Asianet Suvarna News Asianet Suvarna News

Chikkamagaluru Neelakurinji ಬೆಟ್ಟಕ್ಕೆ ನೀಲಿ ರಗ್ಗು, ಅದು ನೀಲಕುರಿಂಜಿ ಹಿಗ್ಗು!

ಏಳು ವರುಷ ಮೌನವಾಗಿದ್ದು, ನಂತರ ಅರಳುವ ಈ ನೀಲಿ ಕುರಿಂಜಿ ಹೂವನ್ನು ನೋಡಲು ಹೋಗುವ ಮೊದಲು ಈ ನಿರ್ಧಾರ ಮಾಡಿಕೊಳ್ಳಿ: ಹೂವು ಕೀಳುವುದಿಲ್ಲ, ಗಿಡಗಳನ್ನು ತುಳಿಯುವುದಿಲ್ಲ. ಹೂಕಾಶಿಯನ್ನು ದೂರದಿಂದ ನೋಡಿ ಕೈ ಮುಗಿದು ಬರುತ್ತೇನೆ. ಪ್ಲಾಸ್ಟಿಕ್‌ ಬಾಟಲಿ ಎಸೆಯುವುದಿಲ್ಲ. ಹೂವಿಗೆ ನೋವು ಮಾಡುವುದಿಲ್ಲ. ಇವನ್ನು ಖಂಡಿತಾ ಪಾಲಿಸಿ.

Witness the remarkable blooming of Neelakurinji flowers in Chikkamagaluru vcs
Author
First Published Oct 2, 2022, 10:35 AM IST

ಶ್ರೀರಂಜಿನಿ ದತ್ತಾತ್ರಿ

ನೀಲ ಕುರಿಂಜಿ. ತಮಿಳಲ್ಲೂ ಮಲಯಾಳದಲ್ಲೂ ಅದೇ ಹೆಸರು. ಕನ್ನಡದಲ್ಲಿ ಹಾರ್ಲೆ, ಗುರಿಕಿ, ಗುರಿಗೆ, ಗುರ್ಗಿ- ಹೀಗೆ ನೂರಾರು ಹೆಸರು. ವೈಜ್ಞಾನಿಕ ಹೆಸರು ಸ್ಟೊ್ರೕಬಿಲಾಂಥಿಸ್‌. 12 ವರುಷಕ್ಕೊಮ್ಮೆ ಅರಳುತ್ತೆ. ಒಂದು ತಿಂಗಳ ಕಾಲ ಇರುತ್ತೆ. ಸ್ಥಳೀಯರು ಏಳು ವರುಷಕ್ಕೊಮ್ಮೆ ಅರಳುತ್ತೆ ಅಂತಾರೆ. ಇದು ಹೂಬಿಟ್ಟರೆ ಬೆಟ್ಟಕ್ಕೆ ನೀಲಿ ಹೊದಿಕೆ. ರಸ್ತೆಯಲ್ಲಿ ಹೋಗುತ್ತಿದ್ದರೆ ಬೆಟ್ಟಗುಡ್ಡ ಬಯಲೆಲ್ಲ ನೀಲಿಮಯ!

