ಲಡಾಖ್ ಅಮೃತಯಾತ್ರೆ-2022: ಭಾಗ-11, ಎರಡೇ ಅಡಿ ಅಂತರದಲ್ಲಿ ನನ್ನ ಪ್ರಾಣ ಉಳಿಯಿತು !
ಇದನ್ನು ದೇವರದಯೆ, ಅದೃಷ್ಟ ಅಥವಾ ಸಮಯಪ್ರಜ್ಞೆ..ಏನು ಬೇಕಾದರೂ ಅಂದುಕೊಳ್ಳಿ. ಕೂದಲೆಳೆಯ ಅಂತರದಲ್ಲಿ ನನ್ನ ಪ್ರಾಣ ಉಳಿದದ್ದಂತೂ ಹೌದು. ಎರಡೇ ಎರಡು ಅಡಿ ಆಚೆ ಬಿದ್ದಿದ್ದರೆ 3000 ಅಡಿ ಕೆಳಕ್ಕೆ ಹೋಗಿಬಿಡುತ್ತಿದ್ದೆ. ಅದರೀಚೆ ಬಿದ್ದ ನನಗೆ ಏನಾಯಿತು? ಆ ಸನ್ನಿವೇಶದಲ್ಲಿ ನನ್ನ ಜತೆಗಿದ್ದವರು ಕೈಗೊಂಡ ದಿಟ್ಟ ನಿರ್ಧಾರವೇನು? ಅನಂತನ ತಮ್ಮ ಅನಿಲ್ ಮಾಡಿದ ಸಾಹಸ ಏನು? ಅದೆಂಥಾ ಕತೆ? ಮುಂದೆ ಓದಿ...
Ravishankar K Bhat, Executive Editor, Kannada Prabha (Twitter: @raveebhat)
ಜಸ್ಟ್ ಮಿಸ್, ಇಲ್ಲದಿದ್ದರೆ 3000 ಅಡಿ ಕೆಳಕ್ಕೆ ಹೋಗಿಬಿಡುತ್ತಿದ್ದೆ
ಉಮ್ಲಿಂಗ್ ಲಾದಿಂದ ಮರಳುವ ಹಾದಿಯಲ್ಲಿ ದಿಲೀಪ, ಅನಂತ ತಮ್ಮ ವಾಹನಗಳನ್ನು ಚಲಾಯಿಸುತ್ತ ಮುಂದೆ ಸಾಗುತ್ತಿದ್ದರೆ ನಾನು ಅವರಿಗಿಂತ ತುಸು ಹಿಂದೆ ಅಲ್ಲಲ್ಲಿ ನಿಲ್ಲಿಸಿ, ಫೋಟೋಗಳನ್ನು ತೆಗೆಯುತ್ತ ಬೆಟ್ಟಗಳನ್ನು ಇಳಿಯತೊಡಗಿದ್ದೆ. ಸುಮಾರು 1000 ಅಡಿಯಷ್ಟು ಕೆಳಕ್ಕೆ ಇಳಿದಿರಬಹುದು. ಇಳಿಜಾರಿನ ರಸ್ತೆ ಅಂತ ನಾನು ಸ್ವಲ್ಪ ಲಘುವಾಗಿ ತೆಗೆದುಕೊಂಡೆನೋ ಏನೋ. ಒಂದು ಕಡಿದಾದ ಎಡ ತಿರುವಿನಲ್ಲಿ ಹರಳು ಕಲ್ಲುಗಳಿದ್ದವು. ಅವುಗಳ ಮೇಲೆ ಬೈಕಿನ ಚಕ್ರ ಹತ್ತುತ್ತಿದ್ದಂತೆ ಸಮತೋಲನ ತಪ್ಪಿದಂತಾಯಿತು. ಮುಂದೆ ನೋಡುತ್ತೇನೆ, ತಳ ಕಾಣದಷ್ಟು ಆಳದ ಪ್ರಪಾತ. ಅಪಾಯದ ಅರಿವಾಯಿತು. ನನ್ನ ಬೈಕಿನ ಹಿಂದಿನ ಬ್ರೇಕ್ ಅಷ್ಟಾಗಿ ಸರಿಯಿರಲಿಲ್ಲ. ಗಡಿಬಿಡಿಯಲ್ಲಿ ಮುಂದಿನ ಚಕ್ರದ ಬ್ರೇಕ್ ಜೊತೆಗೆ ಕ್ಲಚ್ ಲಿವರ್ ಕೂಡ ಅದುಮಿದೆ ಅನ್ನಿಸುತ್ತೆ. ಬೈಕ್ ಮತ್ತಷ್ಟು ವೇಗವಾಗಿ ಜಾರತೊಡಗಿತು. ಪ್ರಪಾತಕ್ಕೆ ಹೋಗಿಯೇ ಬಿಡುತ್ತದೆ ಅನ್ನಿಸಿ ಇಡೀ ಬೈಕನ್ನು ಎಡಕ್ಕೆ ವಾಲಿಸಿದೆ. ಆದರೂ ಜಾರುತ್ತ ಹೋಗಿ ರಸ್ತೆಯಿಂದ ಎರಡ್ಮೂರು ಅಡಿ ಕೆಳಗಿದ್ದ ರಸ್ತೆಯಷ್ಟೇ ಅಗಲವಿದ್ದ ಸಮತಟ್ಟು ಪ್ರದೇಶದಲ್ಲಿ ಬಿತ್ತು. ಎಲ್ಲವೂ ಕ್ಷಣಾರ್ಧದಲ್ಲಿ ಆಗಿತ್ತು.
ಲಡಾಖ್ ಅಮೃತ ಯಾತ್ರೆ – 2022 ಭಾಗ-6. ಪುರ್ನೆಯಿಂದ 52 ಕಿ.ಮೀ. ಸಾಗಲು 4 ತಾಸು !
ಕಣ್ತೆರೆದು ನೋಡುತ್ತೇನೆ, ಬೈಕ್ ಅಡಿಯಲ್ಲಿದೆ, ಮೇಲೆ ನಾನು. ಸಾವರಿಸಿಕೊಂಡು ಮೇಲೆದ್ದೆ. ಕಾಲು ಸರಿ ಇದೆ ಅಂತ ಖಾತ್ರಿಯಾಯಿತು. ಮೈ ಮುಟ್ಟಿ ನೋಡಿದೆ. ಏನೂ ಆಗಿಲ್ಲ ಅಂತನ್ನಿಸಿತು. ಕೈಗಳನ್ನೂ ಆಚೀಚೆ ಆಡಿಸಿ ನೋಡಿದೆ. ಬಲಭುಜ ಸ್ವಲ್ಪ ನೋಯುತ್ತಿದ್ದುದನ್ನು ಹೊರತುಪಡಿಸಿ ಉಳಿದೆಲ್ಲ ಅಂಗಾಂಗ ಸರಿ ಇದೆ ಅನ್ನಿಸಿ ನಿಟ್ಟುಸಿರಿಟ್ಟೆ. ಬೈಕು ಅಡ್ಡಡ್ಡ ಮಲಗಿತ್ತು. ಅದನ್ನು ಒಬ್ಬನೇ ಎತ್ತಿ ನಿಲ್ಲಿಸುವಷ್ಟು ಶಕ್ತಿ ನನಗಿರಲಿಲ್ಲ. ಭುಜ ಬೇರೆ ನೋಯುತ್ತಿದ್ದುದರಿಂದ ಕಸರತ್ತು ಮಾಡಲಿಲ್ಲ. ಆಚೆಗೆ ಕಣ್ಣು ಹಾಯಿಸಿ ನೋಡಿದರೆ ಏನಿಲ್ಲವೆಂದರೂ 2500-3000 ಅಡಿಯಷ್ಟು ಆಳದ ಪ್ರಪಾತ. ಆ ತಿರುವಿನಲ್ಲಿ ಬೈಕನ್ನು ಎಡಕ್ಕೆ ಬಾಗಿಸಿರದಿದ್ದರೆ ನೇರವಾಗಿ ಆ ಪ್ರಪಾತದಲ್ಲಿ ನಾನೂ, ಬೈಕೂ ಇರುತ್ತಿದ್ದೆವು. ಇಡಿಯಾಗಿ ಇರಲು ಸಾಧ್ಯವೇ ಇರಲಿಲ್ಲ. ಆದರೆ ಹಾಗಾಗಲಿಲ್ಲ, ಥ್ಯಾಂಕ್ ಗಾಡ್!
ದೇಹವನ್ನು ಕಾದ ರಾಯಲ್ ಎನ್‌ಫೀಲ್ಡ್ ಹೆಲ್ಮೆಟ್, ರೈಡಿಂಗ್ ಗೇರ್
ರಸ್ತೆಯಿಂದ ಕೆಳಗಿನ ದಿಬ್ಬಕ್ಕೆ ಬೈಕ್ ಹಾಗೂ ಅದರ ಮೇಲೆ ನಾನು ದೊಪ್ಪನೆ ಬಿದ್ದರೂ ನನಗೆ ಬಲಗೈಗೆ ತರಚು ಗಾಯ ಆಗಿದ್ದು ಬಿಟ್ಟರೆ ಗಂಭೀರ ಏಟು ಆಗದಿರಲು ಪ್ರಮುಖ ಕಾರಣ ಸವಾರಿ ಕವಚ ಅರ್ಥಾತ್ ರೈಡಿಂಗ್ ಗೇರ್. ರಾಯಲ್ ಎನ್‌ಫೀಲ್ಡ್ ಜೊತೆಗೆ ಸಹಯೋಗ ಮಾಡಿಕೊಂಡಿದ್ದ ನಾವು ಅದರ ರೈಡಿಂಗ್ ಗೇರ್ ಧರಿಸಿದ್ದೆವು. ತಲೆಯನ್ನು ಸಂಪೂರ್ಣ ಮುಚ್ಚುವಂತಹ ಸದೃಢ ಹೆಲ್ಮೆಟ್, ಕೈಗೆ ರಕ್ಷಣೆ ನೀಡುವಂತಹ ಫೈಬರ್ ರಕ್ಷಕಗಳಿಂದ ಕೂಡಿದ ಗ್ಲೌಸ್, ಮಣಿಕಟ್ಟು, ಮೊಣಕೈ, ಹೆಗಲಿನ ಭಾಗಕ್ಕೆ ವಿಶೇಷ ರಕ್ಷಣಾ ವ್ಯವಸ್ಥೆ ಹೊಂದಿರುವ ಹಿಮಾಲಯನ್ ಜಾಕೆಟ್, ಮೊಣಕಾಲಿಗೆ ರಕ್ಷಣೆ (protect) ಹೊಂದಿದ್ದ ರೈಡಿಂಗ್ ಪ್ಯಾಂಟ್, ಎಲ್ಲಕ್ಕಿಂತ ಮುಖ್ಯವಾಗಿ ಸುಮಾರು ಮೊಣಕಾಲು ವರೆಗೂ ಇದ್ದ ರೈಡಿಂಗ್ ಬೂಟು ಧರಿಸಿ ಅಕ್ಷರಶಃ ಅನ್ಯಗ್ರಹಯಾನಿಗಳಂತೆಯೇ ಕಾಣುತ್ತಿದ್ದ ನಾವು ಯಾತ್ರೆಯ ಪೂರ್ತಿ ಅದನ್ನು ಧರಿಸಿಯೇ ಇದ್ದೆವು.
