Asianet Suvarna News Asianet Suvarna News

ಸುಂದರ ಪರಿಸರದಲ್ಲಿ ಹಸುವಿನ ಮೈಸವರಲು ನೀಲಾವರಕ್ಕೆ ಬನ್ನಿ..

ಗೋವುಗಳ ಪಾಲಕನೆಂದೇ ಪ್ರಸಿದ್ಧಿ ಪಡೆದವನು ಶ್ರೀಕೃಷ್ಣ. ಆತನ ಊರಾದ ಉಡುಪಿ ಸಮೀಪ ಸಾವಿರಾರು ಗೋವುಗಳಿಗೆ ರಕ್ಷಣೆ ನೀಡಲಾಗಿದೆ. ಕೃಷ್ಣ ದೇವಸ್ಥಾನ, ಸುಂದರ ಪರಿಸರದಲ್ಲಿ ತಂಪಾಗಿರುವ ಹಸುಗಳು ಪ್ರವಾಸಿಗರನ್ನು ಸೆಳೆಯುತ್ತದೆ.

Neelavara Goshala Rehabilitation Centre Situated Near Udupi roo
Author
First Published Sep 5, 2023, 3:15 PM IST

ಪ್ರಾಣಿಗಳನ್ನು ಪ್ರೀತಿಸುವ ದೇಶ ಭಾರತ. ಇಲ್ಲಿ ಸಾಕು ಪ್ರಾಣಿಗಳನ್ನು ಮನೆ ಮಕ್ಕಳಂತೆ ನೋಡಿಕೊಳ್ಳಲಾಗುತ್ತದೆ. ಹಸುವಿಗೆ ತಾಯಿ ಸ್ಥಾನ ನೀಡಲಾಗಿದೆ. ಹಸುವನ್ನು ಪೂಜೆ ಮಾಡಲಾಗುತ್ತದೆ. ತನ್ನ ಹಾಲನ್ನು ನಮಗೆ ನೀಡಿ ನಮ್ಮನ್ನು ಪೋಷಿಸುತ್ತಿರುವ ಹಸುವಿನಲ್ಲಿ ಎಲ್ಲ ದೇವತೆಗಳು ನೆಲೆಸಿವೆ ಎಂಬ ನಂಬಿಕೆ ಇದೆ. ಹಿಂದೆ ಹಳ್ಳಿಯ ಪ್ರತಿಯೊಬ್ಬರ ಮನೆಯಲ್ಲಿ ಹಸು, ಎತ್ತು, ಎಮ್ಮೆಗಳಿರುತ್ತಿದ್ದವು. ಆದ್ರೀಗ ಹಳ್ಳಿಗಳಲ್ಲಿ ಹಸುಗಳ ಸಂಖ್ಯೆ ಕಡಿಮೆಯಾಗಿದೆ. ಹಸುಗಳ ನಿರ್ವಹಣೆ ಕಷ್ಟ ಎನ್ನುವ ಕಾರಣಕ್ಕೆ ಬಹುತೇಕರು ತಮ್ಮ ಮನೆಯಲ್ಲಿರುವ ದನ, ಎತ್ತುಗಳನ್ನು ಮಾರಾಟ ಮಾಡಿದ್ದಾರೆ. ಹಾಗಾಗಿ ದನ – ಕರುಗಳನ್ನು ನೋಡಲು ಗೋ ಶಾಲೆಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ನಮ್ಮ ದೇಶದಲ್ಲಿ ಹಸು (Cow) ವಿಗೆ ಎಷ್ಟು ಉನ್ನತ ಸ್ಥಾನ ನೀಡಲಾಗಿದೆಯೋ ಅಷ್ಟೇ ಹಿಂಸೆ ನೀಡುವವರೂ ಇದ್ದಾರೆ. ಭಾರತ – ಬಾಂಗ್ಲಾ ಗಡಿ ಮಾತ್ರವಲ್ಲ ದೇಶದೊಳಗೆ ಹಸು ಕಳ್ಳಸಾಗಣೆ ಆಗಾಗ ಸುದ್ದಿಯಾಗುತ್ತದೆ. ಸದ್ದಿಲ್ಲದೆ ಜನರು ಹಸುಗಳನ್ನು ಕಸಾಯಿ ಖಾನೆಗೆ ನೀಡ್ತಾರೆ.  ಜಾನುವಾರುಗಳ ಕಳ್ಳ ಸಾಗಣೆಯನ್ನು ತಪ್ಪಿಸಿ, ಹಸುಗಳ  ರಕ್ಷಣೆಗೆಂದು ಅಲ್ಲಲ್ಲಿ ಗೋ ಶಾಲೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಉಡುಪಿ ಸಮೀಪದ ನೀಲಾವರದ ಗೋಶಾಲೆಯೂ ಒಂದು.

