ಎವರೆಸ್ಟ್ ಬೇಸ್ ಕ್ಯಾಂಪ್‌ಗಿಂತಲೂ ಎತ್ತರದ ರಸ್ತೆ ಉಮ್ಲಿಂಗ್ ಲಾ!
ಕಾರ್ಗಿಲ್‌ನಿಂದ ಲೇಹ್‌ವರೆಗೆ ರಾಷ್ಟ್ರೀಯ ಹೆದ್ದಾರಿ-1, ಲೇಹ್‌ನಿಂದ ಹಾನ್‌ಲೇ ವರೆಗೆ ಹೆದ್ದಾರಿಯಷ್ಟೇ ಚೆನ್ನಾಗಿದ್ದ ರಸ್ತೆಗಳ ಸುಖಪ್ರಯಾಣ ಮುಗಿದಿತ್ತು. ನಮ್ಮ ಲಡಾಖ್ ಅಮೃತಯಾತ್ರೆಯ 2ನೇ ಕಂತಿನ ಸಾಹಸ ಯಾನ ಆರಂಭವಾಗುವುದಿತ್ತು. ರಸ್ತೆಯೇ ಇಲ್ಲದ ಬಯಲಲ್ಲಿ ಸಾಗಿ, ಅಕ್ಷರಶಃ ಬೆಟ್ಟವನ್ನೇ ಏರಿ, ರೋಮಾಂಚಕ ಸ್ಥಳವೊಂದನ್ನು ತಲುಪಿ ವಾಪಸ್ ಹಾನ್‌ಲೇಗೆ ಬರಬೇಕಿತ್ತು. ಆ ಪ್ರಯಾಣ ಹೇಗಿತ್ತು? ಮುಂದೆ ಓದಿ...
-ರವಿಶಂಕರ್ ಭಟ್
ಹಾರುವ ವಿಮಾನಕ್ಕಿಂತಲೂ ಎತ್ತರದಲ್ಲಿರುವ ಉಮ್ಲಿಂಗ್ ಲಾ
ಹಿಂದಿನ ದಿನವಷ್ಟೇ ಒಂದು ಸ್ಮರಣೀಯ ಪ್ರಯಾಣಾನುಭವಕ್ಕೆ ಒಳಗಾಗಿದ್ದ ನಾವು ಅಮೃತಯಾತ್ರೆಯ 8ನೆಯ ದಿನ ನಮ್ಮ ಕಲ್ಪನೆಗೂ ಮೀರಿದ ಸಾಹಸಯಾನಕ್ಕೆ ಸಜ್ಜಾಗಿದ್ದೆವು. ವಿಶ್ವದಲ್ಲೇ ಅತಿ ಎತ್ತರದ ಸಂಚಾರಯೋಗ್ಯ ಪ್ರದೇಶ ಎಂದು ಖ್ಯಾತಿವೆತ್ತ, ಎವರೆಸ್ಟ್ ಬೇಸ್ ಕ್ಯಾಂಪ್‌ಗಿಂತಲೂ ಎತ್ತರ ಪ್ರದೇಶವಾದ ಉಮ್ಲಿಂಗ್ ಲಾ ಪಾಸ್ ನಮ್ಮ ಅವತ್ತಿನ ಗಮ್ಯ ಸ್ಥಾನ. ವಿಶ್ವದಲ್ಲೇ ಅತಿ ಎತ್ತರದ ಪರ್ವತವೆಂಬ ಖ್ಯಾತಿಯ, 29000 ಅಡಿ ಎತ್ತರದ ಎವರೆಸ್ಟ್‌ನ ಬೇಸ್ ಕ್ಯಾಂಪ್ ಎತ್ತರವೇ ಸಮುದ್ರ ಮಟ್ಟದಿಂದ 17500 ಅಡಿ. ಅದಕ್ಕಿಂತಲೂ ಎತ್ತರದ, ಅಂದರೆ 19024 ಅಡಿ ಎತ್ತರದಲ್ಲಿರುವ ಉಮ್ಲಿಂಗ್ ಲಾ ಪಾಸ್‌ಗೆ ಹೊರಟಿದ್ದೆವು. ನಾವು ಬೆಂಗಳೂರಿನಿಂದ ಚಂಡೀಗಢಕ್ಕೆ ತೆರಳಿದ್ದ ವಿಮಾನ 16000 ಅಡಿ ಎತ್ತರದಲ್ಲಿ ಹಾರಿತ್ತು. ಉಮ್ಲಿಂಗ್ ಲಾ ಅದಕ್ಕಿಂತಲೂ 3000 ಅಡಿ ಎತ್ತರದ ಪ್ರದೇಶ. ಅಂಥಾ ಪ್ರದೇಶಕ್ಕೆ ನಾವು ರಾಯಲ್ ಎನ್‌ಫೀಲ್ಡ್ ಹಾಗೂ ಮಹೀಂದ್ರಾ ಥಾರ್‌ನಲ್ಲಿ ಹೊರಟಿದ್ದೆವು. ಅಂಕಿ-ಅಂಶಗಳು ಆಚೆಗಿರಲಿ, ಆ ಎತ್ತರದಲ್ಲಿ ಟಾರು ರಸ್ತೆ ನಿರ್ಮಾಣ ಮಾಡಿದ್ದಾರೆ ಎಂಬ ಸಂಗತಿಯೇ ನಮಗೆ ಪುಳಕವನ್ನುಂಟು ಮಾಡಿತ್ತು.
