ಗದಗದ ಕುಖ್ಯಾತ ಕಳ್ಳ 'ಶಿಗ್ಲಿ ಬಸ್ಯಾ' ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ಸ್ಪರ್ಧಿಸಲು ಪಣತೊಟ್ಟಿದ್ದಾನೆ. ಸನ್ಮಾರ್ಗದಲ್ಲಿ ನಡೆಯಲು ಅವಕಾಶ ಕೋರಿ, ತುಮಕೂರಿನ ಸಿದ್ದಗಂಗಾ ಮಠದಿಂದ ಬಿಡದಿಯ ಬಿಗ್‌ಬಾಸ್ ಮನೆಯವರೆಗೆ ಪಾದಯಾತ್ರೆ ಆರಂಭಿಸಿದ್ದಾನೆ. ಈ ಮೂಲಕ ವಾಹಿನಿ ಮುಖ್ಯಸ್ಥರು ಮತ್ತು ಕಿಚ್ಚ ಸುದೀಪ್ ಅವರ ಗಮನ ಸೆಳೆದು, ದೊಡ್ಮನೆ ಪ್ರವೇಶಿಸುವ ಗುರಿ ಹೊಂದಿದ್ದಾನೆ.

ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ವಿವಾದಾತ್ಮಕ ರಿಯಾಲಿಟಿ ಶೋ 'ಬಿಗ್‌ಬಾಸ್ ಕನ್ನಡ ಸೀಸನ್ 13' (Bigg Boss Kannada Season 13) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಸೆಪ್ಟೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಶೋ ಆರಂಭವಾಗಲಿದೆ ಎನ್ನಲಾಗ್ತಿದೆ. ಈಗಾಗಲೇ ವಾಹಿನಿಯು ಅಧಿಕೃತ ಪ್ರೋಮೋ ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇಂತಹ ಸಂದರ್ಭದಲ್ಲೇ ಬಿಗ್‌ಬಾಸ್ ಮನೆ ಪ್ರವೇಶಿಸಲು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದೆ. ಇದರ ನಡುವೆ ರಾಜ್ಯಾದ್ಯಂತ ತಲ್ಲಣ ಮೂಡಿಸಿದ್ದ ಗದಗದ ಕುಖ್ಯಾತ ಕಳ್ಳ 'ಶಿಗ್ಲಿ ಬಸ್ಯಾ' ಈ ಬಾರಿ ಬಿಗ್‌ಬಾಸ್ ಸೀಸನ್ 13ರ ಸ್ಪರ್ಧಿಯಾಗಲು ಪಣ ತೊಟ್ಟಿದ್ದು, ರಿಯಾಲಿಟಿ ಶೋನಲ್ಲಿ ತಮಗೊಂದು ಅವಕಾಶ ನೀಡಬೇಕೆಂದು ಆಗ್ರಹಿಸಿ ವಿಶಿಷ್ಟವಾಗಿ ಪಾದಯಾತ್ರೆ ಆರಂಭಿಸಿದ್ದಾನೆ.

ತನ್ನ ಹಳೆಯ ಅಪರಾಧದ ಕಪ್ಪು ಚುಕ್ಕೆಗಳನ್ನು ತೊಡೆದುಹಾಕಿ ಸನ್ಮಾರ್ಗದಲ್ಲಿ ನಡೆಯಲು ನಿರ್ಧರಿಸಿರುವ ಶಿಗ್ಲಿ ಬಸ್ಯಾ, ತುಮಕೂರಿನ ಐತಿಹಾಸಿಕ ಶ್ರೀ ಸಿದ್ದಗಂಗಾ ಮಠದಿಂದ ತನ್ನ ಪಾದಯಾತ್ರೆಯನ್ನು ಅಧಿಕೃತವಾಗಿ ಆರಂಭಿಸಿದ್ದಾನೆ. ಮಠದ ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ್ ಸ್ವಾಮೀಜಿಗಳ ಪವಿತ್ರ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಬಸ್ಯಾ, ಅಲ್ಲಿಂದಲೇ ತನ್ನ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದಾನೆ. ಹೆಗಲ ಮೇಲೆ ಕನ್ನಡ ಧ್ವಜವನ್ನು ಹಿಡಿದು ಏಕಾಂಗಿಯಾಗಿ ಹೆಜ್ಜೆ ಹಾಕುತ್ತಿರುವ ಆತನ ಈ ಪಾದಯಾತ್ರೆಯು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಬಿಡದಿ ಬಿಗ್‌ಬಾಸ್ ಮನೆ ಹಾಗೂ ಕಿಚ್ಚ ಸುದೀಪ್ ಭೇಟಿಗೆ ನಿರ್ಧಾರ

