ಇಡೀ ಬೆಟ್ಟಕ್ಕೆ ಆಕಾಶನೀಲಿಯ ರಂಗು ನೀಡಿದ ಹೂಗಳು... ವಿಡಿಯೋ ನೋಡಿ
ಜಪಾನ್‌ನಲ್ಲಿ ನೀಲಿ ಹೂಗಳು ಇಡೀ ಬೆಟ್ಟಕ್ಕೆ ನೀಲಿ ರಂಗು ನೀಡಿವೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಮ್ಮ ಚಿಕ್ಕಮಗಳೂರು, ಕೊಡಗು, ಊಟಿ ಮುಂತಾದ ಹಿಲ್ ಸಿಟಿಗಳಲ್ಲಿ ನೀಲಿ ಕುರವಂಜಿ ಹೂವು ಅರಳಿ ಇಡೀ ಬೆಟ್ಟವನ್ನೇ ನೀಲಿಯಾಗಿಸಿದ ದೃಶ್ಯಾವಳಿಗಳನ್ನು ನೀವು ಈಗಾಗಲೇ ನೋಡಿರಬಹುದು. ಸಾಕಷ್ಟು ಜನ ಅಲ್ಲಿಗೆ ತೆರಳಿ ಆ ಹೂವಿನ ಲೋಕದ ದೃಶ್ಯ ವೈಭವವನ್ನು ಕಣ್ತುಂಬಿಸಿಕೊಂಡಿದ್ದರು. ಈಗ ಇದೇ ರೀತಿ ಸೌಂದರ್ಯವನ್ನು ಸವಿಯುವ ಸರದಿ ಜಪಾನ್ ಜನರದ್ದು, ಅಲ್ಲೂ ಇದೇ ರೀತಿಯ ಹೂವೊಂದು ಇಡೀ ಬೆಟ್ಟವನ್ನೇ ನೀಲಿಯಾಗಿಸಿದೆ. ನೀಲಿ ಕುರವಂಜಿ ಇಲ್ಲಿ ನೆರಳೆಯಾಗಿತ್ತು. ಆದರೆ ಅಲ್ಲಿ ಅದೇ ರೀತಿಯ ಹೂವೊಂದು ಸಂಪೂರ್ಣ ಆಕಾಶನೀಲಿ ಬಣ್ಣದಲ್ಲಿದ್ದು, ಇಡೀ ಬೆಟ್ಟಕ್ಕೆ ಆಕಾಶನೀಲಿಯ ರಂಗು ನೀಡಿದೆ. ಬೆಟ್ಟ ಪೂರ್ತಿ ನೀಲಿಯಾಗಿದ್ದು, ನೀಲಾಕಾಶಕ್ಕೂ ಬೆಟ್ಟಕ್ಕೂ ವ್ಯತ್ಯಾಸ ತಿಳಿಯದಾಗಿದೆ. ಈ ಸುಂದರ ದೃಶ್ಯವನ್ನು ಸವಿಯಲು ಪ್ರವಾಸಿಗರು ಈ ಬೆಟ್ಟದತ್ತ ಹರಿದು ಬರುತ್ತಿದ್ದಾರೆ. ಇದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಂದಹಾಗೆ ಜಪಾನ್‌ನಲ್ಲಿ ಬೆಟ್ಟಕ್ಕೆ ನೀಲಿ ರಂಗು ನೀಡಿರುವ ಈ ಹೂವಿನ ಹೆಸರು ನೆಮೊಫಿಲ ಅಥವಾ ಬೇಬಿ ಬ್ಲು(nemophila or baby blue) , ಪ್ರತಿವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಜಪಾನ್ ರಾಜಧಾನಿ ಟೋಕಿಯೋ ಸಮೀಪದಲ್ಲಿರುವ ಈ ಬೆಟ್ಟ ಈ ಚೆರ್ರಿ ಹೂಗಳ ಅರಳುವಿಕೆಯಿಂದಾಗಿ ಆಕಾಶನೀಲಿ ಬಣ್ಣಕ್ಕೆ ತಿರುಗುತ್ತವೆ. ಇದು ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. ಇದರ ವೀಕ್ಷಣೆಗೆ ನೂರಾರು ಪ್ರವಾಸಿಗರು ಹರಿದು ಬರುತ್ತಾರೆ. ಈ ಅಪೂರ್ವ ಸೌಂದರ್ಯದ ವಿಡಿಯೋವನ್ನು ಐಎಎಸ್ ಅಧಿಕಾರಿ ಹರಿ ಚಂದನ್ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಹೂವಿರುವ ಬೆಟ್ಟಕ್ಕೂ ನೀಲಿ ಆಕಾಶಕ್ಕೂ ವ್ಯತ್ಯಾಸ ಕಾಣದಂತಾಗಿದೆ. ಎರಡೂ ಒಂದೇ ರೀತಿ ಕಾಣಿಸುತ್ತಿದ್ದು, ಬೆಟ್ಟದ ತುದಿಯಲ್ಲಿ ಹೂಗಳ ನಡುವೆ ಪ್ರವಾಸಿಗರು ಓಡಾಡುವುದು ಕಾಣಿಸುತ್ತಿದೆ. ಈ ವಿಡಿಯೋವನ್ನು 71 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ವಿಡಿಯೋ ನೋಡಿದ ಜನ ಒಂದು ಕ್ಷಣ ಅಚ್ಚರಿಯಿಂದ ದಂಗಾಗುತ್ತಿದ್ದಾರೆ. ಇದೊಂದು ಅದ್ಭುತ ಲೋಕ ಎಂದು ಒಬ್ಬರು ನೋಡುಗರು ಪ್ರತಿಕ್ರಿಯಿಸಿದ್ದಾರೆ. ಇದು ಭೂಮಿ ಮೇಲೆ ಇರುವ ಸ್ವರ್ಗ ಎಂದು ಒನ್ನೊಬ್ಬರು ಹೇಳಿದರೆ, ನೀಲಿ ಎಸಳುಗಳ ಅಲೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಆಕಾಶ ಭೂಮಿಯ ಮೇಲೆ ಬಿದ್ದಿದೆ ಎಂದು ಉದ್ಘರಿಸಿದ್ದಾರೆ.
ಚಿಕ್ಕಮಗಳೂರು: ಕಣ್ಮನ ಸೆಳೆಯುತ್ತಿದೆ ಹಸಿರು ಬೆಟ್ಟದಲ್ಲಿ ನೀಲಿ ಹೂವಿನ ಕಮಾಲ್
ಈ ಹೂವನ್ನು ನೆಮೊಫಿಲಿಯಾ ಅಥವಾ ಬೇಬಿ ಬ್ಲೂ ಎಂದು ಕರೆಯಲಾಗುತ್ತದೆ. ಇದು ಟೊಕಿಯೋ ಸಮೀಪದ ಹಿಟಾಚಿ ಸೀಸೈಡ್ ಪಾರ್ಕ್‌ನ (Hitachi Seaside Park) ದೃಶ್ಯವಾಗಿದೆ. ಈ ಸ್ಥಳವೂ ತುಂಬಾ ದುಬಾರಿ ಆಗಿರುವ ಹೂಗಳ ತೋಟಕ್ಕೆ ಹೆಸರುವಾಸಿಯಾಗಿದೆ. ಈ ಪಾರ್ಕ್‌ನಲ್ಲಿ ಋತುವಿಗೆ ತಕ್ಕಂತೆ ಬದಲಾಗುವ ಅನೇಕ ಹೂಗಳಿವೆ. ಚಳಿಗಾಲದಲ್ಲಿ ಇಲ್ಲಿ ಐಸ್ ರೋಸ್, ಟುಲಿಪ್ಸ್ (tulips), ಪೋಪ್ಪೀಸ್ ಹಾಗೂ ಗುಲಾಬಿ ಹೂಗಳು ಕಾಣಸಿಗುತ್ತವೆ. ಈ ಪಾರ್ಕ್‌ನಲ್ಲಿ ಜಾಯಿಂಟ್ ವೀಲ್ ರೀತಿ ಫೆರ್ರಿ ವೀಲ್ ಇದ್ದು, ಇದನ್ನೇರಿ ಸಮುದ್ರದಕ್ಕಿಂತ 100 ಅಡಿ ಎತ್ತರದಿಂದ ಈ ಸೊಗಸಾದ ಈ ಹೂದೋಟವನ್ನು ಕಾಣಬಹುದಾಗಿದೆ. ನೀಲಿ ಆಕಾಶ, ನೀಲಿ ಹೂಗಳು ನೀಲಿ ಸಮುದ್ರವನ್ನು ಇಲ್ಲಿ ಒಂದೇ ಸಮಯದಲ್ಲಿ ನೋಡಬಹುದಾಗಿದೆ. ಅಂದಹಾಗೆ ಈ ನೆಮೊಫಿಲಿಯಾ ಹೂವು 3 ಸೆಂಟಿ ಮೀಟರ್ ದೊಡ್ಡದಿದ್ದು, ಉತ್ತರ ಅಮೆರಿಕಾದಲ್ಲಿ (North America) ಸ್ಥಳೀಯವೆನಿಸಿದೆ.