ಲಡಾಖ್ ಅಮೃತ ಯಾತ್ರೆ – 2022 ಭಾಗ-5: ಜನ್ಸ್ಕಾರ್ ರೈಡ್ - ಏಕಾಗ್ರತೆ, ಕೌಶಲ್ಯ, ಮನೋಬಲ, ಸಾಮರ್ಥ್ಯ ಪರೀಕ್ಷೆ!
ದಾರಿಯೇ ಗೊತ್ತಿಲ್ಲದೆ ಪ್ರಯಾಣ ಆರಂಭ
ಸಂಜೆಯಾಗುವುದರೊಳಗೆ ಹಾನ್‌ಲೇಗೆ ವಾಪಸ್ ಬರಬೇಕೆಂದು ಬೆಳಗ್ಗೆ 8.30ಕ್ಕೆಲ್ಲಾ ಆಲೂ ಪರೋಟ ಹೊಟ್ಟೆಗಿಳಿಸಿ ಹೊರಟವರಿಗೆ ಎಲ್ಲಿ ಹೋಗಬೇಕೆಂದೇ ತಿಳಿಯಲಿಲ್ಲ. ಸ್ಥಳೀಯರನ್ನು ಕೇಳಿದಾಗ ಅದ್ಯಾವುದೋ ದಿಕ್ಕು ಹೇಳಿದರು. ಹಾನ್‌ಲೇ ಗ್ರಾಮದಿಂದ (Village) ಪಶ್ಚಿಮದತ್ತ ಸಾಗಬೇಕೆಂದು ಮಾರ್ಗದರ್ಶನ ಮಾಡಿದ್ದರು. ನಾಲ್ಕೈದು ಕಿಲೋಮೀಟರು ಸಾಗಿದ್ದೆವಷ್ಟೆ. ಯಾಕೋ ಅನುಮಾನವಾಯಿತು. ಜನವಸತಿ ಪ್ರದೇಶ ಕ್ಷೀಣವಾಗುತ್ತಾ ಸಾಗಿತ್ತು. ಟಾರು ರಸ್ತೆ ಕಳೆದು ಕಚ್ಚಾ ರಸ್ತೆ (Road) ಆರಂಭವಾಗಿತ್ತು. ಅಷ್ಟರಲ್ಲಿ ಮಾರುತಿ ಕಾರೊಂದರಲ್ಲಿ ಹೋಗುತ್ತಿದ್ದ ದಂಪತಿ ಸಿಕ್ಕರು. ಅವರ ಬಳಿ ವಿಚಾರಿಸಿದರೆ ನೀವು ತಪ್ಪು ಹಾದಿ ಹಿಡಿದಿದ್ದೀರಿ. ಹಾನ್‌ಲೇಗೆ ವಾಪಸ್ ಹೋಗಿ. ಅಲ್ಲಿ ಪದ್ಮಾ ಹೋಮ್‌ಸ್ಟೇ ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ ಪ್ರಯಾಣಿಸಿ ಎಂದರು. ವಾಪಸ್ ಬಂದು ಅಲ್ಯಾರನ್ನೋ ವಿಚಾರಿಸಿದರೆ ಎಡ-ಬಲ, ಮೇಲೆ-ಕೆಳಗೆ ಎಂದೆಲ್ಲ ಹೇಳಿ ಗೊಂದಲ ಮೂಡಿಸಿದರು. ಅಲ್ಲೇ ಸಮೀಪದಲ್ಲಿ ಸಾಲಾಗಿ ಬರುತ್ತಿದ್ದ ಸೇನಾ ವಾಹನಗಳು (Vehicles) ಕಾಣಿಸಿದವು. ಧೈರ್ಯ ಮಾಡಿ ಅದರಲ್ಲೊಂದಕ್ಕೆ ಕೈ ಅಡ್ಡ ಹಾಕಿದೆ. ಸೇನಾ ವಾಹನದ ಚಾಲಕ ಹೇಳಿದ ಮಾರ್ಗದ ವಿವರಣೆ ಕೇಳಿ ಮೈಯಲ್ಲಿ ಬೆವರು ಬಿಚ್ಚಲಾರಂಭಿಸಿತ್ತು.