ತಮಿಳು ನಾಡಿನ ನೀಲಗಿರಿ, ದೊಡ್ಡಬೆಟ್ಟ, ಅನ್ನಾಮಲೈ ಬೆಟ್ಟ, ನೆಲ್ಲಿಯಂಪಥಿ ಬೆಟ್ಟ, ಕಾರ್ಡಮಮ್‌ ಹಿಲ್ಸ್‌, ಕೇರಳದ ಮನ್ನರ್‌ ಬಳಿಯ ಕುರಿಂಜಿಮೊಲಡ, ಅಗಸ್ತ್ಯ ಮಲೈ, ಪೊನ್ಮುಡಿ ಬೆಟ್ಟ, ಪಾಲಕ್ಕಾಡ್‌ ಬೆಟ್ಟಗಳು, ಕೊಡಗಿನ ಮಾಂದಲ್ಪಟ್ಟಿ, ಕೋಟೆ ಬೆಟ್ಟ, ಬ್ರಹ್ಮಗಿರಿ, ಪುಷ್ಪಗಿರಿ. ಕರ್ನಾಟಕದ ಕುಮಾರಪರ್ವತ, ಚಂದ್ರದ್ರೋಣ ಪರ್ವತ, ಕುದುರೆಮುಖ, ಆಗುಂಬೆ, ಬಾಬಾಬುಡನ್‌ ಗಿರಿ, ಸೀತಾಳಯ್ಯನ ಬೆಟ್ಟ, ಮುಳ್ಳಯ್ಯನಗಿರಿ, ಕೊಡಚಾದ್ರಿಯ ಶೋಲಾ ಬೆಟ್ಟಗಳು, ಜೋಗ, ಬೇಡ್ತಿ, ಅಘನಾಶಿನಿ, ಗೋವಾ, ಹೀಗೆ ಮಹಾರಾಷ್ಟ್ರದ ಸತಾರವರೆಗೆ ಏಕಕಾಲದಲ್ಲಿ ಅರಳುವ ಈ ಹೂವಿನ ಪ್ರಭೇಧವನ್ನು ’ಗ್ರಿಗೇರಿಯಸ್‌ ಫ್ಲವರಿಂಗ್‌ ಎಂದೂ ಅದ್ಭುತ ಹೂ ಮೇಳವೆಂದು, ನೀಲ ಹೂವಿನ ರಾಶಿಯ ಬಿಗ್‌ ಬ್ಯಾಂಗ್‌ ಎಂದು ಕರೆಯುತ್ತಾರೆ. ಸಾವಿರಾರು ಮೀಟರ್‌ವರೆಗೆ ಏಕಕಾಲದಲ್ಲಿ ಅರಳುವ ಈ ಹೂವಿನ ಪ್ರಭೇಧದ ವಿಸ್ಮಯ ಇಂದಿಗೂ ಜಗತ್ತಿನ ಅದ್ಭುತ ಸೃಷ್ಠಿ ಸೌಂದರ್ಯದಲ್ಲೊಂದು. ಆರಂಭದಲ್ಲಿ ತಿಳಿ ಗುಲಾಬಿ ಬಣ್ಣದಲ್ಲಿದ್ದು ನಂತರ ನೀಲಿ ಬಣ್ಣಕ್ಕೆ ತಿರುಗುವ ವಿಶೇಷ ಕಾಡು ಹೂವಿದು.

Witness the remarkable blooming of Neelakurinji flowers in Chikkamagaluru vcs

ಇದು ಜೀವನ ಚಕ್ರ

ಸಾವಿರಾರು ಮೀಟರ್‌ ವರೆಗಿನ ಇಳಿಜಾರು ಹಾಗೂ ಸಮತಟ್ಟು ಪ್ರದೇಶದಲ್ಲಿ ಅರಳಿ ನಿಲ್ಲುವ ಈ ಹೂವಿನಲ್ಲಿ ಈವರೆಗೆ 70 ವಿಧದ ಪ್ರಭೇಧಗಳನ್ನು ಗುರುತಿಸಿದ್ದು, ಕೆಲವು ಪ್ರಭೇಧಗಳು ಎರಡು-ಮೂರು ವರುಷಕ್ಕೊಮ್ಮೆ, ಕೆಲವು ಆರೇಳು ವರುಷಕ್ಕೊಮ್ಮೆ ಅರಳುತ್ತದೆ ಎನ್ನುತ್ತಾರೆ. ಏಳು ವರುಷದ ಹಿಂದೆ ಗುಡ್ಡದ ಇಳಿಜಾರಿನ ಮಣ್ಣಿನಲ್ಲಿ, ಪದರಗಳಲ್ಲಿ ಅಡಗಿ ಕುಳಿತ ಬೀಜಗಳು ಮುಂಗಾರಿನ ಮೊದಲು ಮಳೆಗೆ ಮೊಳಕೆ ಒಡೆದು ಶ್ರಾವಣ ಮಾಸದಿಂದ ಆಶ್ವಯುಜದ ವರೆಗೆ ಹೂ ಅರಳಿಸುತ್ತದೆ. ಈ ಭಾಗದ ಜನರು ಹೇಳುವುದು ಈ ಸಮಯದಲ್ಲಿ ಈ ಹೂಗಳ ಮಕರಂಧ ಹೀರಲು ದುಂಬಿಗಳ ಹಿಂಡು, ಜೇನ್ನೊಣಗಳ ದಂಡು ಧಾವಿಸಿ ಬಂದು ಗೂಡು ಕಟ್ಟುತ್ತವೆ. ಆ ವರುಷ ಸಕ್ಕತ್ತಾಗಿ ಜೇನು ಸಿಗುತ್ತದೆ. ಈ ಹೂವಿನಿಂದಾಗಿ ಜೀವ ವೈವಿದ್ಯತೆಯ ಕೊಂಡಿಯೇ ತೆರೆಯುತ್ತದೆ. ಅದುವೆ; ಈ ಹೂವಿನ ಮಕರಂಧ ಹೀರಲು ಜೇನು ಹುಳುಗಳು, ದುಂಬಿಗಳು ಧಾವಿಸಿದರೆ, ಜೇನು ಹುಳು ಮತ್ತು ದುಂಬಿಗಳನ್ನು ತಿನ್ನಲು ಕೆಲವು ಪ್ರಭೇಧದ ಜೇಡಗಳು ಬಲೆ ಹೆಣೆಯುತ್ತವೆ. ಈ ಎಲ್ಲ ಕೀಟಗಳನ್ನು ತಿನ್ನಲು ಕೆಲವು ಪಕ್ಷಿಗಳು ಮತ್ತೊಂದೆಡೆಯಿಂದ ಧಾವಿಸಿ ಬರುತ್ತದೆ. ಈ ದುಂಬಿ, ಜೇನು, ಪಕ್ಷಿ, ಸುಂದರ ಹೂವಿನ ರಾಶಿ ನೋಡಲು ಮಾನವರು ನುಗ್ಗಿ ಬರುತ್ತಾರೆ. ಬರುವ ಯಾರಾದರೇನು ರಕ್ತ ಸಿಕ್ಕರೆ ಸಾಕೆಂದು ವರುಷಗಟ್ಟಲೆ ಕಾದು ಕುಳಿತ ಜಿಗಣಿಗಳಿಗೂ ಜೀವ ಬಂದು ಟಣಕ್ಕೆಂದು ಹಾರಿ ರಕ್ತ ಹೀರಿ ಮತ್ತೆ ಜೀವ ಪಡೆದುಕೊಳ್ಳುತ್ತವೆ. ಮಾನವ - ಭಕ್ಷಕ ಜೀವಿ ರಕ್ತ ಹೀರುವ ಜಿಗಣಿ - ಪಕ್ಷಿ - ಜೇಡ - ದುಂಬಿ - ಜೇನು - ಹೂವಿನ ರಾಶಿ.. ಅಬ್ಬಬ್ಬ ಈ ಪ್ರಕೃತಿ ಮಾತೆಯ ಮಡಿಲಲ್ಲಿ ಅದೆಷ್ಟುವಿಸ್ಮಯ ಜಗತ್ತಿದೆ. ಒಂದರಜೊತೆ ಇನ್ನೊಂದರ ಸಂಬಂಧ!