ಮಾಗಿದ ಅನುಭವಿ ರೈಡರ್ ಆಗಿದ್ದ ದಿಲೀಪ ಅದರ ಮಹತ್ವವನ್ನು ಮೊದಲೇ ಸಾರಿ ಹೇಳಿದ್ದ. ತನ್ನದೇ ರೈಡಿಂಗ್ ಬೂಟು, ಪ್ಯಾಂಟು ಕೊಟ್ಟಿದ್ದ. ಈ ರೈಡ್‌ಗೂ ಮುನ್ನ ಬೆಂಗಳೂರಲ್ಲೇ ಒಂದು ಸಣ್ಣ ರೈಡ್ ಹೋಗಿ ಅದಕ್ಕೆ ಒಗ್ಗಿಸುವ ಕೆಲಸವನ್ನೂ ಮಾಡಿದ್ದ. ಅದನ್ನೆಲ್ಲ ಅಕ್ಷರಶಃ ಪಾಲಿಸಿದ ಕಾರಣವೇ ನಾನು ಆ ಬಂಡೆಗಳಿರುವ ದಿಬ್ಬದ ಮೇಲೆ ಬಿದ್ದೂ ಮೂಳೆ (Bone) ಮುರಿಯದೆ ಉಳಿದುಕೊಂಡೆ. ಥ್ಯಾಂಕ್ಸ್ ಟು ದಿಲೀಪ & ರಾಯಲ್ ಎನ್‌ಫೀಲ್ಡ್!
ಲಡಾಖ್ ಅಮೃತ ಯಾತ್ರೆ–2022: ಭಾಗ-7, ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!
ಅಜಿತನ ಸಾಹಸ ಕೇಳಿದ್ದೀರಿ, ಅನಿಲನ ಸಾಹಸ ಕೇಳಿ...!
ಜೀವ ಏನೋ ಉಳಿಯಿತು. ಮುಂದೇನು? ಬೈಕ್ ಸರಿ ಇದೆಯಾ ಗೊತ್ತಾಗುವುದು ಹೇಗೆ? ಸರಿ ಇದ್ದರೂ ಅದನ್ನು ಮೇಲೆತ್ತಿ ರಸ್ತೆಗೆ ತರುವುದು ಹೇಗೆ? ದಿಲೀಪ, ಅನಂತ ಮುಂದೆ ಹೋಗಿದ್ದರು. ಕರೆ ಮಾಡೋಣ ಎಂದರೆ ಮೊಬೈಲ್ ನೆಟ್ ವರ್ಕ್ ಬೇರೆ ಇಲ್ಲ. ಏನು ಮಾಡುವುದು ಎಂದು ಯೋಚಿಸುವಷ್ಟರಲ್ಲಿ ಮುಂದೆ ಸಾಗಿದ್ದ ದಿಲೀಪ, ಅನಂತ ಪಕ್ಕದ ಬೆಟ್ಟದ ರಸ್ತೆಯಲ್ಲಿ ಸಾಗುತ್ತಿದ್ದುದು ಕಣ್ಣಿಗೆ ಬಿತ್ತು. ಎರಡೂ ಕೈ ಮೇಲೆತ್ತಿ ಗಂಟಲು ಹರಿಯುವಂತೆ ಕೂಗಿದೆ. ಜೀಪಿನಲ್ಲಿದ್ದವರಿಗೆ ಏನೆಂದು ಗೊತ್ತಾಗಲಿಲ್ಲವಂತೆ. ದಿಲೀಪನಿಗೆ ಬಹುಶಃ ನಾನು ಕರೆಯುತ್ತಿದ್ದೇನೆ ಅನ್ನಿಸಿರಬೇಕು. ಅದೇ ಹೊತ್ತಲ್ಲಿ ಇಬ್ಬರು ಬೈಕರುಗಳು ಆ ಮಾರ್ಗವಾಗಿ ಬಂದರು. ನನ್ನ ಬಗ್ಗೆ ವಿಚಾರಿಸಿದರು. ಬೈಕನ್ನೆತ್ತಿ ನಿಲ್ಲಿಸಿದರು. ಹ್ಯಾಂಡಲ್ ಬಾಗಿತ್ತು. ಟ್ಯಾಂಕ್ ಒಂದೆರಡು ಕಡೆ ನುಗ್ಗಾಗಿತ್ತು. ಹೆಡ್ ಲೈಟ್ ಮೇಲಿನ ಕವರ್ ಮುದ್ದೆಯಾಗಿತ್ತು. ಮಿರರ್ ಗಳು ಬಾಗಿದ್ದವು. ಹಿಂದಿನ ಬ್ರೇಕ್ ಪೆಡಲ್ ಪೂರ್ತಿ ಜಾಮ್ ಆಗಿತ್ತು. ಏನು ಮಾಡಬಹುದು ಎಂದೆಲ್ಲ ಯೋಚಿಸುತ್ತಿದ್ದಂತೆ ದಿಲೀಪ ಬಂದು ತಲುಪಿದ. ಅವರು ಮೂವರೂ ಬೈಕನ್ನು ರಸ್ತೆಗೆತ್ತಲು ಸಾಧ್ಯವೇ ಎಂದು ಪರಿಶೀಲಿಸಿದರು.
