ಬಿಗ್ಬಾಸ್ 13ರ ಅಗ್ನಿಪರೀಕ್ಷೆಯಲ್ಲಿ ತೀರ್ಪುಗಾರರಾದ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ವರ್ತನೆಗೆ ಟ್ರೋಲ್ ವ್ಯಕ್ತವಾಗಿತ್ತು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಅವಮಾನಗಳನ್ನು ಮೆಟ್ಟಿ ನಿಂತು ಬಂದವರಿಗೆ ಉತ್ತಮ ಮನರಂಜನೆ ನೀಡೋಣ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಬೆಂಗಳೂರು: ಬಿಗ್ಬಾಸ್ 13ರಲ್ಲಿ ಈ ಬಾರಿ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ನಡೆಸಿದ್ದ ಅಗ್ನಿಪರೀಕ್ಷೆಯಲ್ಲಿ ತೀರ್ಪುಗಾರರು ಅದರಲ್ಲಿಯೂ ಮುಖ್ಯವಾಗಿ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಜಾಲತಾಣಗಳಲ್ಲಿ ವಿನಯ್ ಗೌಡ ಅವರು ಬಳಸಿದ ಭಾಷೆಗಳ ಬಗ್ಗೆ, ಸ್ಪರ್ಧಿಗಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಬಗ್ಗೆ ನೆಟ್ಟಿಗರು ಗರಂ ಆಗುತ್ತಿದ್ದಾರೆ. ಅಷ್ಟಕ್ಕೂ ಇವೆಲ್ಲಾ ಮಾತುಗಳು ತೀರ್ಪುಗಾರರದ್ದು ಅಲ್ಲ, ಬದಲಿಗೆ ಅವರಿಗೆ ಏನು ಮಾತನಾಡಬೇಕು, ಏನು ಬೇಡ ಎನ್ನುವುದು ಅವರ ಕಿವಿಗಳನ್ನು ನೋಡಿದರೆ ತಿಳಿಯುತ್ತದೆ, ಅಲ್ಲಿ ಅವರಿಗೆ ಬರುವ ಸಂದೇಶದಂತೆಮಾತನಾಡುತ್ತಾರೆ, ಎಲ್ಲವೂ ಟಿಆರ್ಪಿಗಾಗಿ ಎಂದೂ ಹಲವರು ಕಮೆಂಟ್ ಮಾಡುತ್ತಿದ್ದಾರೆ.
ತೀರ್ಪುಗಾರರ ವರ್ತನೆ
ಇದೀಗ ಈ ಬಗ್ಗೆ ಸುದೀಪ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಗಿದೆ. Bigg Boss Kannada Season 13 ಕುರಿತು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಅವರು ಈ ಷೋನ ಹಲವು ವಿಷಯಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರಿಗೆ ಈ ಪ್ರಶ್ನೆ ಎದುರಾಗಿದೆ. ತೀರ್ಪುಗಾರರು ನಡೆದುಕೊಂಡಿರುವ ವರ್ತನೆ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ, ಸುದೀಪ್ ಅವರು, ಕೆಲವು ಅಗ್ನಿಪರೀಕ್ಷೆಗಳು ಮುಗಿದ ಮೇಲೆಯೇ ನಿಜವಾದ ಯಶಸ್ಸು ಅಥವಾ ಸ್ವರ್ಗ ಸಿಗುವುದು. ಶಾಲೆಯಲ್ಲಿ ವಿದ್ಯಾರ್ಥಿಗಲು ತಪ್ಪು ಮಾಡಿದಾಗಲೂ ಟೀಚರ್ಸ್ ‘ಗೆಟ್ ಔಟ್’ ಅಂತಾರೆ. ಹೀಗೆ ಹೇಳಿದಾಗ, ಆ ಕ್ಷಣಕ್ಕೆ ಅದು ಕಹಿಯೆನಿಸಿದರೂ ಅವೆಲ್ಲಾ ನಮ್ಮ ಒಳ್ಳೆಯದಕ್ಕೇ ಆಗಿರುತ್ತದೆ. ಇಲ್ಲಿ ಜಡ್ಜ್‌ಗಳ ನಡವಳಿಕೆ ಎಷ್ಟು ಸರಿ-ತಪ್ಪು ಎಂದು ಚರ್ಚಿಸುವುದು ಮುಖ್ಯವಲ್ಲ. ಅಲ್ಲಿ ರಿಜೆಕ್ಟ್ ಆದವರಿಗೂ ಅದು ದೊಡ್ಡ ಹೈಪ್ ಮತ್ತು ಜನಪ್ರಿಯತೆ ತಂದುಕೊಟ್ಟಿರಬಹುದು. ಒಮ್ಮೆ ತಿರಸ್ಕೃತರಾದ ಮಾತ್ರಕ್ಕೆ ಬದುಕಿನ ಬಾಗಿಲುಗಳು ಮುಚ್ಚುವುದಿಲ್ಲ. ಅವಮಾನಗಳನ್ನು ಮೆಟ್ಟಿ ನಿಂತು ಬಂದವರಿಗೆ ಉತ್ತಮ ಮನರಂಜನೆ ನೀಡೋಣ” ಎಂದು ಹೇಳಿದರು.
