Bigg Boss Kannada Season 12: ಗಿಲ್ಲಿ ನಟ ಅವರು ಬಿಗ್ ಬಾಸ್‌ ಶೋ ಗೆಲ್ಲಲಿ ಎಂದು ಅನೇಕರು ಹೇಳುತ್ತಿದ್ದಾರೆ. ಇಷ್ಟೆಲ್ಲ ಅಭಿಮಾನ, ಪ್ರೀತಿ ಸಿಕ್ಕಿರುವುದು ಯಾಕೆ? ಕಾರಣ ರಿವೀಲ್‌ ಮಾಡಿದ HR. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅನೇಕರು ಗಿಲ್ಲಿ ನಟ ಅವರೇ ಗೆಲ್ಲಬೇಕು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಖಾಸಗಿ ಕಂಪೆನಿ HR ಆಗಿರುವ ಸಂಕೇತ್‌ ರಾಮಕೃಷ್ಣಮೂರ್ತಿ ಅವರು ಮಾತನಾಡಿದ್ದಾರೆ.

Bigg Boss Kannada Season 12 ಒಂದು ರಿಯಾಲಿಟಿ ಶೋ ಮಾತ್ರವಲ್ಲ. ಇದು ವ್ಯಕ್ತಿತ್ವ, ಮೌಲ್ಯಗಳು, ಸಹನೆ ಮತ್ತು ಮಾನವ ಸಂಬಂಧಗಳ ನೈಜ ಪರೀಕ್ಷೆ. HR ವೃತ್ತಿಜೀವನದಲ್ಲಿ ನಾನು ವರ್ಷಗಳಿಂದ ಗಮನಿಸಿದ ಕೆಲವು ಪ್ರಮುಖ ಗುಣಗಳನ್ನು ಈ ಮನೆಯೊಳಗೆ ಸ್ಪಷ್ಟವಾಗಿ ತೋರಿಸಿದ ಸ್ಪರ್ಧಿ ಎಂದರೆ – ಗಿಲ್ಲಿ ನಟ.

HR ಮಾನದಂಡವೇನು?

ಗಿಲ್ಲಿಯ ನಾಯಕತ್ವ ಶಬ್ದದಲ್ಲಿ ಅಲ್ಲ, ವರ್ತನೆಯಲ್ಲಿ ಕಾಣಿಸಿಕೊಂಡಿತು. ಕ್ಯಾಪ್ಟನ್ ಆಗಿದ್ದಾಗ ಮಾತ್ರವಲ್ಲ, ಸಾಮಾನ್ಯ ದಿನಗಳಲ್ಲೂ ಮನೆಯ ಮನೋಭಾವವನ್ನು ಎತ್ತಿ ಹಿಡಿದವರು ಅವನು. ಆಜ್ಞಾಪಿಸುವ ನಾಯಕನಲ್ಲ, ಜೊತೆಯಾಗಿ ನಡೆಯುವ ನಾಯಕ. ಇಂಥ ನಾಯಕತ್ವವನ್ನೇ HR ನಲ್ಲಿ ನಾವು ಹೆಚ್ಚು ಮೌಲ್ಯಮಾಡುತ್ತೇವೆ.

ಗಿಲ್ಲಿ ತನ್ನ ಆಟಕ್ಕಿಂತ ಸ್ನೇಹಕ್ಕೆ ಹೆಚ್ಚಿನ ಮಹತ್ವ ಕೊಟ್ಟನು. ತನ್ನ ಜೊತೆ ಇದ್ದವರನ್ನು ಉತ್ತೇಜಿಸಿದ, ಅವರಿಗಾಗಿ ನಿಂತ. ತಂಡ ಗೆಲ್ಲಲಿ ಎಂಬ ಮನಸ್ಸು ಅವನ ಪ್ರತಿಯೊಂದು ನಿರ್ಧಾರದಲ್ಲೂ ಕಾಣಿಸಿಕೊಂಡಿತು. ಕೆಲಸದ ಜಾಗದಲ್ಲೂ ಇಂಥವರೇ ತಂಡವನ್ನು ಕಟ್ಟುತ್ತಾರೆ.

ಹಾಸ್ಯ ಮಾಡುವಾಗಲೂ ಗಿಲ್ಲಿ ಮಿತಿಯನ್ನು ಮೀರದವನು. ಯಾರನ್ನೂ ಕೆಳಗೆ ಹಾಕುವ ಹಾಸ್ಯವಲ್ಲ, ಪರಿಸ್ಥಿತಿಯಿಂದ ಹುಟ್ಟಿದ ನಗು. ಯಾರಾದರೂ ನೋವಾಗಿದ್ದರೆ ತಕ್ಷಣ ಅರಿತು ಹಿಂದೆ ಸರಿಯುವ ಗುಣ – ಇದು ಉನ್ನತ EQ ಯ ಸೂಚನೆ.

