ವಿಶ್ವದ ಪ್ರತಿ ದೇಶವೂ ತನ್ನದೇ ಪದ್ಧತಿ , ಸಂಪ್ರದಾಯ ಆಚರಿಸಿಕೊಂಡು ಬರ್ತಿದೆ. ಟರ್ಕಿಯಲ್ಲಿ ಭಾರತದ ಪದ್ಧತಿಯೊಂದು ಚಾಲ್ತಿಯಲ್ಲಿದೆ. ಅಲ್ಲಿ ಚಾಕುವನ್ನು ಅಪ್ಪಿತಪ್ಪಿಯೂ ಕೈಗೆ ನೀಡೋದಿಲ್ಲ.

ಜಗತ್ತಿನ ವಿವಿಧ ದೇಶಗಳಲ್ಲಿ ಹಲವು ವಿಚಿತ್ರ ಸಂಪ್ರದಾಯಗಳು ಮತ್ತು ನಂಬಿಕೆಗಳು ಚಾಲ್ತಿಯಲ್ಲಿವೆ. ಇವುಗಳಲ್ಲಿ ಕೆಲವು ಅಚ್ಚರಿ ಮೂಡಿಸಿದರೆ, ಇನ್ನು ಕೆಲವು ಕುತೂಹಲಕ್ಕೆ ಕಾರಣವಾಗುತ್ತವೆ. ಅಂತಹದ್ದೇ ಒಂದು ವಿಚಿತ್ರ ನಂಬಿಕೆ ಟರ್ಕಿ ದೇಶದಲ್ಲಿದೆ. ಇಲ್ಲಿ ಚಾಕು ಅಥವಾ ಕತ್ತರಿಯನ್ನು ನೇರವಾಗಿ ಕೈಗೆ ಕೊಡುವಂತಿಲ್ಲ.

ಚಾಕು ಕೈಗೆ ಕೊಟ್ಟರೆ ಅಶುಭ

ಭಾರತದಲ್ಲಿರುವ ಈ ಪದ್ಧತಿ ಟರ್ಕಿಯಲ್ಲೂ ಇದೆ. ಭಾರತದಲ್ಲಿ ಕೂಡ ಕೆಲ ಪ್ರದೇಶಗಳಲ್ಲಿ ಚಾಕು ಹಾಗೂ ಕತ್ತರಿಯನ್ನು ಕೈಗೆ ನೀಡುವಂತಿಲ್ಲ. ಹಾಗೆಯೇ ಟರ್ಕಿಯಲ್ಲಿ ಕೂಡ ಇಬ್ಬರು ವ್ಯಕ್ತಿಗಳು ಪರಸ್ಪರ ಚಾಕುವನ್ನು ನೇರವಾಗಿ ಕೈಗೆ ಕೊಟ್ಟರೆ ಅಥವಾ ಪಡೆದುಕೊಂಡರೆ ಅದನ್ನು ಅಶುಭ ಎಂದು ನಂಬಲಾಗಿದೆ. ಹೀಗೆ ಮಾಡಿದ್ರೆ ಪರಸ್ಪರ ಜಗಳವಾಗಬಹುದು, ಸಂಬಂಧದಲ್ಲಿ ಮನಸ್ತಾಪ ಉಂಟಾಗಬಹುದು ಎಂಬ ನಂಬಿಕೆ ಅಲ್ಲಿನ ಕೆಲವು ಕುಟುಂಬಗಳಲ್ಲಿದೆ. ಅಷ್ಟೇ ಅಲ್ಲ, ಇದು ಸ್ನೇಹ ಮುರಿದು ದ್ವೇಷ ಆರಂಭವಾಗುವ ಸಂಕೇತ ಎಂದೂ ಕೆಲವರು ಭಾವಿಸುತ್ತಾರೆ.

ಟರ್ಕಿಯ ಈ ಸಂಪ್ರದಾಯದ ಪ್ರಕಾರ ಯಾರಿಗಾದರೂ ಚಾಕು, ಕತ್ತರಿ ಅಥವಾ ಇನ್ಯಾವುದೇ ಹರಿತವಾದ ವಸ್ತುವನ್ನು ನೀಡಬೇಕಾದರೆ, ಅದನ್ನು ನೇರವಾಗಿ ನೀಡುವಂತಿಲ್ಲ. ಅದರ ಬದಲಿಗೆ ಮೇಜು ಅಥವಾ ಸಮತಟ್ಟಾದ ಜಾಗದಲ್ಲಿ ಇಡಬೇಕು. ನಂತರ ಅದನ್ನು ಪಡೆದುಕೊಳ್ಳುವವರು ಅಲ್ಲಿಂದ ತೆಗೆದುಕೊಳ್ಳಬಹುದು.

