ಗಣೇಶನ ಪೂಜಿಸಿದ್ರೆ ಶನಿದೇವರ ಕಾಟವಿಲ್ಲ, ಯಾಕೆ ಗೊತ್ತೆ?
ಎಲ್ಲ ಮನುಷ್ಯರನ್ನೂ ಪೀಡಿಸುವ, ದೇವತೆಗಳನ್ನೂ ಬಿಡದೆ ಪೀಡಿಸುವ ಶನೀಶ್ವರ ಗಣೇಶ ದೇವರನ್ನೂ ಬಿಟ್ಟಿಲ್ಲ. ಆದರೂ ಗಣಪತಿ ಆತನಿಗೂ ಚಕ್ಕರ್ ಕೊಟ್ಟಿದ್ದಾನೆ! ಅದು ಹೇಗೆ? ಇಲ್ಲಿದೆ ಆ ಕತೆಗಳು.
ಕೈಲಾಸದಲ್ಲಿ ಒಮ್ಮೆ ಗಣೇಶನ ಜನ್ಮೋತ್ಸವವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆದಿರುತ್ತವೆ. ಕಾರ್ಯಕ್ರಮಕ್ಕೆ ಬರುವಂತೆ ಸಕಲ ದೇವತೆಗಳಿಗೂ ಆಹ್ವಾನ ಹೋಗಿರುತ್ತದೆ. ಭಗವಾನ್ ಸೂರ್ಯದೇವ ಕಾರ್ಯಕ್ರಮಕ್ಕೆ ಹೋಗಲು ಉತ್ಸುಕನಾಗಿರುತ್ತಾನೆ. ಆಗ ಸೂರ್ಯನ ಮಗ ಶನಿಯಿನ್ನೂ ಸಣ್ಣವ. ಅವನಿಗೋ ತಂದೆಯೊಂದಿಗೆ ಹೋಗುವ ತವಕ. ಆದರೆ ಸೂರ್ಯದೇವನಿಗೆ ಅವನನ್ನು ಕರೆದೊಯ್ಯಲು ಇಷ್ಟವಿಲ್ಲ. ಕಾರಣವಿಷ್ಟೇ, ಸೂರ್ಯದೇವನಿಗೆ ಶನಿಯ ಕ್ರೂರ ದೃಷ್ಟಿಯ ವ್ಯತಿರಿಕ್ತ ಪರಿಣಾಮಗಳ ಅರಿವು ಇರುತ್ತದೆ. ಶನಿಯ ಕಾರಣ ಕೈಲಾಸದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಎನ್ನುವ ಅವ್ಯಕ್ತ ಭಯವೂ ಕಾಡುತ್ತಿರುತ್ತದೆ. ಹಾಗಾಗಿ ಸೂರ್ಯ ಶನಿಯನ್ನು ತನ್ನ ಲೋಕದಲ್ಲೇ ಬಿಟ್ಟು ತಾನೊಬ್ಬನೇ ಕೈಲಾಸಕ್ಕೆ ತೆರಳುತ್ತಾನೆ.
ಶನಿದೇವ ಚಿಕ್ಕ ಹುಡುಗನಾದರೂ, ಅವನ ಜ್ಞಾನ ಅಪಾರವಾದುದು. ಆತ ಯಾರೊಬ್ಬರ ಸಹಾಯವೂ ಇಲ್ಲದೇ ಕೈಲಾಸಕ್ಕೆ ಭೇಟಿ ಕೊಡುತ್ತಾನೆ. ಕೈಲಾಸದಲ್ಲಿ ಶನಿಯನ್ನು ಕಂಡ ಸೂರ್ಯನಿಗೆ ಆಘಾತವಾಗುತ್ತದೆ. ಶನಿಯ ದೃಷ್ಟಿ ಕಂಡ ದೇವಾನುದೇವತೆಗಳೆಲ್ಲರೂ ಭೀತಿಗೊಳ್ಳುತ್ತಾರೆ. ಪರಮೇಶ್ವರನಿಗೆ ಶನಿದೇವನ ಜನನದ ಕಾರಣ ತಿಳಿದಿರುತ್ತದೆ. ಆ ಕಾರಣ ಆತ ಪಾರ್ವತಿಯನ್ನು ಕರೆದು ಗಣೇಶನ ಮೇಲೆ ಶನಿಯ ದೃಷ್ಟಿ ಬೀಳದಂತೆ ನೋಡಿಕೋ ಎಂದು ಸಲಹೆ ನೀಡುತ್ತಾನೆ. ಆದರೆ ಪಾರ್ವತಿ ದೇವಿ ಗಂಡನ ಮಾತಿಗೆ ಕಿವಿಗೊಡುವುದಿಲ್ಲ. ಜಗನ್ಮಾತೆ, ಜಗದ್ರಕ್ಷಕಿಯಾದ ನನ್ನ ಸಾಮರ್ಥ್ಯದ ಮುಂದೆ ಅವನ ಪ್ರಭಾವ ಎಲ್ಲಿಯದು? ನನ್ನ ಮಗನನ್ನು ಎದುರಿಸಿ ನಿಲ್ಲುವ ಶಕ್ತಿ ಅವನಿಗೆಲ್ಲಿದೆ ಎಂದುಕೊಳ್ಳುತ್ತಾಳೆ.
ಗಣೇಶನ ಹಬ್ಬ ಬಂತು, ಅಪ್ಪಿ ತಪ್ಪಿಯೂ ಅವತ್ತು ಚಂದ್ರ ದರ್ಶನ ಮಾಡ್ಬೇಡಿ!
ತುಂಟ ಗಣಪನೋ ಶನಿಯ ಬಳಿ ಬರುತ್ತಾನೆ. ಶನಿಯ ಪೀತಾಂಬರವನ್ನು ಹಿಡಿದು ಜಗ್ಗುತ್ತಾನೆ. ಶನಿದೇವರ ದೃಷ್ಟಿಯು ಗಣಪನ ಮೇಲೆ ಬೀಳುತ್ತದೆ. ಶನಿಯ ದೃಷ್ಟಿ ಬಿದ್ದ ಕೂಡಲೇ ಗಣಪನ ದೇಹ ಧರೆಗೆ ಉರುಳಿ ಕೊನೆಯುಸಿರು ಎಳೆಯುತ್ತಾನೆ. ಪ್ರತಿಯೊಬ್ಬರಿಗೂ ಭಯವಾಗುತ್ತದೆ. ಪಾರ್ವತಿಗೆ ವಿಷಯ ಮುಟ್ಟುತ್ತದೆ. ಕೋಪೋದ್ರಿಕ್ತಳಾದ ಪಾರ್ವತಿ ಶನಿದೇವನಿಗೆ ನಿನ್ನ ಕಾಲುಗಳು ಕೊಳೆತು ಹೋಗಲಿ ಎಂದು ಶಾಪ ನೀಡುತ್ತಾಳೆ. ಅಂತೆಯೇ ಶನಿಯ ಕಾಲುಗಳು ಮೊಂಡಾಗುತ್ತವೆ. ನಂತರ ಪಾರ್ವತಿದೇವಿ ಗಣಪತಿಯ ಶಿರಕ್ಕಾಗಿ ಹುಡುಕಾಟ ನಡೆಸುತ್ತಾಳೆ. ಆದರೆ ಸಪ್ತಲೋಕಗಳಲ್ಲೂ ಗಣಪನ ಶಿರ ಸಿಗುವುದಿಲ್ಲ. ಆಗ ಶಿವನು ಉತ್ತರ ದಿಕ್ಕಿಗೆ ಮಲಗಿದ ಆನೆಯ ಶಿರವನ್ನು ಮರು ಜೋಡಿಸುವ ಮೂಲಕ ಗಣೇಶನ ದೇಹಕ್ಕೆ ಮರಳಿ ಜೀವ ತುಂಬುತ್ತಾನೆ. ನಂತರ ಶನಿದೇವನು ಶಿವನ ಪ್ರೀತ್ಯರ್ಥವಾಗಿ ತಪಸ್ಸು ಮಾಡಿ ವರಗಳನ್ನು ಪಡೆಯುತ್ತಾನೆ.
ಕನ್ಯಾ ರಾಶಿಯಲ್ಲಿ ಮಂಗಳ ಗ್ರಹ: ನಿಮ್ಮ ರಾಶಿಗೆ ಶುಭಾಶುಭ ಫಲವೇನು?