ಆದರೆ, ಆ ಬೈಕರುಗಳು "ಇದನ್ನು ರಸ್ತೆಗೆಳೆಯುವುದು ದುಸ್ಸಾಹಸ. ರಸ್ತೆಗೆಳೆದರೂ ಅದನ್ನು ಚಲಾಯಿಸಿಕೊಂಡು ಹೋಗುವುದು ಆಗದ ಮಾತು. ನೀವು ಆದಷ್ಟು ಬೇಗ ಹಾನ್ ಲೇಗೆ ಹೋಗಿ, ಟೋಯಿಂಗ್ ವಾಹನ ತಂದು ಬೈಕ್ ಒಯ್ಯಿರಿ" ಎಂದರು. ನಾವು ಆಯಿತೆಂದೆವು. ಯಾತಕ್ಕೂ "ಮುಂದೆ ನಮ್ಮ ಥಾರ್ ಜೀಪೊಂದು ಹೋಗಿದೆ. ಅವರು ಸಿಕ್ಕರೆ ಹೀಗಾಗಿರುವ ಬಗ್ಗೆ ಹೇಳಿ" ಎಂದೆವು. ನಾವು ಒಂದು ಅಲಿಖಿತ ನಿಯಮ ಮಾಡಿಕೊಂಡಿದ್ದೆವು. ಮೂರು ವಾಹನಗಳಲ್ಲಿ ಯಾವುದೇ ವಾಹನ (Vehicle) ಅರ್ಧ ತಾಸಿಗಿಂತ ಹೆಚ್ಚು ಕಣ್ಮರೆಯಾದರೆ ಅದು ಬರುವ ವರೆಗೆ ನಿಲ್ಲುವುದು ಎಂದು. ನಾವು ಬಾರದ ಕಾರಣ ಅನಂತ ನಿಲ್ಲಿಸಿಕೊಂಡಿದ್ದನಂತೆ. ಬೈಕರುಗಳು ಹೇಳಿದನ್ನು ಕೇಳಿ ನಾವಿದ್ದಲ್ಲಿಗೆ ಬಂದರು. ಅಲ್ಲಿಂದ ಶುರುವಾಯಿತು ಇನ್ನೊಂದು ಸಾಹಸ. ಮೊದಲಿಗೆ ಬೈಕನ್ನು ಹಾಗೇ ತಳ್ಳಿ ರಸ್ತೆಗೆ ತರಲು ಅನಂತ, ದಿಲೀಪ, ಅನಿಲ್ ಪ್ರಯತ್ನಿಸಿದರು.
