ಲಡಾಖ್ ಅಮೃತ ಯಾತ್ರೆ – 2022 ಭಾಗ-6. ಪುರ್ನೆಯಿಂದ 52 ಕಿ.ಮೀ. ಸಾಗಲು 4 ತಾಸು !
ಆ ಹಳ್ಳಿಗೆ ವಿದ್ಯುತ್ ಕಂಬಗಳು ಬಂದಿವೆ. ಅವುಗಳಿಗೆ ತಂತಿ ಬಂದಿಲ್ಲ. ಕರೆಂಟೇ ಇಲ್ಲವೆಂದ ಮೇಲೆ ಫೋನು ಸಂಪರ್ಕ ಕೇಳಲೇಬೇಡಿ. ಗಿಜಿಗುಟ್ಟುವ ಪರಿಸರದಿಂದ ಬಾಹ್ಯ ಪ್ರಪಂಚದ ಸಂಪರ್ಕವೇ ಇಲ್ಲದೆ ನಾಲ್ಕಾರು ದಿನ ಕಳೆಯಬೇಕು ಎನ್ನುವವರಿಗೆ ಹೇಳಿ ಮಾಡಿಸಿದ ಊರದು. ಸುತ್ತಲೂ ಹಿಮಾಲಯದ ಬೆಟ್ಟಗಳ ಸಾಲು. ಕೆಳಗೆ ಹರಿಯುವ ಕುರ್ಗಿಯಾಕ್ ನದಿ.
ರವಿಶಂಕರ್ ಭಟ್
ಫೋನ್ ಬಿಡಿ, ವಿದ್ಯುತ್ ಸಂಪರ್ಕವೂ ಇಲ್ಲದ ಕುಗ್ರಾಮ. ತಂಗಲು ಕೊಠಡಿಗಳಿಲ್ಲ. ಟೆಂಟೇ ಎಲ್ಲ. ಜೊತೆಗೆ ಇದ್ದಕ್ಕಿದ್ದಂತೆ ಕಾಡಿದ ತಲೆನೋವು, ಸುಸ್ತು, ಅಸಾಧ್ಯ ವೇದನೆ. ಬೆಳಗ್ಗೆ ಬೈಕು ಓಡಿಸುತ್ತೇನಾ, ಆಸ್ಪತ್ರೆ ಸೇರುತ್ತೇನಾ ಎಂಬ ಯೋಚನೆ. ಒಂದು ಮಾತ್ರೆ, ಬೆಳಗ್ಗೆ ಎದ್ದು ಮತ್ತೊಂದು ಸವಾಲಿನ ಯಾತ್ರೆ. ಹಾಗೆ ಏನೇನಾಯ್ತು..ಮುಂದೆ ಓದಿ.
ಪುರ್ನೆ ಎಂಬ ಪರಿಶುದ್ಧ, ಪ್ರಶಾಂತ ಕಣಿವೆ
ಜಿಸ್ಪಾದಿಂದ ಹೊರಟು ಶಿಂಕು ಲಾ ಏರಿ, ಕಣಿವೆಗಳನ್ನಿಳಿಯುತ್ತ ಏರುತ್ತ ಪುರ್ನೆ ತಲುಪುವಾಗ ಸಂಜೆ 6 ಆಗಿತ್ತು ಎಂದಿದ್ದೆನಲ್ಲ, ಇನ್ನೇನು ಸೂರ್ಯ ಮುಳುಗುವ ಹಂತದಲ್ಲಿದ್ದ. ಅಲ್ಲೆಲ್ಲ ಕತ್ತಲಾಗುವಾಗ 7.30-8 ಗಂಟೆ ಆಗುತ್ತದೆ. ನಾವು ಡೋಲ್ಮಾ ಕ್ಯಾಂಪಿನಲ್ಲಿ ಟೆಂಟ್ ರೆಂಟ್ ಮಾಡಿ ಆಗಿತ್ತು. ಆ ಹಳ್ಳಿಗೆ ವಿದ್ಯುತ್ ಕಂಬಗಳು ಬಂದಿವೆ. ಅವುಗಳಿಗೆ ತಂತಿ ಬಂದಿಲ್ಲ. ಕರೆಂಟೇ ಇಲ್ಲವೆಂದ ಮೇಲೆ ಫೋನು ಸಂಪರ್ಕ ಕೇಳಲೇಬೇಡಿ. ಗಿಜಿಗುಟ್ಟುವ ಪರಿಸರದಿಂದ ಬಾಹ್ಯ ಪ್ರಪಂಚದ ಸಂಪರ್ಕವೇ ಇಲ್ಲದೆ ನಾಲ್ಕಾರು ದಿನ ಕಳೆಯಬೇಕು ಎನ್ನುವವರಿಗೆ ಹೇಳಿ ಮಾಡಿಸಿದ ಊರದು. ಸುತ್ತಲೂ ಹಿಮಾಲಯದ ಬೆಟ್ಟಗಳ ಸಾಲು. ಕೆಳಗೆ ಹರಿಯುವ ಕುರ್ಗಿಯಾಕ್ ನದಿ. ಕತ್ತಲಾದ ಮೇಲೆ ಎಲ್ಲ ಸ್ತಬ್ಧ, ಕ್ಯಾಂಪ್ ಪ್ರದೇಶ ಹೊರತುಪಡಿಸಿ. ಇನ್ನೊಂದು ಅಥವಾ ಎರಡು ವರ್ಷ ಹೋದರೆ, ಇಲ್ಲೂ ಹೋಮ್ ಸ್ಟೇಗಳು, ಹೋಟೆಲ್‌ಗಳು ಇತ್ಯಾದಿ ತಲೆ ಎತ್ತಬಹುದು. ಯಾಕೆಂದರೆ, ಇಲ್ಲಿ ಹೆದ್ದಾರಿ ನಿರ್ಮಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಬಂಡೆಗಳನ್ನು ಸ್ಫೋಟಿಸಿ ರಸ್ತೆಗಳನ್ನು ಅಗಲಗೊಳಿಸುವ ಕಾರ್ಯ ಆರಂಭವಾಗಿದೆ. ದೊಡ್ಡದೊಡ್ಡ ಯಂತ್ರಗಳು ರಸ್ತೆ ಹದಗೊಳಿಸುವ ಕೆಲಸದಲ್ಲಿ ನಿರತವಾಗಿವೆ. ಅದೆಲ್ಲ ಪೂರ್ಣ ಆಗುವವರೆಗೆ ಪುರ್ನೆ ಪ್ರಶಾಂತ, ಪರಿಶುದ್ಧ ಪ್ರದೇಶವಾಗಿಯೇ ಇರುವುದರಲ್ಲಿ ಅನುಮಾನವಿಲ್ಲ.
ಕಾಡಿದ ಅನಾರೋಗ್ಯ, ಅಸಹನೆ
ಪುರ್ನೆಯ ಟೆಂಟ್ ಒಳಗೆ ಸೇರಿಕೊಳ್ಳುತ್ತಿದ್ದಂತೆ ನನಗೆ ನನ್ನ ದೇಹಸ್ಥಿತಿಯ ಅರಿವಾಗತೊಡಗಿತು. ಸೂರ್ಯ ಪರ್ವತದ ಹಿಂದೆ ಮರೆಯಾಗುತ್ತಿದ್ದಂತೆ ಉರಿಸೆಖೆ ಮಾಯವಾಗಿ ಹವಾಮಾನ ಇದ್ದಕ್ಕಿದ್ದಂತೆ ತಂಪಾಗತೊಡಗಿತು. ಗಾಳಿಯ ವೇಗ ತೀವ್ರ ಆಗತೊಡಗಿತು. ಸಣ್ಣಗೆ ಇದ್ದ ತಲೆನೋವು ಅಸಾಧ್ಯ ಎನಿಸತೊಡಗಿತು. ಹೊಟ್ಟೆಯಲ್ಲಿ ಏನೋ ತಳಮಳ. ಇದರ ಜೊತೆಗೆ ಅಸಾಧ್ಯ ಅಸಹನೆ. ಇದ್ದಕ್ಕಿದ್ದಂತೆ ಎತ್ತರದ ಪ್ರದೇಶಕ್ಕೆ ಹೋದರೆ ತೀವ್ರ ತೆರನಾದ ಪರ್ವತ ವ್ಯಾಧಿ (Acute Mountain Sickness – AMS) ಎಂಬೊಂದು ಸಮಸ್ಯೆ ಕಾಡುತ್ತದಂತೆ. ನನಗೆ ಅದೇ ಆಗಿರಬಹುದಾ ಅಂತ ಅನುಮಾನ ಬಂತು. ಆದರೆ, ನಾನು ಇದ್ದಕ್ಕಿದ್ದಂತೆ ಆ ಎತ್ತರಕ್ಕೇರಿದವನಲ್ಲ. ಮೊದಲ ದಿನ 6000 ಅಡಿ. 2ನೇ ದಿನ 11000 ಅಡಿ. ಇದೀಗ 3ನೇ ದಿನ ಸುಮಾರು 14500 ಅಡಿ ಎತ್ತರದ ಪ್ರದೇಶಕ್ಕೆ ತಲುಪಿದ್ದೇನೆ. ಅಂದರೆ, ಹಂತಹಂತವಾಗಿ ಏರಿಕೆಯಾಗಿದೆ.
