ವಿಶ್ವದಲ್ಲಿ ನಾನಾ ಸಂಪ್ರದಾಯ, ಸಂಸ್ಕೃತಿ ಪಾಲಿಸುವ ಜನರಿದ್ದಾರೆ. ಅಚ್ಚರಿ ಹುಟ್ಟಿಸುವ, ಕುತೂಹಲಕಾರಿ ಇತಿಹಾಸ ಹೊಂದಿರುವ ದೇವಸ್ಥಾನಗಳಿವೆ. ಈಗ ನಾವು ಹೇಳ್ತಿರೋ ಊರಿನ ಮುಂದೆ ನಿಂಬೆ ಹಣ್ಣಿನ ಬದಲು ಪುರುಷರ ಖಾಸಗಿ ಅಂಗದ ಚಿಹ್ನೆ ನೇತಾಡ್ತಿರುತ್ತೆ. ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಅಂಗಡಿ, ಮನೆ ಹೊರಗೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟೋದು ನಮ್ಮ ಸಂಪ್ರದಾಯ. ಅನೇಕರ ಮನೆ ಮುಂದೆ ದೃಷ್ಟಿ ಗೊಂಬೆ ಇಲ್ಲ ತೆಂಗಿನಕಾಯಿ ಕಟ್ಟೋದನ್ನು ನಾವು ನೋಡ್ತೇವೆ. ಆದ್ರೆ ವಿಚಿತ್ರ ಹಳ್ಳಿಯೊಂದಿದೆ. ಅಲ್ಲಿ ನಿಂಬೆ ಹಣ್ಣಿನ ಬದಲು ಪುರುಷರ ಖಾಸಗಿ ಅಂಗವನ್ನು ಹೋಲುವ ಆಕೃತಿಯನ್ನು ಮನೆಯ ಹೊರಗೆ ನೇತು ಹಾಕ್ತಾರೆ. ಭೂತಾನ್ (Bhutan)ನಲ್ಲಿರುವ ಚಿಮಿ ಲಖಾಂಗ್ ದೇವಾಲಯ (Chimi Lakhang Temple)ದ ಗ್ರಾಮ ಈ ವಿಷ್ಯದಲ್ಲಿ ಎಲ್ಲರ ಗಮನ ಸೆಳೆಯುತ್ತದೆ. ಇದು ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯದ ಭಾಗವಾಗಿದೆ. ವಿಶೇಷವೆಂದ್ರೆ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಯಾಗಿರೋ ಜ್ಯೋತಿ ಮಲ್ಹೋತ್ರಾ ಕೂಡ ಇಲ್ಲಿಗೆ ಭೇಟಿ ನೀಡಿದ್ದರು. ಅವ್ರ ವಿಡಿಯೋ ಯೂಟ್ಯೂಬ್ ನಲ್ಲಿ ಲಭ್ಯವಿದೆ.
ಚಿಮಿ ಲಖಾಂಗ್ ದೇವಾಲಯ ಇದಕ್ಕೆ ಮೂಲ : ಭೂತಾನ್ನಲ್ಲಿರುವ ಚಿಮಿ ಲಖಾಂಗ್ ದೇವಾಲಯ ಫಲವತ್ತತೆ ದೇವಾಲಯ ಎಂದೂ ಹೆಸರು ಪಡೆದಿದೆ. ಇದು ಭೂತಾನಿನ ಪುನಾಖಾ ಜಿಲ್ಲೆಯ ಲೋಬೆಸಾ ಗ್ರಾಮದಲ್ಲಿದೆ. ಈ ದೇವಾಲಯವು ಸ್ಥಳೀಯವಾಗಿ ದೈವಿಕ ಹುಚ್ಚ ಎಂದು ಕರೆಯಲ್ಪಡುವ ಲಾಮಾ ಡ್ರುಕ್ಪಾ ಕುನ್ಲೆಗೆ ಸಮರ್ಪಿತವಾಗಿದೆ.
ಇದರ ಹಿಂದಿನ ಕಥೆ ಏನು? : ಲಾಮಾ ಡ್ರುಕ್ಪಾ ಕುನ್ಲೆ ತಮ್ಮ ಖಾಸಗಿ ಅಂಗದ ಶಕ್ತಿಯಿಂದ ರಾಕ್ಷಸರನ್ನು ಸೋಲಿಸಿದ್ರು. ಇದೇ ಕಾರಣಕ್ಕೆ ಖಾಸಗಿ ಅಂಗ ಸಾಂಸ್ಕೃತಿಕ ಮಹತ್ವವನ್ನು ಪಡೆಯಿತು. ಸ್ಥಳೀಯ ಜನರ ನಂಬಿಕೆಗಳ ಪ್ರಕಾರ, ಡ್ರುಕ್ಪಾ ಕುನ್ಲೆ ಒಂದು ಪ್ರೇತವನ್ನು ಸೋಲಿಸಲು ಪುರುಷರ ಖಾಸಗಿ ಅಂಗದ ಆಕಾರದಲ್ಲಿ ಒಂದು ಕೋಲನ್ನು ಮಾಡಿದ್ದರು. ಈ ಕೋಲನ್ನು ಬಳಸಿ ರಾಕ್ಷಸರ ಹತ್ಯೆ ಮಾಡಿದ್ದರು. ಅಂದಿನಿಂದ ಲಿಂಗ ಚಿಹ್ನೆಯನ್ನು ದುಷ್ಟ ಶಕ್ತಿಗಳನ್ನು ನಾಶಮಾಡಿ ಒಳ್ಳೆಯದನ್ನು ತರುವ ಸಂಕೇತವೆಂದು ಪರಿಗಣಿಸಲಾಗಿದೆ.
