ಇಲ್ಲೊಬ್ಬರು ಹುಡುಗಿ ಒಂದೇ ಒಂದು ರೂಪಾಯಿ ವೆಚ್ಚ ಮಾಡದೇ ಇಡೀ ಭಾರತ ಸುತ್ತಿದ್ದಾಳೆ. ಹೀಗೆಂದು ಆಕೆಯೇ ಹೇಳಿಕೊಂಡಿದ್ದು, ಆಕೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ನಮಲ್ಲಿ ಅನೇಕರು ನಮ್ಮ ಅಕ್ಕಪಕ್ಕದಲ್ಲಿರುವ ಸ್ಥಳಗಳನ್ನೇ ನೋಡಿರುವುದಿಲ್ಲ, ಅದರಲ್ಲೂ ಹೆಣ್ಣು ಮಕ್ಕಳಿಗೆ ಎಲ್ಲದಕ್ಕೂ ಮನೆಯವರನ್ನು ಕೇಳಬೇಕು, ಕೇಳಿದರು ಸುರಕ್ಷತೆಯ ದೃಷ್ಟಿಯಿಂದ ಪೋಷಕರು ಹೆಣ್ಣು ಮಕ್ಕಳನ್ನು ಒಂಟಿಯಾಗಿ ಕಳಿಸುವುದಕ್ಕೆ ಹಿಂದೇಟು ಹಾಕುತ್ತಾರೆ. ಇನ್ನು ವಿವಾಹಿತ ಮಹಿಳೆಯರಿಗೂ ಪುಟ್ಟ ಮಕ್ಕಳು, ಗಂಡ, ಅತ್ತೆ ಮಾವ ಎಂಬ ಸಂಸಾರದ ಬಂಧನ ಜವಾಬ್ದಾರಿಗಳನ್ನು ಬಿಟ್ಟು ಮನೆಯಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ, ಬಹುತೇಕರು ಅದರಲ್ಲೂ ವಿಶೇಷವಾಗಿ ಹಿಂದೂಗಳು ಕನಿಷ್ಟ ಪಕ್ಷ ಸಾಯುವ ಕಾಲಕ್ಕಾದರೂ ಕಾಶಿ, ರಾಮೇಶ್ವರಕ್ಕೆ ಹೋಗಿ ಬರೋಣ ಎಂದು ಆಸ ಪಡುತ್ತಾರೆ. ಆದರೆ ಆದಾಗಲೇ ಆರೋಗ್ಯ ಹದಗೆಟ್ಟಿರುತ್ತದೆ. ದೇಹ ಮನಸ್ಸಿನ ಹಿಡಿತ ನಮ್ಮ ಕೈಯಲ್ಲಿರುವುದಿಲ್ಲ, ಆರ್ಥಿಕ ಸ್ವಾತಂತ್ರವೂ ಇರುವುದಿಲ್ಲ, ಹೀಗಾಗಿ ಅನೇಕರದ್ದು ಆಸೆ ಆಸೆಯಾಗಿಯೇ ಉಳಿದು ಬಿಡುತ್ತದೆ. ಸಂಸಾರದ ಸೆಳೆತ ಇಲ್ಲದೇ ಒಂಟಿಯಾಗಿರುವ ಮತ್ತನೇಕರಿಗೆ ಕೈಯಲ್ಲಿ ಕಾಸಿಲ್ಲ, ಜೊತೆಗೆ ಪಯಣಿಸಲು ಜೊತೆಗಾತಿ/ಜೊತೆಗಾರ ಇಲ್ಲ ಎಂದು ಈ ದೇಶ ಸುತ್ತುವ ವಿಭಿನ್ನ ಸ್ಥಳಗಳನ್ನು ನೋಡುವ ಆಸೆಯನ್ನು ಹಾಗೆಯೇ ಮಡಚಿಟ್ಟಿರುತ್ತಾರೆ. ಆದರೆ ಇಲ್ಲೊಬ್ಬರು ಹುಡುಗಿ ಒಂದೇ ಒಂದು ರೂಪಾಯಿ ವೆಚ್ಚ ಮಾಡದೇ ಇಡೀ ಭಾರತ ಸುತ್ತಿದ್ದಾಳೆ. ಹೀಗೆಂದು ಆಕೆಯೇ ಹೇಳಿಕೊಂಡಿದ್ದು, ಆಕೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಅಂದಹಾಗೆ ಸೋಲೋ ಟ್ರಾವೆಲರ್ ಆಗಿರುವ ಈಕೆಯ ಹೆಸರು ಸರಸ್ವತಿ ಅಯ್ಯರ್‌, ದಿಟ್ಟತನದ ದೃಷ್ಟಿಕೋನವನ್ನು ಹೊಂದಿರುವ ಯುವತಿ ಈಕೆ ಮೂಲತಃ ತಮಿಳುನಾಡಿನ ಮಧುರೈ ಮೂಲದ ಈಕೆ ಇಂದು ಭಾರತದ ಮೂಲೆ ಮೂಲೆಯನ್ನು ನೋಡಿ ಬಂದಿದ್ದಾರೆ. ಜೊತೆಗೆ ಅನೇಕ ಹೆಣ್ಣು ಮಕ್ಕಳಿಗೆ ತಮ್ಮ ಪ್ರವಾಸಿ ಕಥನವನ್ನು ವೀಡಿಯೋ ಮೂಲಕ ಹೇಳುತ್ತಾ ಸ್ಪೂರ್ತಿಯಾಗಿದ್ದಾರೆ. ಪಾಲಿಸಿ ಬಜಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಎರಡು ವರ್ಷಗಳ ಹಿಂದೆ ಕೆಲಸ ತೊರೆದಿದ್ದು, ನಂತರ ಕೇವಲ ಎರಡು ಸೀರೆ, ಒಂದು ಸಣ್ಣ ಟೆಂಟ್, ಪವರ್ ಬ್ಯಾಂಕ್ನ ಜೊತೆ ಯಾವುದೇ ಹಣ ವೆಚ್ಚವಿಲ್ಲದೇ ಭಾರತದ ಮೂಲೆ ಮೂಲೆಗೆ ಸಂಚರಿಸುವ ನಿರ್ಧಾರ ಮಾಡಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ತುಂಬಾ ದೂರ ದೂರದ ಪ್ರದೇಶಗಳನ್ನು ಕಾಲ್ನಡಿಗೆಯ ಮೂಲಕವೇ ಪ್ರಯಾಣಿಸುವ ಈಕೆ ಕೆಲವು ಸ್ಥಳಗಳಲ್ಲಿ ಅಪರಿಚಿತರು ನೀಡುವ ಆಹಾರಕ್ಕೆ ಪ್ರತಿಯಾಗಿ ಅವರಿಗೆ ಅವರ ಕೆಲಸದಲ್ಲಿ ಏನಾದರು ಸಹಾಯ ಮಾಡಿ ಮುಂದುವರೆಯುತ್ತಾರೆ.