'ಪದ್ಮಾ ಹೋಮ್ ಸ್ಟೇ ಪಕ್ಕದ ರಸ್ತೆಯಲ್ಲಿ ಸೀದಾ ಹೋಗಿ. ಪುಂಗುಕ್ ಎಂಬ ಪುಟ್ಟ ಹಳ್ಳಿ ಕಾಣುತ್ತದೆ. ಅದಕ್ಕಿಂತ ಸ್ವಲ್ಪ ಹಿಂದೆ ಎಡಕ್ಕೆ ತಿರುಗಿ ವಾಹನಗಳು ಹೋಗಿ ಸವೆದ ಹಾದಿಯಲ್ಲೇ ಪ್ರಯಾಣಿಸಿ. ಎಲ್ಲೂ ಬಲಕ್ಕೆ ತಿರುಗಬೇಡಿ. ನೆರ್ಬೊಲೇ ಎಂಬಲ್ಲಿ ಟಾರು ರಸ್ತೆ ಸಿಗುತ್ತದೆ. ಅಲ್ಲೂ ಎಡಕ್ಕೆ ತಿರುಗಿ ಮುಂದೆ ಸಾಗಿ. ಚಿಸುಮ್‌ಲೇ ಎಂಬ ಜಾಗದಲ್ಲಿ ಬಲಕ್ಕೆ ತಿರುಗಿ ಒಂದೇ ರಸ್ತೆಯಲ್ಲಿ ಸಾಗಿದರೆ ಉಮ್ಲಿಂಗ್ ಲಾ ತಲುಪುತ್ತೀರಿ. ಆದರೆ, ಹುಷಾರು. ಸ್ವಲ್ಪ ಹೆಚ್ಚುಕಮ್ಮಿಯಾಗಿ ಹಾದಿ ತಪ್ಪಿದರೆ ಮತ್ತೆ ಸರಿದಾರಿಗೆ ಬರುವುದು ಕಷ್ಟ' ಎಂದನಾತ. ಹಾಗೆಯೇ ಮಾಡಿದೆವು. ಅಷ್ಟರಲ್ಲಿ ಮಹಾರಾಷ್ಟ್ರದಿಂದ ಬಂದಿದ್ದ ಎರಡು ಬೈಕ್ ಗಳು ಜತೆಯಾದವು. ಆಜಾದಿ ಅಮೃತ ಮಹೋತ್ಸವದ ಗುಂಗು ಇನ್ನೂ ಜೋರಾಗಿತ್ತಲ್ಲ, ಅದರಲ್ಲಿದ್ದ ನಾಲ್ವರೂ ತ್ರಿವರ್ಣ ಧ್ವಜ (Indian flag) ಹಿಡಿದುಕೊಂಡು ಜೋಶ್ ನಲ್ಲಿ ಇದ್ದರು. ಅವರಿಗೂ ದಾರಿ ಗೊತ್ತಿಲ್ಲ. ನಮ್ಮೊಂದಿಗೇ ಹೊರಟರು. ಹುಲ್ಲುಗಾವಲಿನಂಥಾ ಪ್ರದೇಶವನ್ನು ಸೀಳಿ ಸಾಗಿದ ಅರೆಬರೆ ಟಾರು ರಸ್ತೆಯಲ್ಲಿ ಒಂದಷ್ಟು ದೂರ ಸಾಗಿ ಸೇತುವೆಯೊಂದನ್ನು ದಾಟುತ್ತಿದ್ದಂತೆ ಒಂದಿಷ್ಟು ಮನೆಗಳು ಕಾಣಿಸಿದೆವು. ಅಲ್ಲೇ ಕವಲುದಾರಿಯಿತ್ತು. ಎಡಕ್ಕೆ ತಿರುಗಿದೆವು. ಸ್ವಲ್ಪ ದೂರ ಸಾಗುವಷ್ಟರಲ್ಲಿ ಮುಂದೆ ವಿಶಾಲ ಬಯಲು ಪ್ರದೇಶ ಕಾಣಿಸಿತು. ಎದುರಿಂದ ಮಧ್ಯವಯಸ್ಕನೊಬ್ಬ ಹಳೆಯ ವೆಸ್ಪಾ ಸ್ಕೂಟರನ್ನೇರಿ ಬರುತ್ತಿದ್ದ. ರಸ್ತೆಯ ಕೆಳಗೆ ಮನೆಯಿತ್ತು. ಬಹುಶಃ ಆ ಪ್ರದೇಶದಲ್ಲಿ ಅದೇ ಕೊನೆಯ ಮನೆ (House) ಅನ್ನಿಸಿತು. ಯಾತಕ್ಕೂ ದಾರಿ ಸರಿಯಿದೆಯೇ ಅಂತ ಪರಿಶೀಲಿಸಿಬಿಡೋಣ ಅನ್ನಿಸಿ ಕೈ ಅಡ್ಡ ಹಾಕಿ ಅವನನ್ನು ನಿಲ್ಲಿಸಿದೆ.
