ಬಿಗ್ಬಾಸ್ ವಿನ್ನರ್ 'ಗಿಲ್ಲಿ ನಟ' ಇನ್ಸ್ಟಾಗ್ರಾಮ್ ಲೈವ್ನಲ್ಲಿ ಅಭಿಮಾನಿಗಳ ಪ್ರೀತಿಗೆ ಮೂಕರಾಗಿದ್ದಾರೆ. ತಮ್ಮ ಗೆಲುವನ್ನು ನಂಬಲಾಗುತ್ತಿಲ್ಲ ಎಂದಿರುವ ಅವರು, ಈ ಪ್ರೀತಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಒಂದು ಮನವಿ ಮಾಡಿಕೊಂಡಿದ್ದಾರೆ. ಏನದು?
ಬಿಗ್ಬಾಸ್ ಖ್ಯಾತಿಯ ಗಿಲ್ಲಿ ನಟ ಇದೀಗ ದಿಢೀರ್ ಎಂದು ಕಲರ್ಸ್ ಕನ್ನಡದ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದು ಅಭಿಮಾನಿಗಳಲ್ಲಿ ಒಂದು ಮನವು ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಅವರು, ಇದೊಂದು ಕನಸು ಎನ್ನಿಸ್ತಾ ಇದೆ. ಬಿಗ್ಬಾಸ್ ಮನೆಯಲ್ಲಿ ಐದಾರು ವಾರ ಇದ್ದು ಎಲಿಮಿನೇಟ್ ಆಗುತ್ತೇನೆ ಎಂದುಕೊಂಡಿದ್ದೆ. ಆದರೆ ವಿನ್ನರ್ ಆಗುವವರೆಗೂ ನನ್ನ ಜರ್ನಿ ಮುಂದುವರೆದಿದ್ದು ನೋಡಿದ್ರೆ ಏನು ಹೇಳಬೇಕು ಎಂದು ತಿಳಿಯದೇ ಸೈಲೆಂಟ್ ಆಗಿಬಿಟ್ಟಿದ್ದೇನೆ ಎಂದಿದ್ದಾರೆ. ನಿಮ್ಮ ಪ್ರೀತಿ, ಪ್ರೋತ್ಸಾಹದ ಹ್ಯಾಂಗ್ ಓವರ್ನಲ್ಲಿ ಇನ್ನೂ ಇದ್ದೇನೆ. ನನ್ನ ಗೆಲುವು ನನಗೆ ಒಪ್ಪಿಕೊಳ್ಳಲು ಆಗ್ತಿಲ್ಲ. ಈ ಪರಿಯಲ್ಲಿ ಜನರು ಆಶೀರ್ವಾದ ಮಾಡಿ, ಇಷ್ಟೊಂದು ಪ್ರಮಾಣದಲ್ಲಿ ವೋಟ್ ಮಾಡಿರುವುದು ನೋಡಿದರೆ ಬಾಯಿಯೇ ಬರುತ್ತಿಲ್ಲ. ಎಷ್ಟೊಂದು ಮಾತನಾಡುವ ನಾನು, ಸದ್ಯ ಮೂಕನಾಗಿದ್ದೇನೆ ಎಂದಿದ್ದಾರೆ.
ದೊಡ್ಡ ಜವಾಬ್ದಾರಿ ಇದೆ
ನಿಮ್ಮ ಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ಕರ್ನಾಟಕ ಜನರು ನನ್ನ ಮೇಲೆ ತೋರಿರುವ ಅಭಿಮಾನ ಯಾವತ್ತೂ ಮರೆಯಲ್ಲ. ಕರ್ನಾಟಕ ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳ ಕನ್ನಡಿಗರು, ಯೋಧರು ಕೂಡ ಗಿಲ್ಲಿಗೆ ವೋಟ್ ಮಾಡಿ ಅಂತ ವಿಡಿಯೋ ಮಾಡಿದ್ದು ನೋಡಿ ಹೃದಯ ತುಂಬಿ ಬಂತು. ಸಂಕ್ರಾಂತಿ ಸಮಯದಲ್ಲಿ ರೈತರು ದನದ ಮೇಲೆ ನನ್ನ ಫೋಟೋ ಹಾಕಿ ವೋಟ್ ಹಾಕಲು ಮನವಿ ಮಾಡಿದ್ದನ್ನು ನೋಡಿದೆ. ಬೇರೆ ರಾಜ್ಯದ ಕನ್ನಡಿಗರು ಮಾತ್ರವಲ್ಲದೇ ಬೇರೆ ದೇಶದವರೂ ಸಪೋರ್ಟ್ ಮಾಡಿದ್ದಾರೆ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳೂ ನನಗೆ ಈ ಪರಿಯಲ್ಲಿ ಆಶೀರ್ವಾದ ಮಾಡಿದ್ದು ನೋಡಿದ್ರೆ ನನಗೆ ನಿಜಕ್ಕೂ ಕನಸು ಎನ್ನಿಸುತ್ತಿದೆ ಎಂದಿದ್ದಾರೆ.
ಕನ್ನಡಿಯಲ್ಲಿ ನೋಡಿಕೊಂಡ್ರೆ ಮಾತೇ ಬರಲ್ಲ
ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡ್ರೆ ಮಾತೇ ಬರಲ್ಲ. ತುಂಬಾ ಭಾವುಕ ಆಗಿದ್ದೇನೆ. ಈ ಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ನನ್ನಮೇಲಿದೆ. ಇದೇ ವಿಷಯವನ್ನು ಸುದೀಪ್ ಅಣ್ಣ ಕೂಡ ಹೇಳಿದ್ರು. ಇಲ್ಲಿಯವರೆಗೆ ಒಂದು ಮಾತು, ಇನ್ನು ಮುಂದಿನದ್ದು ಒಂದು ಮಾತು ಎಂದು. ಆದ್ದರಿಂದ ಭಯವೂ ಶುರುವಾಗಿದೆ. ಹೇಗೆ ಇದನ್ನು ಕಾಪಾಡಬೇಕು ಎಂದು ತೋಚುತ್ತಿಲ್ಲ.ಎಷ್ಟೊಂದು ಪ್ರೀತಿಯಿಂದ ಧನ್ಯ ಆಗಿದ್ದೇನೆ ಎಂದಿದ್ದಾರೆ.
ಅಭಿಮಾನಿಗಳಿಗೆ ಮನವಿ
ಇದೇ ವೇಳೆ ಅವರು ಮಾಡಿಕೊಂಡಿರುವ ಮನವಿ ಎಂದರೆ, ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಇಂದಿನಿಂದ ಮೂರು ದಿನಗಳವರೆಗೆ ನಡೆಯಲಿದ್ದು, ಅದನ್ನು ನೋಡುವಂತೆ ಕೋರಿದ್ದಾರೆ. ಸಕತ್ ಎಂಟರ್ಟೈನ್ಮೆಂಟ್ ಇರುತ್ತದೆ. ಅದನ್ನೆಲ್ಲಾ ಮಿಸ್ ಮಾಡದೇ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


