ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸುವ ಸಂಪ್ರದಾಯವೇ ಇಲ್ಲ. ಆದರೂ ‘ಆಸೆ’ ಧಾರಾವಾಹಿ ಖ್ಯಾತಿಯ ನಟಿ ಅಭಿಜ್ಞಾ ಭಟ್ ಈ ಬಾರಿ ಮೊದಲ ಬಾರಿಗೆ ಈ ಹಬ್ಬವನ್ನು ಆಚರಿಸಿದ್ದಾರೆ. ಅಷ್ಟಕ್ಕೂ ಪೂಜೆಯ ವಿಧಿವಿಧಾನಗಳನ್ನು ಹೇಗೆ ತಿಳಿದುಕೊಂಡರು?
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಅಭಿಜ್ಞಾ ವಿಶ್ವನಾಥ್ ಭಟ್ ಈ ಬಾರಿ ಮೊದಲ ಬಾರಿಗೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ್ದಾರೆ. ವಿಶೇಷವೆಂದರೆ, ಮನೆಯಲ್ಲಿ ಈ ಹಬ್ಬವನ್ನು ಹಿಂದೆಂದೂ ಆಚರಿಸದಿದ್ದ ನಟಿ, ಪೂಜಾ ವಿಧಿವಿಧಾನಗಳನ್ನು ತಿಳಿದುಕೊಳ್ಳಲು ಯೂಟ್ಯೂಬ್ ಜೊತೆಗೆ ChatGPT ಸಹಾಯವನ್ನೂ ಪಡೆದಿದ್ದಾರಂತೆ!
ವರಮಹಾಲಕ್ಷ್ಮಿ ಹಬ್ಬ ಕಳೆದ ವಾರವೇ ನಡೆದಿದ್ದರೂ, ನಟಿ ಇದೀಗ ತಮ್ಮ ಹಬ್ಬದ ಸಂಭ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ನಟಿಯ ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮನೆಯಲ್ಲಿ ಈ ಸಂಪ್ರದಾಯವೇ ಇರಲಿಲ್ಲ!
ತಮ್ಮ ಮೊದಲ ವರಮಹಾಲಕ್ಷ್ಮಿ ಹಬ್ಬದ ಅನುಭವವನ್ನು ಹಂಚಿಕೊಂಡಿರುವ ಅಭಿಜ್ಞಾ ಭಟ್, ತಮ್ಮ ಕುಟುಂಬದಲ್ಲಿ ಈ ಹಬ್ಬ ಆಚರಿಸುವ ಸಂಪ್ರದಾಯ ಇಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ಬಾರಿ ಮೊದಲ ಬಾರಿಗೆ ಹಬ್ಬ ಆಚರಿಸಬೇಕು ಎಂದು ನಿರ್ಧರಿಸಿದ್ದರಂತೆ.
‘ನನ್ನ ಮೊದಲ ವರಮಹಾಲಕ್ಷ್ಮಿ ಹಬ್ಬ. ನಾವು ಈ ಹಿಂದೆ ನಮ್ಮ ಮನೆಯಲ್ಲಿ ಎಂದೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿಲ್ಲ. ನಮ್ಮಲ್ಲಿ ಆ ಸಂಪ್ರದಾಯ ಇಲ್ಲ. ಆದರೆ ಈ ವರ್ಷ ಸ್ವಲ್ಪ ವಿಶೇಷ. ನಾನು ಮೊದಲ ಬಾರಿಗೆ ಹಬ್ಬ ಆಚರಿಸಬೇಕು ಎಂದುಕೊಂಡಿದ್ದೆ. ಯೂಟ್ಯೂಬ್ ಹಾಗೂ ChatGPT ಮೂಲಕ ಎಲ್ಲಾ ವಿಚಾರಗಳನ್ನು ತಿಳಿದುಕೊಂಡೆ’ ಎಂದು ನಟಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸರಳವಾಗಿ ಲಕ್ಷ್ಮೀ ಪೂಜೆ ಮಾಡಿದ ನಟಿ
ಅಭಿಜ್ಞಾ ಹಂಚಿಕೊಂಡಿರುವ ವಿಡಿಯೋದಲ್ಲಿ ಹಬ್ಬದ ಸಿದ್ಧತೆಯ ಪ್ರತಿಯೊಂದು ಹಂತವೂ ಕಾಣಿಸುತ್ತದೆ. ಅಂಗಳವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿದ ನಟಿ, ಬಳಿಕ ದೇವರ ಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅರಿಶಿನ, ಕುಂಕುಮ, ಹೂವು, ಹಣ್ಣುಗಳಿಂದ ಲಕ್ಷ್ಮೀ ದೇವಿಯನ್ನು ಸುಂದರವಾಗಿ ಅಲಂಕರಿಸಿ, ದೀಪ ಬೆಳಗಿಸಿ ಆರತಿ ಮಾಡಿದ್ದಾರೆ.
ಕಪ್ಪು ಬಣ್ಣದ ಸೀರೆಯಲ್ಲಿ ಸಿಂಪಲ್ ಆಗಿ ರೆಡಿಯಾಗಿದ್ದ ನಟಿ, ಯಾವುದೇ ಆಡಂಬರವಿಲ್ಲದೆ ಸರಳವಾಗಿ ಹಬ್ಬ ಆಚರಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ. ಪೂಜೆ ಬಳಿಕ ವರಮಹಾಲಕ್ಷ್ಮೀ ದೇವಿಯನ್ನು ನೆನೆದು, ‘ಹಣ, ಐಶ್ವರ್ಯ, ಅಭಿವೃದ್ಧಿ ಸೇರಿದಂತೆ ಎಲ್ಲವನ್ನೂ ನೀಡಿ ಎಲ್ಲರನ್ನೂ ಚೆನ್ನಾಗಿಟ್ಟಿರಲಿ’ ಎಂದು ಹಾರೈಸಿದ್ದಾರೆ.
‘ಆಸೆ’ ಧಾರಾವಾಹಿಯಲ್ಲಿ ಅಭಿಜ್ಞಾ ಭಟ್
ಅಭಿಜ್ಞಾ ಭಟ್ ಕನ್ನಡ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿರುವ ನಟಿ. ‘ಪ್ಯಾಟೆ ಹುಡ್ಗಿಯರ ಹಳ್ಳಿ ಲೈಫು’ ರಿಯಾಲಿಟಿ ಶೋ ಮೂಲಕವೂ ಅವರು ಪ್ರೇಕ್ಷಕರಿಗೆ ಮತ್ತಷ್ಟು ಪರಿಚಿತರಾದರು.
ಸದ್ಯ ಸ್ಟಾರ್ ಸುವರ್ಣ ವಾಹಿನಿಯ ‘ಆಸೆ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ರೋಹಿಣಿ ಪಾತ್ರವನ್ನು ನಿರ್ವಹಿಸುತ್ತಿರುವ ಅಭಿಜ್ಞಾ ಭಟ್, ಅಮೃತಾ ರಾಮಮೂರ್ತಿ ಅವರ ಬದಲಿಗೆ ಈ ಪಾತ್ರವನ್ನು ಮುಂದುವರಿಸುತ್ತಿದ್ದಾರೆ.
ಮೊದಲ ಬಾರಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಖುಷಿಯ ಜೊತೆಗೆ, ಪೂಜೆಯ ವಿಧಿವಿಧಾನಗಳನ್ನು ChatGPT ಮತ್ತು ಯೂಟ್ಯೂಬ್ ಮೂಲಕ ತಿಳಿದುಕೊಂಡಿದ್ದೇನೆ ಎಂಬ ನಟಿಯ ಮಾತು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.