"ಉಮ್ಲಿಂಗ್ ಲಾ ಕೈಸೇ ಜಾನಾ ಹೈ" ಅಂತ ಕೇಳಿದೆ. ಆತ ಕೂತಿದ್ದ ಸ್ಕೂಟರಿಂದಲೇ ಹಿಂದಕ್ಕೆ ಕೈ ತೋರಿ, "ಏಸಾ ಸೀದೇ ಜಾವೋ. ಏಕ್ ಜಗಹ್ ಪೇ ದೋ ರಾಸ್ತಾ ಮಿಲೇಗಾ. ವಹಾ ಬಾಯೇಂ ಮುಡ್ ಕೇ ಆಗೇ ಜಾವೋ. ಕಹೀಂ ಭೀ ದಾಯೇಂ ಮತ್ ಜಾನಾ" ಅಂತಂದ. ನಂಗೆ ದಾಯಾ-ಬಾಯಾ ಕನ್ ಫ್ಯೂಸ್ ಆಗತೊಡಗಿತು. "ಭಾಯಿ ಸಾಬ್, ಸ್ಕೂಟರ್ ಸೇ ಉತರ್ ಕೇ ರಾಸ್ತಾ ದಿಖಾವೋ" ಅಂದೆ. ಆತ ಸಹಕರಿಸಿದ. ಎಡಕ್ಕೆ ಹೋಗಬೇಕೆನ್ನುವುದು ಖಾತ್ರಿಯಾಯಿತು. ಅಲ್ಲಿಯವರೆಗೆ ಎಲ್ಲವೂ ಸರಿಯಿದೆ ಅನ್ನಿಸಿ ಪ್ರಯಾಣ ಮುಂದುವರಿಸಿದೆವು.
ಲಡಾಖ್ ಅಮೃತ ಯಾತ್ರೆ – 2022 ಭಾಗ-6. ಪುರ್ನೆಯಿಂದ 52 ಕಿ.ಮೀ. ಸಾಗಲು 4 ತಾಸು !
25 ಕಿ.ಮೀ. ರಸ್ತೆಯೂ ಇಲ್ಲ, ಮನುಷ್ಯರೂ ಇಲ್ಲ... ಅಯ್ಯಪ್ಪಾ!
ಅಂದುಕೊಂಡಂತೆಯೇ ಆಯಿತು. ಅಲ್ಲಿಯವರೆಗೆ ಸುಮಾರು 8-10 ಕಿ.ಮೀ. ಬಂದಿದ್ದ ನಮಗೆ ಮುಂದೆ ನಿರ್ಮಾನುಷ ಪ್ರದೇಶದ ಪಯಣ ಕಾದಿತ್ತು. ಸುತ್ತಲೂ ಬೆಟ್ಟ-ಗುಡ್ಡ. ಮಧ್ಯೆ ವಿಶಾಲ, ವಿಸ್ತಾರವಾದ ಖಾಲಿ ಬಯಲು. ಹರಳು ಕಲ್ಲು ತುಂಬಿದ್ದ ಆ ಬಯಲಿನಲ್ಲಿ ನಮ್ಮ ಪ್ರಯಾಣ. ಅನುಮಾನ ಏನಾದರೂ ಉಂಟಾದರೆ ಕೇಳಲು ಯಾರೂ ಇಲ್ಲ. ಫೋನ್ ಮಾಡೋಣ ಎಂದರೆ ನೆಟ್ ವರ್ಕ್ ಇಲ್ಲ. ನೆಟ್ ವರ್ಕ್ ಇದ್ದಿದ್ದರೂ ಆ ದಾರಿ ಗೂಗಲಮ್ಮನಿಗೂ ಗೊತ್ತಿಲ್ಲ. ಕೇಳಿ ತಿಳಿದುಕೊಂಡ ಮಾಹಿತಿ, ದಿಕ್ಕಿನ ಅಂದಾಜು, ಸಾಗಬೇಕಾದ ದಾರಿಯ ದೂರದ ಲೆಕ್ಕಾಚಾರ ಮಾಡಿಕೊಂಡು ಹೋಗಬೇಕಿತ್ತು. ನಮ್ಮಂತೆ ಪ್ರಯಾಣಿಸಿದ ವಾಹನಗಳ ಚಕ್ರದ ಗುರುತೇ ನಮಗೆ ದಾರಿ. ನಾಲ್ಕು ಬೈಕ್ ಗಳು, ಥಾರ್ ಜೀಪಿನ ಎಂಜಿನ್ ಶಬ್ದ ಹೊರತುಪಡಿಸಿದರೆ ಕೇಳುತ್ತಿದ್ದುದು ವಾಹನಗಳ ಗಾಲಿಯಡಿ ಸಿಲುಕಿ ಚರಚರ ಎನ್ನುತ್ತಿದ್ದ ಹರಳು ಕಲ್ಲುಗಳ ಸದ್ದು ಮಾತ್ರ. ಹಾಗೆ ಹೋಗುವಾಗ ಅಲ್ಲೊಬ್ಬ ಸೈಕಲ್ ಯಾನಿ ಬಸವಳಿದು ಕುಳಿತಿದ್ದ. ವಿಚಾರಿಸಿದರೆ, "ಅಹಮದಾಬಾದ್ ನಿಂದ ಸೈಕಲ್ ಯಾತ್ರೆ ಮಾಡುತ್ತಿದ್ದೇನೆ. ಉಮ್ಲಿಂಗ್ ಲಾ ಕಡೆ ಹೊರಟಿದ್ದೇನೆ" ಅಂದ.