ಏಕಾಂತ ಬಯೋಸೋ ಭಾರತೀಯ ಪ್ರೇಮಿಗಳಿದು ನೆಚ್ಚಿನ ತಾಣಗಳು!

ಎಲ್ಲಿದೆ ನೀಲಾವರ (Neelavara) ಗೋ ಶಾಲೆ ? : ಉಡುಪಿ (Udupi) ಸಮೀಪದ ಕೊಡವೂರು ಎಂಬ ಪುಟ್ಟ ಗ್ರಾಮದಲ್ಲಿ ಕಳೆದ 22 ವರ್ಷಗಳಿಂದ ಚಿತ್ರಹಿಂಸೆಗೊಳಗಾದ ಮತ್ತು ವಯಸ್ಸಾದ ಹಸುಗಳಿಗೆ ಆಶ್ರಯ ನೀಡಲು ಗೋಶಾಲೆ ನಡೆಸಲಾಗುತ್ತಿದೆ. ಗೋಶಾಲೆಯಲ್ಲಿ ಗೋವುಗಳ ಸಂಖ್ಯೆ ಹೆಚ್ಚಾದ ಕಾರಣ, ಗೋವುಗಳ ರಕ್ಷಣೆಗಾಗಿ ನೀಲಾವರ ಗೋಶಾಲೆ ಆರಂಭಿಸಲಾಗಿದೆ. ನೀಲಾವರ ಗೋಶಾಲೆ ಉಡುಪಿಯಿಂದ ಸುಮಾರು 18 ಕಿಲೋಮೀಟರ್ ದೂರದಲ್ಲಿದೆ. 

ನೀಲಾವರ ಗೋಶಾಲೆಯನ್ನು ಗೋವರ್ಧನಗಿರಿ ಟ್ರಸ್ಟ್ ನಿರ್ವಹಿಸುತ್ತಿದೆ. ಶ್ರೀ ವಿಶ್ವಪ್ರಸನ್ನ ತೀರ್ಥರ ಪ್ರಯತ್ನದಿಂದ ಸುಮಾರು 35 ಎಕರೆ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಾದ್ಯಂತ ರೈತರು ತಮ್ಮ ಅನಾರೋಗ್ಯ,  ವಯಸ್ಸಾದ ಹಸುಗಳನ್ನು ಕಳೆದ ಕೆಲ ವರ್ಷಗಳಿಂದ ಕಸಾಯಿಖಾನೆಗಳಿಗೆ ಮಾರಾಟ ಮಾಡುವ ಬದಲು ಈ ಗೋಶಾಲೆಗೆ ಕಳುಹಿಸಲು ಆರಂಭಿಸಿದ್ದಾರೆ. ಇಲ್ಲಿ ಸಾವಿರಕ್ಕೂ ಹೆಚ್ಚು ಗೋವುಗಳನ್ನು ನೀವು ನೋಡ್ಬಹುದು. 

