Travel Guide : ನೀವು ಪ್ರವಾಸ ಹೋದಾಗ ಈ ವಿಶೇಷ ಮಾರ್ಕೆಟ್‌ಗಳಿಗೆ ಭೇಟಿ ಕೊಡೋದು ಮರೆಯಬೇಡಿ!
ಭಾರತ ವೈವಿದ್ಯತೆಯಲ್ಲಿ ಏಕತೆ ಹೊಂದಿರುವ ದೇಶ. ಇಲ್ಲಿ ಕಣ್ತುಂಬಿಕೊಳ್ಳುವ ಸಾವಿರಾರು ಪ್ರವಾಸಿ ತಾಣಗಳಿವೆ. ಅದ್ರ ಜೊತೆಗೆ ವಿಭಿನ್ನ ಮಾರುಕಟ್ಟೆಗಳಿವೆ. ಪ್ರವಾಸಕ್ಕೆ ಹೋದವರು ಮಾರ್ಕೆಟ್ ಗೆ ಹೋಗ್ದೆ ಬರೋದಿಲ್ಲ. ಪ್ರವಾಸಕ್ಕೆ ತೆರಳುವ ಮುನ್ನ ಆ ಪ್ರದೇಶದ ಮಾರ್ಕೆಟ್ ಮಾಹಿತಿ ಪಡೆಯೋದು ಒಳ್ಳೆಯದು.
ಶಾಪಿಂಗ್ (Shopping) ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ ? ಬಹುತೇಕ ಎಲ್ಲರೂ ಶಾಪಿಂಗ್ ಮಾಡ್ತಾರೆ. ಕೆಲವರು ಮಾರುಕಟ್ಟೆ (Market) ಗಳನ್ನು ಸುತ್ತಿ ವಿಂಡೋ ಶಾಪಿಂಗ್ ಮಾಡ್ತಾರೆ. ಬಗೆ ಬಗೆ ವಸ್ತುಗಳನ್ನು ಖರೀದಿ (Purchase) ಸಲು ಬಯಸುವವರು ಮಾರುಕಟ್ಟೆ ಬಗ್ಗೆ ಹೆಚ್ಚು ಮಾಹಿತಿ ಸಂಗ್ರಹಿಸುತ್ತಿರುತ್ತಾರೆ. ತಾವು ವಾಸವಾಗಿರುವ ಊರಿನ ಮಾರುಕಟ್ಟೆ ಮಾತ್ರವಲ್ಲ ಬೇರೆ ನಗರಗಳ, ಬೇರೆ ರಾಜ್ಯಗಳ, ಬೇರೆ ದೇಶದ ಮಾರುಕಟ್ಟೆಯ ಬಗ್ಗೆಯೂ ಅವರು ತಿಳಿಯಲು ಬಯಸ್ತಾರೆ.
ಪ್ರವಾಸಕ್ಕೆ ಹೋಗುವ ಮೊದಲು ಅವರು ಮಾಡುವ ಕೆಲಸ, ಹೋಗುವ ಜಾಗದಲ್ಲಿ ಯಾವ ಮಾರುಕಟ್ಟೆಯಲ್ಲಿ ಯಾವ ವಸ್ತು ಸಿಗುತ್ತೆ? ಯಾವ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ವಸ್ತು ಸಿಗುತ್ತೆ ಹೀಗೆ ಅನೇಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಭಾರತದ ಕೆಲ ನಗರಗಳು ಮಾರುಕಟ್ಟೆಯಿಂದಲೇ ಪ್ರಸಿದ್ಧಿ ಪಡೆದಿವೆ. ಚರ್ಮದ ವಸ್ತುಗಳನ್ನು ಖರೀದಿಸಲು ಬಯಸುವವರು ಥಟ್ ಅಂತಾ ಕಾನ್ಪುರದ ಹೆಸರು ಹೇಳ್ತಾರೆ. ಸೂರತ್ ಸೀರೆಗೆ ಪ್ರಸಿದ್ಧಿ ಪಡೆದಿದೆ. ಹೀಗೆ ಭಾರತದಲ್ಲಿ ಸಾಕಷ್ಟು ಪ್ರಸಿದ್ಧ ಮಾರುಕಟ್ಟೆಗಳಿವೆ. ಅಂಗಡಿಯಲ್ಲಿ ಮಹಿಳೆಯರು ಮಾತ್ರ ಕುಳಿತುಕೊಳ್ಳುವ ಮಾರುಕಟ್ಟೆಗೆ ಹೋಗಿದ್ದೀರಾ? ನೀರಿನಲ್ಲಿರುವ ಮಾರುಕಟ್ಟೆ ನೋಡಿದ್ದೀರಾ?
