ಉತ್ತರ ಧ್ರುವದ ಸಮೀಪವಿರುವ ನಾರ್ವೇಯ ಸ್ವಾಲ್ಬಾರ್ಡ್ ದ್ವೀಪಸಮೂಹದಲ್ಲಿ (Svalbard) ಹುಟ್ಟುವುದು ಮತ್ತು ಸಾಯುವುದು ಕಾನೂನುಬಾಹಿರ. ವೀಸಾ ಇಲ್ಲದೆ ವಾಸಿಸಬಹುದಾದ ಈ ಪ್ರದೇಶವೇ ವಿಲಕ್ಷಣ, ವಿಚಿತ್ರ.
ಇದೊಂದು ವಿಚಿತ್ರ, ಜಗತ್ತಿನ ವಿಲಕ್ಷಣ ಊರು. ಇದರ ಹೆಸರು ಸ್ವಾಲ್ಬಾರ್ಡ್. ಉತ್ತರ ಧ್ರುವದಿಂದ ಸುಮಾರು 1,300 ಕಿಲೋಮೀಟರ್ ದೂರದಲ್ಲಿರುವ ಸ್ವಾಲ್ಬಾರ್ಡ್ (Svalbard) ನಾರ್ವೇಗೆ ಸೇರಿದ ದ್ವೀಪಗಳ ಸಮೂಹ. ಇಲ್ಲಿಗೆ ಹೋಗಲು ನಿಮಗೆ ವೀಸಾ ಅಗತ್ಯವಿಲ್ಲ. ಆದರೆ ಈ ಊರಿನ ಬಗ್ಗೆ ಕೇಳಿದರೆ ಯಾರಿಗೂ ಅಚ್ಚರಿಯಾಗುವುದು ಖಚಿತ. ಏಕೆಂದರೆ ಇಲ್ಲಿ ಮಗು ಹುಟ್ಟಿಸುವುದಕ್ಕೂ, ಸಾಯುವುದಕ್ಕೂ ಕಾನೂನಿನ ಅನುಮತಿ ಇಲ್ಲ.
ಸ್ವಾಲ್ಬಾರ್ಡ್‌ನ ಹವಾಮಾನ ಅತೀ ಕಠಿಣ. ಕ್ಷಣಕ್ಷಣಕ್ಕೂ ಹವಾಮಾನ ಬದಲಾಗುತ್ತದೆ. ಅಲ್ಲದೆ, ಯಾವಾಗ ಬೇಕಾದರೂ ಧ್ರುವ ಕರಡಿಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗೆ ಈ ದ್ವೀಪಕ್ಕೆ ಭೇಟಿ ನೀಡಿದ್ದ ಟ್ರಾವೆಲ್ ಇನ್‌ಫ್ಲೂಯೆನ್ಸರ್ ರಾಧಿಕಾ ನೋಮ್ಲರ್ಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಊರಿನ ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಅವರು ಹೇಳುವಂತೆ, ಜಗತ್ತಿನ ಉತ್ತರ ತುದಿಯಲ್ಲಿರುವ ಈ ಊರಲ್ಲಿ ಹುಟ್ಟುವುದೂ, ಸಾಯುವುದೂ ನಿಷಿದ್ಧ. ಯಾಕೆಂದರೆ ಇಲ್ಲಿ ಆಸ್ಪತ್ರೆಗಳಿಲ್ಲ. ಹೀಗಾಗಿಹೆರಿಗೆ ಮಾಡಿಸುವವರಿಲ್ಲ. ಇನ್ನು ಸತ್ತರೆ,ತೀವ್ರ ಚಳಿಯಿಂದ ಶವಗಳು ಕರಗುವುದೇ ಇಲ್ಲ. ಈ ಕಾರಣದಿಂದಲೇ ಇಲ್ಲಿ ಸಮಾಧಿ ವ್ಯವಸ್ಥೆಯೂ ಇಲ್ಲ.
ಸ್ವಾಲ್ಬಾರ್ಡ್‌ನಲ್ಲಿ ಚಳಿಗಾಲದಲ್ಲಿ 24 ಗಂಟೆಗಳ ಕಾಲ ಕತ್ತಲೆ, ಬೇಸಿಗೆಯಲ್ಲಿ 24 ಗಂಟೆಗಳ ಕಾಲ ಬೆಳಕು ಇರುತ್ತದೆ. ಕೆಲ ತಿಂಗಳು ಸೂರ್ಯನೇ ಕಾಣಿಸಿಕೊಳ್ಳದಿದ್ದರೆ, ಇನ್ನೂ ಕೆಲ ತಿಂಗಳು ಸೂರ್ಯ ಅಸ್ತವಾಗುವುದೇ ಇಲ್ಲ. ಈ ಪ್ರದೇಶದಲ್ಲಿ ಪ್ರಾಕೃತಿಕ ವಿಪತ್ತು, ಯುದ್ಧ ಹಾಗೂ ಹವಾಮಾನ ಬದಲಾವಣೆಯ ಸುಳಿಗೆ ಸಿಲುಕಿದಾಗ ಮನುಷ್ಯ ಉಳಿಯುವಂತೆ ನಿರ್ಮಿಸಿರುವ ಡೂಮ್ಸ್‌ಡೇ ವಾಲ್ಟ್ ಸಹ ಇದೆ. ಇದನ್ನು ಮಾನವಕುಲದ ಕೃಷಿ ವೈವಿಧ್ಯ ಭದ್ರತೆಗೂ ಬಳಸಲಾಗುತ್ತಿದೆ. ಇಲ್ಲಿ ಆಹಾರಧಾನ್ಯಗಳ ಬೀಜಗಳನ್ನು ಭದ್ರವಾಗಿ ರಕ್ಷಿಸಲಾಗಿದೆ.