ಲಡಾಖ್ ಅಮೃತ ಯಾತ್ರೆ-2022 ಭಾಗ-1: ಲಡಾಖ್ ಎಂಬ ಸ್ವರ್ಗದ ಬಾಗಿಲು
ಮೊದಲೆರಡು ದಿನ ಇರದಿದ್ದ ಅಸ್ವಾಸ್ಥ್ಯ ಮೂರನೇ ದಿನ ತೀವ್ರವಾಗಿ ಕಾಡತೊಡಗಿತ್ತು. ಬೆಳಗಾಗುವಷ್ಟರಲ್ಲಿ ಪರಿಸ್ಥಿತಿ ಗಂಭೀರವಾಗಿಬಿಡುತ್ತೇನೋ ಎಂದು ಭಯವಾಗತೊಡಗಿತ್ತು. ಆದರೇನು ಮಾಡುವುದು? ಹತ್ತಿರದಲ್ಲಿ ಆಸ್ಪತ್ರೆ ಇದ್ದಿದ್ದರೆ ಕರೆದೊಯ್ಯಿರಿ ಎಂದು ಜತೆಗಿದ್ದವರಿಗೆ ಹೇಳುತ್ತಿದ್ದೆ. ಇಲ್ಲದೆ ಇದ್ದ ಸಂದರ್ಭದಲ್ಲಿ ಹೇಳಿಯೂ ಪ್ರಯೋಜನ ಇಲ್ಲ, ಸುಮ್ಮನೆ ಅವರಿಗೆ ಆತಂಕ. ಅಲ್ಲದೆ, ಆಸ್ಪತ್ರೆಗೆ ಹೋಗಬೇಕು ಅಂದರೆ ಕನಿಷ್ಠ 5-6 ತಾಸು ಆ ಅಪರಾತ್ರಿಯಲ್ಲಿ ಪ್ರಯಾಣಿಸಬೇಕು. ಅದೆಲ್ಲ ಆಗಿ ಹೋಗುವ ಮಾತಲ್ಲ ಎಂದು ದೀಪ್ತಿಯ ಬಳಿ ತಲೆನೋವಿಗೆಂದು ಒಂದು ಐಮೋಲ್ ಪಡೆದು ನುಂಗಿ, ಸುಸ್ತಾಗಿದೆ ಊಟ ಬೇಡ ಎಂದು ಟೆಂಟ್ ಪ್ರವೇಶಿಸಿಬಿಟ್ಟೆ. ಎರಡೆರಡು ಕವಚ ಉಷ್ಣವಸ್ತ್ರಗಳು, ಟೀಶರ್ಟು, ಜಾಕೆಟ್ ಧರಿಸಿ ಅಲ್ಲಿದ್ದ ಮೂರಿಂಚು ದಪ್ಪದ ರಜಾಯಿ ಹೊದ್ದು ಮಲಗಿಬಿಟ್ಟೆ.
52 ಕಿ.ಮೀ. ಸಾಗಲು ಬರೋಬ್ಬರಿ ನಾಲ್ಕು ತಾಸು!
