ರೈಲ್ವೆ ಎಸಿ ಕೋಚ್‌ನಲ್ಲೂ ತುಂಬಿ ತುಳುಕಿದ ಜನ: ವೀಡಿಯೋ ವೈರಲ್ ರೈಲ್ವೆ ಮಾಡಿದ್ದೇನು?
ಪೂರ್ವ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಜನಸಂದಣಿ ಇರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಬಾರಿ ಟಿಕೆಟ್ ಪಡೆದರೂ ಸರಿಯಾದ ಸೇವೆ ಸಿಗುತ್ತಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.
ಸಾಮಾನ್ಯವಾಗಿ ರೈಲಿನ ಜನರಲ್ ಬೋಗಿಗಳಲ್ಲಿ ಜನ ತುಂಬಿ ತುಳುಕುವುದು ಸಾಮಾನ್ಯ, ಈ ಬೋಗಿಗಳಲ್ಲಿ ಕೆಲವೊಮ್ಮೆ ಕಾಲಿಡುವುದಕ್ಕೂ ಜಾಗವಿರುವುದಿಲ್ಲ, ಆದರೆ ದುಬಾರಿ ಎಸಿ ಬೋಗಿಗಗಳಲ್ಲೂ ಇದೇ ಪರಿಸ್ಥಿತಿ ಆದರೆ ಹೇಗೆ? ಜನರಲ್ ಬೋಗಿಯಲ್ಲಿ ಸಾಗಲಾಗದು ಎಂದು ಎಸಿ ಬೋಗಿಯಲ್ಲಿ ದುಬಾರಿ ವೆಚ್ಚದ ಟಿಕೆಟ್ ಪಡೆದು ಪ್ರಯಾಣಿಸುವವರ ತಾಳ್ಮೆ ಕೆಡುವುದು ಸಹಜ. ಅದೇ ರೀತಿ ಈಗ ಪೂರ್ವ ಎಕ್ಸ್‌ಪ್ರೆಸ್ ಎಸಿ ಕೋಚ್‌ನಲ್ಲಿ ಜನ ತುಂಬಿ ತುಳುಕಾಡುತ್ತಿರುವ ವಿಡಿಯೋವೊಂದನ್ನು ರೈಲ್ವೆ ಪ್ರಯಾಣಿಕರೊಬ್ಬರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಚಾರದ ಕುರಿತಾಗಿ ರೈಲ್ ಸೇವಾ ಕೂಡ ಪ್ರತಿಕ್ರಿಯಿಸಿದೆ.
ಈ ವೀಡಿಯೋ ಭಾರತದಲ್ಲಿ ರೈಲು ಪ್ರಯಾಣದ ಕೆಟ್ಟ ನಿರ್ವಹಣೆ ಹಾಗೂ ಗುಣಮಟ್ಟದ ಬಗ್ಗೆಯೂ ಚರ್ಚೆ ಮಾಡುವಂತೆ ಮಾಡಿದೆ. ಗಂಧರ್ವ್ ವಿನಾಯಕ್ ರೈ ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಯಾವುದೇ ರಿಸರ್ವೇಷನ್ ಇಲ್ಲದ ಪ್ರಯಾಣಿಕರು ಎಸಿ ಕೋಚ್‌ನ ಒಳ ನುಗ್ಗಿದ್ದು, ಅಲ್ಲಿನ ನಡೆದಾಡುವ ಜಾಗದಲ್ಲಿ ಕುಳಿತು ನಿಂತು ಪ್ರಯಾಣಿಸುತ್ತಿದ್ದಾರೆ. ಅಲ್ಲದೇ ಮೀಸಲು ಪ್ರಯಾಣಕ್ಕೆ ಮೀಸಲಾಗಿರುವ ಸೀಟುಗಳಲ್ಲಿ ಕುಳಿತು ಪ್ರಯಾಣಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಈ ಎಸಿ ಕೋಚನ್ನು ಜನರಲ್ ಕಂಪಾರ್ಟ್‌ಮೆಂಟ್‌ಗೆ ಹೋಲಿಕೆ ಮಾಡಿರುವ ರೈ, ಅತೀ ದುಬಾರಿ ಟಿಕೆಟ್‌ನ ಹೊರತಾಗಿಯೂ ಈ ರೈಲಿನಲ್ಲಿ ಸರಿಯಾದ ಸೇವಾ ಮಾನದಂಡಗಳ ಕೊರತೆ ಇರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರು ರೆಕಾರ್ಡ್ ಮಾಡಿದ ವೀಡಿಯೋದಲ್ಲಿ ಟಾಯ್ಲೆಟ್‌ನ ಬಾಗಿಲಿನ ಸಮೀಪವೂ ಟಾಯ್ಲೆಟ್‌ಗೆ ಹೋಗಲಾಗದಂತೆ ಜನ ಅಡ್ಡ ಕುಳಿತಿರುವುದು ಕಾಣಿಸುತ್ತಿದೆ.