ತುಮಕೂರಿನಿಂದ ಆರಂಭವಾಗಿರುವ ಈ ಪಾದಯಾತ್ರೆಯು ಒಟ್ಟು ಎರಡು ದಿನಗಳ ಕಾಲ ನಡೆಯಲಿದ್ದು, ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಇನೋವೇಟಿವ್ ಫಿಲ್ಮ್ ಸಿಟಿಯ ಬಿಗ್‌ಬಾಸ್ ಮನೆಯನ್ನು ತಲುಪಲಿದೆ. ಪಾದಯಾತ್ರೆ ಪೂರ್ಣಗೊಂಡ ನಂತರ ಶಿಗ್ಲಿ ಬಸ್ಯಾ ಬಿಗ್‌ಬಾಸ್ ವಾಹಿನಿ ಮುಖ್ಯಸ್ಥರನ್ನು ಹಾಗೂ ಶೋನ ನಿರೂಪಕರಾದ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರನ್ನು ಖುದ್ದಾಗಿ ಭೇಟಿ ಮಾಡಲು ನಿರ್ಧರಿಸಿದ್ದಾನೆ. ಸುದೀಪ್ ಅವರಿಗೆ ಮನವಿ ಪತ್ರ ಸಲ್ಲಿಸಿ, "ನನ್ನನ್ನು ಬಿಗ್‌ಬಾಸ್ ಸೀಸನ್ 13ರ ಸ್ಪರ್ಧಿಯನ್ನಾಗಿ ಆಯ್ಕೆ ಮಾಡಿ, ಸಮಾಜದಲ್ಲಿ ಹೊಸ ಜೀವನ ನಡೆಸಲು ಒಂದು ವೇದಿಕೆ ಕಲ್ಪಿಸಿಕೊಡಿ" ಎಂದು ಕೋರಲು ಸಿದ್ಧತೆ ಮಾಡಿಕೊಂಡಿದ್ದಾನೆ.

260ಕ್ಕೂ ಹೆಚ್ಚು ಕಳ್ಳತನ ಕೇಸ್; ಕೋರ್ಟ್‌ನಲ್ಲಿ ತಾನೇ ವಾದಿಸಿದ್ದ 'ಬುದ್ಧಿವಂತ' ಕಳ್ಳ!

ಅಂದಹಾಗೆ, ಈ ಶಿಗ್ಲಿ ಬಸ್ಯಾ ಸಾಮಾನ್ಯ ವ್ಯಕ್ತಿಯಲ್ಲ. ಈತನ ಕ್ರಿಮಿನಲ್ ಹಿನ್ನೆಲೆ ಕೇಳಿದರೆ ಪೊಲೀಸರೇ ಬೆಚ್ಚಿಬೀಳುತ್ತಾರೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಬರೋಬ್ಬರಿ 260ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಆದರೆ ಈತನ ಅಸಲಿ ವೈಶಿಷ್ಟ್ಯ ಇರುವುದೇ ಕಾನೂನು ಜ್ಞಾನದಲ್ಲಿ! ಯಾವುದೇ ವಕೀಲರ ನೆರವು ಪಡೆಯದೇ, ನ್ಯಾಯಾಲಯದಲ್ಲಿ ತನಗಾಗಿ ತಾನೇ ಖುದ್ದಾಗಿ ವಾದ ಮಂಡಿಸಿ (Party-in-Person) ತನ್ನ ಮೇಲಿದ್ದ ಕೇಸ್‌ಗಳನ್ನು ಗೆದ್ದು ಜೈಲಿನಿಂದ ಹೊರಬಂದಿರುವ ಚಾಣಾಕ್ಷ ಇವನು.

ಬಿಗ್‌ಬಾಸ್ ಮನೆಯು ಯಾವಾಗಲೂ ವಿಭಿನ್ನ ವ್ಯಕ್ತಿತ್ವದ, ವಿವಾದಾತ್ಮಕ ಹಾಗೂ ಸಮಾಜದ ವಿವಿಧ ಸ್ತರದ ಜನರನ್ನು ಕೈಬೀಸಿ ಕರೆಯುತ್ತದೆ. 260 ಪ್ರಕರಣಗಳ ಆರೋಪ ಹೊತ್ತು, ಕಾನೂನನ್ನೇ ತನಗಾಗಿ ಬಳಸಿಕೊಂಡ ಈ 'ಬುದ್ಧಿವಂತ' ಕಳ್ಳನ ಪಾದಯಾತ್ರೆಗೆ ಬಿಗ್‌ಬಾಸ್ ಆಯೋಜಕರು ಹಾಗೂ ಕಿಚ್ಚ ಸುದೀಪ್ ಮಣಿಯುತ್ತಾರಾ? ಶಿಗ್ಲಿ ಬಸ್ಯಾಗೆ ಸೀಸನ್ 13ರ ದೊಡ್ಮನೆ ಟಿಕೆಟ್ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.