Spandana Somanna: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಸ್ಪಂದನ ಸೋಮಣ್ಣ ಅವರ ಅರಿಶಿನ ಶಾಸ್ತ್ರದ ಫೋಟೋಗಳು ಗಮನ ಸೆಳೆಯುತ್ತಿರುವ ಬೆನ್ನಲ್ಲೇ, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಆಡಿದ್ದ ಹಳೆಯ ತಮಾಷೆಯ ಮಾತೊಂದು ಈಗ ಮತ್ತೆ ಸದ್ದು ಮಾಡುತ್ತಿದೆ! ಗಿಲ್ಲಿ ಅಂದು ಹೇಳಿದ್ದೇನು, ಈಗ ವೈರಲ್ ಆಗುತ್ತಿರುವ ಆ ಕೊಲಾಜ್ ವಿಡಿಯೋದಲ್ಲೇನಿದೆ? ಇಲ್ಲಿದೆ ಪೂರ್ಣ ವಿವರ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಮಾಜಿ ಸ್ಪರ್ಧಿ ಸ್ಪಂದನ ಸೋಮಣ್ಣ ಅವರ ನಿಶ್ಚಿತಾರ್ಥ (ಎಂಗೇಜ್ಮೆಂಟ್) ಕಳೆದ ತಿಂಗಳು ನೆರವೇರಿದ್ದು, ಇದೀಗ ಅವರ ಮದುವೆ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ. ಇದೇ ಖುಷಿಯ ನಡುವೆ, ಬಿಗ್ ಬಾಸ್ ಮನೆಯಲ್ಲಿದ್ದಾಗ ಸಹಸ್ಪರ್ಧಿ ಗಿಲ್ಲಿ ಹಾಗೂ ಸ್ಪಂದನ ನಡುವೆ ನಡೆದಿದ್ದ ಹಳೆಯ ತಮಾಷೆಯ ದೃಶ್ಯವೊಂದು ಇದೀಗ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ!

ಅಷ್ಟಕ್ಕೂ ವೈರಲ್ ಆಗುತ್ತಿರುವ ಆ ದೃಶ್ಯದಲ್ಲೇನಿದೆ?

ಬಿಗ್ ಬಾಸ್ ಸೀಸನ್ 12ರಲ್ಲಿ ಗಿಲ್ಲಿ ಮತ್ತು ಸ್ಪಂದನ ಅವರ ಸ್ನೇಹ ಹಾಗೂ ತಮಾಷೆಯ ಮಾತುಕತೆಗಳು ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದವು. ಗಿಲ್ಲಿ ಪ್ರೀತಿಯಿಂದ ಅವರನ್ನು ‘ಕಳ್ಳ ಪುಟ್ಟಿ’ ಎಂದು ರೇಗಿಸುತ್ತಿದ್ದ ರೀತಿ ಅಭಿಮಾನಿಗಳಿಗೆ ಅಚ್ಚುಮೆಚ್ಚಾಗಿತ್ತು. ಸೀಸನ್ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದು ದಿನ ಮನೆಯೊಳಗೆ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಗಿಲ್ಲಿ ಅವರು ಕಸ ಗುಡಿಸುತ್ತಿದ್ದರೆ, ಕ್ಯಾಪ್ಟನ್ ರೂಮ್ ಒಳಗೆ ಸ್ಪಂದನ ಸೋಮಣ್ಣ ಅವರು ಪುಟ್ಟದಾಗಿ ಕೂತು ನೆಲ ಗುಡಿಸುತ್ತಿದ್ದರು. ಅವರು ಕುಳಿತಿದ್ದ ಭಂಗಿಯನ್ನು ನೋಡಿ ಗಿಲ್ಲಿ ತಮಾಷೆಯಾಗಿ ಕಾಮೆಂಟ್ ಮಾಡಿದ್ದರು. "ಹೇ ಕಳ್ಳ ಪುಟ್ಟಿ ನೋಡಿ, ಯಾವ ರೀತಿ ಕೂತ್ಕೊಂಡು ಗುಡಿಸ್ತಾ ಇದ್ದಾಳೆ! ಮದುವೆ ಹೆಣ್ಣುಮಗಳು ಅರಿಶಿಣ ಶಾಸ್ತ್ರದಲ್ಲಿ ಕೂತಂತೆ ಕೂತ್ಕೊಂಡು ಗುಡಿಸ್ತಾ ಇದ್ದಾಳೆ, ಆದರೂ ಚೆನ್ನಾಗಿಯೇ ಗುಡಿಸ್ತಾ ಇದ್ದಾಳೆ" ಎಂದು ಗಿಲ್ಲಿ ಕಿಚಾಯಿಸಿದ್ದರು.