ಬೆಳಗ್ಗೆ ಎದ್ದಾಗ ಆರೋಗ್ಯ ಸುಧಾರಿಸಿತ್ತು. ಸಣ್ಣಗೆ ತಲೆನೋವು ಹೊರತುಪಡಿಸಿದರೆ ಆ ಅಸಹನೆಯ ಸ್ಥಿತಿ, ಹೊಟ್ಟೆ ತಳಮಳ, ವಾಂತಿ ಬರುವಂತಾಗುವುದು... ಯಾವುದೂ ಇರಲಿಲ್ಲ. ನಮಗೆ ರೈಡ್ ಮುಗಿಸಿ ಸಂಜೆ ಸ್ನಾನ ಮಾಡುವುದು ರೂಢಿ. ಹಿಂದಿನ ದಿನ ಅನಾರೋಗ್ಯದಿಂದಾಗಿ ಅದು ಆಗಿರಲಿಲ್ಲ. ಬೆಳಗ್ಗೆ ಎದ್ದು ಸ್ನಾನ ಮಾಡಲು ಬಿಸಿನೀರು ಇರಲಿಲ್ಲ. ಕೊರೆಯವ ಚಳಿಗೆ ಬೀಸುವ ಗಾಳಿ ಸೇರಿ ಹಲ್ಲು ಕಟಕಟ ಆಗುತ್ತಿತ್ತು. ಬಿಸಿಲೇರದೆ ನಾವು ಬೈಕ್ ಏರುವುದು ಸಾಧ್ಯವಿರಲಿಲ್ಲ. ಆ ಚಳಿಯಲ್ಲಿ ಬೈಕ್ ಓಡಿಸುವುದು ಕಷ್ಟ ಕಷ್ಟ. ನಿಧಾನಕ್ಕೆ ತಿಂಡಿ ತಿಂದು, ಪ್ಯಾಕಿಂಗ್ ಮುಗಿಸಿದಾಗ ಗಂಟೆ 8 ಆಗಿತ್ತು. ಮುಂದಿನ ಪ್ರಯಾಣ ಪದುಮ್ ಎಂಬಲ್ಲಿಗೆ. ಜನ್ಸ್ಕಾರ್ ಭಾಗದ ಪ್ರಮುಖ "ಪಟ್ಟಣ".ಅದು. ಪುರ್ನೆಯಿಂದ ಅಲ್ಲಿಗೆ ಎಷ್ಟು ದೂರ ಎಂದರೆ ಯಾರಿಗೂ ಗೊತ್ತಿಲ್ಲ, ಸ್ವತಃ ಗೂಗಲಮ್ಮನಿಗೂ ಸಹ. ಸ್ಥಳೀಯರಿಗೂ ಪಕ್ಕಾ ಲೆಕ್ಕ ಇಲ್ಲ. ಕಡೆಗೆ, ನಾವೇ ಒಂದು ಅಧಿಕೃತ ದೂರ ಲೆಕ್ಕ ಹಾಕುವುದು ಎಂದು ನಿರ್ಧರಿಸಿ ಹೊರಟುಬಿಟ್ಟೆವು.
ಅದು ಹಿಂದಿನ ದಿನಕ್ಕಿಂತಲೂ ಕಠಿಣ, ಸವಾಲಿನ ಹಾದಿ. ಏನಿಲ್ಲವೆಂದರೂ ನಾಲ್ಕೈದು ಬೆಟ್ಟ ಹತ್ತಿ ಇಳಿಯುವ ದಾರಿ. ಅಡಿಗಡಿಗೂ ಉಬ್ಬು-ತಗ್ಗು. ಕಡಿದಾದ ತಿರುವುಗಳು. ತಿರುವುಗಳಲ್ಲಿ ನುಣ್ಣನೆಯ ಮಣ್ಣು. ಕೆಲವೆಡೆ ತೀರಾ ಏರುಗತಿ ಅಥವಾ ಇಳಿಜಾರು. ಮಳೆ ಬಂದರೆ ಅಂಥ ರಸ್ತೆಯಲ್ಲಿ ವಾಹನ ಚಲಾಯಿಸುವುದು ಪಕ್ಕಾ ವೃತ್ತಿಪರರಿಗಷ್ಟೇ ಸಾಧ್ಯ. ಹಿಂದಿನ ದಿನದಂತೆಯೇ ಜಲ ದಾಟುಗಳಿಗೇನೂ ಬರವಿರಲಿಲ್ಲ. ಆದರೆ, ಚಾ, ಅನ್ಮು, ಇಚೆರ್ ಎಂಬೆಲ್ಲ ಹಳ್ಳಿಗಳು ಸುಮಾರು 10 ಕಿ.