ದಾರಿಮಧ್ಯೆ ಸಿಗುವ ಧರ್ಮಛತ್ರಗಳಲ್ಲಿ ಊಟ, ವಾಸ

ತಾವು ಪಯಣಿಸುವ ದಾರಿಯ ಮಧ್ಯೆ ಸಿಗುವ ದೇಗುಲಗಳು, ಧರ್ಮಛತ್ರಗಳಲ್ಲಿ ಆಶ್ರಮಗಳಲ್ಲಿ ರಾತ್ರಿ ಕಳೆಯುತ್ತಾರೆ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಈ ಹುಡುಗಿ ಇನ್ಸ್ಟಾಗ್ರಾಮ್‌ನಲ್ಲಿ ಸೇಫ್ ಲಡ್ಕಿ ಹಾಗೂ ಯೂಟ್ಯೂಬ್‌ನಲ್ಲಿ ಟ್ರಾವೆಲ್ ವಿತ್ ಅಯ್ಯರ್ ಎಂಬ ಚಾನೆಲ್ ಹೊಂದಿದ್ದು, ತಮ್ಮ ಈ ಒಂಟಿ ಪಯಣದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬರೀ ಇಷ್ಟೇ ಅಲ್ಲ ಗಂಡ ಮಕ್ಕಳು ಸಂಸಾರ ಎಂದು ತಮ್ಮೆಲ್ಲಾ ಆಸೆಗಳನ್ನು ಬದಿಗೊತ್ತಿ ಬದುಕುತ್ತಿರುವ ಅನೇಕರಿಗೆ ಅವರು ಹೀಗೆ ಸೋಲೋ ಟ್ರಾವೆಲ್ ಮಾಡುವಂತೆ ಪ್ರೇರೆಪಣೆ ಮಾಡುತ್ತಿದ್ದಾರೆ. ಈ ರೀತಿ ಪ್ರಯಾಣ ಮಾಡುವುದಕ್ಕೆ ಹಣ ಬೇಕಾಗಿಲ್ಲ, ಸಾಹಸ ಮಾಡುವುದಕ್ಕೆ ಐಷಾರಾಮ ಬೇಕಿಲ್ಲ, ನಿಮಗೆ ಬೇಕಿರುವುದು ಶುರು ಮಾಡಲು ಧೈರ್ಯ ಮಾತ್ರ ಎಂದು ಅವರು ಅನೇಕರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರ ಈ ಪ್ರಯಾಣವೂ ಸರಿಯಾದ ಯೋಜನೆ ರೂಪಿಸುವುದರ ಮೂಲಕ ಹಾಗೂ ಧೈರ್ಯವಾಗಿ ಮುನ್ನಡೆಯುವ ಮೂಲಕ ಶೂನ್ಯ ಬಜೆಟ್‌ನಲ್ಲಿ ನೀವು ಪ್ರಪಂಚ ಸುತ್ತಬಹುದು ಎಂಬುದನ್ನು ಅವರು ತೋರಿಸಿ ಕೊಟ್ಟಿದ್ದಾರೆ. 

ಆದರೆ ಇಂದು ಅವರಿಗೆ ಅವರ ಟ್ರಾವೆಲ್ ವ್ಲಾಗ್‌ಗಳಿಂದಲೇ ಸಾಕಷ್ಟು ದುಡ್ಡು ಬರುತ್ತಿರುವುದು ಸುಳ್ಳಲ್ಲ, ಅನೇಕ ಟ್ರಾವೆಲ್ ಸಂಸ್ಥೆಗಳು ಸರಸ್ವತಿ ಅಯ್ಯರ್ ಅವರನ್ನು ಹೋಸ್ಟ್ ಮಾಡುತ್ತಿವೆ. ಫೇಸ್‌ಬುಕ್‌ನಲ್ಲಿಯೂ ಖಾತೆ ಹೊಂದಿರುವ ಅವರು ಹೇಗೆ ಪ್ರಯಾಣದ ವೇಳೆ ಉಚಿತವಾಗಿ ಆಹಾರ ಪಡೆಯುವುದು, ಹೇಗೆ ಉಚಿತವಾಗಿ ಉಳಿಯುವ ಸ್ಥಳವನ್ನು ಪಡೆಯುವುದು ಎಂಬ ಬಗ್ಗೆ ವಿವರ ನೀಡಿದ್ದಾರೆ. ಒಂದು ವೇಳೆ ನಿಮಗೂ ಹೀಗೆ ಒಂಟಿಯಾಗಿ ಟ್ರಾವೆಲ್ ಮಾಡಬೇಕು. ಆದರೆ ಕಾಸಿಲ್ಲ, ಮತ್ತೊಂದಿಲ್ಲ ಎಂಬ ಕಾರಣದಿಂದ ಹಿಂದೆ ಸರಿದಿದ್ದರೆ, ಈಕೆಯ ವೀಡಿಯೋಗಳನ್ನು ನೋಡಿ, ಆಧ್ಯಾತ್ಮದ ಜೊತೆ ಈಕೆಯ ದಿಟ್ಟತನದ ನಡೆ ನಿಮಗೂ ಸ್ಪೂರ್ತಿಯಾಗಬಹುದು ಎನಂತೀರಿ? ಕಾಮೆಂಟ್ ಮಾಡಿ...