"ಅಷ್ಟು ಎತ್ತರದ ಪ್ರದೇಶಕ್ಕೆ ವಾಹನಗಳಲ್ಲೇ ಹೋಗುವುದು ಕಷ್ಟ. ಸೈಕಲಲ್ಲಿ ಅದು ಹೇಗೆ ಹೋಗ್ತೀಯಪ್ಪಾ, ಸುರಕ್ಷಿತ ಅಲ್ಲ" ಎಂದರೆ, "ನಿಮ್ಮ ಜೀಪಲ್ಲಿ ಜಾಗ ಇದೆಯಾ? ಸೈಕಲ್ ಅದರಲ್ಲಿ ಹಾಕಿ ನಾನು ನಿಮ್ಮ ಬೈಕಲ್ಲಿ ಬರುತ್ತೇನೆ" ಅಂದ. ಅವನ ದುರದೃಷ್ಟಕ್ಕೆ ನಮ್ಮ ಜೀಪಿನಲ್ಲಿ ನಾಲ್ವರಿದ್ದೆವು. ಇನ್ನು ಸೈಕಲ್ ಹಾಕಲು ಜಾಗವೆಲ್ಲಿ? ಒಂದು ವಿಷಾದದ ನಗೆ ನಕ್ಕು ನಮ್ಮ ಪ್ರಯಾಣ (Travel) ಮುಂದುವರಿಸಿದೆವು. ಸುಮಾರು 18-20 ಕಿ.ಮೀ. ಸಾಗಿರಬಹುದು. ಸುಮಾರಾಗಿ ಒಂದು ಬೆಟ್ಟದ ಬುಡ ತಲುಪಿದಂತಾಯಿತು. ಮುಂದೆ ರಸ್ತೆ ಎಲ್ಲಿ ಅಂತ ನೋಡಿದರೆ, ಆ ಬೆಟ್ಟವನ್ನೇ ಸುರುಳಿ ಸುರುಳಿ ವಾಹನಗಳು ಏರಿದ ಗುರುತು ಕಾಣಿಸಿತು. ಬೆಟ್ಟವನ್ನು ವಾಹನದಲ್ಲಿ ಏರುವುದಾ? ಚಾರಣ ಆದರೆ ಸರಿ. ವಾಹನದಲ್ಲಿ ಹೇಗೆ ಎಂಬ ಪ್ರಶ್ನೆ ಮುಂದಿಟ್ಟುಕೊಂಡೇ ಏರಲು ಆರಂಭಿಸಿದೆವು. ಭಾರೀ ಏರು ಹಾದಿ ಅದು. ಸುಮಾರು 50-55 ಡಿಗ್ರಿಯಷ್ಟು ಕಡಿದಾದ ಏರುವಿಕೆ ಅದು. ಮೊದಲ ಗೇರ್ ಹೊರತುಪಡಿಸಿ ಇತರೆ ಗೇರ್ ಗೆ ಬದಲಿಸಲೂ ಆಸ್ಪದ ಇರಲಿಲ್ಲ. ಮುಂಬೈನಿಂದ ಬಂದವರ ಪೈಕಿ ಒಬ್ಬರ ಬೈಕ್ ಒಂದು ಕಡೆ ಹತ್ತಲೇ ಇಲ್ಲ. ಅದರಲ್ಲಿದ್ದ ಒಬ್ಬರು ನಮ್ಮ ಥಾರ್ ಹತ್ತಿದರು. ತೂಕ ಕಮ್ಮಿಯಾದ ಖುಷಿಯಲ್ಲಿ ಅವರ ಬುಲೆಟ್ ಕೂಡ ಸಹಕರಿಸಿತು. 3-4 ಕಿ.ಮೀ. ಏರುವಷ್ಟರಲ್ಲಿ ಸ್ವಲ್ಪ ಮಟ್ಟಸವಾದ ಪ್ರದೇಶಕ್ಕೆ ತಲುಪಿದೆವು.