ಮೀ.ಗೊಂದರಂತೆ ಎದುರಾದವು. ಅಲ್ಲೆಲ್ಲ ರಿಲಯನ್ಸ್ ಜಿಯೋ ದಾಂಗುಡಿಯಿಟ್ಟಿತ್ತು. ನೆಟ್ ವರ್ಕ್ ಸಿಕ್ಕಿತೆಂದು ಮೊಬೈಲು ಹಿಡಿದು ಕೂರಲು ಸಾಧ್ಯವೇ? ತುರ್ತು ಸಂದೇಶಗಳನ್ನು ನಿರ್ವಹಿಸಿ ಪ್ರಯಾಣ ಮುಂದುವರಿಸುತ್ತಿದ್ದೆವು. ಒಬ್ಬ ಬೈಕ್ ಸವಾರನ ಕೌಶಲ್ಯ, ದೈಹಿಕ ಕ್ಷಮತೆ, ಮನೋಸ್ಥೈರ್ಯ, ಏಕಾಗ್ರತೆ ಎಲ್ಲವನ್ನೂ ಪರೀಕ್ಷೆ ಮಾಡಬಲ್ಲ ಮಾರ್ಗವಾಗಿತ್ತದು. ಇವುಗಳಲ್ಲಿ ಯಾವುದಾದರೊಂದು ಸಾಧ್ಯವಿಲ್ಲದಿದ್ದರೂ ಪ್ರಯಾಣ ಮುಂದುವರಿಸಲು ಅಸಾಧ್ಯ ಎನಿಸುವಂಥ ಸ್ಥಿತಿ. ಅದನ್ನೆಲ್ಲ ಎದುರಿಸುತ್ತ ರೇರು ಎಂಬಲ್ಲಿಗೆ ಬಂದಾಗ ಗಂಟೆ ಸುಮಾರು 11.30 ಆಗಿತ್ತು. ಅಲ್ಲಿ ನಮಗೆ ಟಾರು ರಸ್ತೆಯ ಅಚ್ಚರಿ ಕಾದಿತ್ತು. ಮುಂದಿನ 20 ಕಿ.ಮೀ. ಸುಲಲಿತ ಪ್ರಯಾಣ ನಮ್ಮದಾಯಿತು. ಮಧ್ಯಾಹ್ನ 12 ಗಂಟೆಗೆಲ್ಲ ಪದುಮ್ ಪಟ್ಟಣ ಪ್ರವೇಶಿಸಿದ್ದೆವು. ನಮ್ಮ ವಾಹನಗಳು ತೋರಿದ ಲೆಕ್ಕದ ಪ್ರಕಾರ ಪುರ್ನೆಯಿಂದ ಪದುಮ್ 52 ಕಿ.ಮೀ.
ಲಡಾಖ್ ಅಮೃತ ಯಾತ್ರೆ - 2022 ಭಾಗ-2: ಮೂರು ವಾಹನ, ಆರು ಜನ, ಹದಿಮೂರು ದಿನ
ಕನಿಷ್ಕನ ಕಾಲದ ಬೌದ್ಧಸ್ತೂಪ, ಸಾನಿ ಸರೋವರ, ಪದುಮ್ ಪಟ್ಟಣ
ಪದುಮ್ ಪ್ರವೇಶಿಸುತ್ತಿದ್ದಂತೆ ಕಾಣಿಸಿದ ನಾಜ್ ಗೆಸ್ಟ್ ಹೌಸ್ ನಲ್ಲೇ ವಸತಿ ಬಗ್ಗೆ ವಿಚಾರಿಸಿದೆವು. ರಾತ್ರಿಯ ಊಟ, ಮರುದಿನ ಬೆಳಗ್ಗೆಯ ತಿಂಡಿ ಸೇರಿ ತಲೆಗೆ 900 ರು.