ಶೂಟಿಂಗ್ ಅನುಭವ
ಇನ್ನು ಸಿನಿಮಾ ಶೂಟಿಂಗ್ ಬಗ್ಗೆಯೂ ಮಾಹಿತಿ ಹಂಚಿಕೊಂಡ ಅವರು, ಹಿಂದಿನ ಸೀಸನ್‌ಗಳಲ್ಲಿ ತುಂಬಾ ಕಷ್ಟವಾಗಿತ್ತು ಎಂದರು. (ಇದೇ ಕಾರಣ ನೀಡಿ ತಾವು ಮುಂದಿನ ಸೀಸನ್ಗಳಿಂದ ಹೋಸ್ಟ್ ಮಾಡುವುದಿಲ್ಲ ಎಂದು ಹೇಳಿ, ತಲ್ಲಣ ಸೃಷ್ಟಿಸಿ ಕೊನೆಗೆ ಮುಂದಿನ ನಾಲ್ಕು ಸೀಸನ್ಗಳಿಗೆ ಒಪ್ಪಿಕೊಂಡಿರುವುದಾಗಿ ಸುದೀಪ್ ಹೇಳಿದ್ದರು). ಆದರೆ ಈ ಬಾರಿ ಸಮಸ್ಯೆ ಆಗಲಿಲ್ಲ ಎಂದರು. ಜೊತೆಗೆ ತಮ್ಮ ‘ಬಿಲ್ಲ ರಂಗ ಭಾಷಾ’ ಚಿತ್ರದ ಸೆಟ್ ಬಿಗ್ ಬಾಸ್ ಸೆಟ್‌ನ ಅತ್ಯಂತ ಸಮೀಪದಲ್ಲೇ ಇರುವ ಕಾರಣ, 15 ನಿಮಿಷದಲ್ಲೇ ಶೂಟಿಂಗ್ ಮುಗಿಸಿ ಬಿಗ್ ಬಾಸ್ ವೇದಿಕೆಗೆ ಬಂದುಬಿಡಬಹುದು. ಆದರೆ ಕಳೆದ ಬಾರಿ ಬಿಗ್ಬಾಸ್ ಸೆಟ್ ಮತ್ತು ಶೂಟಿಂಗ್ ಸೆಟ್ ತುಂಬಾ ದೂರ ಇದ್ದುದರಿಂದ ಕಷ್ಟ ಆಯ್ತು ಎಂದಿದ್ದಾರೆ.
ಇದೇ ಸಮಯದಲ್ಲಿ ಅವರ ಸಿನಿಮಾದ ಬಗ್ಗೆ ಕೇಳಿದಾಗ, ಇದು ಬಿಗ್ಬಾಸ್ ಪ್ರೆಸ್ಮೀಟ್ ಆಗಿರುವುದರಿಂದ ಸಿನಿಮಾಕುರಿತು ಮುಂದೆ ಪ್ರತ್ಯೇಕವಾಗಿ ಮಾಹಿತಿ ನೀಡಲಾಗುವುದು ಎಂದರು.


