Bigg Boss: ಭಾರತದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಇದೇ ಮೊದಲ ಬಾರಿಗೆ ಒಂದೇ ಸಮಯದಲ್ಲಿ ಆರು ಭಾಷೆಗಳಲ್ಲಿ ಆರಂಭವಾಗಲಿದೆ. ವಿಶೇಷ ಅಂದ್ರೆ, ಒಂದು ದಶಕದಿಂದ ನಿಂತುಹೋಗಿದ್ದ 'ಬಿಗ್ ಬಾಸ್ ಬಾಂಗ್ಲಾ' ಶೋಗೆ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ನಿರೂಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ.
ಭಾರತದ ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ 'ಬಿಗ್ ಬಾಸ್' ಈ ಬಾರಿ ಹಿಂದೆಂದಿಗಿಂತಲೂ ದೊಡ್ಡದಾಗಿ ಸದ್ದು ಮಾಡಲು ಸಜ್ಜಾಗಿದೆ. ಸಾಮಾನ್ಯವಾಗಿ ಬೇರೆ ಬೇರೆ ಭಾಷೆಗಳ ಬಿಗ್ ಬಾಸ್ ಸೀಸನ್‌ಗಳು ಬೇರೆ ಬೇರೆ ಸಮಯದಲ್ಲಿ ಪ್ರಸಾರವಾಗುತ್ತಿದ್ದವು. ಆದರೆ, ಈ ಬಾರಿ ಜಿಯೋ ಸ್ಟಾರ್ ಒಂದು ಹೊಸ ಇತಿಹಾಸ ಬರೆಯಲು ಹೊರಟಿದೆ. ಒಂದೇ ಬಾರಿಗೆ ಬರೋಬ್ಬರಿ ಆರು ಭಾಷೆಗಳಲ್ಲಿ ಬಿಗ್ ಬಾಸ್‌ನ ಹೊಸ ಸೀಸನ್‌ಗಳನ್ನು ಶುರು ಮಾಡುತ್ತಿದೆ. ಇದರಲ್ಲಿ ಒಂದು, ಹಲವು ವರ್ಷಗಳಿಂದ ನಿಂತುಹೋಗಿದ್ದ 'ಬಿಗ್ ಬಾಸ್ ಬಾಂಗ್ಲಾ' ಕೂಡ ಸೇರಿದೆ.
ಕನ್ನಡಕ್ಕಿಂತ ಮುಂಚೆ ಶುರು ಆಗಿತ್ತು
ನಮ್ಮ ಕನ್ನಡದ ಬಿಗ್ ಬಾಸ್‌ಗಿಂತಲೂ ಮುಂಚೆಯೇ ಬಂಗಾಳಿ ಬಿಗ್ ಬಾಸ್ ಆರಂಭವಾಗಿತ್ತು. 2018ರಲ್ಲಿ ಮಲಯಾಳಂ ಬಿಗ್ ಬಾಸ್ ಸೀಸನ್ 1 ಶುರುವಾಗಿದ್ದರೆ, 'ಬಿಗ್ ಬಾಸ್ ಬಾಂಗ್ಲಾ' ಮೊದಲ ಸೀಸನ್ 2013ರಲ್ಲೇ ನಡೆದಿತ್ತು. ಆಗ ಖ್ಯಾತ ನಟ ಮಿಥುನ್ ಚಕ್ರವರ್ತಿ ಇದರ ನಿರೂಪಕರಾಗಿದ್ದರು. ನಂತರ 2016ರಲ್ಲಿ ಎರಡನೇ ಸೀಸನ್ ಪ್ರಸಾರವಾಯಿತು. ಆಗ ಬಂಗಾಳಿ ನಟ ಜೀತ್ ಅಲಿಯಾಸ್ ಜೀತೇಂದ್ರ ಮದ್ನಾನಿ ನಿರೂಪಣೆ ಮಾಡಿದ್ದರು. ಆದರೆ, ಆ ಸೀಸನ್ ನಂತರ 'ಬಿಗ್ ಬಾಸ್ ಬಾಂಗ್ಲಾ' ಮತ್ತೆ ಬಂದಿರಲಿಲ್ಲ. ಇದೀಗ ಸುಮಾರು ಒಂದು ದಶಕದ ನಂತರ ಮೂರನೇ ಸೀಸನ್‌ಗೆ ಚಾಲನೆ ಸಿಗುತ್ತಿದೆ. ಅಷ್ಟೇ ಅಲ್ಲ, ಈ ಸೀಸನ್‌ಗೆ ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಹಾಗೂ ದೇಶದಾದ್ಯಂತ ಜನಪ್ರಿಯರಾಗಿರುವ ಸೌರವ್ ಗಂಗೂಲಿ ನಿರೂಪಕರಾಗಿ ಬರುತ್ತಿರುವುದು ಮತ್ತೊಂದು ದೊಡ್ಡ ವಿಶೇಷ.
ಈ ಬಾರಿ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಬಂಗಾಳಿ ಭಾಷೆಗಳ ಬಿಗ್ ಬಾಸ್ ಸೀಸನ್‌ಗಳು ಒಟ್ಟಿಗೆ ಆರಂಭವಾಗಲಿವೆ. ಇದರಲ್ಲಿ ಮಲಯಾಳಂ ಬಿಗ್ ಬಾಸ್‌ನ ಎಂಟನೇ ಸೀಸನ್ ನಡೆಯಲಿದ್ದು, ಎಂದಿನಂತೆ ಮೋಹನ್‌ಲಾಲ್ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ ಮತ್ತು ನಮ್ಮ ಕನ್ನಡದಲ್ಲಿ ಕಿಚ್ಚ ಸುದೀಪ್ ನಿರೂಪಣೆ ಮಾಡಲಿದ್ದಾರೆ. ಒಂದೇ ಸಮಯದಲ್ಲಿ ಆರು ಭಾಷೆಗಳಲ್ಲಿ ಬಿಗ್ ಬಾಸ್ ಆರಂಭವಾಗುತ್ತಿರುವುದು ವೀಕ್ಷಕರಿಗೆ ಹೊಸ ಅನುಭವ ನೀಡಲಿದ್ದು, ಜಿಯೋಸ್ಟಾರ್‌ಗೆ ಇದು ದೊಡ್ಡ ಅವಕಾಶದ ಬಾಗಿಲು ತೆರೆದಿದೆ.