ಲಡಾಖ್ ಅಮೃತ ಯಾತ್ರೆ–2022: ಭಾಗ-7, ಅದೊಂದು ಹಾದಿಯ ಸಾಹಸ ಯಾನ ಕೈಗೂಡಲೇ ಇಲ್ಲ!
ಅಲ್ಲಿಂದ ಕಣ್ಣಳತೆ ದೂರದಲ್ಲಿ ಟಾರು ರಸ್ತೆ ಕಾಣಿಸಿತು. ಅದೇ ನೆರ್ಬೋಲೇ ಅನ್ನುವುದು ಖಚಿತವಾಯಿತು. ಸಣ್ಣಗೆ ಆತಂಕದಲ್ಲಿದ್ದವರು ತುಸು ನಿರಾಳ ಆದೆವು. ಆಗಲೇ ಸುಮಾರು 35 ಕಿ.ಮೀ. ಕ್ರಮಿಸಿದ್ದರಿಂದ ಅಂದಾಜಿನ ಲೆಕ್ಕಾಚಾರ ಸರಿಯಾಗಿತ್ತು. ಅಲ್ಲಿ ಎಡಕ್ಕೆ ತಿರುಗಿ 15 ಕಿ.ಮೀ. ಸಾಗಿದರೆ ಚಿಸುಮ್ ಲೇ ತಲುಪಿದೆವು. ಅಲ್ಲೊಂದು ಬಾರ್ಡರ್ ರೋಡ್ ಆರ್ಗನೇಶನ್ ನವರು ನಿರ್ಮಿಸಿದ ಕಬ್ಬಿಣ ಸೇತುವೆ. ಅಲ್ಲಿಂದ ಉಮ್ಲಿಂಗ್ ಲಾ 24 ಕಿ.ಮೀ. ದೂರ. ಪೂರ್ತಾಪೂರ್ತಿ ಟಾರು ರಸ್ತೆ. ಒಂದೇ ಸಮನೆ ಏರುವುದು.
ತನ್ನಷ್ಟಕ್ಕೇ ನಮ್ಮ ಉಸಿರು ಬಿಗಿಹಿಡಿಸುವ ಉಮ್ಲಿಂಗ್ ಲಾ
ಏರುತ್ತಲೇ ಸಾಗಿದವರಿಗೆ ಅಲ್ಲಲ್ಲಿ ಸ್ವಾಗತ ಫಲಕಗಳು ಕಾಣಿಸಿದವು. ಒಂದಷ್ಟು ಕಡೆ ರಸ್ತೆ ದುರಸ್ತಿ ಮಾಡಲು ಬಳಸುವ ಯಂತ್ರಗಳು ಇದ್ದವು. ಒಂದೆರಡು ಬೆಟ್ಟ ದಾಟಿ ಮತ್ತೂ ಮೇಲಕ್ಕೆ ಏರುತ್ತಿದ್ದಂತೆ "ನೀವು ಉಮ್ಲಿಂಗ್ ಲಾ ಸಮೀಪಿಸುತ್ತಿದ್ದೀರಿ, ಬಳಿಕ ಉಮ್ಲಿಂಗ್ ಲಾ ಮೊದಲ ದರ್ಶನ, ಆ ನಂತರ ನೀವೀಗ ಎವರೆಸ್ಟ್ ಬೇಸ್ ಕ್ಯಾಂಪ್ ಗಿಂತಲೂ ಎತ್ತರದ ಜಾಗದಲ್ಲಿದ್ದೀರಿ..." ಎಂಬಿತ್ಯಾದಿ ಫಲಕಗಳು ಸಿಕ್ಕವು. ಅಂಥಾ ಟಾರು ರಸ್ತೆಯಲ್ಲೂ ನಮ್ಮ ವಾಹನಗಳು ಮೊದಲ ಗೇರ್ ನಲ್ಲೇ ಏರಬೇಕಿತ್ತು. ಅಷ್ಟು ಎತ್ತರವಾಗಿತ್ತು ರಸ್ತೆ. ಅಂತಹ ರಸ್ತೆಯ ಇಕ್ಕೆಲಗಳಲ್ಲೂ ಹತ್ತಿ ಹಾಸಿದಂತೆ ಹಿಮದ ಗುಪ್ಪೆಗಳಿದ್ದವು. ಒಂದೆರಡು ಕಡೆ ನಿಲ್ಲಿಸಿ ಹಿಮವನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದೆ. ಆಮೇಲೆ ಒಂದೆರಡು ಕಿ.ಮೀ. ಸಾಗಿದರೆ ಪ್ರತ್ಯಕ್ಷವಾಯಿತು ಉಮ್ಲಿಂಗ್ ಲಾ.
