Asianet Suvarna News Asianet Suvarna News

Dholkal Ganesha Statue: ಚಾರಣಿಗರ ಫೇವರಿಟ್ ಪ್ಲೇಸ್ ಧೋಲ್ಕಲ್ ಗಣೇಶ ದೇವಾಲಯ

ದಟ್ಟಾರಣ್ಯದ ನಡುವೆ ಅಂಕುಡೊಂಕಾಗಿ ಸಾಗುವ ಹಾದಿ (Path), ಅಲ್ಲಲ್ಲಿ ಬೆಟ್ಟ, ಗುಡ್ಡಗಳ ಏರಿಳಿತ..ಕಿಲೋಮೀಟರ್ ಗಟ್ಟಲೆ ನಡೆದು ಗಮ್ಯಸ್ಥಾನಕ್ಕೆ ತಲುಪಿದಾಗ ಕಾಣಸಿಗುವುದೇ ಧೋಲ್ಕಲ್  ಗಣೇಶ ದೇವಾಲಯ (Temple). ಚಾರಣ (Trekking)ದ ಜತೆ ಅತ್ಯಂತ ಪುರಾತನ ವಿನಾಯಕನ ವಿಗ್ರಹವನ್ನು ಕಣ್ತುಂಬಿಳೊಳ್ಳುವ ಕ್ಷಣ..ಇದೆಲ್ಲಾ ಇರುವುದು ಎಲ್ಲಿ

Visit Mystery Ganesha statue on Dholkal Hill Chhattisgarh
Author
Bengaluru, First Published Dec 16, 2021, 2:44 PM IST

ಗಣಪತಿ ಎಲ್ಲಾ ದೇವರಿಗಿಂತಲೂ ಹೆಚ್ಚು ಜನಪ್ರಿಯವಾಗಿ ಪೂಜೆಯಲ್ಲಿ ಅಗ್ರಸ್ಥಾನ ಪಡೆದ ದೇವರು. ವಿದ್ಯಾಭ್ಯಾಸ (Education), ವಿವಾಹ, ಉಪನಯನ, ಗೃಹಪ್ರವೇಶ, ಹೀಗೆ ಜನಜೀವನದ ಎಲ್ಲಾ ಶುಭಕಾರ್ಯಗಳಲ್ಲೂ ಗಣೇಶನಿಗೆ ಮೊದಲ ಪ್ರಾಧ್ಯಾನತೆಯಿದೆ. ಯಾವುದೇ ಕೆಲಸ ಮಾಡುವುದಕ್ಕೂಆರಂಭದಲ್ಲಿ ಮೊದಲ ಪೂಜೆ ಗಣಪತಿಗೆ ಮೀಸಲಿಡಲಾಗುತ್ತದೆ. ಋಗ್ವೇದದಲ್ಲಿ ಗಣಾನಾಂ ತ್ವಾ ಗಣಪತಿಂ ಹವಾಮಹೇ ಎಂಬ ಮಾತಿದ್ದು, ಇದು ಗಣಪತಿಯ ಪೂಜೆಯ ಮುಖ್ಯಮಂತ್ರವಾಗಿ ಇಂದಿಗೂ ಪುರಸ್ಕೃತವಾಗಿದೆ.

ಅನಾದಿ ಕಾಲದಿಂದಲೂ ಜನರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿಕೊಂಡೇ ಬರುತ್ತಿದ್ದಾರೆ. ದೇಶದ ಹಲವೆಡೆ ಗಣಪನ ಪುರಾತನ ದೇವಾಲಯ (Temple)ಗಳಿವೆ. ದೇಶದ ವಿವಿಧ ರಾಜ್ಯಗಳಲ್ಲಿ ಗಣೇಶನಿಗೆ ಅರ್ಪಿತವಾಗಿರುವ ಹಲವು ದೇವಾಲಯಗಳನ್ನು ನಾವು ನೋಡಬಹುದು. ಬಲಮುರಿ, ಎಡಮುರಿ ಎಂದು ವಿವಿಧ ರೂಪದ ಗಣಪತಿಯನ್ನು ಪೂಜಿಸಲಾಗುತ್ತದೆ. ಅದರಲ್ಲೊಂದು ಛತ್ತೀಸ್ ಘಡ್‌ನ ದಂತೇವಾಡದ ಧೋಲ್ಕಲ್‌ನಲ್ಲಿರುವ ಪ್ರಾಚೀನ ಗಣೇಶನ ದೇವಾಲಯ.

