದ್ದಾರೆ.
ಟಿವಿಯಲ್ಲಿ ನಟ-ನಟಿಯರನ್ನು ನೋಡಿ ಕಲಿತ ಡ್ಯಾನ್ಸ್
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಮಾಧುರಿ, ನಾವು ಒಟ್ಟು ಏಳು ಜನ ಒಡಹುಟ್ಟಿದವರು, ನಾನು ಐದನೆಯವಳು. ನನ್ನ ತಾಯಿ ನನ್ನ ಮೂವರು ಸಹೋದರಿಯರನ್ನು ಡ್ಯಾನ್ಸ್ ಕ್ಲಾಸ್‌ಗೆ ಕಳುಹಿಸುತ್ತಿದ್ದರು, ಆದರೆ ನನ್ನನ್ನು ಕಳುಹಿಸಲಿಲ್ಲ. ಆದರೂ ನನಗೆ ನೃತ್ಯದ ಮೇಲಿದ್ದ ಅಪಾರ ಒಲವು ನನ್ನನ್ನು ತಡೆಯಲಿಲ್ಲ. ಟಿವಿಯಲ್ಲಿ ನಟ-ನಟಿಯರು ಮಾಡುವುದನ್ನು ನೋಡಿ ಅವರ ಸ್ಟೆಪ್ಸ್ ಮತ್ತು ಎಕ್ಸ್‌ಪ್ರೆಶನ್‌ಗಳನ್ನು ಕಾಪಿ ಮಾಡುತ್ತಾ ಸ್ವಂತವಾಗಿ ಡ್ಯಾನ್ಸ್ ಕಲಿತೆ ಎಂದು ಹೇಳಿಕೊಂಡಿದ್ದರು.
ಅವರ ಸೋಶಿಯಲ್ ಮೀಡಿಯಾ ಪಯಣ ಶುರುವಾಗಿದ್ದು ಬಿ.ಟೆಕ್ (B.Tech) ಅಂತಿಮ ವರ್ಷದಲ್ಲಿದ್ದಾಗ. ಕಾಲೇಜು ಫಂಕ್ಷನ್‌ಗಳಲ್ಲಿ ಮಾಧುರಿ ಡ್ಯಾನ್ಸ್ ಮಾಡುವುದನ್ನು ನೋಡಿದ ಸ್ನೇಹಿತರು ಟಿಕ್‌ಟಾಕ್ (TikTok) ಆ್ಯಪ್ ಬಳಸಲು ಸಲಹೆ ನೀಡಿದ್ದರು. ಆರಂಭದಲ್ಲಿ ಡೈಲಾಗ್‌ಗಳನ್ನು ಮಾಡುತ್ತಿದ್ದ ಮಾಧುರಿ, ಒಮ್ಮೆ ಜಾನಪದ ಹಾಡೊಂದಕ್ಕೆ ಡ್ಯಾನ್ಸ್ ಮಾಡಿ ವಿಡಿಯೋ ಹಂಚಿಕೊಂಡಾಗ ಅದು ಭಾರಿ ವೈರಲ್ ಆಯ್ತು. ಅಂದಿನಿಂದ ಜನರು ಅವರನ್ನು ಜಾನಪದ ಹಾಡಿನ ಡ್ಯಾನ್ಸರ್ ಎಂದೇ ಗುರುತಿಸಲು ಪ್ರಾರಂಭಿಸಿದರು.
"ಹಳೆಯ ಹಾಡುಗಳೂ ಟ್ರೆಂಡ್ ಆಗ್ತವೆ ಎಂದು ಸಾಬೀತುಮಾಡಬೇಕಿತ್ತು"
ಟಿಕ್‌ಟಾಕ್ ಬ್ಯಾನ್ ಆದ ನಂತರ ಮಾಧುರಿ ಇನ್‌ಸ್ಟಾಗ್ರಾಮ್‌ಗೆ ಕಾಲಿಟ್ಟರು. ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಮಾಸ್ ಬೀಟ್ ಇರುವ ಹಾಡುಗಳನ್ನು, ಅದರಲ್ಲೂ ವಿಶೇಷವಾಗಿ ಹಳೆಯ ಪ್ರಸಿದ್ಧ ಹಾಡುಗಳನ್ನು ಆಯ್ಕೆ ಮಾಡಿಕೊಂಡು ಡ್ಯಾನ್ಸ್ ವಿಡಿಯೋಗಳನ್ನು ಮಾಡಲು ಶುರು ಮಾಡಿದರು. "ಹಳೆಯ ಹಾಡುಗಳನ್ನು ಸರಿಯಾಗಿ ಪ್ರಸ್ತುತಪಡಿಸಿದರೆ ಅವುಗಳೂ ಇಂದಿನ ಟ್ರೆಂಡ್‌ಗೆ ತಕ್ಕಂತೆ ವೈರಲ್ ಆಗುತ್ತವೆ ಎಂಬುದನ್ನು ನಿರೂಪಿಸುವುದು ನನ್ನ ಉದ್ದೇಶವಾಗಿತ್ತು" ಎಂದು ಅವರು ಹೇಳಿದ್ದರು.
