ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳಬೇಕು ಎಂಬುದು ಅನೇಕರ ಬಹುದಿನಗಳ ಕನಸು. ಆದರೆ ಮಕ್ಕಳು ಮಾಡಿದ ಕಿತಾಪತಿಯಿಂದಾಗಿ ಮಹಿಳೆಯೊಬ್ಬರ ವಿದೇಶ ಪ್ರವಾಸ ಕೊನೆಕ್ಷಣದಲ್ಲಿ ರದ್ದಾಗಿದೆ. ಹಾಗಿದ್ರೆ ಮಕ್ಕಳು ಮಾಡಿದ್ದೇನು?
ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳಬೇಕು ಎಂಬುದು ಅನೇಕರ ಬಹುದಿನಗಳ ಕನಸು. ವಿದೇಶ ಸುತ್ತಬೇಕು, ಕನಿಷ್ಠ ರಜಾದಿನಗಳನ್ನಾದರೂ ತಮಗನಿಸಿದಂತೆ ಕಳೆಯಬೇಕು ಎಂದು ಅನೇಕರು ರಜಾ ದಿನಗಳ ಸಮಯದಲ್ಲಿ ದೇಶ ವಿದೇಶಗಳನ್ನು ಸುತ್ತುತ್ತಾರೆ. ಬಹಳ ದಿನಗಳಿಂದ ಇದಕ್ಕಾಗಿ ಸಿದ್ಧತೆ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ವಿದೇಶ ಪ್ರವಾಸಕ್ಕಾಗಿ ಲಗೇಜ್ ಪ್ಯಾಕ್ ಮಾಡಿ ಏರ್‌ಪೋರ್ಟ್‌ಗೆ ಮಗುವಿನೊಂದಿಗೆ ಬಂದ ಮಹಿಳೆಗೆ ಶಾಕ್ ಆಗಿದೆ. ಮಗು ಮಾಡಿದ ಸಣ್ಣ ಕಿತಾಪತಿಯೊಂದು ಆಕೆಯ ಕನಸನ್ನು ಕ್ಷಣದಲ್ಲಿ ಭಗ್ನ ಮಾಡಿದೆ ಹಾಗಿದ್ದಾರೆ ಮಗು ಮಾಡಿದ್ದಾದರೂ ಏನು ನೋಡೋಣ ಬನ್ನಿ.
ಮಗುವಿನ ಕಿತಾಪತಿಯಿಂದಾಗಿ ತಮ್ಮ ವಿದೇಶ ಪ್ರವಾಸ ಭಗ್ನಗೊಂಡ ಬಗ್ಗೆಮಹಿಳೆಯೊಬ್ಬರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆ ವೀಡಿಯೋ ವೈರಲ್ ಆಗಿದೆ. ವಿದೇಶ ಪ್ರವಾಸಕ್ಕೆ ಸಿದ್ಧವಾಗಿ ವೇಗವಾಗಿ ಏರ್‌ಪೋರ್ಟ್‌ಗೆ ಬಂದ ಮಹಿಳೆ ಅಲ್ಲಿ ಚೆಕ್ ಇನ್ ವೇಳೆ ತಮ್ಮ ಪಾಸ್‌ಪೋರ್ಟನ್ನು ತಪಾಸಣೆಗೆ ನೀಡಿದ್ದಾರೆ. ಈ ವೇಳೆ ಅಲ್ಲಿನ ಉದ್ಯೋಗಿ ಏನೋ ವಿಚಿತ್ರವಾದುದನ್ನು ನೋಡುವಂತೆ ಇವರನ್ನು ನೋಡಿ ಪಾಸ್‌ಪೋರ್ಟನ್ನು ವಾಪಸ್ ಇವರ ಕೈಗೆ ನೀಡಿದ್ದಾನೆ. ಕೂಡಲೇ ಏನಿದೆ ಎಂದು ಪಾಸ್‌ಪೋರ್ಟ್ ತೆಗೆದು ನೋಡಿದ ಆಕೆ ಅಲ್ಲೇ ಪ್ರಜ್ಞೆ ತಪ್ಪುವುದೊಂದು ಬಾಕಿ... ಆಕೆಯ ಮಗು ಪಾಸ್‌ಪೋರ್ಟ್‌ನ ಖಾಲಿ ಇರುವ ಜಾಗದಲ್ಲೆಲ್ಲಾ ಪೂತ್ರಿ ಚಿತ್ರಗಳನ್ನು ಬಿಡಿಸಿದ್ದಾಳೆ. ಸಾಲದು ಎಂಬಂತೆ ಐ ಲವ್ ಯೂ ಮಮ್ಮಿ ಎಂದು ಬೇರೆ ಬರೆದು ಬಿಟ್ಟಿದೆ ಈ ಮಗು. ತಮ್ಮಿಬ್ಬರು ಪುಟ್ಟ ಹೆಣ್ಣು ಮಕ್ಕಳು ಸೇರಿ ಈ ಕಿತಾಪತಿ ಮಾಡಿದ್ದಾರೆ.
ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ಮಕ್ಕಳು ಪಾಸ್‌ಪೋರ್ಟ್‌ನ ಯಾವ ಪೇಜ್‌ಗಳನ್ನು ಕೂಡ ಖಾಲಿ ಬಿಟ್ಟಿಲ್ಲ, ಸ್ಕೆಚ್ ಪೆನ್ ಅಥವಾ ಬಣ್ಣದ ಪೆನ್ಸಿಲ್ ಮೂಲಕ ಅವರು ಎಲ್ಲಾ ಪುಟಗಳಲ್ಲೂ ಅವರು ಹಲವು ರೀತಿಯ ಚಿತ್ರಗಳನ್ನು ಬಿಡಿಸಿದ್ದಾರೆ. ಮಹಿಳೆ ಪಾಸ್‌ಪೋರ್ಟ್‌ನ ಒಂದೊಂದೇ ಪುಟವನ್ನು ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದು, ಕೆಲವು ಪೇಜ್‌ಗಳಲ್ಲಿ ಗೀಚು ಹಾಕಿದ್ದಾರೆ. ಮನುಷ್ಯರ ಆಕೃತಿ, ಪ್ರೀತಿಯ ಹಾರ್ಟ್ ಸಿಂಬಲ್, ಐ ಲವ್ ಯೂ ಮಮ್ಮಿ ಎಂಬ ಬರಹಗಳು ಹೀಗೆ ಪ್ರತಿ ಪೇಜನ್ನು ಮಕ್ಕಳು ತಮ್ಮ ವಿಶೇಷ ಪ್ರತಿಭೆಯಿಂದ ಅಲಂಕರಿಸಿದ್ದಾರೆ. ಇದರಿಂದ ತಾಯಿಗೆ ಐ ಲವ್ ಯೂ ಮಮ್ಮಿ ಎಂದು ಬರೆದ ಮಕ್ಕಳನ್ನು ತಬ್ಬಿ ಮುದ್ದಾಡುವುದೋ ಅಥವಾ ಪಾಸ್ ಪೋರ್ಟ್‌ನಲ್ಲಿ ಈ ರೀತಿ ಪ್ರತಿಭೆ ತೋರಿಸಿದ್ದಕ್ಕೆ ಬೈದಾಡುವುದೋ ಅಥವಾ ಮಕ್ಕಳ ಕೈಗೆ ಸಿಗುವಂತೆ ಪಾಸ್‌ಪೋರ್ಟ್ ಇಟ್ಟಿರುವುದಕ್ಕೆ ತಲೆ ಚಚ್ಚಿಕೊಳ್ಳುವುದೋ ಒಂದು ಗೊತ್ತಾಗದೇ ಚಡಪಡಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.
ನೀವು ರಾಜಕುಮಾರಿಯರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದೇ ಅವರ ಬಗ್ಗೆ ಎಷ್ಟು ಸಮಯದವರೆಗೆ ನಿರ್ಲಕ್ಷ್ಯ ಮಾಡಿದ್ದೀರಿ ಎಂಬುದನ್ನು ಈ ಪಾಸ್‌ಪೋರ್ಟ್ ತೋರಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಮ್ಮದೇ ತಪ್ಪು ನೀವು ಅಮೂಲ್ಯವಾದ ದಾಖಲೆಗಳನ್ನು ಸುರಕ್ಷಿತವಾಗಿ ಮಕ್ಕಳ ಕೈಗೆ ಸಿಗದಂತೆ ಎತ್ತಿಡಬೇಕಿತ್ತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಚಿತ್ರಕಲೆ ತುಂಬಾ ಚೆನ್ನಾಗಿದೆ. ಇವುಗಳಿಗೊಂದು ಪ್ರೇಮ್ ಹಾಕಿ ಇಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಪುಟ್ಟ ಮಕ್ಕಳು ಮನೆಯ ಗೋಡೆಗಳ ಮೇಲೆ ನೆಲದ ಮೇಲೆ ತಮ್ಮ ಕೈಗೆ ಸಿಕ್ಕ ಪುಸ್ತಕ ಪೇಪರ್ ಬಟ್ಟೆ ಮೈ ಕೈ ಮೇಲೆಲ್ಲಾ ಗೀಚಿಡುವುದು ಸಾಮಾನ್ಯ. ಹೀಗಾಗಿ ಮಕ್ಕಳ ಕೈಗೆ ಯಾವುದೇ ಅಮೂಲ್ಯವಾದ ದಾಖಲೆಗಳನ್ನು ಸಿಗದಂತೆ ಜೋಪಾನವಾಗಿ ಮೇಲೆ ಎತ್ತಿಡಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಇಂತಹ ಅನಾಹುತಗಳಿಗೆ ಸಾಕ್ಷಿಯಾಗಬೇಕಾಗುತ್ತೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.