ಜಪಾನ್ ಚೆರ್ರಿ ಬ್ಲಾಸಮ್ ಇಷ್ಟಪಡುವ ಕಾಜೋಲ್ ಗೆ ಇದು ಫೆವರೆಟ್ ಪ್ಲೇಸ್

ನೀಲಾವರ ಗೋಶಾಲೆಯ ವಿಶೇಷವೇನು? : ಉಡುಪಿಯಿಂದ ದೂರದ ಹಳ್ಳಿಯಲ್ಲಿರುವ ಈ ಗೋಶಾಲೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಇಲ್ಲಿ ಶ್ರೀ ಕಾಳಿಯಮರ್ಧನ ಕೃಷ್ಣ ದೇವಸ್ಥಾನ ಮತ್ತು ಪುಣ್ಯಕೋಟಿ ತೀರ್ಥವೂ ಇದೆ. ಪುಣ್ಯಕೋಟಿ ತೀರ್ಥದ ಮಧ್ಯೆ ಕಾಳಿಯಮವರ್ಧನ ಕೃಷ್ಣ ದೇವಸ್ಥಾನವನ್ನು ನೀವು ಕಣ್ತುಂಬಿಕೊಳ್ಳಬಹುದು. ಗೋಶಾಲೆಗೆ ಭೇಟಿ ನೀಡುವ ನಿಮ್ಮನ್ನು ಸುಂದರವಾದ ಹಸಿರು ಪರಿಸರ ಮತ್ತು ಆಹ್ಲಾದಕರ ಗಾಳಿ ಸ್ವಾಗತಿಸಲಾಗುತ್ತದೆ. ಇದನ್ನು ಸ್ವರ್ಗಿಯ ಸ್ಥಳ ಎನ್ನಬಹುದು. ಸುಂದರ ಪರಿಸರದಲ್ಲಿ ಅತ್ತಿಂದಿತ್ತ ಓಡಾಡುವ ಹಸುಗಳನ್ನು ನೋಡುವುದೇ ಚೆಂದ. ಈ ಹಸುಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಆಹ್ಲಾದವನ್ನು ನೀಡುತ್ತವೆ.   

ಗೋಶಾಲೆ ಚಟುವಟಿಕೆಗಳು ಏನು? : ಗೋ ಶಾಲೆ ಯಾವುದೇ ಡೈರಿ ಉತ್ಪನ್ನಗಳನ್ನು ತಯಾರಿಸೋದಿಲ್ಲ. ಇಲ್ಲಿ ವಯಸ್ಸಾದ ದನ, ಎತ್ತುಗಳೇ ಹೆಚ್ಚಿದೆ. ಇದನ್ನು ಗೋವುಗಳ ವೃದ್ಧಾಶ್ರಮ ಎಂದು ಕರೆಯಬಹುದು. ಆದ್ರೆ ದನದ ಸಗಣಿಯಿಂದ ಗೊಬ್ಬರವನ್ನು ಮಾರಾಟ ಮಾಡಲಾಗುತ್ತದೆ. ನೀಲಾವರ ಗೋಶಾಲೆ ಕಾರ್ಯಕ್ರಮವು ಸಮಾಜದ ಪ್ರಯೋಜನಕ್ಕಾಗಿ ಜೈವಿಕ ಅನಿಲ ಸ್ಥಾವರ, ಸೋಲಾರ್ ಲ್ಯಾಂಪ್‌ಗಳಂತಹ ವಿಭಿನ್ನ ಹಸಿರು ಉಪಕ್ರಮಗಳನ್ನು ಹೊಂದಿದೆ.

ಸಹಾಯ ಹಸ್ತ : ಇದೊಂದು ಮನಸ್ಸಿಗೆ ನೆಮ್ಮದಿ ನೀಡುವ ತಾಣವಾಗಿದೆ. ಇಲ್ಲಿ ಗಲಾಟೆ, ಪ್ರವಾಸಿ ಸ್ಥಳದಲ್ಲಿರುವ ಗಿಜಿಗಿಜಿ ಸಲ್ಲದು. ನೀವೂ ಗೋವುಗಳ ರಕ್ಷಣೆಗೆ ಮುಂದಾಗುತ್ತೀರಿ ಎಂದಾದ್ರೆ ಗೋ ಶಾಲೆಗೆ ನೆರವು ನೀಡಬಹುದು.  

Follow Us:
Download App:
  • android
  • ios