ಅದು ಸಾಧ್ಯವಾಗದೆ, ಜೀಪಿಗೆ ಹಗ್ಗ ಕಟ್ಟಿ, ಮೂವರು ಹುಡುಗರ ಜೊತೆ ಹುಡುಗಿಯರೂ ಸೇರಿ ಹಾಗೂ ಹೀಗೂ ಬೈಕನ್ನು ಮೇಲಕ್ಕೆಳೆದರು. ಬಲಭುಜ ನೋಯುತ್ತಿದ್ದುದರಿಂದ ಹಾಗೂ ಅದು ಎಷ್ಟರ ಮಟ್ಟಿಗೆ ಏಟು ತಿಂದಿದೆ ಎಂಬುದರ ತಪಾಸಣೆ ಆಗದ ಕಾರಣ ನಾನು ತಳ್ಳುವ ಅಥವಾ ಎಳೆಯುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಬೈಕ್ ಮೇಲೆ ಬಂದ ಮೇಲೆ ಮೂವರೂ ಮುಂದಿನ ಯೋಜನೆ (Project) ಬಗ್ಗೆ ಮಾತನಾಡಿಕೊಂಡರು. ಅದೃಷ್ಟವಶಾತ್, ಬೈಕಿನಿಂದ ಒಂದು ಹನಿ ಪೆಟ್ರೋಲ್ ಕೂಡ ಚೆಲ್ಲಿ ಹೋಗಿರಲಿಲ್ಲ. ಸ್ಟಾರ್ಟ್ ಆಗುತ್ತಿತ್ತು. ಹಿಂದಿನ ಬ್ರೇಕ್ ಜಾಮ್ ಆಗಿದ್ದು, ಹ್ಯಾಂಡಲ್ ಬಾಗಿದ್ದು ಬಿಟ್ಟರೆ ಬೈಕಿಗೆ ಬೇರೆ ಯಾವುದೇ ಹಾನಿ ಆಗಿರಲಿಲ್ಲ. ಅನಂತ ಹಾಗೂ ಅನಿಲ್ ಧೈರ್ಯ ಮಾಡಿದರು. ಟೋಯಿಂಗ್ ಮಾಡುವುದು ಬೇಡ, ಓಡಿಸಿಕೊಂಡೇ ಹೋಗಿಬಿಡೋಣ ಅಂತ ನಿರ್ಧರಿಸಿದರು.
ಲಡಾಖ್ ಅಮೃತಯಾತ್ರೆ-2022: ಭಾಗ-8, ಲೇಹ್ ಗೆ ಹೋಗೋಣ, ಬಾರೋ ಲೇ...!
ಅನಿಲ್ ಚಲಾಯಿಸುವುದು ಅಂತಾಯಿತು. ನಾನು ವೈದ್ಯಕೀಯ ತಪಾಸಣೆ ಆಗದೆ ಯಾವುದೇ ಕಾರಣಕ್ಕೂ ಬೈಕ್ ಚಲಾಯಿಸುವಂತಿಲ್ಲ ಎಂದು ತಾಕೀತು ಮಾಡಿದರು. ನನಗೂ ಆಗ ಮತ್ತೆ ಬೈಕ್ ಹತ್ತುವಷ್ಟು ಧೈರ್ಯ ಇರಲಿಲ್ಲ ಎಂಬುದು ಬೇರೆ ಮಾತು. ಮುಂದೆ ಬೈಕಲ್ಲಿ ದಿಲೀಪ, ಹಿಂದೆ ಜೀಪಲ್ಲಿ ನಾವು, ಮಧ್ಯದಲ್ಲಿ ಅನಿಲ್... ಹೀಗೆ ಈ ಸರದಿಯಲ್ಲಿ ನಮ್ಮ ಅವರೋಹಣ ಆರಂಭವಾಯಿತು. ಚಿಸುಮ್ ಲೇ ಮೂಲಕ ನೆರ್ಬೊಲೇ ತಲುಪಿದ್ದಾಯಿತು. ಅಲ್ಲಿಂದ ಇದ್ದುದೇ ಸವಾಲಿನ ಇಳಿದಾರಿ. ಕಲ್ಲು, ಮಣ್ಣಿನ ಜೊತೆಗೆ ತೀರಾ ಕಡಿದಾದ ಇಳಿಕೆ. ಬಾಲ್ಯದಲ್ಲೇ ಬೈಕ್ ಚಾಲನೆ ಕಲಿತಿದ್ದ ಅನಿಲ್ ಚಾಕಚಕ್ಯತೆಯಿಂದಾಗಿ ಆ ದುಸ್ಥಿತಿಯಲ್ಲಿದ್ದ ಬೈಕನ್ನೂ ನಿರಾಯಾಸವಾಗಿ ಕೆಳಗೆ ತಲುಪಿಸಿದ್ದಾಯಿತು.
ಆ ನಿರ್ಮಾನುಷ ಪ್ರದೇಶದಲ್ಲಿ ದಿಕ್ಕು ತಪ್ಪಿದರೆ, ಖತಂ!