ರಾಮ್ ಚರಣ್ ಜೊತೆ ಡಿನ್ನರ್ ಮತ್ತು ವೆಬ್ ಸಿರೀಸ್ ನಟನೆ
ಮಾಧುರಿಗೆ ನಟನೆಯಲ್ಲೂ ಅಪಾರ ಆಸಕ್ತಿಯಿದ್ದು, ಉತ್ತಮ ವೆಬ್ ಸಿರೀಸ್ ಅಥವಾ ಆಫರ್‌ಗಳು ಬಂದರೆ ಖಂಡಿತ ನಟಿಸುವುದಾಗಿ ಹೇಳಿದ್ದರು ಪ್ರಸಿದ್ಧ 'ಸತ್ಯಭಾಮಾ' ವೆಬ್ ಸಿರೀಸ್‌ನ ಒಂದು ಸಂಚಿಕೆ, ಶ್ವೇತಾ ನಾಯ್ಡು ಮತ್ತು ಮೆಹಬೂಬ್ ದಿಲ್ಸೇ ಅವರೊಂದಿಗೆ ಕವರ್ ಸಾಂಗ್ಸ್‌ಗಳು, ಶಾರ್ಟ್ ಫಿಲ್ಮ್‌ಗಳು ಹಾಗೂ 'ಲಕ್ಕಿ ಚಾನ್ಸ್' ಎಂಬ ಗೇಮ್ ಶೋನಲ್ಲಿ ಭಾಗವಹಿಸಿದ್ದಾರೆ. ಈ ಪ್ರಾಜೆಕ್ಟ್‌ಗಳಿಗೆ ಹೇಗೆ ಫಂಡಿಂಗ್ ಬರುತ್ತದೆ ಎಂದು ವಿವರಿಸಿದ ಅವರು, ಕೆಲವು ಬಾರಿ ಫ್ಯಾಷನ್ ಬೋಟಿಕ್‌ಗಳಿಂದ ಬಟ್ಟೆಗಳ ಸ್ಪಾನ್ಸರ್‌ಶಿಪ್ ಸಿಗುತ್ತದೆ, ಇನ್ನು ಕೆಲವೊಮ್ಮೆ ನೇರ ಪಾವತಿ (Payments) ಇರುತ್ತದೆ ಎಂದಿದ್ದಾರೆ.
'ಆರ್‌ಆರ್‌ಆರ್' (RRR) ಸಿನಿಮಾದ ಪ್ರಚಾರದ ವೇಳೆ ಮುಂಬೈನಲ್ಲಿ ನಟ ರಾಮ್ ಚರಣ್ ಜೊತೆ ಡಿನ್ನರ್ ಮಾಡಿದ ಅನುಭವ ಹಂಚಿಕೊಂಡ ಅವರು, "ರಾಮ್ ಚರಣ್ ಅವರಿಗೆ ಯಾವುದೇ ಅಹಂ (Zero Attitude) ಇಲ್ಲ, ಅತ್ಯಂತ ಸಿಂಪಲ್ ಆಗಿ ಮಾತನಾಡುತ್ತಾರೆ" ಎಂದಿದ್ದಾರೆ.
ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಷಣ್ಮುಖ್ ಜಸ್ವಂತ್ ಅವರನ್ನು ಆದರ್ಶವಾಗಿಟ್ಟುಕೊಂಡು ನಿಂತಿರುವ ಮಾಧುರಿ, ಚಿತ್ರರಂಗದಲ್ಲಿ ನಟನಾ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದು ತಮ್ಮದೇ ಆದ ಸ್ವಂತ ಬ್ರ್ಯಾಂಡ್ ರೂಪಿಸಿಕೊಳ್ಳುವ ಕನಸು ಹೊಂದಿದ್ದರು.


