ಹೊಸ ವರ್ಷದ ಆಚರಣೆಗೆ ಗೋವಾ ಮತ್ತು ತಿರುಪತಿಗೆ ತೆರಳುವವರಿಗೆ ರೈಲ್ವೆ ಇಲಾಖೆ ಬಿಗ್ ಶಾಕ್ ನೀಡಿದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಹಲವು ರೈಲುಗಳ ಸಂಚಾರ ರದ್ದಾಗಿದೆ. ಕ್ಯಾಸಲ್ ರಾಕ್-ಕುಲೆಮ್ ಮಾರ್ಗದ ದುರಸ್ತಿ ಹಿನ್ನೆಲೆಯಲ್ಲಿ ಈ ನಿರ್ಧಾರ.
ಹೊಸ ವರ್ಷ 2027ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದಾಗಲೇ ಹಲವರು ಹೊಸ ವರ್ಷವನ್ನು ಎಲ್ಲಿ ಆಚರಿಸಬೇಕು ಎಂದು ಪ್ಲ್ಯಾನ್ ಮಾಡಿರುತ್ತಾರೆ. ಅದರಲ್ಲಿಯೂ ಹೊಸ ವರ್ಷ ಎಂದರೆ ಮೋಜು ಮಸ್ತಿ ಮಾಡುವವರು ಗೋವಾ ಆಯ್ಕೆ ಮಾಡಿಕೊಂಡರೆ, ಧಾರ್ಮಿಕ ಕ್ಷೇತ್ರಕ್ಕೆ ಹೋಗಬೇಕು ಎನ್ನುವವರು ತಿರುಪತಿ ಸೇರಿ ಕೆಲವು ಧಾರ್ಮಿಕ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಗೋವಾ, ತಿರುಪತಿ ಸೇರಿ ಹೊಸ ವರ್ಷದ ಹೊಸ್ತಿಲಿನಲ್ಲಿಯೇ ಕೆಲವು ರೈಲುಗಳು ರದ್ದಾಗಿದ್ದು, ಅದರ ಸಂಪೂರ್ಣ ಡಿಟೇಲ್ಸ್ ಇಲ್ಲಿ ನೀಡಲಾಗಿದೆ.
ಪ್ರವಾಸ ಯೋಜಿಸುವ ಮುನ್ನ...
ಈ ಹಿನ್ನೆಲೆಯಲ್ಲಿ ಗೋವಾ ಮತ್ತು ತಿರುಪತಿಗೆ ತೆರಳುವವರು ರೈಲು ಸಂಚಾರದ ಸಮಯ ಮತ್ತು ಮಾರ್ಗ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರವಾಸದ ಯೋಜನೆಯನ್ನು ರೂಪಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ವಿನಂತಿಸಿದೆ. ಈ ರೈಲುಗಳನ್ನು ನಂಬಿ ಪ್ರಯಾಣ ಮಾಡಲು ಮುಂದಾಗುವವರು ಬದಲಾವಣೆಯನ್ನು ಗಮನಿಸಿ ಎಂದು ವಿನಂತಿ ಮಾಡಿಕೊಂಡಿದೆ. ಕ್ಯಾಸಲ್ ರಾಕ್ ಮತ್ತು ಕುಲೆಮ್ ಮಾರ್ಗದ ಹಳಿ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗೋವಾಕ್ಕೆ ತೆರಳುವ ಶಾಲೀಮಾರ್ ಮತ್ತು ತಿರುಪತಿ ರೈಲು ಸೇರಿದಂತೆ ಒಟ್ಟು 8 ರೈಲುಗಳನ್ನು ರೈಲ್ವೆ ಇಲಾಖೆ ಹುಬ್ಬಳ್ಳಿಯಲ್ಲೇ ಸ್ಥಗಿತಗೊಳಿಸಲಿದೆ. ಈ ದುರಸ್ತಿ ಕಾರ್ಯ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ನಡೆಯುತ್ತಿರುವ ಕಾರಣದಿಂದ ಹೊಸ ವರ್ಷಾಚರಣೆಗೆ ತೆರಳುವವರಿಗೆ ವ್ಯತ್ಯಯ ಉಂಟಾಗಲಿದೆ. ಅದರಲ್ಲಿಯೂ ಹೆಚ್ಚಾಗಿ, ಗೋವಾ ಮತ್ತು ತಿರುಪತಿ ಯಾತ್ರಿಕರಿಗೆ ಸಮಸ್ಯೆ ಆಗಲಿದೆ.
