ವಿಮಾನದಲ್ಲಿ ಮಗು ಅಳುತ್ತಿದ್ದಕ್ಕೆ ಸಹ ಪ್ರಯಾಣಿಕ ದೂರು ನೀಡಿದ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಮಕ್ಕಳು ಅಳುವುದು ಸರ್ವೇಸಾಮಾನ್ಯ, ಅದು ಬಸ್, ರೈಲು ಅಥವಾ ವಿಮಾನವೇ ಆದರೂ, ಮಕ್ಕಳಿಗೆ ಅದರ ಅರಿವಿರುವುದಿಲ್ಲ, ಆದರೆ ಅಮೆರಿಕಾದಲ್ಲಿ ವ್ಯಕ್ತಿಯೊಬ್ಬರು ಮಗು ವಿಮಾನದಲ್ಲಿ ನಿರಂತರ ಅತ್ತಿದ್ದರಿಂದ ಕಿರಿಕಿರಿ ಉಂಟಾಯ್ತು ಎಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಿಚಾರವೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬಾರ್‌ಸ್ಟೂಲ್ ಸ್ಪೋರ್ಟ್ಸ್ ಕಂಟ್ರಿಬ್ಯೂಟರ್ ಆಗಿರುವ ಪ್ಯಾಟ್ ಮೆಕ್‌ಆಲಿಫ್ ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಮಗುವೊಂದು ದೀರ್ಘಕಾಲ ಅಳುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಪ್ಯಾಟ್ ಮೆಕ್‌ಆಲಿಫ್, ವಿಮಾನದಲ್ಲಿ ಅಳುತ್ತಿರುವ ಮಗುವನ್ನು ಹೇಗೆ ಶಾಂತಗೊಳಿಸಬೇಕು ಎಂಬುದರ ಕುರಿತು ಲೈವ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ವೀಡಿಯೊದ ಹಿನ್ನೆಲೆಯಲ್ಲಿ ಮಗುವೊಂದು ಅಳುವುದು ಕೇಳಿಸುತ್ತದೆ. ವೀಡಿಯೊವನ್ನು ಪೋಸ್ಟ್ ಮಾಡಿದ ಪ್ಯಾಟ್ ಮೆಕ್‌ಆಲಿಫ್, ನಿಮ್ಮ ಮಗು ವಿಮಾನದಲ್ಲಿ ಕಿರುಚುತ್ತಿದ್ದರೆ,(ಅದು ವಿಳಂಬವಾದ ವಿಮಾನ ಅದರಲ್ಲಿ ಏಸಿಯೂ ಬೇರೆ ಇಲ್ಲ) ಅವರಿಗೆ ಫೋನ್ ತೋರಿಸಿ. ಪೋಷಕರ ಬಗ್ಗೆ ನನಗೆ ವಿಷಾದವಿದೆ. ಆದರೆ ಒಂದು ಹಂತದಲ್ಲಿ ಮಗು ಅಳುವುದನ್ನು ನಿಲ್ಲಿಸಲು ನೀವು ಹೊಸದನ್ನು ಪ್ರಯತ್ನಿಸಬೇಕು. ಮಗುವನ್ನು ಮೇಲಕ್ಕೆ ಮತ್ತು ಕೆಳಕ್ಕೆ ಎತ್ತಿಕೊಳ್ಳಿ. ಮಗುವಿನ ಗಮನವನ್ನು ಬೇರೆಡೆ ಸೆಳೆಯಿರಿ ಎಂದು ಪೋಸ್ಟ್‌ನಲ್ಲಿ ಅವರು ಬರೆದಿದ್ದಾರೆ.