ಅರಿಶಿಣ ಶಾಸ್ತ್ರದ ಫೋಟೋ ಜೊತೆ ಕೊಲಾಜ್

ಇದೀಗ ಸ್ಪಂದನ ಸೋಮಣ್ಣ ಅವರ ನಿಶ್ಚಿತಾರ್ಥ ಹಾಗೂ ಅರಿಶಿಣ ಶಾಸ್ತ್ರದ ಫೋಟೋಗಳು ಹೊರಬರುತ್ತಿದ್ದಂತೆ, ನೆಟ್ಟಿಗರು ಆ ಹಳೆಯ ಬಿಗ್ ಬಾಸ್ ವಿಡಿಯೋವನ್ನು ಹುಡುಕಿ ತೆಗೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅಂದು ಆಡಿದ್ದ ಮಾತು ಹಾಗೂ ಇಂದು ನಿಜವಾಗಿಯೂ ಸ್ಪಂದನ ಅರಿಶಿಣ ಶಾಸ್ತ್ರದಲ್ಲಿ ಕುಳಿತಿರುವ ಫೋಟೋ – ಇವೆರಡನ್ನೂ ಸೇರಿಸಿ ಕೊಲಾಜ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಮನೆಯೊಳಗಿನ ಆ ಸರಳ ಹಾಗೂ ತಮಾಷೆಯ ಕ್ಷಣಕ್ಕೂ, ನಿಜಜೀವನದ ಅರಿಶಿಣ ಶಾಸ್ತ್ರದ ಸಂಭ್ರಮಕ್ಕೂ ಅದ್ಭುತವಾಗಿ ಲಿಂಕ್ ಮಾಡಿರುವ ಈ ಕೊಲಾಜ್ ನೋಡಿ ವೀಕ್ಷಕರು ನಗೆಗಡಲಲ್ಲಿ ತೇಲುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 12 ಮುಗಿದು ಸಾಕಷ್ಟು ಸಮಯ ಕಳೆದಿದ್ದರೂ, ಹಳೆಯ ಎಪಿಸೋಡ್‌ನ ಆ ಪುಟ್ಟ ದೃಶ್ಯವನ್ನು ನೆನಪಿಟ್ಟುಕೊಂಡು ಸ್ಪಂದನ ಅವರ ಅರಿಶಿಣ ಶಾಸ್ತ್ರದ ಫೋಟೋಗೆ ಸರಿಯಾಗಿ ಹೊಂದಿಸಿ ಕೊಲಾಜ್ ಮಾಡಿರುವ ಅಭಿಮಾನಿಗಳ ಕ್ರಿಯೇಟಿವಿಟಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಎಡಿಟರ್‌ಗಳ ಜಾಣ್ಮೆಗೆ ‘ಹ್ಯಾಟ್ಸ್ ಆಫ್’ ಎನ್ನುತ್ತಿದ್ದು, "ಗಿಲ್ಲಿ ಮಾತು ಪಕ್ಕಾ ನಿಜವಾಯ್ತು" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ, ಮದುವೆ ಸಂಭ್ರಮದಲ್ಲಿರುವ ಸ್ಪಂದನ ಸೋಮಣ್ಣ ಅವರ ಕ್ಯೂಟ್ ಜೋಡಿ ಹಾಗೂ ಸುಂದರ ಫೋಟೋಗಳಿಗೆ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

‘ಕರಿಮಣಿ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಸ್ಪಂದನ ಸೋಮಣ್ಣ

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಬರುವ ಮುನ್ನವೇ ಸ್ಪಂದನ ಸೋಮಣ್ಣ ಕಿರುತೆರೆ ಪ್ರೇಕ್ಷಕರಿಗೆ ಬಹಳ ಚಿರಪರಿಚಿತರಾಗಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ‘ಕರಿಮಣಿ’ (Karimani) ಧಾರಾವಾಹಿಯಲ್ಲಿ ‘ಸಾಹಿತ್ಯ’ ಎಂಬ ನಾಯಕಿ ಪಾತ್ರವನ್ನು ನಿರ್ವಹಿಸಿ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು. ತಮ್ಮ ಮುಗ್ಧ ನಟನೆ ಮತ್ತು ಸರಳ ವ್ಯಕ್ತಿತ್ವದಿಂದಲೇ ಕಿರುತೆರೆ ವೀಕ್ಷಕರ ಮನಗೆದ್ದಿದ್ದ ಅವರು, ಆ ಬಳಿಕ ಬಿಗ್ ಬಾಸ್ ಮನೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು.