Travel Tips : ಶ್ರೀಕೃಷ್ಣನಾಡಿದ ವೃಂದಾವನ ಭೇಟಿಗೆ ಹೆಚ್ಚು ಖರ್ಚು ಮಾಡ್ಬೇಕಾಗಿಲ್ಲ
ವೃಂದಾವನಕ್ಕೆ ಹೋಗ್ಬೇಕು ಎಂಬುದು ಬಹು ದಿನದ ಕನಸು, ಆದ್ರೆ ಯಾವಾಗ, ಹೇಗೆ ಹೋಗ್ಬೇಕು ತಿಳಿತಿಲ್ಲ ಎನ್ನುವವರು ಅನೇಕರಿದ್ದಾರೆ. ವೃಂದಾವನಕ್ಕೆ ಹೋಗಲು ಯಾವುದು ಬೆಸ್ಟ್ ಟೈಂ ಹಾಗೆ ಎಲ್ಲಿಂದ ಹೋದ್ರೆ ಸುಲಭ ಎಂಬುದನ್ನು ನಾವು ಹೇಳ್ತೇವೆ.
ಶ್ರೀ ಕೃಷ್ಣನ ಕಥೆಯಲ್ಲಿ ವೃಂದಾವನದ ಬಗ್ಗೆ ಸಾಕಷ್ಟು ಕೇಳಿರ್ತೇವೆ. ವೃಂದಾವನದಲ್ಲಿ ಕೃಷ್ಣ ಏನೆಲ್ಲ ಆಟಗಳನ್ನು ಆಡಿದ್ದ, ಹೇಗೆಲ್ಲ ತನ್ನ ಬಾಲ್ಯ ಕಳೆದಿದ್ದ, ಬೆಣ್ಣೆ ಕದ್ದ ಕೃಷ್ಣ, ರಾಧೆ, ಗೋಪಿಕೆಯರನ್ನು ಹೇಗೆಲ್ಲ ಗೋಳು ಹೊಯ್ದಿದ್ದ ಎಂಬುದನ್ನು ಪುರಾಣಗಳಲ್ಲಿ ವಿವರಿಸಲಾಗಿದೆ. ಅವುಗಳನ್ನು ಓದಿ ತಿಳಿದುಕೊಂಡವರು ಅಥವಾ ಫೋಟೋಗಳಲ್ಲಿ ವೃಂದಾವನ್ನು ನೋಡಿದವರು ಒಮ್ಮೆ ಸ್ಥಳಕ್ಕೆ ಭೇಟಿ ನೀಡ್ಬೇಕು ಎಂದು ಕನಸು ಕಾಣ್ತಾರೆ. ಶ್ರೀಕೃಷ್ಣನ ಭಕ್ತರಿಗೆ ಇದು ಪ್ರಿಯವಾದ ಜಾಗ. ವೃಂದಾವನಕ್ಕೆ ಹೋಗಿ ರಾಧಾ-ರಾಣಿಯರ ಭಕ್ತಿಯಲ್ಲಿ ಮಗ್ನರಾಗಬೇಕೆಂದು ಬಯಸುವ ಭಕ್ತರು ಯಾವಾಗ ವೃಂದಾವನಕ್ಕೆ ಹೋಗೋದು ಸೂಕ್ತ, ಹೇಗೆಲ್ಲ ಹೋಗ್ಬಹುದು, ಖರ್ಚು ಎಷ್ಟು ಎಂಬ ಬಗ್ಗೆ ಆಲೋಚನೆ ಶುರು ಮಾಡ್ತಾರೆ.
ವೃಂದಾವನ (Vrindavan) ದ ಭಾವ, ಭಕ್ತಿ ನಿಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ವೃಂದಾವನಕ್ಕೆ ಹೋಗಲು ನೀವು ಹೆಚ್ಚಿನ ಹಣ (Money) ವನ್ನು ಖರ್ಚು ಮಾಡ್ಬೇಕಾಗಿಲ್ಲ. ಕಡಿಮೆ ಹಣದಲ್ಲಿ ನೀವು ವೃಂದಾವನಕ್ಕೆ ಹೋಗಿ, ಭಕ್ತಿಯಲ್ಲಿ ಮಿಂದೇಳಬಹುದು. ನಾವಿಂದು ವೃಂದಾವನ ಪ್ರವಾಸದ (Travel) ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
ಹನಿಮೂನ್ ಸ್ವರ್ಗದಲ್ಲೇ ಹೈಯೆಸ್ಟ್ ಡಿವೋರ್ಸ್, ಮಾಲ್ಡೀವ್ಸ್‌ನಲ್ಲಿ ಯಾಕೆ ಹೀಗಾಗ್ತಿದೆ?
ವೃಂದಾವನ ಎಲ್ಲಿದೆ? : ವೃಂದಾವನ ಉತ್ತರ ಪ್ರದೇಶ (Uttar Pradesh) ದ ಮಥುರಾ ಜಿಲ್ಲೆಯಲ್ಲಿರುವ ಒಂದು ಸಣ್ಣ ಪಟ್ಟಣ. ಬೆಂಗಳೂರಿನಿಂದ ವೃಂದಾವನ 1999,6 ಕಿಲೋಮೀಟರ್ ದೂರದಲ್ಲಿದೆ. ಕಾರಿನಲ್ಲಾದ್ರೆ ಸುಮಾರು 34 ಗಂಟೆಗಳ ಪ್ರಯಾಣ ಬೆಳೆಸಬೇಕಾಗುತ್ತದೆ. ವಿಮಾನದ ಮೂಲಕ ನೀವು ಬೆಂಗಳೂರಿನಿಂದ ವೃಂದಾವನಕ್ಕೆ ಪ್ರಯಾಣ ಬೆಳೆಸಬಹುದು. ಆರು ಗಂಟೆ 20 ನಿಮಿಷ ನೀವು ಪ್ರಯಾಣ ಬೆಳೆಸಬೇಕಾಗುತ್ತದೆ. ವೃಂದಾವನದಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ. ನೀವು ಆಗ್ರಾ ವಿಮಾನ ನಿಲ್ದಾಣ ತಲುಪಿ ಅಲ್ಲಿಂದ ಬೇರೆ ವ್ಯವಸ್ಥೆ ಮಾಡಬೇಕಾಗುತ್ತದೆ.
