ಭಾರತೀಯ ರೈಲ್ವೆ ಸೀಟು ಹಂಚಿಕೆಯಲ್ಲಿ ಬದಲಾವಣೆ ತಂದಿದೆ. ಹಿರಿಯ ನಾಗರಿಕರು, ಮಹಿಳೆಯರು, ವಿಕಲಚೇತನರಿಗೆ ಲೋವರ್ ಬರ್ತ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. 45 ವರ್ಷ ಮೇಲ್ಪಟ್ಟ ಮಹಿಳೆಯರು, ಗರ್ಭಿಣಿಯರು, ಹಿರಿಯ ನಾಗರಿಕರಿಗೆ ಆದ್ಯತೆ ನೀಡಲಾಗುವುದು. ಸ್ಲೀಪರ್ ಕೋಚ್‌ಗಳಲ್ಲಿ 6-7, 3ACಯಲ್ಲಿ 4-5, 2ACಯಲ್ಲಿ 3-4 ಲೋವರ್ ಬರ್ತ್‌ಗಳನ್ನು ಮೀಸಲಿಡಲಾಗಿದೆ. ಆಟೋಮ್ಯಾಟಿಕ್ ಅಲೋಕೇಶನ್ ತಂತ್ರಜ್ಞಾನದ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.

ಭಾರತದಲ್ಲಿ ಅತಿಹೆಚ್ಚಿನ ಜನರು ದೂರದ ಸಾರಿಗೆಗೆ ಬಳಕೆ ಮಾಡುವ ಸಾರ್ವಜನಿಕ ಸಾರಿಗೆ ಎಂದರೆ ಅದು ರೈಲು ಸೇವೆ. ಆದರೆ, ಇದೀಗ ರೈಲ್ವೆ ಇಲಾಖೆಯ ಸೀಟು ಬುಕಿಂಗ್ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಇನ್ನುಮುಂದೆ ರೈಲಿನ ಸ್ಲೀಪರ್ ಕೋಚ್ ಬುಕಿಂಗ್ ಮಾಡುವಾಗ ಎಲ್ಲರಿಗೂ ಕೆಳಗಿನ ಸೀಟನ್ನು ಕೊಡುವುದಿಲ್ಲ. ಕೆಳಗಿನ ಸೀಟನ್ನು ಬುಕಿಂಗ್ ಮಾಡುವುದಕ್ಕೆ ಕಡ್ಡಾಯವಾಗಿ ಈ ಅರ್ಹತೆಗಳನ್ನು ನೀವು ಹೊಂದಿರಬೇಕು ಎಂದು ಭಾರತೀಯ ರೈಲ್ವೆ ಇಲಾಖೆ ಘೋಷಣೆ ಮಾಡಿದೆ.

ಹೌದು, ಭಾರತೀಯ ರೈಲ್ವೆ ಇಲಾಖೆಯಲ್ಲಿ ಇನ್ನುಮುಂದೆ ರೈಲಿನ ಸೀಟು ಹಂಚಿಕೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿ ಪ್ರಕಟಣೆ ಹೊರಡಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಹಿರಿಯ ನಾಗರಿಕರು, ಮಹಿಳೆಯರು, ವಿಕಲಚೇತನರಿಗೆ ಮೀಸಲಿಟ್ಟಿರುವ ಲೋವರ್ ಬರ್ತ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಅವರಿಗೆ ಅಪ್ಪರ್, ಮಿಡಲ್ ಬರ್ತ್ ಸಿಕ್ಕಾಗ ಆಗುವ ತೊಂದರೆ ತಪ್ಪುತ್ತದೆ ಎಂದು ರೈಲ್ವೆ ಅಂದಾಜಿಸಿದೆ.