ಲಡಾಖ್ ಅಮೃತಯಾತ್ರೆ-2022: ಭಾಗ-8, ಲೇಹ್ ಗೆ ಹೋಗೋಣ, ಬಾರೋ ಲೇ...!
ಅಲ್ಲೊಂದು ಕಾಂಕ್ರೀಟ್ ಗೋಡೆ ಬರಹ, ಪಕ್ಕದಲ್ಲೇ ಧ್ವಜಸ್ತಂಭ. ಪ್ರವಾಸಿಗರು ಬಂದರೆ ಕೂರಲೆಂದು ಕಲ್ಲು ಬೆಂಚು. ಅದರ ಎದುರು 15-20 ವಾಹನ ನಿಲ್ಲಿಸುವಷ್ಟು ಜಾಗ ಇರುವ ಪಾರ್ಕಿಂಗ್ ಪ್ರದೇಶ. ಅಲ್ಲೇ ಆಕ್ಸಿಜನ್ ಕೆಫೆ, ಅದರ ಎದುರಿಗೆ ಸಾಮಾನ್ಯ ಕೆಫೆ. ಎಲ್ಲವೂ ವಿಶ್ವದಲ್ಲೇ ಅತಿ ಎತ್ತರದ್ದು ಎಂಬ ಖ್ಯಾತಿ. ಆದರೆ, ಅದ್ಯಾಕೋ ಅವತ್ತು ಎಲ್ಲವೂ ಮುಚ್ಚಿತ್ತು. ಅಲ್ಲೊಂದಿಷ್ಟು ಫೋಟೋಗ್ರಫಿ ಆಯಿತು. ವಿಡಿಯೋ ಶೂಟಿಂಗ್ ಕೂಡ ನಡೆಯಿತು. ತ್ರಿವರ್ಣ ಧ್ವಜದ ಜೊತೆಗೆ ಚಿತ್ರ ತೆಗೆಸಿಕೊಂಡದ್ದೂ ಆಯಿತು. ಬಹಳ ಎತ್ತರದ ಪ್ರದೇಶ ಆದ ಕಾರಣ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೆ. ಉಸಿರಾಡಲು ಅಷ್ಟು ಸುಲಭವಲ್ಲ. ಆಟೋಟ, ದೈಹಿಕ ಶ್ರಮ ಅಲ್ಲಿ ಸಲ್ಲಲೇ ಸಲ್ಲದು. ಕೆಲವರಿಗೆ ಆಮ್ಲಜನಕ ಕಡಿಮೆ ಆಗಿ ಮಿದುಳು ಕೆಲಸ ಮಾಡದಿರುವುದೂ ಉಂಟಂತೆ. ಅಲ್ಲಿ ಸಾಮಾನ್ಯವಾಗಿ ಅರ್ಧ ತಾಸಿಗಿಂತ ಹೆಚ್ಚು ಹೊತ್ತು ಇರುವುದು ಕ್ಷೇಮವಲ್ಲ ಎಂಬುದು ಕೆಲವರ ಅಂಬೋಣ. ಅಂಥದೊಂದು ಪ್ರದೇಶಕ್ಕೆ ಜೀವಮಾನದಲ್ಲಿ ಹೋಗುತ್ತೇವೆ ಅಂದುಕೊಳ್ಳದಿದ್ದ ನಾವು ಆ ಸಂಭ್ರಮದಲ್ಲಿ ಹೊತ್ತು ಹೋದದ್ದೇ ಗೊತ್ತಾಗದೆ ಮುಕ್ಕಾಲು ಗಂಟೆ ಕಳೆದೆವು. ಒಂದಿಬ್ಬರಿಗೆ ಆಯಾಸ ಆದಂತೆ ಭಾಸವಾಗತೊಡಗಿತು. ನಾವು ಮೊದಲೇ ತಂದಿದ್ದ ಆಕ್ಸಿಜನ್ ಕ್ಯಾನ್ ನಿಂದ ಆಮ್ಲಜನಕ ಸೇವನೆ ಶಾಸ್ತ್ರವೂ ಆಯಿತು.
ಕೇವಲ 28 ಕಿ.ಮೀ. ದೂರದ ಚೀನಾ ಗಡಿಯ ಹಳ್ಳಿಗೆ ನಾವು ಹೋಗಲಿಲ್ಲವೇಕೆ ?