ಈ ದ್ವೀಪಗಳ ಮತ್ತೊಂದು ವಿಶೇಷತೆ ಎಂದರೆ, 50ಕ್ಕೂ ಹೆಚ್ಚು ದೇಶಗಳ ಜನರು ಇಲ್ಲಿ ವೀಸಾ ಇಲ್ಲದೆ ವಾಸಿಸುತ್ತಿದ್ದಾರೆ. ಇದಕ್ಕೆ ಕಾರಣ 1920ರ ಸ್ವಾಲ್ಬಾರ್ಡ್ ಒಪ್ಪಂದ. ಈ ಒಪ್ಪಂದದ ಪ್ರಕಾರ ಯಾವುದೇ ದೇಶದ ನಾಗರಿಕರು ಇಲ್ಲಿ ವಾಸ ಮತ್ತು ಕೆಲಸ ಮಾಡಬಹುದು. ಭಾರತವೂ ಈ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.
ಸೇನೆಯಿಲ್ಲ, ವೀಸಾ ಬೇಕಿಲ್ಲ
ಸ್ವಾಲ್ಬಾರ್ಡ್‌ನಲ್ಲಿ ಯಾವುದೇ ರೀತಿಯ ಅಧಿಕೃತ ವಲಸೆ ಪ್ರಕ್ರಿಯೆ ಇಲ್ಲ. ಜೀವನ ಸಾಗಿಸಲು ಶಕ್ತರಾಗಿದ್ದರೆ ಮತ್ತು ಕೆಲಸ ಸಿಕ್ಕರೆ ಯಾರಾದರೂ ಇಲ್ಲಿ ನೆಲೆಸಬಹುದು. ಪ್ರಸ್ತುತ ಇಲ್ಲಿ ಸುಮಾರು 2,500 ರಿಂದ 3,000 ಜನರು ವಾಸಿಸುತ್ತಿದ್ದಾರೆ. ಆದರೆ ಮಾನವರಿಗಿಂತ ಧ್ರುವ ಕರಡಿಗಳೇ ಹೆಚ್ಚು. ಇಲ್ಲಿನ ನಾಜೂಕಾದ ಆರ್ಕ್ಟಿಕ್ ಹಕ್ಕಿ ಸಂಕುಲವನ್ನು ರಕ್ಷಿಸಲು ಬೆಕ್ಕುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇಲ್ಲಿ ಸೇನೆ ಇಲ್ಲ, ಅಪರಾಧ ಪ್ರಕರಣಗಳು ಅತ್ಯಂತ ವಿರಳ. ಜನರು ಬಾಗಿಲುಗಳನ್ನು ಲಾಕ್ ಮಾಡದೆ ವಾಸಿಸುವುದು, ಸೈಕಲ್‌ಗಳನ್ನು ಹೊರಗೇ ಬಿಡುವುದು ಇಲ್ಲಿ ಸಾಮಾನ್ಯ ದೃಶ್ಯ. ಆದರೆ ಊರಿನ ಹೊರಗೆ ತೆರಳುವಾಗ ಧ್ರುವ ಕರಡಿಗಳ ಅಪಾಯ ಇರುವುದರಿಂದ ರೈಫಲ್ ಹೊಂದಿರುವುದು ಕಡ್ಡಾಯವಾಗಿದೆ.
ಸ್ವಾಲ್ಬಾರ್ಡ್‌ನಲ್ಲಿ ಸಾವು ಮತ್ತು ಜನನಕ್ಕೆ ನಿಷೇಧ ಇರುವುದಕ್ಕೆ ಪ್ರಮುಖ ಕಾರಣ ಸದಾ ಕಾಲ ಇರುವ ಹಿಮಪಾತ. ಇದರಿಂದ ಶವಗಳು ಸರಿಯಾಗಿ ಕರಗದೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಈ ಹಿನ್ನೆಲೆಯಲ್ಲಿ ಈಗ ಇಲ್ಲಿ ಸಮಾಧಿ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಗಂಭೀರವಾಗಿ ಅಸ್ವಸ್ಥರಾದವರು ಅಥವಾ ವೃದ್ಧರು ದ್ವೀಪವನ್ನು ತೊರೆಯಲೇಬೇಕು.
ಇಲ್ಲಿ ವೃದ್ಧಾಶ್ರಮಗಳಿಲ್ಲ. ಅಲ್ಲದೆ, ಸುಧಾರಿತ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಗರ್ಭಿಣಿಯರು ಹೆರಿಗೆಗಾಗಿ ಮುಂಚಿತವಾಗಿಯೇ ನಾರ್ವೇ ಮುಖ್ಯಭೂಮಿಗೆ ತೆರಳಬೇಕು. ಈ ಕಾರಣದಿಂದ ಸ್ವಾಲ್ಬಾರ್ಡ್‌ನ್ನು ಯುವಕರು, ದುಡಿಯುವವರು ಮತ್ತು ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಧೈರ್ಯವಿರುವವರಿಗಾಗಿ ಮಾತ್ರ ನಿರ್ಮಿತ ಸ್ಥಳವೆಂದು ಹೇಳಲಾಗುತ್ತದೆ. ಜಗತ್ತಿನ ತುದಿಯಲ್ಲಿ ಇರುವ ಈ ಊರು ವಿಚಿತ್ರ ನಿಯಮಗಳಿಂದ ಗಮನ ಸೆಳೆದರೂ, ಅದರ ವಿಶಿಷ್ಟತೆಯೇ ಸ್ವಾಲ್ಬಾರ್ಡ್‌ಗೆ ವಿಶೇಷ ಸ್ಥಾನ ನೀಡಿದೆ.