ಶನಿಯ ದೃಷ್ಟಿಯ ಕಾರಣ ಗಣಪನ ಶಿರವೇ ಬದಲಾಗುತ್ತದೆ. ಆನೆಯ ಶಿರವನ್ನು ಧಾರಣೆ ಮಾಡಿದ ಗಣಪ ಸಕಲ ದೇವತೆಗಳ ಪ್ರಶಂಸೆಗೆ ಪಾತ್ರನಾಗುತ್ತಾನೆ. ಅಧಿ ದೇವತೆ, ವಿಘ್ನ ನಿವಾರಕ, ಮೂಷಿಕ ವಾಹನ, ಲಂಬೋದರ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಾನೆ. ಅಷ್ಟೇ ಅಲ್ಲ ಶನಿದೇವರು ಇನ್ನು ಮುಂದೆ ಗಣೇಶನನ್ನು ಪೀಡಿಸುವುದಿಲ್ಲವೆಂದು ಭರವಸೆ ಕೊಡುತ್ತಾನೆ. ಪ್ರತಿನಿತ್ಯ ಶನಿದೇವರು ಗಣಪತಿಯನ್ನು ಸಾಂತ್ವನಗೊಳಿಸಲು ಇಂದಿಗೂ ಭೇಟಿ ಕೊಡುತ್ತಿದ್ದಾನೆ. ಯಾರು ಗಣೇಶನಿಗೆ ಬೆನ್ನು ತೋರುತ್ತಾರೋ ಅವರ ಹೆಗಲನ್ನು ಮಾತ್ರ ಶನಿದೇವ ಏರುತ್ತಾನೆ. ಆ ಕಾರಣ ಮನುಷ್ಯರು ಸಾಡೇಸಾತಿಯಲ್ಲಿ ಶನಿದೇವರ ಪ್ರಾಬಲ್ಯವನ್ನು ಕಡಿಮೆ ಮಾಡಿಕೊಳ್ಳಲು ಗಣಪನನ್ನು ಪೂಜಿಸಬೇಕು.
ಆದರೂ ಒಮ್ಮೆ ತನ್ನನ್ನು ಪೀಡಿಸಲು ಮುಂದಾದ ಶನಿಗೆ ಗಣಪತಿ ಸರಿಯಾಗಿಯೇ ಚಕ್ಕರ್ ಕೊಟ್ಟ. ಅದು ಹೇಗೆ ಗೊತ್ತೆ?
ಚಪ್ಪಲಿ ಯಾವಾಗ ಶುಭ, ಯಾವಾಗ ಅಶುಭ? ಜ್ಯೋತಿಷ್ಯ ಏನ್ ಹೇಳುತ್ತೆ?
ಒಮ್ಮೆ ಶನಿ ತನ್ನನ್ನು ಪೀಡಿಸಲು ಬರುವುದು ಗೊತ್ತಾಗಿ, ಗಣಪ ಅಲ್ಲಿಂದ ಓಡಿದ. ಶನಿಯೂ ಆತನನ್ನು ಹಿಂಬಾಲಿಸಿದ. ಗಣೇಶ ಓಡಿ ಓಡಿ ಒಂದು ಬಯಲಲ್ಲಿ ಗರಿಕೆ ತಿನ್ನುತ್ತಿದ್ದ ಹಸುವಿನ ಮುಂದೆ ಗರಿಕೆಯಾಗಿಬಿಟ್ಟ. ಅದನ್ನು ನೋಡಿ ಶನಿ ತಾನೂ ಗರಿಕೆಯಾದ. ಹಸು ಈ ಗರಿಕೆಗಳನ್ನು ತಿಂದುಬಿಟ್ಟಿತು. ಶನಿಯಿಂದ ತಪ್ಪಿಸಿಕೊಳ್ಳಲು ಗಣಪ ಸಗಣಿಯಾಗಿ, ಹಸುವಿನಿಂದ ಆಚೆಗೆ ಬಂದುಬಿಟ್ಟ. ಸಗಣಿಯ ಬಗ್ಗೆ ಅಸಹ್ಯಪಟ್ಟುಕೊಂಡು ಶನಿ ಅಲ್ಲಿಂದ ಹೊರಟುಬಂದ. ಗಣಪನಿಗೆ ಸಗಣಿ, ಚಿನ್ನ ಎಂಬ ಭೇದವಿರಲಿಲ್ಲ. ಇದರಿಂದಾಗಿ ಮುಂದೆ, ಗಣಪನ ಪೂಜೆಯೆಂದರೆ ಸಗಣಿ ಮುದ್ದೆ ಮಾಡಿ ಅದಕ್ಕೆ ಗರಿಕೆ ಚುಚ್ಚಿ ಪೂಜಿಸಿದರೂ ಸಾಕು- ಎಂಬ ರೂಢಿ ಬೆಳೆದುಬಂತು.