ಭಾರತದಲ್ಲಿರುವ ಪ್ರಸಿದ್ಧ ಮಾರುಕಟ್ಟೆಗಳು
ಮಣಿಪುರದ ಇಮಾ ಕೀತೆಲ್ ಮಾರುಕಟ್ಟೆ : ಮಣಿಪುರ ಪ್ರವಾಸಿ ಸ್ಥಳವಾಗಿದೆ. ಅಲ್ಲಿ ಪ್ರವಾಸಿಗರನ್ನು ಸೆಳೆಯುವ ಅನೇಕ ಪ್ರಸಿದ್ಧ ಸ್ಥಳಗಳಿವೆ. ಮಣಿಪುರದ ಮಾರುಕಟ್ಟೆಯು ಸಾಕಷ್ಟು ಪ್ರಸಿದ್ಧವಾಗಿದೆ. ನೀವು ಮಣಿಪುರಕ್ಕೆ ಹೋದರೆ, ಖಂಡಿತವಾಗಿಯೂ ಅದರ ರಾಜಧಾನಿ ಇಂಫಾಲ್‌ನಲ್ಲಿರುವ ಇಮಾ ಕೀತೆಲ್‌ಗೆ ಭೇಟಿ ನೀಡಿ. ಈ ಮಾರುಕಟ್ಟೆಯಲ್ಲಿರುವ ಎಲ್ಲ ಅಂಗಡಿಯಲ್ಲಿ ಮಹಿಳೆಯರು ಮಾತ್ರ ಕಾಣಿಸ್ತಾರೆ. ಅಂಗಡಿಯನ್ನು ನಡೆಸುವವರು ಮಹಿಳೆಯರು ಮಾತ್ರ. ಇಮಾ ಕೀತೆಲ್ ಎಂದರೆ 'ತಾಯಿಯ ಮಾರುಕಟ್ಟೆ' ಎಂದರ್ಥ. ಇದು ವಿಶ್ವದ ಅತಿ ದೊಡ್ಡ ಮಹಿಳಾ ಮಾರುಕಟ್ಟೆಯಾಗಿದೆ.
Travel Tips : ದಿಢೀರ್ ಪ್ರಯಾಣ ಫಿಕ್ಸ್ ಆಗಿದ್ಯಾ? ಟೆನ್ಷನ್ ಬೇಡ, ಹೀಗೆ ಬ್ಯಾಗ್ ಪ್ಯಾಕ್ ಮಾಡಿ
ಕನೌಜ್‌ನ ಅತ್ತರ್ ಮಾರುಕಟ್ಟೆ: ಹೆಸರೇ ಹೇಳುವಂತೆ ಇದು ಅತ್ತರ್ ಮಾರುಕಟ್ಟೆ. ಇದು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿದೆ. ಈ ಮಾರುಕಟ್ಟೆಯಲ್ಲಿ ಸುಗಂಧ ದ್ರವ್ಯ ಮಾತ್ರ ಲಭ್ಯವಿದೆ. ಇಲ್ಲಿ 650ಕ್ಕೂ ಹೆಚ್ಚು ಬಗೆಯ ಸುಗಂಧ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತದೆ. ಈ ಮಾರುಕಟ್ಟೆಗೆ ಸುದೀರ್ಘ ಇತಿಹಾಸವಿದೆ. ರಾಜ ಹರ್ಷವರ್ಧನನ ಕಾಲದಿಂದಲೂ ಇಲ್ಲಿ ಅತ್ತರ್ ಮಾರುಕಟ್ಟೆ ನಡೆಯುತ್ತಿದೆ ಎಂದು ಹೇಳಲಾಗುತ್ತದೆ. ಸುಗಂಧ ದ್ರವ್ಯ ಪ್ರಿಯರು ಇಲ್ಲಿಗೆ ಹೋಗಿ ನಿಮಗಿಷ್ಟವಾದ ಸೆಂಟ್ ಖರೀದಿ ಮಾಡ್ಬಹುದು.