ಈ ಬಗ್ಗೆ ರೈ ಅವರು ರೈಲ್ ಮದದ್ ಮೂಲಕ ದೂರು ನೀಡಿದ್ದಾರೆ. ಅಲ್ಲದೇ ಈ ದೂರಿಗೆ ಪ್ರತಿಯಾಗಿ ಅವರಿಗೆ 2024121005214 ಸಂಖ್ಯೆಯ ಕಂಪ್ಲೇಂಟ್ ನಂಬರ್ ಕೂಡ ಸಿಕ್ಕಿದೆ. ಆದರೆ ದೂರು ನೀಡಿ 45 ನಿಮಿಷ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಅಲ್ಲದೇ ಸ್ವಲ್ಪ ಹೊತ್ತಿನಲ್ಲಿ ರೈಲ್ವೆಯೂ ಇದರ ಬಗ್ಗೆ ಯಾವುದೇ ಪರಿಶೀಲನೆಯನ್ನು ಕೂಡ ಮಾಡದೇ ದೂರನ್ನು ಕ್ಲೋಸ್ ಮಾಡಿದ್ದು ಇದು ರೈ ಅವರ ಸಿಟ್ಟನ್ನು ಮತ್ತಷ್ಟು ಹೆಚ್ಚು ಮಾಡಿದೆ.
'ದಯವಿಟ್ಟು ವೀಡಿಯೋ ನೋಡಿ ಮತ್ತು ರೈಲು ಸಂಖ್ಯೆ 12303 ಪೂರ್ವ ಎಕ್ಸ್‌ಪ್ರೆಸ್‌ನಲ್ಲಿ ಎಸಿ ರಿಸರ್ವೇಷನ್ ರೈಲಿನ ಸ್ಥಿತಿಯನ್ನು ನೋಡಿ. ಇದು ಪಾಟ್ನಾ ಹತ್ತಿರ. ಇದೊಂದು ಸಾಮಾನ್ಯ ಕಂಪಾರ್ಟ್‌ಮೆಂಟ್‌ನಂತೆ ಭಾಸವಾಗುತ್ತಿದೆ. ಈಗಾಗಲೇ ರೈಲ್ ಮದದ್‌ನಲ್ಲಿ ನಂ. 2024121005214 ನಲ್ಲಿ ದೂರು ನೀಡಲಾಗಿದೆ. ಆದರೆ 45 ನಿಮಿಷ ಕಳೆದರು, ರೈಲ್ವೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರೈಯವರು ಬರೆದುಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ರೀತಿ ವೀಡಿಯೋ ಪೋಸ್ಟ್ ಮಾಡಿದ ನಂತರ ಈ ದೂರಿಗೆ ರೈಲ್ ಸೇವ ಪ್ರತಿಕ್ರಿಯೆ ನೀಡಿದ್ದು, ಸಹಾಯದ ಭರವಸೆ ನೀಡಿದೆ. ಇನ್ನೂ ಈ ವೀಡಿಯೋ ನೋಡಿದ ಅನೇಕರು ಭಾರತೀಯ ರೈಲು ಸೇವೆಯ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.