ಗಣೇಶನ ಪೂಜಿಸಿದ್ರೆ ಶನಿದೇವರ ಕಾಟವಿಲ್ಲ, ಯಾಕೆ ಗೊತ್ತೆ?

3000 ಅಡಿ ಎತ್ತರದಲ್ಲಿದೆ ಗಣೇಶನ ವಿಗ್ರಹ

ಧೋಲ್ಕಲ್‌ನಲ್ಲಿರುವ ಗಣೇಶ ದೇವಾಲಯವು ಅತ್ಯಂತ ಪ್ರಾಚೀನ ದೇವಾಲಯವೆಂದು ಕರೆಸಿಕೊಂಡಿದೆ. ಹಲವು ಶತಮಾನಗಳಿಂದ ಈ ದೇವಾಲಯ ಯಾರಿಗೂ ಗೋಚರಿಸಿರಲ್ಲಿಲ್ಲ. 2012ರಲ್ಲಿ ಇದನ್ನು ಪುರಾತತ್ವ ಶಾಸ್ತ್ರಜ್ಞರು ಪರಿಶೋಧಿಸುವವರೆಗೂ ಈ ದೇವಸ್ಥಾನವಿರುವುದು ಯಾರಿಗೂ ತಿಳಿದಿರಲ್ಲಿಲ್ಲ. ರಾಯ್ಪುರ್‌ನಿಂದ 350 ಕಿ.ಮೀ ದೂರದಲ್ಲಿ ದಂತೇವಾಡ ಜಿಲ್ಲೆಯ ಧೋಲ್ಕರ್ ಎಂಬಲ್ಲಿ ದಟ್ಟಾರಣ್ಯದ ಮಧ್ಯೆ ನಿಗೂಢ ಸ್ಥಳದಲ್ಲಿ ಈ ದೇವಸ್ಥಾನವಿದೆ. ದಟ್ಟ ಕಾಡಿನ ಮಧ್ಯೆ ಎತ್ತರದಲ್ಲಿ ದೊಡ್ಡ ಗಣೇಶನ ವಿಗ್ರಹವಿದೆ. ಇದು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿದೆ. 

ಬೆಟ್ಟದ ಮೇಲೆ ನಡೆದಿತ್ತು ಗಣೇಶ-ಪರಶುರಾಮನ ಯುದ್ಧ

ಪರಶುರಾಮ ಮತ್ತು ಗಣೇಶನ ನಡುವಿನ ಯುದ್ಧದ ನೆನಪಿಗಾಗಿ, ಚಿಂದಕ್ ನಾಗವಂಶಿ ರಾಜವಂಶದ ರಾಜರು 11ನೇ ಶತಮಾನದಲ್ಲಿ ಬೆಟ್ಟದ ತುದಿಯಲ್ಲಿ ಗಣೇಶನ ಕಲ್ಲಿನ ವಿಗ್ರಹವನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ. ಈ ವಿಗ್ರಹ 2.5ರಿಂದ 3 ಅಡಿ ಎತ್ತರವಿದೆ. ಸ್ಥಳೀಯರ ನಂಬಿಕೆಯ ಪ್ರಕಾರ, ಧೋಲ್ಕಲ್ ಬೆಟ್ಟದ ಮೇಲೆ ಗಣೇಶ ಮತ್ತು ಪರಶುರಾಮನ ನಡುವೆ ವರುಷಗಳ ಹಿಂದೆ ಘೋರವಾದ ಯುದ್ಧ ನಡೆದಿತ್ತು. ಈ ಸಂದರ್ಭದಲ್ಲಿ ಪರಶುರಾಮನು ಗಣೇಶನ ಮೇಲೆ ತನ್ನ ಫಾರ್ಸಾ ಅಥವಾ ಕೊಡಲಿಯಿಂದ ದಾಳಿ ಮಾಡಿದನು. ಹೀಗಾಗಿ ಬೆಟ್ಟದ ಬುಡದಲ್ಲಿರುವ ಗ್ರಾಮವನ್ನು ಫರ್ಸಪಾಲ್ ಎಂದು ಕರೆಯಲಾಯಿತು.

ಶಿವನ ಕೋಪಕ್ಕೆ ಶಿರವನ್ನೇ ಕಳೆದುಕೊಂಡ ಗಣಪತಿ, ಮುಂದೇನಾಯ್ತು..?