ಕಾಶ್ಮೀರದ ದಾಲ್ ಲೇಕ್ ಮಾರುಕಟ್ಟೆ: ಕಾಶ್ಮೀರವನ್ನು ಭೂಮಿಯ ಮೇಲಿನ ಸ್ವರ್ಗ ಎನ್ನುತ್ತಾರೆ. ಪ್ರತಿ ವರ್ಷ ಈ ಸ್ವರ್ಗವನ್ನು ನೋಡಲು ನಾನಾ ಊರುಗಳಿಂದ ಪ್ರವಾಸಿಗರು ಕಾಶ್ಮೀರಕ್ಕೆ ಬರ್ತಾರೆ. ಹಿಮ ಆವೃತ ಶಿಖರಗಳು, ಸುಂದರವಾದ ಪರ್ವತಗಳು, ಮರದ ಮನೆಗಳು, ಸರೋವರಗಳು ಮತ್ತು ಹೌಸ್ ಬೋಟ್‌ಗಳನ್ನು ಆನಂದಿಸಲು ಜನರು ಇಲ್ಲಿಗೆ ಬರುತ್ತಾರೆ. ಪ್ರವಾಸಿ ತಾಣ ವೀಕ್ಷಣೆ ಮಾತ್ರವಲ್ಲ ಅಲ್ಲಿನ ಮಾರುಕಟ್ಟೆಗೆ ಹೋಗಲು ನೀವು ಬಯಸಿದ್ರೆ ದಾಲ್ ಲೇಕ್ ಮಾರುಕಟ್ಟೆಗೆ ಹೋಗಿ. ಈ ಮಾರುಕಟ್ಟೆ ಸಾಕಷ್ಟು ವಿಶೇಷತೆಯನ್ನು ಪಡೆದಿದೆ. ಇದು ತರಕಾರಿ ಮಾರುಕಟ್ಟೆ. ಈ ಮಾರ್ಕೆಟ್ ಭೂಮಿ ಮೇಲಿಲ್ಲ. ದಾಲ್ ಸರೋವರದಲ್ಲಿದೆ. ಜನರು ದೋಣಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಾರೆ ಮತ್ತು ಖರೀದಿಸುತ್ತಾರೆ.
Bengaluru ಕುರಿತ ಈ ವಿಷಯಗಳು ಸ್ವತಃ ಬೆಂಗಳೂರಿಗರಿಗೇ ಗೊತ್ತಿಲ್ಲ!
ಅಸ್ಸಾಂನ ಜೊನ್‌ಬೀಲ್ ಮಾರುಕಟ್ಟೆ : ನೋಟು,ನಾಣ್ಯಗಳು ಜಾರಿಗೆ ಬರದ ಸಮಯದಲ್ಲಿ ಜನರು ವಿನಿಮಯ ನೀತಿ ಅನುಸರಿಸುತ್ತಿದ್ದರು. ತಮ್ಮಲ್ಲಿರುವ ಅಕ್ಕಿ ನೀಡಿ ಅದರಷ್ಟೇ ಗೋಧಿ ಖರೀದಿ ಮಾಡ್ತಿದ್ದರು. ಡಿಜಿಟಲ್ ಯುಗದಲ್ಲೂ ಅಸ್ಸಾಂನ ಜೊನ್ ಬೀಲ್ ಮಾರುಕಟ್ಟೆಯಲ್ಲಿ ವಿನಿಮಯ ಪದ್ಧತಿ ಜಾರಿಯಲ್ಲಿದೆ. 15ನೇ ಶತಮಾನದಲ್ಲಿ ಪ್ರಾರಂಭವಾದ ಈ ಮಾರುಕಟ್ಟೆ ಇಂದಿಗೂ ಅದೇ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.