ಮುಳ್ಳಯನಗಿರಿ ಸೌಂದರ್ಯ ಹೆಚ್ಚಿಸಿದ ನೀಲಿಕುರವಂಜಿ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಚಿಕ್ಕಮಗಳೂರು

ನಾವು ಹೋದ ಹಾದಿ:

ಚಿಕ್ಕಮಗಳೂರು ಸಮೀಪವಿರುವ ಚಂದ್ರದ್ರೋಣ ಪರ್ವತ, ಮುಳ್ಳಯ್ಯನಗಿರಿ, ದತ್ತಪೀಠ ಪರ್ವತ ಆಚೆ ಈಚೆ ಸಮೃದ್ಧವಾಗಿ ಹೂ ಅರಳಿದೆ ಎಂಬ ಸುದ್ದಿ ಸಿಕ್ಕಿತು. ಒಂದೇ ದಿನದಲ್ಲಿ ಹದಿನಾಲ್ಕು ಜನರು ನಿಶ್ಚಯಿಸಿ ಬೆಳ್ಳಂಬೆಳಿಗ್ಗೆ ನೀಲಕುರಿಂಜಿ ಮೇಳ ಹೊರಟೇ ಬಿಟ್ಟೆವು. ಶಿವಮೊಗ್ಗದಿಂದ ತರಿಕೆರೆ ಅಲ್ಲಿಂದ ಬಲಕ್ಕೆ ತಿರುಗಿ, ಲಿಂಗದಳ್ಳಿ, ಮಲ್ಲೇನಹಳ್ಳಿ, ಕೈಮರ ದಾಟಿದರೆ ಸಿಗುವುದೇ ಸೀತಾಳಯ್ಯನ ಬೆಟ್ಟಮತ್ತು ಮುಳ್ಳಯ್ಯನಗಿರಿ, ಅಲ್ಲಿಂದ ದತ್ತಪೀಠ ಹೀಗೆ ಎಲ್ಲೆಡೆ ಅರಳಿದ ನೀಲಕುರಿಂಜಿ ಹೂ ಮೇಳದಲ್ಲಿ ವಿಹರಿಸಿ ನಾವು ನಲಿದಾಡಿದೆವು.

Follow Us:
Download App:
  • android
  • ios