ಸಾರ್ವಜನಿಕ ಶೌಚಾಲಯ ನೋಡೋಕೆ ಬರ್ತೀರಾ ಅಂತ ಯಾರಾದ್ರೂ ಕೇಳಿದ್ರೆ ಅಚ್ಚರಿಯಾಗುತ್ತೆ. ತುರ್ತು ಪರಿಸ್ಥಿತಿಯಲ್ಲೂ ಅದ್ರ ಬಳಕೆ ಕಷ್ಟ. ಹಾಗಿರುವಾಗ ಇಂಥ ಪ್ರಶ್ನೆ ಕೇಳಿದ್ರೆ ಜನ ನಗ್ತಾರೆ. ಆದ್ರೆ ಈ ದೇಶದಲ್ಲಿ ಹಾಗಲ್ಲ, ನೇಚರ್ ಶೌಚಾಲಯ ನೋಡೋಕೆ ಜನರ ದಂಡೇ ಬರುತ್ತೆ.
ಬಯಲು ಶೌಚಾಲಯ (Open toilet) ಭಾರತದಲ್ಲಿ ಸಾಮಾನ್ಯ. ಬಯಲು ಮಲ ವಿಸರ್ಜನೆ ತಡೆಯಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಟಾಯ್ಲೆಟ್ ನಿರ್ಮಾಣಕ್ಕೆ ಹಣಕಾಸಿನ ಸಹಾಯ ಮಾಡ್ತಿದೆ. ಇಷ್ಟಾದ್ರೂ ಅನೇಕ ಕಡೆ ಕೈನಲ್ಲಿ ಚೊಂಬು ಹಿಡಿದು ಬೆಟ್ಟ, ಕಾಡಿಗೆ ಹೋಗುವವರಿದ್ದಾರೆ. ಇದನ್ನು ತಡೆಯಲು ಸಾರ್ವಜನಿಕ ಶೌಚಾಲಯ ಅಲ್ಲಲ್ಲಿ ನಿರ್ಮಾಣ ಆಗಿದೆ. ಆದ್ರೆ ಅಲ್ಲಿಗೆ ಹೋಗೋದೇ ಕಷ್ಟ. ನರಕದ ಅನುಭವ ಆಗೋದ್ರಲ್ಲಿ ಡೌಟಿಲ್ಲ. ಆದ್ರೆ ಜಪಾನಿನಲ್ಲಿರುವ ಸಾರ್ವಜನಿಕ ಶೌಚಾಲಯ ನೋಡೋಕೇ ಜನರ ದಂಡೇ ಬರುತ್ತೆ. ವಿಶಿಷ್ಟ ಟೆಕ್ನಾಲಜಿಗೆ ಜಪಾನ್ ಪ್ರಸಿದ್ಧಿ ಪಡೆದಿದೆ. ಅಲ್ಲಿನ ಶೌಚಾಲಯವೊಂದು ಎಲ್ಲರ ಗಮನ ಸೆಳೆದಿದೆ.
