Landlord Kannada Movie On Zee Kannada: ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಸಿನೆಮಾ ಈಗ ಟಿವಿಯಲ್ಲಿ ಪ್ರಸಾರ ಆಗಲಿದೆ. ಹಾಗಾದರೆ ಯಾವಾಗ ಈ ಸಿನಿಮಾ ಬರಲಿದೆ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಜೀ಼ ಕನ್ನಡ ವಾಹಿನಿ ಮತ್ತೊಮ್ಮೆ ತನ್ನ ಪ್ರೇಕ್ಷಕರಿಗೆ ಅದ್ಬುತ ಅನುಭವ ನೀಡಲು ಸಜ್ಜಾಗಿದ್ದು, ಇದೇ ಶನಿವಾರ ಸಂಜೆ 4 ಗಂಟೆಗೆ ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಸಿನೆಮಾವನ್ನು ( Landlord Kannada Movie ) ನಿಮಗಾಗಿ ಹೊತ್ತುತರುತ್ತಿದೆ.

1980 ರ ದಶಕದ ಹಳ್ಳಿಯೊಂದರಲ್ಲಿ ನಡೆಯುವ ಶಕ್ತಿಯುತ ಸಾಮಾಜಿಕ ಕಥಾಹಂದರದ ಸಿನಿಮಾವೇ 'ಲ್ಯಾಂಡ್ ಲಾರ್ಡ್'. ಈ ಸಿನೆಮಾವು ಆತ್ಮಗೌರವ, ದಬ್ಬಾಳಿಕೆ, ನ್ಯಾಯ, ಪ್ರತಿರೋಧದ ಹಾಗು ಮತ್ತಿತರ ಅಂಶಗಳಿಗೆ ಮಹತ್ತರವಾದ ಒತ್ತು ನೀಡಿದೆ. ಸಮಾಜದಲ್ಲಿನ ಜಾತಿ ತಾರತಮ್ಯ, ಅಸಮಾನತೆ ಮತ್ತು ಬಡವರ ಮೇಲಿನ ಸಿರಿವಂತರ ದಬ್ಬಾಳಿಕೆಯನ್ನು ಈ ಚಿತ್ರ ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ. ಸಾಮಾನ್ಯ ಜನರು ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಟ ಮಾಡಿದಾಗ ಏನಾಗುತ್ತದೆ ಎಂಬುದೇ ಈ ಚಿತ್ರದ ಜೀವಾಳವಾಗಿದ್ದು, ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡಲೇಬೇಕಾದ ಅತ್ಯುತ್ತಮ ಸಿನಿಮಾ ಇದಾಗಿದೆ.
ಈ ಸಿನಿಮಾ ಕತೆ ಏನು?
ಶಾಂತ ಜೀವನ ಬಯಸುವ ರಾಚಯ್ಯ(ದುನಿಯಾ ವಿಜಯ್) ತನ್ನ ಮಡದಿ ನಿಂಗವ್ವ (ರಚಿತಾರಾಮ್ ) ಮತ್ತು ಮಗಳು ಭಾಗ್ಯಾಳೊಂದಿಗೆ, ತಾನು ಹೆಮ್ಮೆಯಿಂದ ತನ್ನದೇ ಎಂದು ಕರೆಯಬಹುದಾದ ಒಂದು ಸಣ್ಣ ಜಮೀನನ್ನು ಹೊಂದುವ ಕನಸಿನೊಂದಿಗೆ ಬದುಕುತ್ತಿರುವವನಾಗಿದ್ದಾನೆ. ಆದರೆ, ಅವನ ಗ್ರಾಮವನ್ನು ಪ್ರಭಾವಶಾಲಿ ಜಮೀನುದಾರ ಸಣ್ಣ ಧಣಿ (ರಾಜ್ ಬಿ. ಶೆಟ್ಟಿ) ಆಳುತ್ತಿದ್ದು, ಅವನ ಪ್ರಭಾವ ಜಮೀನು ಮಾಲೀಕತ್ವ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯವರೆಗೂ ವಾಪಿಸಿರುತ್ತದೆ. ರಾಚಯ್ಯ ಕಾನೂನಿನ ಮೇಲೆ ಬಹಳ ನಂಬಿಕೆ ಇಟ್ಟು, ನ್ಯಾಯವು ಸಾಮಾನ್ಯ ಜನರನ್ನು ಕಾಪಾಡುತ್ತದೆ ಎಂದು ನಂಬಿದ್ದರೂ, ಧಣಿಯ ಆಡಳಿತದಡಿಯಲ್ಲಿ ಗ್ರಾಮಸ್ಥರು ಅನುಭವಿಸುವ ಶೋಷಣೆ, ಭಯ ಮತ್ತು ಹಿಂಸೆ ಆತನ ಗಮನಕ್ಕೆ ಬರುತ್ತದೆ.
ಯಾವಾಗ ಒಂದು ಮುಗ್ಧ ಕುಟುಂಬ ಅನ್ಯಾಯವಾಗಿ ಸಾವನ್ನಪ್ಪುತ್ತದೆಯೋ, ಆಗ ಗ್ರಾಮಸ್ಥರ ಆಕ್ರೋಶ ಸ್ಫೋಟಗೊಳ್ಳುತ್ತದೆ. ಶಾಂತ ಸ್ವಭಾವದ ರಾಚಯ್ಯ ಧಣಿಯ ಶೋಷಣೆ ನೋಡಲಾರದೆ ನಿಧಾನವಾಗಿ ಬದಲಾಗಿ ಇವೆಲ್ಲದರ ವಿರುದ್ಧ ಧ್ವನಿ ಎತ್ತುವ ನಾಯಕನಾಗಿ ಬದಲಾಗುತ್ತಾನೆ. ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಅವರ ನಟನೆ ಅದ್ಭುತವಾಗಿದ್ದು, ಕಥೆಗೆ ಜೀವ ತುಂಬಿದ್ದಾರೆ. ಇನ್ನು ಜಮೀನ್ದಾರ್ ಸಣ್ಣ ಧಣಿಯ ಪಾತ್ರದಲ್ಲಿ ಮಿಂಚಿದ ರಾಜ್ ಬಿ. ಶೆಟ್ಟಿ ತನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಾರೆ.
ರಾಚಯ್ಯ ಮತ್ತು ಗ್ರಾಮಸ್ಥರು ಸಣ್ಣಧಣಿಯ ದಬ್ಬಾಳಿಕೆಯ ವಿರುದ್ಧ ಹೋರಾಡುವಲ್ಲಿ ಯಶಸ್ವಿಯಾಗುತ್ತಾರೆಯೇ? ವೀಕ್ಷಿಸಿ 'ಲ್ಯಾಂಡ್‌ಲಾರ್ಡ್' ಇದೇ ಶನಿವಾರ ಮಧ್ಯಾಹ್ನ 4 ಗಂಟೆಗೆ ಕೇವಲ ಜೀ ಕನ್ನಡದಲ್ಲಿ