ಡೆಮು (DEMU) ರೈಲು ಸಂಚಾರ ಸಂಪೂರ್ಣ ರದ್ದು
ಈ ಮಾರ್ಗದಲ್ಲಿ ಸಂಚರಿಸುವ ಡೆಮು ರೈಲು ಸೇವೆ ಸಂಪೂರ್ಣವಾಗಿ ರದ್ದಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಇದಲ್ಲದೆ, ಶಾಲೀಮಾರ್, ತಿರುಪತಿ ಹಾಗೂ ಸಿಕಂದರಾಬಾದ್ನಿಂದ ಗೋವಾ (ವಾಸ್ಕೋಡ ಗಾಮ) ಕಡೆಗೆ ತೆರಳುವ 8 ಪ್ರಮುಖ ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಾಸ್ಕೋಡ ಗಾಮ ಮತ್ತು ಕುಲೆಮ್ ನಡುವಿನ ಡೆಮು ರೈಲು ಸೇವೆ (56964/56963) ಡಿಸೆಂಬರ್ 1, 2026 ರಿಂದ ಜನವರಿ 20, 2027 ರವರೆಗೆ ಸಂಪೂರ್ಣವಾಗಿ ರದ್ದಾಗಲಿದೆ ಎಂದು ತಿಳಿಸಿದೆ.
ಜಾಸಿಡಿಹ್-ವಾಸ್ಕೋಡ ಗಾಮ ಎಕ್ಸ್ಪ್ರೆಸ್ (19322/17321)
ರೈಲು ಸಂಖ್ಯೆ 19322: 2026ರ ನವೆಂಬರ್ 30 ರಿಂದ 2027ರ ಜನವರಿ 18 ರವರೆಗೆ ಹುಬ್ಬಳ್ಳಿಯವರೆಗೆ ಮಾತ್ರ ಸಂಚರಿಸಲಿದೆ. ಮರಳಿ ಹೊರಡುವ ರೈಲು (17321) ವಾಸ್ಕೋ ಬದಲಿಗೆ ಹುಬ್ಬಳ್ಳಿಯಿಂದಲೇ ಪ್ರಯಾಣ ಬೆಳೆಸಲಿದೆ.
ಶಾಲೀಮಾರ್-ವಾಸ್ಕೋ ಡ ಗಾಮ ಅಮರಾವತಿ ಎಕ್ಸ್ಪ್ರೆಸ್ (18047/18048)
ರೈಲು ಸಂಖ್ಯೆ 18047: 2026ರ ನವೆಂಬರ್ 28 ರಿಂದ 2027ರ ಜನವರಿ 18 ರವರೆಗೆ ವಾಸ್ಕೋ ಬದಲಿಗೆ ಹುಬ್ಬಳ್ಳಿಯಲ್ಲೇ ಪ್ರಯಾಣ ಮುಕ್ತಾಯಗೊಳಿಸಲಿದೆ.
ರೈಲು ಸಂಖ್ಯೆ 18048 (ಮರುಪ್ರಯಾಣ): ವಾಸ್ಕೋ ಬದಲಿಗೆ ಹುಬ್ಬಳ್ಳಿ ನಿಲ್ದಾಣದಿಂದಲೇ ನಿಗದಿತ ಸಮಯಕ್ಕೆ ಹೊರಡಲಿದೆ. 2026ರ ಡಿಸೆಂಬರ್ 1 ರಿಂದ 2027ರ ಜನವರಿ 21 ರವರೆಗೆ ಹುಬ್ಬಳ್ಳಿ-ವಾಸ್ಕೋ ಡ ಗಾಮ ನಡುವಿನ ಸೇವೆ ರದ್ದಾಗಲಿದೆ.
ಸಿಕಂದರಾಬಾದ್-ವಾಸ್ಕೋ ಡ ಗಾಮ ಎಕ್ಸ್ಪ್ರೆಸ್ (17039/17040)
ರೈಲು ಸಂಖ್ಯೆ 17039: 2026ರ ಡಿಸೆಂಬರ್ 2 ರಿಂದ 2027ರ ಜನವರಿ 15 ರವರೆಗೆ ಹುಬ್ಬಳ್ಳಿಯವರೆಗೆ ಮಾತ್ರ ಸಂಚರಿಸಲಿದೆ. ಹುಬ್ಬಳ್ಳಿ-ವಾಸ್ಕೋ ಭಾಗದ ಸೇವೆ ರದ್ದಾಗಲಿದ್ದು, ಮರಳಿ ಹೊರಡುವ ರೈಲು (17040) ಹುಬ್ಬಳ್ಳಿಯಿಂದಲೇ ಆರಂಭವಾಗಲಿದೆ.
ತಿರುಪತಿ-ವಾಸ್ಕೋ ಡ ಗಾಮ ಎಕ್ಸ್ಪ್ರೆಸ್ (17419/17021 ಮತ್ತು 17420/17022)
2026ರ ಡಿಸೆಂಬರ್ 3 ರಿಂದ 2027ರ ಜನವರಿ 14 ರವರೆಗೆ ಈ ರೈಲು ವಾಸ್ಕೋ ಬದಲಿಗೆ ಹುಬ್ಬಳ್ಳಿಯಲ್ಲೇ ಕೊನೆಗೊಳ್ಳಲಿದೆ. ಹುಬ್ಬಳ್ಳಿ ಮತ್ತು ವಾಸ್ಕೋ ನಡುವಿನ ಸೇವೆ ರದ್ದಾಗಿದ್ದು, ಮರಳಿ ಹೊರಡುವ ರೈಲು (17420/17022) ಹುಬ್ಬಳ್ಳಿಯಿಂದಲೇ ಪ್ರಯಾಣ ಆರಂಭಿಸಲಿದೆ.














