ಪ್ರಧಾನಿ ಮೋದಿ ಸಫಾರಿ ಬಳಿಕ ಬಂಡೀಪುರದ ಚಿತ್ರಣವೇ ಬದಲು: ಪ್ರವಾಸಿಗರಿಗೆ ಸಿಗ್ತಿದೆ 1 ಕೋಟಿ ರೂ. ಇನ್ಶೂರೆನ್ಸ್..!
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ 50 ರ ಸಂಭ್ರಮದಲ್ಲಿದೆ. ಈ ಹಿನ್ನಲೆ ದೇಶದ ಪ್ರಧಾನಿ ನಮೋ ಬಂಡೀಪುರಕ್ಕೆ ಆಗಮಿಸಿ ಸುಮಾರು 2 ಗಂಟೆ ಕಾಲ ಸಫಾರಿ ನಡೆಸಿದ್ದರು. ಬಂಡೀಪುರದಲ್ಲಿ ಪ್ರಧಾನಿ ಮೋದಿ ಸಫಾರಿ ಬಳಿಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಅಲ್ಲದೇ ದೇಶ ವಿದೇಶಗಳಿಂದಲೂ ಬಂಡೀಪುರಕ್ಕೆ ಸಫಾರಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಸಫಾರಿ ಆದಾಯವೂ ಕೂಡ ಮೊದಲಿಗಿಂತ ಡಬಲ್ ಆಗಿದೆ.
ವರದಿ- ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಅ.07): ಪ್ರಧಾನಿ ನರೇಂದ್ರ ಮೋದಿ ಆ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಿದ ಬಳಿಕ ಬಂಡೀಪುರದ ಚಾರ್ಮ್ ಸಂಪೂರ್ಣ ಬದಲಾಗ್ತಿದೆ. ಈಗ ದೇಶ ವಿದೇಶದಿಂದಲೂ ಸಫಾರಿಗೆ ಆಗಮಿಸುವವರ ಸಂಖ್ಯೆ ಡಬಲ್ ಆಗಿದೆ. ಈ ನಡುವೆ ಸಫಾರಿಗೆ ಬರುವವರಿಗೆ ಅರಣ್ಯಾಧಿಕಾರಿಗಳು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದ್ಯಾವ ಗುಡ್ ನ್ಯೂಸ್? ಇದ್ರಿಂದ ಪ್ರವಾಸಿಗರಿಗೆ ಏನ್ ಅನುಕೂಲ ಅನ್ನೋ ಡಿಟೈಲ್ಸ್ ಇಲ್ಲಿದೆ ನೋಡಿ.
ಹೌದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ 50 ರ ಸಂಭ್ರಮದಲ್ಲಿದೆ. ಈ ಹಿನ್ನಲೆ ದೇಶದ ಪ್ರಧಾನಿ ನಮೋ ಬಂಡೀಪುರಕ್ಕೆ ಆಗಮಿಸಿ ಸುಮಾರು 2 ಗಂಟೆ ಕಾಲ ಸಫಾರಿ ನಡೆಸಿದ್ದರು. ಬಂಡೀಪುರದಲ್ಲಿ ಪ್ರಧಾನಿ ಮೋದಿ ಸಫಾರಿ ಬಳಿಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿತ್ತು. ಅಲ್ಲದೇ ದೇಶ ವಿದೇಶಗಳಿಂದಲೂ ಬಂಡೀಪುರಕ್ಕೆ ಸಫಾರಿಗೆ ಬರುವವರ ಸಂಖ್ಯೆ ಹೆಚ್ಚಿದೆ. ಸಫಾರಿ ಆದಾಯವೂ ಕೂಡ ಮೊದಲಿಗಿಂತ ಡಬಲ್ ಆಗಿದೆ.