ಬೆಟ್ಟದ ಮೇಲಿರುವ ಈ ಗಣೇಶನ ವಿಗ್ರಹವನ್ನು ಶಾಸ್ತ್ರೀಯ ಸಂಗೀತದಲ್ಲಿ ಸಾಮಾನ್ಯವಾಗಿ ಬಳಸುವ ಸಂಗೀತ ವಾದ್ಯವಾದ ಧೋಲಾಕ್ ಆಕಾರದಲ್ಲಿ ಕೆತ್ತಲಾಗಿದೆ. ಆದ್ದರಿಂದ, ಬೆಟ್ಟಕ್ಕೆ ಧೋಲ್ಕಲ್ ಎಂದು ಹೆಸರಿಡಲಾಗಿದೆ. ಇಲ್ಲಿರುವ ಗಣೇಶನ ವಿಗ್ರಹವು ವಿಶಿಷ್ಟವಾದ ಲಲಿತಾಸನ ಭಂಗಿಯಲ್ಲಿ ಚಿತ್ರಿಸಲಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಗಳು ವರ್ಷಪೂರ್ತಿ ಈ ಗಣೇಶನ ವಿಗ್ರಹವನ್ನು ಪೂಜಿಸುತ್ತಾರೆ, ಮತ್ತು ಜನವರಿ-ಫೆಬ್ರವರಿ ನಡುವೆ ಮಾಘ ತಿಂಗಳಲ್ಲಿ ಈ ಸ್ಥಳದಲ್ಲಿ ವಿಶೇಷ ಜಾತ್ರೆ ನಡೆಯುತ್ತದೆ. ಸಮೀಪದ ಹಲವು ಊರುಗಳಿಂದ ಜನರು ಇಲ್ಲಿ ಬಂದು  ಸೇರುತ್ತಾರೆ.

2017ರಲ್ಲಿ ಧೋಲ್ಕಲ್ ಬೆಟ್ಟದಿಂದ 13,000 ಫೀಟ್‌ನಿಂದ ಈ ವಿಗ್ರಹ ಕೆಳಗೆ ಬಿದ್ದಿತ್ತು. ಪರಿಣಾಮ ಪ್ರಾಚೀನ ವಿಗ್ರಹ 56 ತುಂಡುಗಳಾಗಿ ಬೇರ್ಪಟ್ಟಿತ್ತು. ಬಳಿಕ ಸರ್ಕಾರ ಇದನ್ನು ಮರುಜೋಡಿಸಿ ವಿಗ್ರಹವನ್ನು ಪುನರ್ ನಿರ್ಮಿಸುವ ಕೆಲಸ ಮಾಡಿತ್ತು. 

ಚಾರಣಿಗರ ಫೇವರಿಟ್ ಪ್ಲೇಸ್

ಧೋಲ್ಕಲ್ ಗಣೇಶ ವಿಗ್ರಹವಿರುವ ಸ್ಥಳಕ್ಕೆ ಕೇವಲ ಭಕ್ತಾಧಿಗಳು ಮಾತ್ರವಲ್ಲ ಚಾರಣಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಾರೆ. ಚಾರಣಿಗರು ಸಿಟಿಯಿಂದ ಫರ್ಸಪಾಲ್ ಗ್ರಾಮವನ್ನು ತಲುಪಲು 2 ಗಂಟೆ ಬೇಕಾಗುತ್ತದೆ. ಇಲ್ಲಿಂದ ಚಾರಣವನ್ನು ಮುಗಿಸಲು 16 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ದಟ್ಟವಾದ ಕೋನಿಫರ್ ಕಾಡುಗಳ ಮೂಲಕ ಸಾಗಿ ಧೋಲ್ಕಲ್‌ನಲ್ಲಿರುವ ಗಣೇಶ ದೇವಾಲಯವನ್ನು ತಲುಪಬಹುದು. ಬೆಟ್ಟವನ್ನೇರುವ ದಾರಿ ಕಠಿಣವಾಗಿದ್ದರೂ ಕೊನೆಗೆ ದೇವಾಲಯ ತಲುಪಿದಾಗ ಅಲ್ಲಿನ ಸೊಬಗು ನೋಡಿ ಈ ಶ್ರಮ ಸಾರ್ಥಕವೆನಿಸುತ್ತದೆ.

Follow Us:
Download App:
  • android
  • ios