ನೀವು ರೈಲಿನಲ್ಲಿಯೂ ಪ್ರಯಾಣ ಬೆಳೆಸಬಹುದು. ಆದ್ರೆ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಮಥುರಾ ಜಂಕ್ಷನ್ ನಲ್ಲಿ ನಿಮಗೆ ರೈಲು ಲಭ್ಯವಾಗುತ್ತದೆ. ಮಥುರಾ ಜಂಕ್ಷನ್‌ನಿಂದ ವೃಂದಾವನಧಾಮಕ್ಕೆ ಕೇವಲ 15 ಕಿಮೀ ದೂರವಿದೆ. ದೆಹಲಿಯಿಂದ ಮಥುರಾಗೆ ಹೋಗಲು ಒಂದಲ್ಲ ಹಲವು ರೈಲುಗಳಿವೆ. ಬೆಂಗಳೂರಿನಿಂದ ದೆಹಲಿ ತಲುಪಿದ್ರೆ ನಂತ್ರ ನಿಮ್ಮ ಪ್ರಯಾಣ ಸುಲಭ. ದೆಹಲಿಯಿಂದ ವೃಂದಾವನಕ್ಕೆ ಕೆಲ ರೈಲಿನ ಟಿಕೆಟ್ (Train Ticket) ಕೇವಲ 50 ರಿಂದ 100 ರೂಪಾಯಿ. ನೀವು ದೆಹಲಿಯಿಂದ ವೃಂದಾವನಕ್ಕೆ ಬಸ್ ನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ 200 ರಿಂದ 300 ರೂಪಾಯಿ ಟಿಕೆಟ್ ದರ ನೀಡಬೇಕಾಗುತ್ತದೆ. ಇಲ್ಲಿ ಆಹಾರ, ವಸತಿ ಅಗ್ಗವಾಗಿದೆ. ನೀವು ದೆಹಲಿಯಿಂದ ವೃಂದಾವನಕ್ಕೆ ಭೇಟಿ ನೀಡೋದಾದ್ರೆ ಕೇವಲ 3000 ರೂಪಾಯಿ ಖರ್ಚಿನಲ್ಲಿ ವೃಂದಾವನ ಸುತ್ತಬಹುದು. ಆಹಾರ, ಹೊಟೇಲ್ ಗೆ 1600 ಖರ್ಚು ಮಾಡ್ಬೇಕಾಗುತ್ತದೆ. ಪ್ರಯಾಣಕ್ಕೆ 200 ರೂಪಾಯಿ ಹಾಗೂ ಪ್ರಸಾದಕ್ಕೆ 500 ರೂಪಾಯಿ ನೀಡ್ಬೇಕಾಗುತ್ತದೆ.
The Death Road: ಈ ರಸ್ತೆಯಲ್ಲಿ ಹೋದವರು ಯಾರೂ ವಾಪಾಸ್ ಬರೋಲ್ಲ!
ವೃಂದಾವನಕ್ಕೆ ಭೇಟಿ ನೀಡಲು ಚಳಿಗಾಲ ಹೇಳಿ ಮಾಡಿಸಿದ ಸಮಯ. ನೀವು ಆರಾಮವಾಗಿ ವೃಂದಾವನದ ಸೌಂದರ್ಯ ಸವಿಯಬೇಕೆಂದ್ರೆ ಚಳಿಗಾಲದಲ್ಲಿ (Winter) ಭೇಟಿ ನೀಡಿ. ವೃಂದಾವನದ ಎಲ್ಲ ದೇವಸ್ಥಾನಗಳನ್ನು ನೀವು ಕಾಲ್ನಡಿಗೆಯಲ್ಲೇ ನೋಡ್ಬಹುದು. ನಡಿಗೆ ಸಾಧ್ಯವಿಲ್ಲ ಎನ್ನುವವರು ಇ – ರಿಕ್ಷಾ ಸಹಾಯ ಪಡೆಯಬಹುದು. ಇ ರಿಕ್ಷಾ ವೆಚ್ಚ ಕೂಡ ತುಂಬಾ ಕಡಿಮೆಯಿರುವ ಕಾರಣ ಚಿಂತಿಸುವ ಅಗತ್ಯವಿಲ್ಲ. ನೀವು ದೇವಸ್ಥಾನದ ಪ್ರವೇಶಕ್ಕೆ ಕೂಡ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ದೇವಸ್ಥಾನದ ಎಂಟ್ರಿ ಫ್ರೀ ಆಗಿರುತ್ತದೆ. ವೃಂದಾವನಕ್ಕೆ ಹೋದ ಸಂದರ್ಭದಲ್ಲಿ ನೀವು ಪ್ರೇಮ ಮಂದಿರ, ಪಾಗಲ್ ಬಾಬಾ ದೇವಸ್ಥಾನ, ಸೇವಾ ಕೂಂಚ, ನಿಧಿವನ್, ಶಾಜಿ ಮಂದಿರ, ಗೋವರ್ಧನ ಬೆಟ್ಟ ಮತ್ತು ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡಲು ಮರೆಯಬೇಡಿ.