ಆ ನಂತರ ನಾವು ಸುಮಾರು 30 ಕಿ.ಮೀ. ಪ್ರಯಾಣಿಸಿ ಹಾನ್ ಲೇ ತಲುಪಬೇಕಿತ್ತು. ಹೋಗಿದ್ದ ದಾರಿಯೇ ಆಗಿದ್ದರೂ ಅಷ್ಟು ಸುಲಭಕ್ಕೆ ದಿಕ್ಕು ತಿಳಿಯುತ್ತಿರಲಿಲ್ಲ. ಸಂಪೂರ್ಣ ನಿರ್ಮಾನುಷ ಪ್ರದೇಶ ಬೇರೆ. ದಿಕ್ಕು ತಪ್ಪಿದರೆ ಅಲ್ಲೇ ಸುತ್ತು ಹಾಕುತ್ತ ಇರುವ ಅಪಾಯ. ಇಂಧನ ಖಾಲಿ ಆದರೆ ದೇವರೇ ಗತಿ. ರಾತ್ರಿ ಆಗಿಬಿಟ್ಟರೆ ಶೂನ್ಯ ಡಿಗ್ರಿ ಸಮೀಪದ ಚಳಿ ಎದುರಿಸಬೇಕಿತ್ತು. ಹಗಲು 20-25 ಡಿಗ್ರಿ ತಾಪ ಇದ್ದರೆ, ಸೂರ್ಯ ಮುಳುಗುತ್ತಿದ್ದಂತೆ ದಿಢೀರನೆ 10 ಡಿಗ್ರಿಗಿಂತ ಕೆಳಗೆ ಉಷ್ಣಾಂಶ ಇಳಿಯುವಂಥ ಪ್ರದೇಶವದು. ಹಾಗೇನಾದರೂ ಆದರೆ ಖೇಲ್ ಖತಂ. ಬಹಳ ಎಚ್ಚರಿಕೆಯಿಂದ ಸಾಗಿದರೂ ಒಂದು ಕಡೆ ಅಂದುಕೊಂಡ ದಿಕ್ಕಿನಿಂದ ಸ್ವಲ್ಪ ಮುಂದೆ ಹೋಗಿಬಿಟ್ಟಿದ್ದೆವು. ಆದರೆ, ಮಾನಸ ಒಂದು ಗುರುತನ್ನು ನೆನಪಿಟ್ಟುಕೊಂಡಿದ್ದಳು. ಅದರ ಸಮೀಪಕ್ಕೆ ಹೋಗಿ ಮರಳಿ ಸರಿಯಾದ ಹಾದಿ (Road) ತಲುಪಿದೆವು.
ಇನ್ನೇನು ಜನವಸತಿ ಪ್ರದೇಶ ಬಂತು ಎನ್ನುವಷ್ಟರಲ್ಲಿ ಎದುರಿಗೆ ಮೂರು ಬೈಕ್ ಗಳು ಮುಂದೆ ಸಾಗಲು ತ್ರಾಸು ಪಡುತ್ತಿದ್ದವು. ಏನಾಯಿತೆಂದು ನೋಡಿದರೆ, ಒಂದರ ಚೈನ್ ತುಂಡಾಗಿದೆ. ಅದನ್ನು ಇನ್ನೊಂದು ಬೈಕಿಗೆ ಕಟ್ಟಿ ಎಳೆಯುತ್ತ ಸಾಗಲು ಒದ್ದಾಡುತ್ತಿದ್ದರು. ಉಮ್ಲಿಂಗ್ ಲಾದಲ್ಲೇ ಹಾಗಾಗಿತ್ತಂತೆ. ಬೆಳಗ್ಗಿನಿಂದ ಪ್ರಯಾಣಿಸಿ ಸಂಜೆ (Evening) ಆದರೂ ಹಾನ್ ಲೇ ತಲುಪಲು ಆಗಿರಲಿಲ್ಲವಂತೆ. ಚೂರು ಸಮತಟ್ಟಾದ ಪ್ರದೇಶ ಸಿಗುವವರೆಗೆ ಜೀಪಿಗೆ ಕಟ್ಟಿ ಎಳೆದೊಯ್ಯಲು ಸಾಧ್ಯವೇ ಅಂತ ಮನವಿ ಮಾಡಿದರು. ಅಂಥ ಪ್ರದೇಶದಲ್ಲಿ ಯಾನಿಗಳಿಗೆ ಯಾನಿಗಳೇ ರಕ್ಷೆ. ಅವರಿಗೆ ನೆರವು ನೀಡಿ ಕತ್ತಲಾವರಿಸುವ ಮುನ್ನ ಹಾನ್ ಲೇ ತಲುಪಿದೆವು.
ಲಡಾಖ್ ಅಮೃತಯಾತ್ರೆ - 2022: ಭಾಗ-9, ಹಾನ್‌ಲೇ... ಅದು ಬೇರೆಯೇ ಗ್ರಹ !
ನೂರಾರು ಬೈಕ್ ಬರುವ ಊರಲ್ಲಿ ಒಬ್ಬೇ ಒಬ್ಬ ಮೆಕ್ಯಾನಿಕ್ ಇಲ್ಲ!