ಕನ್ನಡತಿ ಇನ್ ಜಪಾನ್ (kannadati_in_japan) ಇನ್ಸ್ಟಾಗ್ರಾಮ್ ನಲ್ಲಿ ಶ್ವೇತಾ ಆರಾಧ್ಯ ಈ ಟಾಯ್ಲೆಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಶ್ವದ ಅತ್ಯಂತ ವಿಶಾಲವಾದ ಪಬ್ಲಿಕ್ ಟಾಯ್ಲೆಟ್ ಇದು ಎಂದು ಶ್ವೇತಾ ವಿಡಿಯೋದಲ್ಲಿ ಹೇಳಿದ್ದಾರೆ. ಜಪಾನಿನಲ್ಲಿರುವ ಈ ಪಬ್ಲಿಕ್ ಟಾಯ್ಲೆಟ್ ಗೆ ನೇಚರ್ ಟಾಯ್ಲೆಟ್ ಅಂತ ಹೆಸರಿಡಲಾಗಿದೆ. ಕಾಡಿನ ಮಧ್ಯೆ ಈ ಟಾಯ್ಲೆಟ್ ಕಟ್ಟಲಾಗಿದೆ. ಜಪಾನಿನ ಪ್ರಸಿದ್ಧ ಆರ್ಕಿಟೆಕ್ಟ್ ಇದನ್ನು ಕಟ್ಟಿದ್ದಾರೆ. ಕಾಡಿನ ಮರಗಳನ್ನು ಬಳಸಿ ವಿಶಾಲವಾಗಿ ಇದನ್ನು ನಿರ್ಮಿಸಲಾಗಿದೆ. ಇದನ್ನು ನೋಡಲು ಪ್ರತಿ ದಿನ ಸಾಕಷ್ಟು ಮಂದಿ ಬರ್ತಾರೆ.
ಈ ಶೌಚಾಲಯವನ್ನು ಇಟಾಬು ನಿಲ್ದಾಣ ಇರುವ ಇಚಿಹರಾ ನಗರದಲ್ಲಿ 2013 ರಲ್ಲಿ ನಿರ್ಮಿಸಲಾಗಿದೆ. ಶೌಚಾಲಯವನ್ನು ಸುತ್ತುವರೆದಿರುವ ಎರಡು ಮೀಟರ್ ಎತ್ತರದ ಗೋಡೆಗಳು ರೈಲುಗಳು ಹಾದುಹೋಗುವಾಗ ಬಳಕೆದಾರರ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಮಹಿಳೆಯರಿಗೆ ಮಾತ್ರ ಸೀಮಿತ ಎನ್ನುವುದು ವಿಶೇಷ. ಈ ಶೌಚಾಲಯದ ಸುತ್ತ ಎತ್ತರದ ಗೋಡೆಗಳನ್ನು ನಿರ್ಮನಿಸಲಾಗಿದ್ದು, ಬಾಗಿಲಿದೆ. ಮರದ ದಿಮ್ಮಿಯ ಗೋಡೆಯ ಮೇಲೆ ಮಹಿಳೆಯ ಐಕಾನ್ ಇದ್ದು, ಬಳಕೆ ನಂತ್ರ ಬಾಗಿಲನ್ನು ತೆರೆದಿಡಿ ಅಂತ ಬಾಗಿಲ ಮೇಲೆ ಬರೆಯಲಾಗಿದೆ.
ಶೌಚಾಲಯದ ಒಳಗೆ ಹೋಗ್ತಿದ್ದಂತೆ ವಿಶಾಲವಾದ ಸುಂದರ ಪರಿಸರವನ್ನು ನೀವು ನೋಡ್ಬಹುದು. ಮರ, ಗಿಡಗಳ ಮಧ್ಯೆ ಹಸಿರು ಹುಲ್ಲುಗಳಿವೆ. 200-ಚದರ ಮೀಟರ್ ಹೂವಿನ ಉದ್ಯಾನದ ಮಧ್ಯೆ ಗ್ಲಾಸ್ ಮನೆಯನ್ನು ನೀವು ನೋಡ್ಬಹುದು. ಗ್ಲಾಸ್ ಮನೆ ಮಧ್ಯೆ ಕಮೋಡ್ ನಿರ್ಮಾಣ ಮಾಡಲಾಗಿದೆ. ಬಯಲು ಶೌಚಾಲಯದ ಅಂದ್ರೆ ನಮ್ಮಲ್ಲಿ ನೆಲಕ್ಕೆ ಕುಳಿತಕೊಳ್ಬೇಕು. ಆದ್ರೆ ಇಲ್ಲಿ ಬಯಲಿನ ಮಧ್ಯೆ ಕಮೋಡ್ ನಿರ್ಮಾಣ ಮಾಡಲಾಗಿದೆ. ಇದು ವಿಶಾಲವಾಗಿದೆ. ಸ್ವರ್ಗದಲ್ಲಿ ಕುಳಿತ ಅನುಭವ ಆಗುತ್ತೆ.
ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ. ಹೊರಗಿನಿಂದ ಶೌಚಾಲಯ ವೀಕ್ಷಣೆ ಮಾಡ್ಬಹುದು. ಹಳ್ಳಿಗಳಲ್ಲಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಲು, ಪ್ರವಾಸಿಗರನ್ನು ಆಕರ್ಷಿಸಲು ಈ ವಿಶಾಲ ಶೌಚಾಲಯ ನಿರ್ಮಿಸಲಾಗಿದೆ. ಈ ಹಿಂದೆ ಈ ಹಳ್ಳಿಗೆ ಜನ ಬರ್ತಿರಲಿಲ್ಲವಂತೆ. ಆದ್ರೆ ಈಗ ಅಲ್ಲಿಗೆ ಬರುವ ಪ್ರವಾಸಿಗರು ನೇಚರ್ ಶೌಚಾಲಯದ ಜೊತೆ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ನೋಡಿ ಹೋಗ್ತಾರೆ. ಶೌಚಾಲಯದ ಸುತ್ತಲೂ ಪ್ರವಾಸಿಗರಿರುವ ಕಾರಣ ಇದನ್ನು ಬಳಸಲು ಮಹಿಳೆಯರು ಹಿಂಜರಿಯುತ್ತಾರೆ. ಗ್ಲಾಸ್ ಮನೆ ಮುಜುಗರ ಅಂತ ಪ್ರವಾಸಿಗರು ಭಾವಿಸ್ತಾರೆ. ಆದ್ರೆ ಗ್ಲಾಸ್ ಹೌಸ್ ಕವರ್ ಮಾಡಿಕೊಳ್ಳುವ ವ್ಯವಸ್ಥೆಯೂ ಇಲ್ಲಿದೆ.
ಜಪಾನ್ ನಲ್ಲಿ ವಿಭಿನ್ನ ಶೌಚಾಲಯಗಳು ಸಾಕಷ್ಟಿವೆ. ಜಪಾನ್ ರಾಜಧಾನಿ ಟೋಕಿಯೊದ ಉದ್ಯಾನವನಗಳಲ್ಲಿ ಪಾರದರ್ಶಕ ಸಾರ್ವಜನಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಇದನ್ನು ಬಳಸುವ ಜನರು ಹೊರಗಿನಿಂದ ಅದು ಸ್ವಚ್ಛವಾಗಿದೆಯೇ ಎಂದು ಪರೀಕ್ಷೆ ಮಾಡ್ಬಹುದು. ಭಯಪಡುವ ಅಗತ್ಯವಿಲ್ಲ. ಗೌಪ್ಯತೆಗೆ ಇಲ್ಲಿ ಆಧ್ಯತೆ ನೀಡಲಾಗಿದೆ. ಶೌಚಾಲಯಗಳ ಹೊರ ಗೋಡೆಗಳನ್ನು ಗಾಜಿನಿಂದ ಮಾಡಿದ್ದಾರೆ. ಆದ್ರೆ ಅವು ಬಳಕೆಯಲ್ಲಿರುವಾಗ ಪಾರದರ್ಶಕವಾಗಿರೋದಿಲ್ಲ. ಶೌಚಾಲಯ ವಿಶೇಷ ರೀತಿಯ ಸ್ಮಾರ್ಟ್ ಗ್ಲಾಸ್ ಬಳಸಲಾಗಿದೆ. ಯಾರಾದರೂ ಒಳಗೆ ಪ್ರವೇಶಿಸಿ ಬಾಗಿಲು ಹಾಕಿಕೊಂಡರೆ ಹೊರಗಿನಿಂದ ಏನೂ ಕಾಣಿಸುವುದಿಲ್ಲ.