ಅಲ್ಲಿಂದ ಬೇಗನೆ ಹಾನ್‌ಲೇ ಕಡೆಗೆ ಇಳಿಯಬೇಕು ಅಂದುಕೊಂಡವರಿಗೆ ದೆಮ್‌ಚೊಕ್ 28 ಕಿ.ಮೀ. ಎಂಬ ಫಲಕ ಕಾಣಿಸಿತು. ಲಡಾಖ್ ನ ದಕ್ಷಿಣ ತುದಿಯಲ್ಲಿ ಚೀನಾ ಗಡಿಯಲ್ಲಿರುವ ಕೊನೆಯ ಹಳ್ಳಿಯದು. ಎಲ್ಲರಿಗೂ ಅಲ್ಲಿಗೆ ಹೋಗುವ ಆಸೆ ಆಯಿತು. ಏನಾದರಾಗಲಿ, ಟಾರು ರಸ್ತೆ ಅಲ್ಲವಾ, ಹೋಗಿ ಬಂದು ಬಿಡೋಣ ಎಂದುಕೊಂಡು ಹೊರಟೆವು. ಅರ್ಧ ಕಿ.ಮೀ. ಕೂಡ ಹೋಗಿರಲಿಲ್ಲ, ಆ ದೃಶ್ಯ ಒಳಮನಸ್ಸನ್ನು ಎಚ್ಚರಿಸಿತು. ಕಿ.ಮೀ.ಗಟ್ಟಲೆ ಭಾರೀ ಇಳಿಯಬೇಕಾದ ಸನ್ನಿವೇಶ. ಬಳಿಕ ಅದೇ ದಾರಿಯಲ್ಲಿ ಹತ್ತಿಕೊಂಡು ಬರಬೇಕು.
ಲಡಾಖ್ ಅಮೃತಯಾತ್ರೆ - 2022: ಭಾಗ-9, ಹಾನ್‌ಲೇ... ಅದು ಬೇರೆಯೇ ಗ್ರಹ !
ಆಗಲೇ ಮಧ್ಯಾಹ್ನ 1.30 ಕಳೆದಿತ್ತು. ಆಕಾಶದಲ್ಲಿ ಸ್ವಲ್ಪ ಮೋಡಗಳು ಕವಿಯುತ್ತಿದ್ದವು. ದೆಮ್‌ಚೊಕ್ ಗೆ ಹೋಗಿ ಬರಲು ತಡವಾದರೆ? ಅಷ್ಟರಲ್ಲಿ ಹಿಮಪಾತವೋ, ಮಳೆಯೋ ಆಗಿಬಿಟ್ಟರೆ? ಮೊದಲೇ ನಿರ್ಮಾನುಷ ಪ್ರದೇಶ. ಅನಗತ್ಯ ರಿಸ್ಕ್ ಬೇಡ ಎಂದು ವಾಹನ ತಿರುಗಿಸಲು ನಿರ್ಧರಿಸಿದೆವು. ಗಡಿಯವರೆಗೆ ಹೋಗುವ ಒಂದು ಅಪೂರ್ವ ಅವಕಾಶ ಕೈತಪ್ಪಿದ ಬಗ್ಗೆ ನಿರಾಸೆ ಆಯಿತಾದರೂ ಅದೇ ಸರಿಯಾದ ನಿರ್ಧಾರ ಎಂದು ಎಲ್ಲರೂ ಮಾತಾಡಿಕೊಂಡೆವು. ನಾವು ಅಲ್ಲಿಗೆ ಹೋಗುವುದೇ ಸಾಹಸ ಎಂದು ಅಂದುಕೊಂಡ ಜಾಗಕ್ಕೆ ಟಾರು ರಸ್ತೆ ಮಾಡಿದ ಬಾರ್ಡರ್ ರೋಡ್ ಆರ್ಗನೈಸೇಷನ್ ಹಾಗೂ ಅದರ ಸಿಬ್ಬಂದಿಯ ಸಾಧನೆಗೆ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತಪಡಿಸಿ ತಿರುಗಿ ಹಾನ್‌ಲೇ ಹಾದಿ ಹಿಡಿದೆವು.
ಮುಂದಿನ ಕಂತಿನಲ್ಲಿ: 2 ಅಡಿ ಅಂತರದಲ್ಲಿ ನನ್ನ ಪ್ರಾಣ ಉಳಿಯಿತು. ಎರಡೇ ಎರಡು ಅಡಿ ಆಚೆ ಬಿದ್ದಿದ್ದರೆ 3000 ಅಡಿ ಕೆಳಕ್ಕೆ ಹೋಗಿಬಿಡುತ್ತಿದ್ದೆ. ಆದರೂ, ಬಿದ್ದ ನನಗೆ ಏನಾಯಿತು? ಆ ಸನ್ನಿವೇಶದಲ್ಲಿ ನನ್ನ ಜತೆಗಿದ್ದವರು ಕೈಗೊಂಡ ದಿಟ್ಟ ನಿರ್ಧಾರವೇನು? ಅನಂತನ ತಮ್ಮ ಅನಿಲ್ ಮಾಡಿದ ಸಾಹಸ ಏನು? ಅದೆಂಥಾ ಕತೆ?