ಅಲ್ಲಿ ಬಂದು ವಿಚಾರಿಸಿದರೆ ಇಡೀ ಹಾನ್ ಲೇ ಪ್ರದೇಶದಲ್ಲಿ ಒಬ್ಬೇ ಒಬ್ಬ ಬೈಕ್ ಮೆಕ್ಯಾನಿಕ್ ಇಲ್ಲ ಎಂಬುದು ಗೊತ್ತಾಯಿತು. ಮತ್ತು ಅಚ್ಚರಿಯೂ ಆಯಿತು. ನಿತ್ಯ ಹತ್ತಾರು, ವಾರದಲ್ಲಿ ನೂರಾರು ಬೈಕ್ ಗಳು ಬರುವ ಊರಲ್ಲಿ ಏನಾದರೂ ಆದರೆ ದುರಸ್ತಿ ಮಾಡಲು ಒಬ್ಬೇ ಒಬ್ಬ ಮೆಕ್ಯಾನಿಕ್ ಇಲ್ಲ ಎಂದರೆ ಅದೆಂಥ ಚೋದ್ಯ! ನಾವು ಮತ್ತೆ ಚಿಂತಾಕ್ರಾಂತರಾದೆವು. ಯಾಕೆಂದರೆ ರಾಯಲ್ ಎನ್ ಫೀಲ್ಡ್ ಶೋರೂಮ್ ಇದ್ದುದು 260 ಕಿ.ಮೀ. ದೂರದ ಲೇಹ್ ನಲ್ಲಿ. ಸುಸ್ಥಿತಿಯಲ್ಲಿಲ್ಲದ ಬೈಕ್ ಅನ್ನು ಅಲ್ಲಿಯವರೆಗೆ ಚಲಾಯಿಸುವುದಾದರೂ ಹೇಗೆ? ವಾಹನದಲ್ಲಿ ಹಾಕಿ ಕಳಿಸೋಣ ಎಂದರೆ ಅವತ್ತಿಗೆ ಅಲಭ್ಯ. ಮಾರನೆಯ ದಿನ ಸಿಗುವ ಖಾತ್ರಿ ಇಲ್ಲ. ಸಿಕ್ಕರೂ ಸಾಗಣೆಗೆ ದುಬಾರಿ ದರ. ಕನಿಷ್ಠ 16ರಿಂದ 17 ಸಾವಿರ ರೂಪಾಯಿ ಬಾಡಿಗೆ. ಅವತ್ತಿಗೆ ಯೋಚನೆ ಮಾಡುವುದು ಬಿಟ್ಟು ವಿಶ್ರಾಂತಿ ತಗೊಳ್ಳಲು ನಿರ್ಧರಿಸಿದೆವು. ಬೆಳಗ್ಗೆ ಎದ್ದು ಏನಾಗುತ್ತೋ ಅದನ್ನು ಮಾಡುವುದೆಂದು ತೀರ್ಮಾನಿಸಿದೆವು. ರಾತ್ರಿಯಾದರೆ ಇದ್ದೊಬ್ಬ ವೈದ್ಯರೂ ಗಾಯಬ್ ಆಗುವ ಊರದು. ಕಡೆಗೆ ಮಿಲಿಟರಿ ಶಿಬಿರವೊಂದಕ್ಕೆ ಹೋಗಿ ಅವರಲ್ಲಿ ಮನವಿ ಮಾಡಿಕೊಂಡು ವೈದ್ಯಕೀಯ ತಪಾಸಣೆ ಮಾಡಿಸಿಕೊಂಡೆ. ಕೈಯನ್ನು ಆಚೀಚೆ ಅಲ್ಲಾಡಿಸಿ, ಮೇಲಕ್ಕೆತ್ತಿಸಿ ತಪಾಸಣೆ ನಡೆಸಿದ ಅಲ್ಲಿನ ಅರೆವೈದ್ಯಕೀಯ ಸಿಬ್ಬಂದಿಯೋರ್ವರು ಗಂಭೀರವಾಗಿ ಏನೂ ಆದಂತಿಲ್ಲ ಎಂದು ನೋವು ನಿವಾರಕ ಚುಚ್ಚುಮದ್ದು ನೀಡಿ ಕಳುಹಿಸಿದರು. ಒಂದು ಮುಲಾಮು ನೀಡಿ ಹಚ್ಚಲು ಹೇಳಿದರು. ನಿಶ್ಚಿಂತವಾಗಿ ಹೋಗಿ ಎಂದೂ ಹೇಳಿದರು.
ಸೊ ಮೊರಿರಿ ಭೇಟಿಗೆ ಗುಡ್ ಬೈ, ಚಲೋ ಲೇಹ್!
ಹಳೆಯ ಯೋಜನೆ ಪ್ರಕಾರ ಮರುದಿನ ನಾವು ಬೇಗನೆ ಎದ್ದು ಸೊ ಮೊರಿರಿ ಎಂಬ ಸರೋವರಕ್ಕೆ ಭೇಟಿ ನೀಡಿ ಬಳಿಕ ಲೇಹ್ ತಲುಪಬೇಕಿತ್ತು. ಆದರೆ, ಹಿಂದಿನ ದಿನ ಸಂಭವಿಸಿದ ಅವಘಡದಿಂದಾಗಿ ಈ ಬೈಕ್ ಓಡಿಸಿಕೊಂಡು ಅಲ್ಲಿಗೆಲ್ಲ ಹೋಗುವುದು ಬೇಡ ಎಂದು ಸೊ ಮೊರಿರಿ ಸರೋವರ ಭೇಟಿಯನ್ನು ರದ್ದುಪಡಿಸಲಾಯಿತು. ಇಡೀ ಪ್ರಯಾಣದ ಬಗ್ಗೆ ನನಗಿರುವ ಬೇಸರ ಎಂದರೆ ನನ್ನಿಂದಾಗಿ ಇತರರಿಗೂ ಆ ಅದ್ಭುತ ಸರೋವರ ನೋಡುವ ಅವಕಾಶ ತಪ್ಪಿ ಹೋಯಿತಲ್ಲ ಎಂಬುದು. ಇರಲಿ, ಕಡೆಗೆ ಘಾಸಿಗೊಂಡ ಬೈಕ್ ಅನ್ನು ಅನಿಲ್ ಸಾರಥ್ಯದಲ್ಲೇ ಲೇಹ್ ಕಡೆಗೆ ಒಯ್ಯಲಾಯಿತು. ಅಲ್ಲಿ ರಾಯಲ್ ಎನ್ ಫೀಲ್ಡ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿದರೆ, ನೂರಾರು ಬೈಕ್ ಗಳು ಕಾಯುತ್ತಿವೆ. ಕಡೆಗೆ ಅದರ ವ್ಯವಸ್ಥಾಪಕರನ್ನು ಭೇಟಿಯಾಗಿ ನಮ್ಮ ಪರಿಸ್ಥಿತಿ ವಿವರಿಸಿ ತುಸು ಬೇಗನೆ ನೋಡುವಂತೆ ಮನವಿ ಮಾಡಿದೆ.