ಚಾಮರಾಜನಗರ: ಆನೆ, ಹುಲಿ ಸಂಖ್ಯೆಯಲ್ಲಿ ಬಂಡೀಪುರ ನಂ.1
ವಾರದ ರಜಾ ದಿನಗಳು ಹಾಗೂ ಸರ್ಕಾರಿ ರಜಾ ದಿನಗಳಲ್ಲಂತೂ ಅಕ್ಕ ಪಕ್ಕದ ರಾಜ್ಯಗಳಾದ ಕೇರಳ ಹಾಗು ತಮಿಳುನಾಡು ಪ್ರವಾಸಿಗರ ಕೊತೆಗೆ ರಾಜ್ಯದ ಮೂಲೆ ಮೂಲೆಗಳಿಂದಲು ಪ್ರವಾಸಿಗರು ನಿರೀಕ್ಷೆಗೂ ಮೀರಿ ಆಗಮಿಸುತ್ತಿದ್ದು ಪ್ರವಾಸಿಗರು ಸಫಾರಿಗೆ ಹೋದ ವೇಳೆ ಅನಿರೀಕ್ಷಿತವಾಗಿ ಕೆಲವೊಮ್ಮೆ ಕಾಡು ಪ್ರಾಣಿಗಳು ಸಫಾರಿ ವಾಹನದ ಮೇಲೆ ಅಟ್ಯಾಕ್ ಮಾಡಿದ್ದು, ಅದೃಷ್ಟವಶಾತ್ ಪ್ರವಾಸಿಗರು ಪಾರಾದ ನಿದರ್ಶನಗಳಿವೆ. ಹಾಗಾಗಿ ಬರುವಂತಹ ಸಫಾರಿ ಪ್ರವಾಸಿಗರಿಗೆ ಕಾಡು ಪ್ರಾಣಿಗಳಿಂದ ಆಕಸ್ಮಿಕವಾಗಿ ಏನಾದರು ಅವಘಡಗಳು ಸಂಭವಿಸಿದರೆ, ಅಂತ ಎಚ್ಚೆತ್ತುಕೊಂಡಿರುವ ಬಂಡೀಪುರದ ಅರಣ್ಯಾಧಿಕಾರಿಗಳು ಪರಿಸರ ಪ್ರವಾಸೋದ್ಯಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಇದೇ ಮೊದಲ ಬಾರಿಗೆ ಒಂದು ಕೋಟಿ ವಿಮಾ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಆ ಮೂಲಕ ಸಫಾರಿಗೆ ಬರುವಂತಹ ಪ್ರವಾಸಿಗರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಬಂಡಿಪುರ ನಿರ್ದೇಶಕರಾದ ರಮೇಶ್ ಕುಮಾರ್.
ಇನ್ನು ರಾಜ್ಯದಲ್ಲಿ ಅತಿ ಹೆಚ್ಚು ಹುಲಿ, ಆನೆ, ಚಿರತೆ ಹೊಂದಿರುವ ಹೆಗ್ಗಳಿಕೆ ಬಂಡೀಪುರದ್ದು, ಇದರಿಂದಲೇ ಬಂಡೀಪುರಕ್ಕೆ ಅತಿ ಹೆಚ್ಚು ಪ್ರವಾಸಿಗರು ಸಫಾರಿಗೆ ಆಗಮಿಸ್ತಾರೆ. ಸಾರ್ವಜನಿಕ ಹೊಣೆಗಾರಿಕೆ ನಾನ್ ಇಂಡಸ್ಟ್ರಿಯಲ್ ಪಾಲಿಸಿಯ ಅಡಿಯಲ್ಲಿ ಯೋಜನೆ ಜಾರಿಯಾಗಿದೆ. ಈಗಾಗ್ಲೇ ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿಯೊಂದಿಗೆ ಅರಣ್ಯ ಇಲಾಖೆ ಒಡಂಬಡಿಕೆ ಮಾಡಿಕೊಂಡಿದೆ. ಪರಿಸರವಾದಿಗಳು ಕೂಡ ಪ್ರವಾಸಿಗರಿಗೆ ವಿಮಾ ಸೌಲಭ್ಯ ಒದಗಿಸಲು ಮನವಿ ಮಾಡಿದ್ದರು. ವಿಮೆ ಯೋಜನೆ ಜಾರಿಗೊಳಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೂಡ ಸೂಚನೆ ಕೊಟ್ಟಿದ್ದರು. ಸಫಾರಿ ವೇಳೆ ಪ್ರವಾಸಿಗರ ಮೇಲೆ ಪ್ರಾಣಿಗಳು ದಾಳಿ ನಡೆಸಿ ಅವಘಡ ಸಂಭವವಿಸಿದ್ರೆ ವಿಮೆ ಪರಿಹಾರ ಸಿಗುತ್ತೆ. ಈ ವಿಮಾ ಸೌಲಭ್ಯ ಪಡೆಯಲು ಸಫಾರಿ ಶುಲ್ಕದ ಜೊತೆಗೆ 5 ರೂಪಾಯಿ ಹೆಚ್ಚುವರಿ ಕೊಡಬೇಕಿದೆ.
ಒಟ್ನಲ್ಲಿ ಪ್ರಧಾನಿ ಮೋದಿ ಸಫಾರೊ ಬಳಿಕ ಬಂಡೀಪುರದಲ್ಲಿ ನಯಾ ಯೋಜನೆ ಜಾರಿಗೊಳ್ತಿವೆ. ಇದೀಗಾ ಪ್ರವಾಸಿಗರಿಗೆ ಒಂದು ಕೋಟಿ ರೂಪಾಯಿ ಇನ್ಶೂರೆನ್ಸ್ ಕಲ್ಪಿಸಿಕೊಟ್ಟಿರುವುದು ಪ್ರವಾಸಿಗರಿಗೆ ಕೂಡ ಸಂತಸದ ಸುದ್ದಿಯೇ ಸರಿ. ಆದ್ರೆ ಯಾವುದೇ ಅವಘಡ ಸಂಭವಿಸದಿರಲೆಂಬುದೇ ನಮ್ಮ ಆಶಯ...