ನೆಟ್ಟಿಗರ ಟೀಕೆ
ಪ್ಯಾಟ್ ಮೆಕ್‌ಆಲಿಫ್ ಅವರ ಈ ಹೇಳಿಕೆಗೆ ಆನ್‌ಲೈನ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಪೋಸ್ಟ್‌ಗಳಿಗೆ ನೆಟ್ಟಿಗರು ಬೇಗನೆ ಪ್ರತಿಕ್ರಿಯಿಸಿದ್ದಾರೆ. ನೀವು ಮಗುವಿಗಿಂತ ಜೋರಾಗಿ ಅಳುತ್ತಿದ್ದೀರಿ ಎಂದು ನನಗೆ ತೋರುತ್ತದೆ ಎಂದು ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಮೂರು ಮಕ್ಕಳ ಪೋಷಕರಾಗಿ, ನಿಮ್ಮ ಹೆಡ್‌ಫೋನ್‌ಗಳನ್ನು ಹಾಕಿಕೊಂಡು ವಿಮಾನ ಪ್ರಯಾಣವನ್ನು ಆನಂದಿಸಿ ಎಂದು ಮತ್ತೊಬ್ಬ ನೆಟ್ಟಿಗರು ಅವರಿಗೆ ಸಲಹೆ ನೀಡಿದ್ದಾರೆ. ನೀವು ಕಿವಿಗಳನ್ನು ಅರಳಿಸಿಕೊಂಡು ಒಂಟಿಯಾಗಿ ಹಾರುವುದಕ್ಕಿಂತಲೂ ಹೆಚ್ಚು ಮಗುವಿನ ಪೋಷಕರು ಒತ್ತಡಕ್ಕೊಳಗಾಗಿರುತ್ತಾರೆ ಎಂದು ನಾನು ನಿಮಗೆ ಖಾತರಿ ನೀಡಬಲ್ಲೆ, ಆದರೂ, ವಿಮಾನದಲ್ಲಿದ್ದ ಕೆಲವು ಪೋಷಕರು ವಿಮಾನದಲ್ಲಿ ಅಳುತ್ತಿರುವ ಮಗುವನ್ನು ಸಮಾಧಾನಪಡಿಸಬೇಕಿತ್ತು ಎಂದು ಮತ್ತೊಬ್ಬು ಹೇಳಿದ್ದಾರೆ.
ನಾನು ಒಪ್ಪುತ್ತೇನೆ. ಇದು ಪೋಷಕರ ತಪ್ಪು. ನನಗೆ ಇಬ್ಬರು ಮಕ್ಕಳಿದ್ದಾರೆ ಮತ್ತು ನಾವು ನಮ್ಮ ಮಕ್ಕಳನ್ನು ವಿಮಾನದಲ್ಲಿ ಬೇರೆ ಚಟುವಟಿಕೆಯಲ್ಲಿ ತೊಡಗಿಸಬಹುದು. ಜವಾಬ್ದಾರಿಯುತ ಪೋಷಕರು ವಿಮಾನ ಪ್ರಯಾಣದ ಮೊದಲು ಮಕ್ಕಳ ವೈದ್ಯರನ್ನು ಸಂಪರ್ಕಿಸಿ ವಿಮಾನದಲ್ಲಿ ಮಗುವನ್ನು ಹೇಗೆ ಆರಾಮದಾಯಕವಾಗಿಸುವುದು ಎಂಬುದರ ಕುರಿತು ಸಲಹೆಗಳನ್ನು ಪಡೆಯುತ್ತಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು ಈ ರೀತಿಯ ಅನುಭವ ನಮಗೂ ಆಗಿತ್ತು, ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಳಿತಿದ್ದೆ. ವಿಮಾನವೂ ಖಾಲಿಯಾಗಿಯೇ ಇತ್ತು, ನನ್ನ ಹಿಂದೆ ಹಾಗೂ ಮುಂದೆ ಯಾರೂ ಇರಲಿಲ್ಲ, ಆದರೆ ಸಡನ್ ಆಗಿ ಫ್ಲೈಟ್ ಅಟೆಂಡೆಂಟ್ ಒಬ್ಬರು ಇಬ್ಬರು ಮಕ್ಕಳಿರುವ ಕುಟುಂಬವನ್ನು ನಮ್ಮ ಮುಂದೆ ಕೂರಿಸಿದರು. ಈ ಮಕ್ಕಳು, ಬೊಬ್ಬೆ ಹೊಡೆಯುವುದು, ಅಳುವುದು ಒದೆಯುವುದು, ಟ್ರೇಯನ್ನು ಹೊಡೆಯುವುದನ್ನು ನಿರಂತರವಾಗಿ ಮಾಡುತ್ತಲೇ ಇದ್ದರು. ಇದು ನಿಜವಾಗಿಯೂ ದೊಡ್ಡ ಕಿರುಕುಳದಂತಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