ಎವರೆಸ್ಟ್ ಬೇಸ್ ಕ್ಯಾಂಪ್‌ಗಿಂತಲೂ ಎತ್ತರದ ರಸ್ತೆ ಉಮ್ಲಿಂಗ್ ಲಾ!
ಸುದೈವವಶಾತ್, ಬೈಕಿಗೆ ಗಂಭೀರ ಸಮಸ್ಯೆ ಏನೂ ಆಗಿರಲಿಲ್ಲ. ಮುಖ್ಯವಾಗಿ ಜಾಮ್ ಆಗಿದ್ದ ಬ್ರೇಕ್ ಅನ್ನು ಸರಿ ಮಾಡಿಕೊಟ್ಟರು. ಬಾಗಿದ್ದ ಹ್ಯಾಂಡಲ್ ಅನ್ನು ತಕ್ಕಮಟ್ಟಿಗೆ ನೇರ ಮಾಡಿದರು. ಬದಲಿಸೋಣ ಎಂದರೆ ಅವರ ಬಳಿ ಸ್ಟಾಕ್ ಖಾಲಿ ಆಗಿತ್ತಂತೆ. ಇದನ್ನು ನೀವು ಧಾರಾಳವಾಗಿ ಚಂಡೀಗಢವರೆಗೆ ಚಲಾಯಿಸಬಹುದು ಎಂಬ ಭರವಸೆಯನ್ನೂ ಇತ್ತರು. ಇದರ ನಡುವೆ ಮಾನಸ-ದೀಪ್ತಿ ಲೇಹ್ ಮಾರುಕಟ್ಟೆ ಸುತ್ತಲು ಹೋಗಿದ್ದರು. ಬೈಕ್ ಸರಿಯಾದದ್ದು ಎಲ್ಲರಿಗೂ ಸಮಾಧಾನ ನೀಡಿತು. ಮೂರೂ ವಾಹನಗಳಿಗೆ ಸಮೀಪದ ವಾಶಿಂಗ್ ಸೆಂಟರ್ ನಲ್ಲಿ ಸ್ನಾನ ಮಾಡಿಸಿದೆವು. ಬರೋಬ್ಬರಿ 1 ಲಕ್ಷ ಓಡಿದ್ದ ಥಾರ್ ಚಕ್ರಗಳನ್ನು ಲೇಹ್ ನಲ್ಲೇ ಬದಲಿಸಲು ಅನಂತ ನಿರ್ಧರಿಸಿದ್ದ. ಅದೆಲ್ಲ ಆಗಿ ವಂಶಿಯ ಅವಲೋಕ್ ಗೆಸ್ಟ್ ಹೌಸಿಗೆ ಬಂದು ತಂಗಿದೆವು. ಅಲ್ಲಿಗೆ ನಮ್ಮ ಅಮೃತಯಾತ್ರೆ 9ನೇ ದಿನ ಪೂರೈಸಿತ್ತು.
ಮುಂದಿನ ಕಂತಿನಲ್ಲಿ: ಲೇಹ್ ಗೆ ಹೋಗಿ ಅಷ್ಟೂ ನೋಡದಿದ್ದರೆ ಹೇಗೆ? ಸಿಂಧೂ-ಜನ್ಸ್ ಖಾರ್ ನದಿಗಳ ಸಂಗಮ. ನೇಯ್ ಎಂಬ ಅಪೂರ್ವ ಹಳ್ಳಿ. ಅಲ್ಲೊಬ್ಬ ಸ್ಥಿತಪ್ರಜ್ಞ ಬುದ್ಧ. ಹಾಲ್ ಆಫ್ ಫೇಮ್ ನಲ್ಲಿ ತೆರೆದುಕೊಳ್ಳುತ್ತದೆ ಭಾರತೀಯ ಸೇನೆಯ ಸಾಹಸ. ಲೇಹ್ ಗೆ ಕಲಶಪ್ರಾಯದಂತಿದೆ ಶಾಂತಿ ಸ್ತೂಪ. ಟುಪ್ಪಕ್ಕಾಗಿ ಅಲೆದಾಟ, ಉಡುಗೊರೆ ಹುಡುಕಲು ಹೋರಾಟ...