ಟರ್ಕಿಯ ಹಲವು ಕುಟುಂಬಗಳಲ್ಲಿ ಈ ಪದ್ಧತಿಯನ್ನು ಮಕ್ಕಳಿಗೂ ಬಾಲ್ಯದಿಂದಲೇ ಕಲಿಸಲಾಗುತ್ತದೆ. ಯಾರಿಗಾದರೂ ಹರಿತವಾದ ವಸ್ತುಗಳನ್ನು ನೇರವಾಗಿ ಕೈಗೆ ನೀಡಬಾರದು ಎಂದು ಪೋಷಕರು ಮಕ್ಕಳಿಗೆ ತಿಳಿಸುತ್ತಾರೆ. ಹೀಗೆ ಮಾಡುವುದರಿಂದ ಸಂಬಂಧಗಳಲ್ಲಿ ಕಹಿ ಉಂಟಾಗಬಹುದು ಎಂಬುದು ಅವರ ನಂಬಿಕೆ.

ಚಾಕು ದ್ವೇಷದ ಸಂಕೇತ

ಈ ನಂಬಿಕೆಯ ಹಿಂದೆ ಒಂದು ಸಾಂಕೇತಿಕ ಕಾರಣವಿದೆ. ಚಾಕು ಯಾವುದೇ ವಸ್ತುವನ್ನು ಕತ್ತರಿಸಿ ಎರಡು ಭಾಗಗಳಾಗಿ ಮಾಡುತ್ತದೆ. ಅದೇ ರೀತಿ ಚಾಕುವನ್ನು ಕೈಯಿಂದ ಕೈಗೆ ನೀಡುವುದರಿಂದ ಇಬ್ಬರ ನಡುವಿನ ಸಂಬಂಧದಲ್ಲೂ ಬಿರುಕು ಮೂಡಬಹುದು ಎಂಬ ಸಾಂಕೇತಿಕ ಅರ್ಥವನ್ನು ಇದಕ್ಕೆ ಕಲ್ಪಿಸಲಾಗಿದೆ. ಹೀಗಾಗಿ ಚಾಕುವನ್ನು ಸಂಬಂಧ ಮುರಿಯುವ ಸಂಕೇತವಾಗಿ ನೋಡಲಾಗುತ್ತದೆ. ಇದರ ಜೊತೆಗೆ ಚಾಕು ಮತ್ತು ಕತ್ತರಿಯಂತಹ ಹರಿತವಾದ ವಸ್ತುಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ನೀಡುವಾಗ ಕೈಗೆ ಗಾಯವಾಗುವ ಅಪಾಯವೂ ಇರುತ್ತದೆ. ಹೀಗಾಗಿ ಮೇಜಿನ ಮೇಲೆ ಇಟ್ಟು ಪಡೆದುಕೊಳ್ಳುವ ವಿಧಾನ ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮವಾಗಿದೆ.

ನಿಜವಾಗಿಯೂ ಸ್ನೇಹ ಮುರಿಯುತ್ತಾ?

ಯಾರಿಗಾದರೂ ಚಾಕುವನ್ನು ನೇರವಾಗಿ ಕೈಗೆ ನೀಡುವುದರಿಂದ ಸ್ನೇಹ ಮುರಿಯುತ್ತದೆ ಅಥವಾ ಜಗಳವಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಟರ್ಕಿಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಜನಪದ ನಂಬಿಕೆ ಮತ್ತು ಸಂಪ್ರದಾಯವಷ್ಟೇ. ಇಂದಿಗೂ ಅಲ್ಲಿನ ಕೆಲವು ಜನರು ಇದನ್ನು ಪಾಲಿಸುತ್ತಾರೆ. ಕುತೂಹಲಕಾರಿ ಸಂಗತಿಯೆಂದರೆ, ಗ್ರೀಸ್ ಸೇರಿದಂತೆ ಇತರೆ ಕೆಲವು ದೇಶಗಳಲ್ಲಿಯೂ ಇಂತಹುದೇ ನಂಬಿಕೆಗಳು ಕಂಡುಬರುತ್ತವೆ.