ಆದ್ದರಿಂದ ಇನ್ನುಮುಂದೆ ಆಟೋಮ್ಯಾಟಿಕ್ ಅಲೋಟ್ಮೆಂಟ್ ಮೂಲಕ ವೃದ್ಧರು, ಹಿರಿಯ ನಾಗರೀಕರು, ಮಹಿಳೆಯರು ಹಾಗೂ ಅಂಗವಿಕಲರಿಗೆ ಲೋವರ್ ಬರ್ತ್ ಸೀಟುಗಳು ಸಿಗಲಿವೆ. ಇದಕ್ಕಾಗಿ ಆಟೋಮ್ಯಾಟಿಕ್ ಅಲೋಕೇಶನ್ ತಂತ್ರಜ್ಞಾನವನ್ನು ಜಾರಿಗೆ ತರಲು ಭಾರತೀಯ ರೈಲ್ವೆ ಸಿದ್ಧತೆ ನಡೆಸಿದೆ. ಗರ್ಭಿಣಿಯರು, 45 ವರ್ಷ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು, ಹಿರಿಯ ನಾಗರಿಕರು (60 ವರ್ಷ ಮೇಲ್ಪಟ್ಟ ಪುರುಷ ಪ್ರಯಾಣಿಕರು ಮತ್ತು 58 ವರ್ಷ ಮೇಲ್ಪಟ್ಟ ಮಹಿಳಾ ಪ್ರಯಾಣಿಕರು) ಬುಕ್ ಮಾಡುವಾಗ ಅವರು ಕೇಳದಿದ್ದರೂ, ಲಭ್ಯತೆ ಇದ್ದರೆ ಆಟೋಮ್ಯಾಟಿಕ್ ಆಗಿ ಲೋವರ್ ಬರ್ತ್ ನೀಡಲಾಗುತ್ತದೆ. ಪ್ರಯಾಣದ ವೇಳೆ ಲೋವರ್ ಬರ್ತ್ ಖಾಲಿ ಇದ್ದರೆ, ಹಿರಿಯ ನಾಗರಿಕರು, ವಿಕಲಚೇತನರು, ಗರ್ಭಿಣಿಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: ರೈಲಿನಲ್ಲಿ ರಾತ್ರಿ ಮರೆತೂ ಈ 8 ಕೆಲಸ ಮಾಡ್ಬೇಡಿ, ಇಲ್ಲಾಂದ್ರೆ ಪಶ್ಚಾತ್ತಾಪ ಪಡ್ತೀರಿ!

ಭಾರತೀಯ ರೈಲ್ವೆಯಲ್ಲಿ ವಿವಿಧ ಕ್ಲಾಸ್‌ಗಳಲ್ಲಿ ಆದ್ಯತೆಯ ಮೇರೆಗೆ ಪ್ರಯಾಣಿಸುವವರಿಗೆ ನಿರ್ದಿಷ್ಟ ಸಂಖ್ಯೆಯ ಲೋವರ್ ಬರ್ತ್‌ಗಳನ್ನು ಮೀಸಲಿಟ್ಟಿದೆ. ಸ್ಲೀಪರ್ ಕ್ಲಾಸ್ ಕೋಚ್‌ಗಳಲ್ಲಿ ಪ್ರತಿ ಕೋಚ್‌ನಲ್ಲಿ 6 ರಿಂದ 7 ಲೋವರ್ ಬರ್ತ್‌ಗಳನ್ನು ಈ ವರ್ಗದವರಿಗೆ ಮೀಸಲಿಡಲಾಗಿದೆ. ಏರ್ ಕಂಡೀಷನ್ಡ್ 3 ಟಯರ್ (3AC) ಕೋಚ್‌ಗಳಲ್ಲಿ 4 ರಿಂದ 5 ಲೋವರ್ ಬರ್ತ್‌ಗಳನ್ನು ನೀಡಲಾಗುತ್ತದೆ. ಏರ್ ಕಂಡೀಷನ್ಡ್ 2 ಟಯರ್ (2AC) ಕೋಚ್‌ಗಳಲ್ಲಿ 3 ರಿಂದ 4 ಲೋವರ್ ಬರ್ತ್‌ಗಳನ್ನು ಮೀಸಲಿಡಲಾಗಿದೆ.