Bigg Boss ಮನೆಯಲ್ಲಿಯ ಸಂಘರ್ಷ ಅನಿವಾರ್ಯ. ಆದರೆ ಗಿಲ್ಲಿ ಕೋಪದಿಂದಲ್ಲ, ಸಂಭಾಷಣೆ ಮತ್ತು ಹಾಸ್ಯದ ಮೂಲಕ ಸಂಘರ್ಷಗಳನ್ನು ತಣಿಸಿದ. ಗರಿಷ್ಠ ಜಗಳಗಳನ್ನು ಕನಿಷ್ಠ ಹಾನಿಯಲ್ಲಿ ಮುಗಿಸಿದವನು. ಜೋಡಿ ಆಟದಿಂದ ಸಿಂಗಲ್ ಆಟದವರೆಗೂ, ನಿಯಮ ಬದಲಾವಣೆಗಳಿಂದ ಟಾಸ್ಕ್ ರದ್ದಾಗುವವರೆಗೂ ಗಿಲ್ಲಿ ಎಲ್ಲಕ್ಕೂ ಹೊಂದಿಕೊಂಡ. ತನ್ನ ಶಕ್ತಿಯನ್ನು ಅರ್ಥ ಮಾಡಿಕೊಂಡು, ಅದನ್ನೇ ಆಟವಾಗಿ ರೂಪಿಸಿಕೊಂಡನು. ಇದು ಪ್ರೌಢ ವೃತ್ತಿಪರ ಗುಣ.

ಗಿಲ್ಲಿ ಈ ಸೀಸನ್‌ನ ಧ್ವನಿ. ಮಾತನಾಡುವ ಶೈಲಿ, ಸಮಯ, ಸ್ಪಷ್ಟತೆ ಎಲ್ಲವೂ ಪರಿಣಾಮಕಾರಿ. ಬೆನ್ನ ಹಿಂದೆ ಮಾತಾಡುವ ಬದಲು, ಮುಖಾಮುಖಿಯಾಗಿ, ಹಾಸ್ಯದ ಮೂಲಕ ಹೇಳುವ ಪ್ರಾಮಾಣಿಕತೆ ಅವನ ದೊಡ್ಡ ಶಕ್ತಿ. 13 ಬಾರಿ ನಾಮಿನೇಟ್ ಆಗಿ ಕೂಡ ಮನಸ್ಸು ಕುಗ್ಗಿಸಿಕೊಳ್ಳದೆ ಮುಂದುವರಿದವನು. ಪ್ರತೀ ವಾರ ಹೊರ ಹೋಗುವ ಭೀತಿಯಲ್ಲೂ ತನ್ನ ಸ್ವಭಾವ ಬದಲಿಸದೆ ನಿಂತು ಗೆದ್ದವನು. ಇದು ಕೇವಲ ಆಟವಲ್ಲ ಇದು ಮಾನಸಿಕ ಬಲ. HR ದೃಷ್ಟಿಯಿಂದ ನೋಡಿದರೆ, ಗಿಲ್ಲಿ ನಟ ಒಂದು ಪೂರ್ಣ ವ್ಯಕ್ತಿತ್ವದ ಪ್ಯಾಕೇಜ್.

ಕೆಲಸದ ಜಾಗದಲ್ಲಿ ನಾವು ಬಯಸುವ ನಾಯಕ, ತಂಡದ ಆಟಗಾರ, ಸಂವಹನಕಾರ, ಮತ್ತು ಸಂಕಷ್ಟದಲ್ಲಿ ನಿಂತುಕೊಳ್ಳುವ ವ್ಯಕ್ತಿತ್ವ ಎಲ್ಲವೂ ಅವನಲ್ಲಿ ಇದೆ. Bigg Boss ಒಂದು ಸಮಾಜದ ಸಣ್ಣ ರೂಪ. ಆ ಸಮಾಜದಲ್ಲಿ ಮಾನವೀಯತೆಯೊಂದಿಗೆ ಬದುಕಿದವನು ಗೆಲ್ಲಬೇಕು ಎಂದರೆ, ಗಿಲ್ಲಿ ನಟಾ ಅದಕ್ಕೆ ಸಂಪೂರ್ಣ ಅರ್ಹ. ಆದ್ದರಿಂದ HR ದೃಷ್ಟಿಕೋನದಿಂದ ಹೇಳುವುದಾದರೆ BBK12 ಗೆಲ್ಲಬೇಕಾದವನು ಗಿಲ್ಲಿ ನಟ. Bigg Boss ಗೆಲ್ಲೋದು ಆಟದಿಂದಲ್ಲ… ವ್ಯಕ್ತಿತ್ವದಿಂದ. ಅದಕ್ಕೆ ಗಿಲ್ಲಿ ಗೆಲ್ಲಬೇಕು.