ನಂತೆ ವ್ಯವಸ್ಥೆ ಆಯಿತು. ಮಧ್ಯಾಹ್ನದ ಊಟಕ್ಕೆ ಪದುಮ್ ಪಟ್ಟಣದ ಹೋಟೆಲಿಗೆ ಹೋದೆವು. ಫ್ರೈಡ್ ರೈಸ್ ತರಿಸಿದರೆ, ಬಹುಶಃ ವಿನೇಗರ್ ಹಾಕಿ ಮಾಡಿರಬೇಕು. ಅಭ್ಯಾಸ ಇಲ್ಲದ ನಮ್ಮಲ್ಲಿ ಕೆಲವರಿಗೆ ಹೊಟ್ಟೆ ತೊಳಸಿ ಬಂದಂತಾಯಿತು. ಪದುಮ್ ನಲ್ಲಿರುವ ಬೌದ್ಧ ಮಂದಿರ, ಪಟ್ಟಣದಿಂದ 10 ಕಿ.ಮೀ. ದೂರದ ಸಾನಿ ಎಂಬ ಗ್ರಾಮದಲ್ಲಿರುವ ಕ್ರಿ.ಶ. 2ನೇ ಶತಮಾನದಲ್ಲಿ ಕನಿಷ್ಕ ಸ್ಥಾಪಿಸಿದ ಎನ್ನಲಾದ ಬೌದ್ಧಸ್ತೂಪ, 17ನೇ ಶತಮಾನದಲ್ಲಿ ಸ್ಥಾಪನೆಯಾದ ಬೌದ್ಧ ಮಂದಿರ, ಅಲ್ಲೇ ಸಮೀಪದಲ್ಲಿರುವ ಸಾನಿ ಸರೋವರ ಇತ್ಯಾದಿಗಳನ್ನು ನೋಡಿ ಮರಳಿ ಗೆಸ್ಟ್ ಹೌಸಿಗೆ ಮರಳುವಷ್ಟರಲ್ಲಿ ಜನ್ಸ್ಕಾರಿ ಮರಳಮಾರುತ ತೀವ್ರಗೊಂಡಿತ್ತು.
ಸುತ್ತ ಬೆಟ್ಟ ನಡುವೆ ವಿಶಾಲವಾದ ಮುಖಜ ಭೂಮಿಯಲ್ಲಿ ನಿರ್ಮಾಣವಾಗಿರುವ ಪದುಮ್ ಪಟ್ಟಣ ಧೂಳಿನಿಂದ ಆವರಿಸಿತ್ತು. ಎತ್ತರದ ಪರ್ವತಗಳ ಮೇಲೆ ಹಿಮಪಾತವಾಗುತ್ತಿತ್ತು. ತುಸು ಕೆಳಭಾಗದಲ್ಲಿ ಮಳೆ ಸುರಿಯತೊಡಗಿತ್ತು. ಮೂರು ದಿನಗಳಿಂದ ಸಹಕರಿಸಿದ್ದ ವರುಣ ದೇವ, ನಾಲ್ಕನೇ ದಿನ ಆಗೋಲ್ಲ ಎಂದು ಬಿಟ್ಟ. ಅದೇ ಕಾರಣಕ್ಕಾಗಿ ನಮ್ಮ ಮರುದಿನದ ಪ್ರಯಾಣದ ದಿಕ್ಕೇ ಬದಲಾಗಬೇಕಾಯಿತು. ನಾವು ಉಳಿದಿದ್ದ ಕಾಶ್ಮೀರಿ ಮುಸ್ಲಿಂ ಮೇಷ್ಟರ ಮನೆಯ ಶಾಕಾಹಾರಿ ಆತಿಥ್ಯ ಸ್ವೀಕರಿಸಿ ಅವತ್ತಿನ ಓಟಕ್ಕೆ ವಿರಾಮ ಹಾಡಿದೆವು.
ಮುಂದಿನ ಕಂತಿನಲ್ಲಿ: ಲಿಂಗ್ ಶೆಡ್ ಹಾದಿ ಹಿಡಿದಿದ್ದರೆ ಜೀವಕ್ಕೇ ಅಪಾಯವಿತ್ತು. ಹಾಗಾಗಿ, ದೂರವಾದರೂ ಸರಿ ಕಾರ್ಗಿಲ್ ಕಡೆಯಿಂದ ಸುತ್ತಿ ಲೇಹ್ ಪ್ರವೇಶಿಸೋಣ ಅಂದುಕೊಂಡಿದ್ದು. ಕಡೆಗೆ ಏನಾಯ್ತು?