ಗೋಡೆಗಳ ಮೇಲೆ ಖಾಸಗಿ ಅಂಗದ ವರ್ಣಚಿತ್ರ : ಚಿಮಿ ಲಖಾಂಗ್ ಸುತ್ತಮುತ್ತಲಿನ ಮನೆಗಳು ಮತ್ತು ಅಂಗಡಿಗಳ ಗೋಡೆಗಳ ಮೇಲೆ ವರ್ಣರಂಜಿತ, ಸುಂದರವಾಗಿ ವಿನ್ಯಾಸಗೊಳಿಸಲಾದ ಲಿಂಗ ವರ್ಣಚಿತ್ರಗಳು ಸಾಮಾನ್ಯವಾಗಿದೆ. ಇದಲ್ಲದೆ, ಮರದಿಂದ ಕೆತ್ತಿದ ದೊಡ್ಡ ಮತ್ತು ಸಣ್ಣ ಖಾಸಗಿ ಚಿಹ್ನೆಗಳು ದೇವಾಲಯಗಳ ಬಾಗಿಲುಗಳಲ್ಲಿ ಗೋಚರಿಸುತ್ತವೆ.
ಮನೆ ಮುಂದೆ ಈ ಚಿಹ್ನೆ ಏಕೆ? : ಸ್ಥಳೀಯ ನಂಬಿಕೆಯ ಪ್ರಕಾರ, ಈ ಚಿಹ್ನೆಗಳು ಫಲವತ್ತತೆಯನ್ನು ಹೆಚ್ಚಿಸುವುದಲ್ಲದೆ, ದುಷ್ಟಶಕ್ತಿಗಳನ್ನು ದೂರವಿಡಲು ಮತ್ತು ಮನೆಯನ್ನು ನಕಾರಾತ್ಮಕ ಶಕ್ತಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮಗು ಬಯಸುವ ದಂಪತಿಗೆ ಈ ದೇವಾಲಯ ವಿಶೇಷವಾಗಿ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. ಇಲ್ಲಿ ಹೊಸದಾಗಿ ಮದುವೆಯಾದ ಮಹಿಳೆಯರು ಅಥವಾ ಮಕ್ಕಳನ್ನು ಹೊಂದಲು ಬಯಸುವ ಮಹಿಳೆಯರು ವಿಶೇಷ ಪೂಜೆಯನ್ನು ಮಾಡುತ್ತಾರೆ. ಮಕ್ಕಳಿರುವ ಪೋಷಕರು ಸಹ ತಮ್ಮ ಮಕ್ಕಳಿಗೆ ಹೆಸರಿಡಲು ಇಲ್ಲಿಗೆ ಬರುತ್ತಾರೆ. ಚಿಮಿ ಲಖಾಂಗ್ ದೇವಾಲಯವನ್ನು 14 ನೇ ಡ್ರುಕ್ಪಾ ಲಾಮಾ ಎಂದು ನಂಬಲಾದ ನ್ಗಾವಾಂಗ್ ಚೋಗ್ಯಲ್ ನಿರ್ಮಿಸಿದ್ದರು.
ಚಿಮಿ ಲಖಾಂಗ್ ತಲುಪುವುದು ಹೇಗೆ? : ಚಿಮಿ ಲಖಾಂಗ್ ದೇವಾಲಯವು ಪುನಾಖಾದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಲೋಬೆಸಾ ಗ್ರಾಮದಲ್ಲಿದೆ. ಇಲ್ಲಿಗೆ ತಲುಪಲು ಎರಡು ಮುಖ್ಯ ಮಾರ್ಗಗಳಿವೆ. ಖಾಸಗಿ ಟ್ಯಾಕ್ಸಿಯಲ್ಲಿ ಹೋದರೆ ಥಿಂಪು ಅಥವಾ ಪಾರೋದಿಂದ ಸುಲಭವಾಗಿ ಹೋಗಬಹುದು. ಇಲ್ಲಿಂದ ಈ ದೇವಾಲಯವನ್ನು ತಲುಪುವ ಮಾರ್ಗವು ತುಂಬಾ ನೇರವಾಗಿದೆ. ನೀವು ಥಿಂಪು ಅಥವಾ ಪಾರೋದಿಂದ ವಾಂಗ್ಡುಗೆ ಸ್ಥಳೀಯ ಬಸ್ ಮೂಲಕ ಹೋಗಬಹುದು. ವಾಂಗ್ಡುವಿನಿಂದ ನೀವು ದೇವಾಲಯವನ್ನು ತಲುಪಲು ಟ್ಯಾಕ್ಸಿ ತೆಗೆದುಕೊಳ್ಳಬೇಕು.


